ವಿದ್ಯಾರ್ಥಿ ದಂಧೆ, ಹಾಗೂ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನಂತರ ನಡೆದ ಭೀಕರ ಹಿಂಸಾಚಾರದಿಂದ ಅಸ್ಥಿರವಾಗಿರುವ ಬಾಂಗ್ಲಾದೇಶದಲ್ಲಿ ದೇಶದ ಖ್ಯಾತ ಪತ್ರಕರ್ತೆ ಶವವಾಗಿ ಪತ್ತೆಯಾಗಿದ್ದಾರೆ.
ಢಾಕಾ: ವಿದ್ಯಾರ್ಥಿ ದಂಧೆ, ಹಾಗೂ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನಂತರ ನಡೆದ ಭೀಕರ ಹಿಂಸಾಚಾರದಿಂದ ಅಸ್ಥಿರವಾಗಿರುವ ಬಾಂಗ್ಲಾದೇಶದಲ್ಲಿ ದೇಶದ ಖ್ಯಾತ ಪತ್ರಕರ್ತೆ ಶವವಾಗಿ ಪತ್ತೆಯಾಗಿದ್ದಾರೆ. 32 ವರ್ಷದ ಪತ್ರಕರ್ತೆ ಸಾರಾ ರಹಾನುಮಾ ಅವರ ಶವ ಕೆರೆಯೊಂದರಲ್ಲಿ ಪತ್ತೆಯಾಗಿದೆ. ಸಾರಾ ರಹಾನುಮಾ ಬಾಂಗ್ಲಾದೇಶದ ಗಾಜಿ ಟಿವಿ ಮೀಡಿಯಾ ಹೌಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅವರ ಶವವೀಗ ಢಾಕಾದ ಹತಿರ್ಜಿಲ್ ಕೆರೆಯಲ್ಲಿ ಪತ್ತೆಯಾಗಿದೆ ಎಂದು ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ.
ಢಾಕಾ ಟ್ರಿಬ್ಯೂನ್ ವರದಿಯ ಪ್ರಕಾರ ಸಾಗರ್ ಎಂಬಾತನಿಗೆ ಪತ್ರಕರ್ತೆ ಸಾರಾ ರಹಾನುಮಾ ಶವ ಕಾಣಿಸಿದ್ದು, ಆತ ಆಕೆಯನ್ನು ಆಸ್ಪತ್ರೆಗೆ ಕರೆತಂದಿದ್ದಾನೆ. ನಾನು ಮಹಿಳೆಯೊಬ್ಬರ ಶವವನ್ನು ಹತಿರ್ಜಿಲ್ ಕೆರೆಯಲ್ಲಿ ನೋಡಿದೆ. ನಂತರ ಆಕೆಯನ್ನು ಡಿಎಂಸಿ ಆಸ್ಪತ್ರೆಗೆ ಕರೆತರಲಾಗಿದ್ದು, ಅಲ್ಲಿ ವೈದ್ಯರು ಆಕೆ ಮೃತಪಟ್ಟಿದ್ದಾಳೆ ಎಂದು ಘೋಷಿಸಿದರು ಎಂದು ಆತ ಹೇಳಿದ್ದಾನೆ. ಆದರೆ ಸಾರಾ ಸಾವಿಗೆ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಕ್ ಹಸೀನಾ ಪುತ್ರ ಸಜೀಬ್ ವಾಜೀದ್ ಬೇಸರ ವ್ಯಕ್ತಪಡಿಸಿದ್ದು, ಸರಾ ರಹನುಮಾ ಸಾವು ಬಾಂಗ್ಲಾದೇಶದಲ್ಲಿ ವಾಕ್ ಸ್ವಾತಂತ್ರ್ಯದ ಮೇಲೆ ನಡೆದ ಮತ್ತೊಂದು ದಾಳಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
undefined
ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿರುವ ಸಜೀಬ್ ವಾಜೀದ್, ಸಾರಾ ರಹನುಮಾ ಗಾಜಿ ಟಿವಿ ನ್ಯೂಸ್ ರೂಮ್ ಎಡಿಟರ್ ಶವವಾಗಿ ಪತ್ತೆಯಾಗಿದ್ದಾರೆ. ಅವರ ಶವವನ್ನು ಢಾಕಾದ ಹತಿರ್ಜಿಲ್ ಕೆರೆಯಿಂದ ತೆಗೆಯಲಾಗಿದೆ. ಇದು ಬಾಂಗ್ಲಾದೇಶದಲ್ಲಿ ವಾಕ್ ಸ್ವಾತಂತ್ರ್ಯದ ಮೇಲೆ ನಡೆಯುತ್ತಿರುವ ಮತ್ತೊಂದು ಭೀಕರ ದಾಳಿಯಾಗಿದೆ. ಗಾಜಿ ಟಿವಿ ಸೆಕ್ಯೂಲರ್ ನ್ಯೂಸ್ ಚಾನೆಲ್ ಆಗಿದ್ದು ಇದನ್ನು ಗೊಲಂ ದ್ತಗಿರ್ ಗಾಜಿಯವರು ನಡೆಸುತ್ತಿದ್ದರು. ಅವರನ್ನು ಕೂಡ ಇತ್ತೀಚೆಗೆ ಬಂಧಿಸಲಾಗಿದೆ.
ಸಾವಿಗೂ ಮೊದಲು ಸಾರಾ ಮಾಡಿದ ಫೇಸ್‌ಬುಕ್ ಪೋಸ್ಟ್‌ನಲ್ಲಿ ಅವರು ಫಹಿಮ್ ಫೈಸಲ್ ಎಂಬುವವರಿಗೆ ಫೋಸ್ಟ್ ಟ್ಯಾಗ್ ಮಾಡಿ ಹೀಗೆ ಬರೆದಿದ್ದರು. ನಿನ್ನಂತ ಸ್ನೇಹಿತನನ್ನು ಹೊಂದಿರುವುದು ಖುಷಿಯ ವಿಚಾರ, ನಿನಗೆ ದೇವರು ಯಾವಾಗಲೂ ಒಳ್ಳೆಯದು ಮಾಡಲಿ, ನಿಮ್ಮ ಎಲ್ಲಾ ಕನಸುಗಳು ಆದಷ್ಟು ಬೇಗ ನೆರವೇರಲಿ. ನಾವು ಸಾಕಷ್ಟು ವಿಚಾರವನ್ನು ಜೊತೆಯಾಗಿಯೇ ಪ್ಲಾನ್ ಮಾಡಿದ್ದೆವು. ಆದರೆ ಅವುಗಳನ್ನು ನನಗೆ ಪೂರ್ತಿಗೊಳಿಸಲಾಗಲಿಲ್ಲ, ಬಹುಶಃ ದೇವರು ನಿಮ್ಮನ್ನು ಜೀವನದ ಎಲ್ಲಾ ಘಟ್ಟಗಳಲ್ಲಿ ಆಶೀರ್ವದಿಸಲಿ ಎಂದು ಅವರು ಬರೆದಿದ್ದಾರೆ. ಈ ಪತ್ರಕರ್ತೆಯ ಸಾವಿನ ಬಗ್ಗೆ ಹತಿರ್ಜಿಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.