Germany locks unvaccinated: ಲಸಿಕೆ ಹಾಕಿಸಿಕೊಳ್ಳದವರ ವಿರುದ್ಧ ಕಠಿಣ ಕ್ರಮ

By Suvarna NewsFirst Published Dec 3, 2021, 4:39 PM IST
Highlights

ಕೋವಿಡ್‌ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಕಠಿಣ ಕ್ರಮಕ್ಕೆ ಮುಂದಾಗಿರುವ ಜರ್ಮನ್‌ ಸರ್ಕಾರ ಲಸಿಕೆ ಹಾಕದವರನ್ನು ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡುವುದು ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದನ್ನು ನಿಷೇಧಿಸುತ್ತಿದೆ.

ಬರ್ಲಿನ್‌(ಡಿ.3): ಜರ್ಮನಿಯಲ್ಲಿ ಲಸಿಕೆ ಹಾಕದ ಜನರನ್ನು ಶೀಘ್ರದಲ್ಲೇ  ಅಂಗಡಿಗಳು, ರೆಸ್ಟೋರೆಂಟ್‌ಗಳು ಮತ್ತು ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಥಳಗಳಿಂದ ಹೊರಗಿಡಲಾಗುವುದು ಎಂದು ಚಾನ್ಸೆಲರ್ ಏಂಜೆಲಾ ಮರ್ಕೆಲ್ ಘೋಷಿಸಿದ್ದಾರೆ. ಕರೋನಾ ವೈರಸ್ ಸೋಂಕನ್ನು ತಡೆಯುವ ಪ್ರಯತ್ನಗಳ ಭಾಗವಾಗಿ ಜರ್ಮನ್‌ ಸಂಸತ್ತು ಲಸಿಕೆ ಪಡೆಯುವುದು ತೀರಾ ಅಗತ್ಯ ಎಂದು ಹೇಳಿತ್ತು. ಫೆಡರಲ್ ಮತ್ತು ರಾಜ್ಯಗಳ ನಾಯಕರೊಂದಿಗಿನ ಸಭೆ ನಡೆಸಿ ಚರ್ಚಿಸಿದ ನಂತರ ಮರ್ಕೆಲ್ ಈ ನಿರ್ಧಾರವನ್ನು ಘೋಷಣೆ ಮಾಡಿದ್ದಾರೆ.

ದೇಶದಲ್ಲಿ 24 ಗಂಟೆಗಳ ಅವಧಿಯಲ್ಲಿ 70,000 ಹೊಸ ಕೋವಿಡ್‌ ಪ್ರಕರಣಗಳು ಪತ್ತೆಯಾಗಿ ಮತ್ತೆ ಅಗ್ರಸ್ಥಾನಕ್ಕೇರಿದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಅಲ್ಲದೇ ಇದು ಹೀಗೆ ಮುಂದುವರೆದರೆ COVID-19 ಸೋಂಕಿನಿಂದ ಬಳಲುತ್ತಿರುವ ರೋಗಿಗಳಿಂದ ಆಸ್ಪತ್ರೆಗಳು ತುಂಬಿ ಹೋಗಬಹುದು. ಹೀಗಾಗಿ ಲಸಿಕೆ ಹಾಕಿಸಿಕೊಳ್ಳದ ಜನರಿಗೆ ಇದು ಗಂಭೀರವಾಗುವ ಸಾಧ್ಯತೆ ಹೆಚ್ಚು ಈ ಹಿನ್ನೆಲೆಯಲ್ಲಿ ಈ ಎಲ್ಲಾ ಆತಂಕವನ್ನು ಪರಿಹರಿಸಲು ಈ ಕ್ರಮಗಳು ಅಗತ್ಯವೆಂದು ಮಾರ್ಕೆಲ್‌ ಹೇಳಿದ್ದಾರೆ. ನಮ್ಮ ದೇಶದಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ಹೀಗಾಗಿ ಈ ನಿರ್ಧಾರವನ್ನು ರಾಷ್ಟ್ರೀಯ ಒಗ್ಗಟ್ಟಿನ ಕ್ರಮ ಎಂದು ಭಾವಿಸಲಾಗುವುದು ಎಂದು ಅವರು ಹೇಳಿದರು. 

Covid Crisis: ಜರ್ಮನಿಯಲ್ಲಿ 1 ಲಕ್ಷ ಗಡಿ ದಾಟಿದ ಕೊರೋನಾ ಸಾವಿನ ಸಂಖ್ಯೆ!

ದೇಶಾದ್ಯಂತ ಜನ ಮಾಸ್ಕ್‌ ಧರಿಸಲು, ಖಾಸಗಿ ಸಭೆಗಳಲ್ಲಿ ಜನರ ಸೇರುವಿಕೆಗೆ ಹೊಸ ಮಿತಿ ಹಾಗೂ ವರ್ಷದ ಅಂತ್ಯಕ್ಕೆ 30 ಮಿಲಿಯನ್‌ ಲಸಿಕಾಕರಣದ ಗುರಿ ಈಡೇರಿಸುವುದಕ್ಕೆ ಅಧಿಕಾರಿಗಳು ಕೂಡ ಒಪ್ಪಿಕೊಂಡಿದ್ದಾರೆ. ನರ್ಸಿಂಗ್‌ ಹೋಮ್‌ ಹಾಗೂ ಆಸ್ಪತ್ರೆಗಳಲ್ಲಿ ಮತ್ತಷ್ಟು ಸಿಬ್ಬಂದಿಯನ್ನು ನಿಯೋಜಿಸಲು ಅಧಿಕಾರಿಗಳು ಸಿದ್ಧತೆ ಮಾಡುತ್ತಿದ್ದಾರೆ. ಲಸಿಕೆ ಅಗತ್ಯವಾಗಿ ಪಡೆಯುವ ಸಲುವಾಗಿ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಸಂಸತ್‌ನಲ್ಲಿ ಚರ್ಚಿಸಲಾಗುವುದು ಬಳಿಕ ಫೆಬ್ರವರಿ ಆರಂಭದೊಳಗೆ ಇದು ಜಾರಿಗೆ ಬರಬಹುದು ಎಂದು ಅವರು ಹೇಳಿದರು.

ಸದ್ಯದ ಪರಿಸ್ಥಿತಿ ನೋಡಿದರೆ ಇಂತಹ ಆದೇಶ ತುಂಬಾ ಅಗತ್ಯವೆಂದೆನಿಸುತ್ತಿದೆ. ಒಂದು ವೇಳೆ ತಾನು ಲಾ ಮೇಕರ್‌ ಆಗಿದ್ದರೆ ಈಗಲೂ ಆ ವಿಚಾರಕ್ಕೆ ಮತ ನೀಡುತ್ತಿದೆ ಎಂದು ಮಾರ್ಕೆಲ್‌ ಹೇಳಿದ್ದಾರೆ. ತಿಂಗಳ ಹಿಂದೆಯಷ್ಟೇ ಮಾರ್ಕೆಲ್‌ ಕಡ್ಡಾಯ ಲಸಿಕೆ ಪರಿಣಾಮಕಾರಿಯಾಗಿರಲಾರದು ಎಂದು ಹೇಳಿಕೆ ನೀಡಿದ್ದರು. ಅದಾಗ್ಯೂ ಅದರ ಸಾಧ್ಯತೆಯನ್ನು ಅವರು ತಳ್ಳಿ ಹಾಕಿರಲಿಲ್ಲ. ಜರ್ಮನಿಯಲ್ಲಿನ ಜನಸಂಖ್ಯೆಯ ಸುಮಾರು 68.7% ಜನರು ಸಂಪೂರ್ಣವಾಗಿ ಲಸಿಕೆ ಪಡೆದಿದ್ದಾರೆ, ಅದಾಗ್ಯೂ ಇದು ಸರ್ಕಾರದ ಕನಿಷ್ಠ ಗುರಿಯಾದ 75% ಕ್ಕಿಂತ ಕಡಿಮೆಯಾಗಿದೆ. ಇದಕ್ಕೂ ಮೊದಲು ಆಸ್ಟ್ರಿಯಾ(Austria)ಸರಕಾರವು ಲಸಿಕೆ ಹಾಕಿಸಿಕೊಳ್ಳದ ಜನರ ವಿರುದ್ಧ 20 ದಿನಗಳ ಲಾಕ್‌ಡೌನ್‌ನ ಭಾಗವಾಗಿ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಂಡಿತ್ತು. 

ಆಫ್ಘಾನಿಸ್ತಾನದ ಮಾಜಿ ಸಚಿವ ಈಗ ಜರ್ಮನಿಯಲ್ಲಿ ಪಿಝಾ ಡೆಲಿವರಿ ಬಾಯ್!

ಅಲ್ಲದೇ ಫೆಬ್ರವರಿಗೂ ಮೊದಲು ಕಡ್ಡಾಯವಾಗಿ ವ್ಯಾಕ್ಸಿನ್‌ ಹಾಕಿಸಿಕೊಳ್ಳಬೇಕೆಂದು ಆದೇಶಿಸಿದೆ. ಪ್ರಸ್ತುತ ಜರ್ಮನಿಯಲ್ಲಿ, ಲಸಿಕೆ ಹಾಕದ ಜನರು ಖಾಸಗಿ ಕಾರ್ಯಕ್ರಮಗಳಲ್ಲಿ ಭೇಟಿಯಾಗುವ ಅವಕಾಶವಿದೆ. ಅದೂ ಬಹಳ ಸೀಮಿತ ಸಂಖ್ಯೆಯಲ್ಲಿ ಮಾತ್ರ.  ಲಸಿಕೆ ಹಾಕದ ವ್ಯಕ್ತಿಯನ್ನು ಹೊಂದಿರುವ ಕುಟುಂಬವು ಮತ್ತೊಂದು ಮನೆಯ ಇಬ್ಬರು ಜನರನ್ನು ಮಾತ್ರ ಭೇಟಿ ಮಾಡಬಹುದು. ಆದರೆ ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಂಡರೆ ಈ ಮಿತಿ ಅನ್ವಯಿಸುವುದಿಲ್ಲ.
ಜರ್ಮನಿಯಲ್ಲಿ ಈ ಹಿಂದೆ ಲಸಿಕೆ ಹಾಕಿಸಿಕೊಳ್ಳಲು ಕೈಗೊಂಡ ಕಠಿಣ ಕ್ರಮಗಳ ವಿರುದ್ಧ ದೊಡ್ಡ ಪ್ರತಿಭಟನೆಗಳು ನಡೆದಿವೆ ಮತ್ತು ಪ್ರಸ್ತುತ ಲಸಿಕೆ ಆದೇಶವನ್ನು ಕೆಲವರು ವಿರೋಧಿಸುವ ಸಾಧ್ಯತೆಯಿದೆ. ಆದರೂ ಹೆಚ್ಚಿನ ಜರ್ಮನ್ನರು ಲಸಿಕೆಯ ಪರವಾಗಿದ್ದಾರೆ ಎಂದು ಸಮೀಕ್ಷೆಯಿಂದ ತಿಳಿದು ಬಂದಿದೆ.

ಮುಂದಿನ ವಾರ ಕೇಂದ್ರ-ಎಡ ಒಕ್ಕೂಟದಿಂದ ಛಾನ್ಸಲರ್‌ ಆಗಿ ಚುನಾಯಿತರಾಗುವ ನಿರೀಕ್ಷೆಯಲ್ಲಿರುವ ಹಣಕಾಸು ಸಚಿವ(Finance Minister) ಓಲಾಫ್ ಸ್ಕೋಲ್ಜ್  (Olaf Scholz)ಅವರು ಸಹ ಸಾಮಾನ್ಯ ಲಸಿಕೆ ಆದೇಶವನ್ನು ಬೆಂಬಲಿಸಿದ್ದಾರೆ. ಆದರೆ ಪಕ್ಷದ ಸಿದ್ಧಾಂತಕ್ಕಿಂತ ಹೆಚ್ಚಾಗಿ ತಮ್ಮ ವೈಯಕ್ತಿಕ ಆತ್ಮಸಾಕ್ಷಿಯ ಪ್ರಕಾರ ಶಾಸಕರು ಈ ವಿಷಯದ ಬಗ್ಗೆ ಮತ ಚಲಾಯಿಸಬೇಕು ಎಂಬುದು ಅವರ ಚಿಂತನೆಯಾಗಿದೆ. ಒಂದು ವೇಳೆ ನಾವು ಹೆಚ್ಚಿನ ಲಸಿಕಾಕರಣದ ದರವನ್ನು ಹೊಂದಿದ್ದಲ್ಲಿ, ಇದನ್ನು ಚರ್ಚಿಸಬೇಕಾದ ಅಗತ್ಯಗಳಿರಲಿಲ್ಲ ಎಂದು ಅವರು ಹೇಳಿದರು. 

ಕಳೆದ ಹಲವು ವಾರಗಳಿಂದ COVID-19 ಪ್ರಕರಣಗಳ ಹೆಚ್ಚಳ ಮತ್ತು ಹೊಸ ಓಮಿಕ್ರಾನ್ ರೂಪಾಂತರದ ಆಗಮನ ಹಿನ್ನೆಲೆಯಲ್ಲಿ ವಿಜ್ಞಾನಿಗಳು ಮತ್ತು ವೈದ್ಯರು ಸರ್ಕಾರಕ್ಕೆ  ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ಕಠಿಣ ಕ್ರಮ ಕೈಗೊಳ್ಳದೇ ಇದಲ್ಲಿ ಮುಂಬರುವ ವಾರಗಳಲ್ಲಿ ದೇಶದ ವೈದ್ಯಕೀಯ ಸೇವೆಗಳಿಗೆ ಹೊರ ಹೆಚ್ಚಾಗಬಹುದು.  ದೇಶದ ದಕ್ಷಿಣ ಮತ್ತು ಪೂರ್ವದಲ್ಲಿರುವ ಕೆಲವು ಆಸ್ಪತ್ರೆಗಳು ಈಗಾಗಲೇ ತೀವ್ರ ನಿಗಾ ಘಟಕ ಹಾಗೂ ಹಾಸಿಗೆಗಳ ಕೊರತೆಯಿಂದಾಗಿ ರೋಗಿಗಳನ್ನು ಜರ್ಮನಿಯ ಇತರ ಭಾಗಗಳಿಗೆ ವರ್ಗಾಯಿಸಿವೆ.

ಜರ್ಮನಿಯ ರೋಗ ನಿಯಂತ್ರಣ ಸಂಸ್ಥೆ(disease control agency) ಡಿಸೆಂಬರ್ 2 ರಂದು 73,209 ಹೊಸದಾಗಿ ದೃಢಪಡಿಸಿದ ಪ್ರಕರಣಗಳನ್ನು ವರದಿ ಮಾಡಿದೆ. ಜೊತೆಗೆ ರಾಬರ್ಟ್ ಕೋಚ್ ಇನ್‌ಸ್ಟಿಟ್ಯೂಟ್(Robert Koch Institute) ಸಹ COVID-19 ನಿಂದ 388 ಹೊಸ ಸಾವು ಸಂಭವಿಸಿದ್ದನ್ನು ವರದಿ ಮಾಡಿದೆ. 
 

click me!