
ಢಾಕಾ (ಜೂ.02): ಪ್ರಧಾನಿಯಾಗಿದ್ದ ಶೇಖ್ ಹಸೀನಾ ಪದತ್ಯಾಗ ನಂತರ ಅಧಿಕಾರಕ್ಕೆ ಬಂದಿರುವ ಅವರ ವಿರೋಧಿ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ, ಹಸೀನಾ ತಂದೆಯೂ ಆಗಿರುವ ಬಾಂಗ್ಲಾದೇಶ ಸಂಸ್ಥಾಪಕ ಶೇಖ್ ಮುಜಿಬುರ್ ರೆಹಮಾನ್ ಅವರ ಚಿತ್ರವಿದ್ದ ನೋಟನ್ನು ಜೂ.1ರಿಂದ ಹಿಂಪಡೆದಿದೆ. ಇದರ ಬದಲು ದೇಶದ ರಾಷ್ಟ್ರೀಯ ಸ್ಮಾರಕಗಳಾದ ಹಿಂದು ಹಾಗೂ ಬೌದ್ಧ ದೇವಾಲಯಗಳು, ದಿ. ಜೈನುಲ್ ಅಬೇದಿನ್‌ರ ಕಲಾಕೃತಿ, 1971ರ ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಮಡಿದವರ ನೆನಪಾರ್ಥ ನಿರ್ಮಾಣವಾದ ರಾಷ್ಟ್ರೀಯ ಹುತಾತ್ಮರ ಸ್ಮಾರಕದ ಚಿತ್ರಗಳನ್ನು ಹಾಕಲಾಗಿದೆ.
ಹೊಸ 1000, 50, 20 ಟಾಕಾ ಮುಖಬೆಲೆಯ ಹೊಸ ನೋಟುಗಳು ಜೂ.1ರಿಂದಲೇ ಚಲಾವಣೆಗೆ ಬಂದಿವೆ. ಬಾಂಗ್ಲಾದಲ್ಲಿ ಹಿಂದು ವಿರೋಧಿ ಹಿಂಸೆ ನಡೆದರೂ ಹಿಂದು ದೇಗುಲ ಚಿತ್ರಕ್ಕೆ ಮಣೆ ಹಾಕಿದ್ದು ವಿಶೇಷ. ಈ ಬಗ್ಗೆ ಬಾಂಗ್ಲಾ ಬ್ಯಾಂಕ್‌ನ ವಕ್ತಾರ ಆರಿಫ್ ಹುಸ್ಸೇನ್ ಮಾತನಾಡಿ, ‘ಹೊಸ ನೋಟುಗಳಲ್ಲಿ ಯಾವುದೇ ವ್ಯಕ್ತಿಗಳ ಚಿತ್ರವಿರದು. ಬದಲಿಗೆ, ದೇಶದ ನಿಸರ್ಗ ಮತ್ತು ಹೆಗ್ಗುರುತುಗಳಿರಲಿವೆ’ ಎಂದರು.
ರೆಡ್ ಕಾರ್ನರ್ ನೋಟಿಸ್‌ಗೆ ಮೊರೆ: ಬಾಂಗ್ಲಾದೇಶ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ವಿರುದ್ಧ ರೆಡ್‌ಕಾರ್ನರ್ ನೋಟಿಸ್ ಹೊರಡಿಸುವಂತೆ ಜಾಗತಿಕ ತನಿಖಾ ಸಂಸ್ಥೆ ಆಗಿರುವ ಇಂಟರ್‌ಪೋಲ್‌ಗೆ ಬಾಂಗ್ಲಾ ಪೊಲೀಸರು ಮನವಿ ಮಾಡಿದ್ದಾರೆ. ವಿದ್ಯಾರ್ಥಿ ದಂಗೆ ಹಿನ್ನೆಲೆಯಲ್ಲಿ ಹಸೀನಾ ಅವರು ಆ.5ರಂದು ಭಾರತಕ್ಕೆ ಪಲಾಯನ ಮಾಡಿದ್ದರು. ಭಾರತದಿಂದ ಹಸೀನಾ ಅವರನ್ನು ಗಡೀಪಾರು ಮಾಡುವಂತೆ ಅಂದಿನಿಂದಲೂ ಮೊಹಮ್ಮದ್ ಯೂನಸ್ ನೇತೃತ್ವದ ಬಾಂಗ್ಲಾ ಮಧ್ಯಂತರ ಸರ್ಕಾರ ಒತ್ತಾಯಿಸುತ್ತಲೇ ಇದೆ. ಆದರೆ ಅದು ಫಲ ನೀಡಿಲ್ಲ.
ಇದರ ಬೆನ್ನಲ್ಲೇ ಯೂನಸ್ ಸರ್ಕಾರ ಪತನಕ್ಕೆ ಷಡ್ಯಂತ್ರ ರೂಪಿಸಿದ ಆರೋಪದ ಮೇರೆಗೆ ಹಸೀನಾ ಹಾಗೂ ಇತರ 11 ಮಂದಿ ವಿರುದ್ಧ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಬಾಂಗ್ಲಾ ಪೊಲೀಸರು ಈಗಾಗಲೇ ಶೇಖ್ ಹಸೀನಾ ಮತ್ತು ಇತರೆ 72 ಮಂದಿ ವಿರುದ್ಧ ನಾಗರಿಕ ದಂಗೆ ಮತ್ತು ಮಧ್ಯಂತರ ಸರ್ಕಾರ ಪತನಕ್ಕೆ ಸಂಚು ರೂಪಿಸಿದ ಆರೋಪ ಹೊರಿಸಿ ಪ್ರಕರಣ ದಾಖಲಿಸಿದೆ. ಹಸೀನಾ ವಿರುದ್ಧ ಸಾಮೂಹಿಕ ಹತ್ಯೆ ಮತ್ತು ಭ್ರಷ್ಟಾಚಾರಕ್ಕೆ ಸಂಬಂಧಿಸಿದ 100ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ