
ರಫಾ (ಗಾಜಾಪಟ್ಟಿ): ಪ್ಯಾಲೆಸ್ತೀನಿಯರ ಮೇಲೆ ಇಸ್ರೇಲ್ ದಾಳಿ ಮುಂದುವರೆಸಿದ್ದು, ಇಲ್ಲಿನ ರಫಾದಲ್ಲಿ ಸ್ಥಾಪಿಸಲಾಗಿದ್ದ ನೆರವು ವಿತರಣಾ ಕೇಂದ್ರದಲ್ಲಿ ಊಟಕ್ಕೆ ತೆರಳುತ್ತಿದ್ದ ಪ್ಯಾಲೆಸ್ತೀನೀಯ ಮೇಲೆ ಗುಂಡಿನ ದಾಳಿ ನಡೆಸಿದೆ. ಘಟನೆಯಲ್ಲಿ 31 ಮಂದಿ ಸಾವನ್ನಪ್ಪಿದ್ದು, 170 ಗಾಯಗೊಂಡಿದ್ದಾರೆ.
ಇಸ್ರೇಲ್ ಬೆಂಬಲಿತ ಪ್ರತಿಷ್ಠಾನವು ತೆರೆದಿದ್ದ ಗಾಜಾ ಮಾನವೀಯ ಪ್ರತಿಷ್ಠಾನದ ಸಹಾಯ ಕೇಂದ್ರದಿಂದ 1 ಕಿ.ಮೀ ದೂರದಲ್ಲಿ ಘಟನೆ ನಡೆದಿದೆ. ಸಾವಿರಾರು ಜನರು ಆಹಾರಕ್ಕಾಗಿ ನೆರವು ಕೇಂದ್ರದ ಕಡೆ ತೆರಳುತ್ತಿದ್ದರು. ಈ ವೇಳೆ ಇಸ್ರೇಲ್ ಪಡೆಗಳು ಅವರನ್ನು ಚದುರಿಸಿ ದಾಳಿ ನಡೆಸಿವೆ.ಆಗ ಊಟಕ್ಕೆ ತೆರಳುತ್ತಿದ್ದ 31 ಮಂದಿ ಮೃತರಾಗಿ, 170 ಮಂದಿ ಗಾಯಗೊಂಡಿದ್ದಾರೆ.ಇನ್ನು ಇಸ್ರೇಲ್ ಪಡೆ ಎಲ್ಲಾ ದಿಕ್ಕುಗಳಿಂದಲೂ ಡ್ರೋನ್, ಟ್ಯಾಂಕ್ ಬಳಸಿ ಗುಂಡಿನ ದಾಳಿ ನಡೆಸಿತು ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ.
ವಾಣಿಜ್ಯ ಬಳಕೆಯ ಎಲ್‌ಪಿಜಿ ದರ 24 ರು. ಇಳಿಕೆ
ನವದೆಹಲಿ: ವಾಣಿಜ್ಯ ಬಳಕೆಯ ಸಿಲಿಂಡರ್ ಗ್ರಾಹಕರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, 19 ಕೇಜಿ ಸಿಲಿಂಡರ್ ದರದಲ್ಲಿ 24 ರು. ಇಳಿಕೆ ಮಾಡಿದೆ. ಇದರ ಜೊತೆಗೆ ವಿಮಾನದ ಟರ್ಬೈನ್ ಇಂಧನ ದರವನ್ನು ಶೇ.3ರಷ್ಟು ಇಳಿಸಿದೆ.ಮಾಸಿಕ ದರ ಪರಿಷ್ಕರಣೆಯಲ್ಲಿ ಸತತ 3ನೇ ತಿಂಗಳು ಕೇಂದ್ರ ಸರ್ಕಾರ ಬೆಲೆ ಕಡಿತಗೊಳಿಸಿದೆ.
ಅದರನ್ವಯ 19 ಕೇಜಿಯ ವಾಣಿಜ್ಯ ಸಿಲಿಂಡರ್ ದರ 24 ರು. ಕಡಿತಗೊಂಡಿದ್ದು, ದೆಹಲಿಯಲ್ಲಿ 1723.5 ಮತ್ತು ಮುಂಬೈನಲ್ಲಿ 1647.5 ರು.ಗೆ ಇಳಿಕೆಯಾಗಿದೆ. ಇನ್ನು ಜೆಟ್ ಇಂಧನ (ಎಟಿಎಫ್) ದರ ಪ್ರತಿ ಕಿಲೋ ಲೀಟರ್‌ಗೆ ಶೇ.2.82ರಷ್ಟು ಕಡಿತದೊಂದಿಗೆ 83, 072.55 ರು.ಗೆ ತಲುಪಿದೆ.ಇದರ ಜೊತೆಗೆ ಕೇಂದ್ರ ಸರ್ಕಾರ ವಾಹನಗಳಿಗೆ ಸಿಎನ್‌ಜಿ ಮತ್ತು ಅಡುಗೆ ಅನಿಲ ಉತ್ಪಾದಿಸಲು ಬಳಸುವ ನೈಸರ್ಗಿಕ ಅನಿಲದ ಬೆಲೆಯನ್ನು 2 ವರ್ಷಗಳಲ್ಲಿ ಮೊದಲ ಬಾರಿಗೆ ಕಡಿತಗೊಳಿದೆ. ಇದರ ದರ ಪ್ರತಿ ಬ್ರಿಟಿಷ್ ಥರ್ಮಲ್ ಯುನಿಟ್‌ಗೆ 577.5 ರು. ನಿಂದ 548.46. ರು.ಗೆ ಇಳಿಸಿದೆ.
ಬಿಹಾರ ಅಸೆಂಬ್ಲಿ ಸಮರ: ಚಿರಾಗ್ ಅಖಾಡಕ್ಕೆ?
ಪಟನಾ: ವರ್ಷಾಂತ್ಯದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಅಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಸ್ವರ್ಧಿಸುವ ಸಾಧ್ಯತೆ ದಟ್ಟವಾಗಿದೆ. ಈ ಸಂಬಂಧ ನಿರ್ಧಾರ ತೆಗೆದುಕೊಳ್ಳಲು ಪಕ್ಷದ ಕಾರ್ಯಕಾರಿ ಸದಸ್ಯರ ಸಭೆಯನ್ನು ಶೀಘ್ರದಲ್ಲೇ ಕರೆಯುವ ನಿರೀಕ್ಷೆ ಇದೆ.
ದಲಿತರಾದ ಪಾಸ್ವಾನ್ ಅವರು ಸ್ಪರ್ಧಿಸುವುದೇ ಆಗಿದ್ದರೆ ದಲಿತ ಮೀಸಲು ಕ್ಷೇತ್ರದ ಬದಲು ಸಾಮಾನ್ಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬಹುದು ಎನ್ನಲಾಗಿದೆ. ಈ ಮೂಲಕ ದಲಿತರಷ್ಟೇ ಅಲ್ಲದೆ, ಇತರೆ ಸಮುದಾಯದವರೂ ತಮ್ಮನ್ನು ಸ್ವೀಕರಿಸಿದ್ದಾರೆ ಎಂಬ ಸಂದೇಶ ಸಾರುವ ಉದ್ದೇಶ ಹೊಂದಿದ್ದಾರೆ. ಅಲ್ಲದೆ, ಸಿಎಂ ಹುದ್ದೆ ಮೇಲೂ ಅವರ ಕಣ್ಣಿದೆ ಎಂಬ ಊಹಾಪೋಹವಿದೆ.ಮೂಲಗಳ ಪ್ರಕಾರ, ಮೇ 30ರಂದು ಬಿಹಾರದ ಬಿಕ್ರಂಗಂಜ್‌ನಲ್ಲಿ ಪಕ್ಷದ ನಾಯಕರು ಸಭೆ ಸೇರಿ ಈ ವಿಚಾರವಾಗಿ ಚರ್ಚೆ ನಡೆಸಿದ್ದಾರೆ. ಬಿಹಾರ ವಿಧಾನಸಭೆಗೆ ಈ ವರ್ಷದ ಅಕ್ಟೋಬರ್-ನವೆಂಬರ್‌ಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ.
ಇಸ್ಲಾಂ ಅವಹೇಳನ: ಬಂಗಾಳಿ ಯುವತಿಯ ಬಂಧನ
ಕೋಲ್ಕತಾ: ಆಪರೇಷನ್ ಸಿಂದೂರವನ್ನು ಬೆಂಬಲಿಸುವ ಭರದಲ್ಲಿ ಪ್ರವಾದಿ ಮೊಹಮ್ಮದರು ಮತ್ತು ಇಸ್ಲಾಂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಸಾಮಾಜಿಕ ಜಾಲತಾಣದ ಪ್ರಭಾವಿ ಶರ್ಮಿಷ್ಠಾ ಪನೋಲಿ (22) ಎಂಬಾಕೆಯನ್ನು ಕೋಲ್ಕತಾ ಪೊಲೀಸರು ಬಂಧಿಸಿದ್ದಾರೆ. ಆದರೆ ಹಲವು ದೇಶ-ವಿದೇಶಗಳ ರಾಜಕೀಯ ನಾಯಕರು ಧಾವಿಸಿದ್ದಾರೆ.
ಡಚ್ ಸಂಸದ ಗೀರ್ಟ್ ವೈಲ್ಡರ್ಸ್ ಅವರು ಶರ್ಮಿಷ್ಠಾ ಬಂಧನ ಖಂಡಿಸಿ, ‘ಇದು ವಾಕ್ ಸ್ವಾತಂತ್ರ್ಯಕ್ಕೆ ಅವಮಾನ. ಪಾಕಿಸ್ತಾನ ಮತ್ತು ಮೊಹಮ್ಮದರ ಬಗ್ಗೆ ಸತ್ಯ ಹೇಳಿದ್ದಕ್ಕೆ ಆಕೆಯನ್ನು ಶಿಕ್ಷಿಸಬೇಡಿ. ಎಲ್ಲರ ಕಣ್ಣು ಶರ್ಮಿ಼ಷ್ಠಾ ಮೇಲಿದೆ ’ ಎಂದಿದ್ದು, ಆಕೆಯನ್ನು ಬಿಡುಗಡೆಗೊಳಿಸುವಂತೆ ಪ್ರಧಾನಿ ಮೋದಿಯವರಿಗೆ ಆಗ್ರಹಿಸಿದ್ದಾರೆ.
ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಆಂಧ್ರಪ್ರದೇಶ ಡಿಸಿಎಂ ಪವನ್ ಕಲ್ಯಾಣ್, ‘ಜಾತ್ಯತೀತತೆಯು ದ್ವಿಮುಖ ರಸ್ತೆಯಾಗಿರಬೇಕು’ ಎಂದು ವಾಗ್ದಾಳಿ ನಡೆಸಿದ್ದಾರೆ. ‘ಶರ್ಮಿಷ್ಟಾ ತನ್ನ ತಪ್ಪನ್ನೊಪ್ಪಿಕೊಂಡು ಆ ವಿಡಿಯೋವನ್ನೂ ತೆಗೆದುಹಾಕಿದರು. ಆದರೆ ಕೂಡಲೇ ಆಕೆಯನ್ನು ಬಂಧಿಸಲಾಯಿತು. ಆದರೆ, ಸನಾತನ ಧರ್ಮವನ್ನು ಕೊಳಕು ಎಂದ ಟಿಎಂಸಿ ಸಂಸದರ ವಿರುದ್ಧ ಈ ಆಕ್ರೋಶ ವ್ಯಕ್ತವಾಗಿಲಿಲ್ಲವೇಕೆ?’ ಎಂದು ಪ್ರಶ್ನಿಸಿದ್ದಾರೆ.ಅತ್ತ ಸಂಸದೆಯೂ ಆಗಿರುವ ನಟಿ ಕಂಗನಾ ರಾಣಾವತ್, ‘ಆಕೆ ಬಳಸಿದ ಪದ ಸರಿಯಲ್ಲವಾದರೂ, ಈಗಿನವರಿಗೆ ಅದು ಸಾಮಾನ್ಯ. ಅದಕ್ಕೆ ಶಿಕ್ಷೆ ಅನಗತ್ಯ. ಆಕೆಯನ್ನು ಬಂಧಮುಕ್ತ ಮಾಡಿ’ ಎಂದು ಕೇಳಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ