
ಸಿಯೋಲ್: ದಕ್ಷಿಣ ಕೊರಿಯಾದಲ್ಲಿ ವಿಪಕ್ಷಗಳನ್ನು ಹತ್ತಿಕ್ಕಲು ತುರ್ತುಸ್ಥಿತಿ ಹೇರಲು ವಿಫಲ ಯತ್ನ ನಡೆಸಿದ್ದ ಅಧ್ಯಕ್ಷ ಯೂನ್ ಸುಕ್ ಯೆಯೋಲ್ ವಿರುದ್ಧ ಪ್ರತಿಪಕ್ಷಗಳು ವಾಗ್ದಂಡನೆ ಗೊತ್ತುವಳಿ ಮಂಡಿಸಿವೆ. ಇದು ಸಂಸತ್ತಿನಲ್ಲಿ ಶುಕ್ರವಾರ ಮತಕ್ಕೆ ಹೋಗುವ ಸಂಭವವಿದೆ.ಯೂನ್ ಅವರ ವಾಗ್ದಂಡನೆಗೆ ಮಾಡಲು ಸಂಸತ್ತಿನ 3ನೇ 2ರಷ್ಟು ಬೆಂಬಲ ಬೇಕಾಗುತ್ತದೆ ಮತ್ತು 9 ಸದಸ್ಯರ ಸಾಂವಿಧಾನಿಕ ನ್ಯಾಯಾಲಯದಲ್ಲಿ ಕನಿಷ್ಠ 6 ನ್ಯಾಯಮೂರ್ತಿಗಳು ಅವರನ್ನು ಅಧಿಕಾರದಿಂದ ತೆಗೆದುಹಾಕಲು ಅದನ್ನು ಬೆಂಬಲಿಸಬೇಕಾಗುತ್ತದೆ.ಪ್ರಮುಖ ವಿರೋಧ ಪಕ್ಷವಾದ ಡೆಮಾಕ್ರಟಿಕ್ ಪಕ್ಷ ಮತ್ತು 5 ಸಣ್ಣ ವಿರೋಧ ಪಕ್ಷಗಳು ವಾಗ್ದಂಡನೆ ಗೊತ್ತುವಳಿ ಸಲ್ಲಿಸಿವೆ.
ಈ ನಡುವೆ, ಯೂನ್ ಅವರ ಬೆಂಬಲಿಗರು ಹಾಗೂ ಹಲವು ಸಚಿವರು ಪದಚ್ಯುತಿ ಭೀತಿಯಿಂದಾಗಿ ಬುಧವಾರವೇ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ ಯೂನ್ ಮಾತ್ರ ಮೌನವಾಗಿದ್ದಾರೆ. ಒಂದು ವೇಳೆ ಯೂನ್ ಪದಚ್ಯುತಿ ಆದರೆ ಹಾಲಿ ಪ್ರಧಾನಿ ಹಾನ್ ಡಕ್ ಸೂ ಮುಂದಿನ ಅಧ್ಯಕ್ಷರಾಗಲಿದ್ದಾರೆ.
ಈ ನಡುವೆ, ಮಂಗಳವಾರ ತುರ್ತುಸ್ಥಿತಿ ಕಾರಣ ಪ್ರಕ್ಷುಬ್ಧಗೊಂಡಿದ್ದ ದ.ಕೊರಿಯಾದಲ್ಲಿ ಜನಜೀವನ ಗುರುವಾರ ಸಹಜ ಸ್ಥಿತಿಗೆ ಮರಳಿದೆ. ‘ವಿಪಕ್ಷಗಳು ನಮ್ಮ ವಿರೋಧಿ ದೇಶ ಉ. ಕೊರಿಯಾ ಜತೆ ಶಾಮೀಲಾಗಿವೆ ಹಾಗೂ ಕಮ್ಯುನಿಸ್ಟ್ ಚಿಂತನೆ ಹೊಂದಿವೆ’ ಎಂದು ಆರೋಪಿಸಿ ಅವನ್ನು ಬಗ್ಗುಬಡಿಯಲು ಅಧ್ಯಕ್ಷ ಯೂನ್ ಬುಧವಾರ ತುರ್ತುಸ್ಥಿತಿ ಹೇರಿದ್ದರು ಹಾಗೂ ಸಂಸತ್ ಹೊರಗೆ ಸೇನೆಯ ಕಾವಲು ಹಾಕಿದ್ದರು. ಆದರೆ ಇದಾದ ಆರೇ ತಾಸಿನಲ್ಲಿ ಸೇನೆಯ ಕೋಟೆಯನ್ನು ಭೇದಿಸಿ ಹಾಗೂ ಸಂಸತ್ತಿನ ಕಾಂಪೌಂಡ್ ಹತ್ತಿ ಒಳಗೆ ಬಂದ ವಿಪಕ್ಷ ಸಂಸದರು 190-0 ಮತದಿಂದ ತುರ್ತುಸ್ಥಿತಿ ನಿರ್ಣಯ ಸೋಲಿಸಿದ್ದರು. ಇದಕ್ಕೆ ಬಳಿಕ ಸಂಪುಟ ಅಂಗೀಕಾರ ನೀಡಿತ್ತು. ಅಧ್ಯಕ್ಷರ ಪಕ್ಷಕ್ಕೆ ಸಂಸತ್ತಿನಲ್ಲಿ ಬಹುಮತವಿಲ್ಲ. ಹೀಗಾಗಿ ಯೂನ್ ಹಿನ್ನಡೆ ಕಂಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ