ಅಪಾಯದಂಚಿನಲ್ಲಿ ಅಲ್ಪಸಂಖ್ಯಾತರು: ಬಾಂಗ್ಲಾದೇಶದ ಆಡಳಿತ ಬದಲಾವಣೆಯ ಕರಾಳ ಮುಖ!

By Chethan Kumar  |  First Published Dec 4, 2024, 4:36 PM IST

ಬಾಂಗ್ಲಾದೇಶದ ಅಲ್ಪಸಂಖ್ಯಾತರು ನಿರಂತರವಾಗಿ ತಮ್ಮ ಸುರಕ್ಷತೆಗೆ ಸಂಬಂಧಿಸಿದಂತೆ ಸವಾಲುಗಳನ್ನು ಎದುರಿಸುತ್ತಲೇ ಬಂದಿದ್ದಾರೆ. ಆದರೆ, ಶೇಖ್ ಹಸೀನಾ ಸರ್ಕಾರ ಯಾವಾಗ ಪತನವಾಯಿತೋ, ಅಂದಿನಿಂದ ಇಸ್ಲಾಂ ಅಧಿಕೃತ ಧರ್ಮವಾಗಿರುವ ಬಾಂಗ್ಲಾದೇಶದ ಅಲ್ಪಸಂಖ್ಯಾತರ ಪರಿಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಯಿತು.
 


ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಸರ್ಕಾರ ಪತನಗೊಂಡು ಬಹುತೇಕ ನಾಲ್ಕು ತಿಂಗಳು ಪೂರ್ಣಗೊಂಡಿವೆ. ಈ ಕಾಲಾವಧಿಯಲ್ಲಿ, ಬಾಂಗ್ಲಾದೇಶದಲ್ಲಿ ಪ್ರಜಾಪ್ರಭುತ್ವದ ಪರಿಸ್ಥಿತಿ ಹೇಗಿದೆ ಎಂದರೆ, ಅದಕ್ಕೆ ಉತ್ತರ ನೀವು ಯಾರನ್ನು ಕೇಳುತ್ತಿದ್ದೀರಿ ಎನ್ನುವುದರ ಮೇಲೆ ಅವಲಂಬಿಸಿರುತ್ತದೆ. ಯಾಕೆಂದರೆ, ದೇಶದ ಪ್ರಗತಿಯನ್ನು ಜನರು ಯಾವ ಆಯಾಮದಿಂದ ನೋಡುತ್ತಾರೆ ಎನ್ನುವುದರ ಮೇಲೆ ವಿಭಿನ್ನ ದೃಷ್ಟಿಕೋನಗಳು ರೂಪುಗೊಳ್ಳುತ್ತವೆ. ಆ ಮೂಲಕ, ಪ್ರತಿಯೊಂದು ವಿಚಾರವೂ ಬೇರೆ ಬೇರೆ ರೀತಿಯಲ್ಲಿ ವ್ಯಾಖ್ಯಾನಕ್ಕೆ ಒಳಗಾಗುತ್ತದೆ.

Latest Videos

ಬಾಂಗ್ಲಾದೇಶದಲ್ಲಿ ತೀವ್ರವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿ ಗುಂಪುಗಳ ಮುಖಂಡರು ಮೊಹಮ್ಮದ್ ಯೂನುಸ್ ಅವರನ್ನು ಬಾಂಗ್ಲಾದೇಶದ ಮಧ್ಯಂತರ ಮುಖ್ಯ ಸಲಹೆಗಾರರನ್ನಾಗಿ ಆಯ್ಕೆ ಮಾಡಿದರು. ಈ ಪದವಿಯನ್ನು 1990ರಲ್ಲಿ ಹುಸೇನ್ ಮೊಹಮ್ಮದ್ ಇರ್ಶಾದ್ ಅವರ ಸರ್ಕಾರ ಪತನಗೊಂಡ ಬಳಿಕ ಸೃಷ್ಟಿಸಲಾಗಿತ್ತು.

1990ರಲ್ಲಿ ಜಸ್ಟೀಸ್ ಶಹಾಬುದ್ದೀನ್ ಅಹ್ಮದ್ ಅವರು ಬಾಂಗ್ಲಾದೇಶದ ಮುಖ್ಯ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದ್ದರು. ಹುಸೇನ್ ಮೊಹಮ್ಮದ್ ಇರ್ಶಾದ್ ಸರ್ಕಾರದ ಪತನದ ಬಳಿಕ, ಶಹಾಬುದ್ದೀನ್ ಅಹ್ಮದ್‌ರನ್ನು ಮುಖ್ಯ ಸಲಹೆಗಾರರನ್ನಾಗಿ ನೇಮಿಸಲಾಯಿತು. ಅವರಿಗೆ ಪ್ರಜಾಸತ್ತಾತ್ಮಕ ಚುನಾವಣಾ ಪ್ರಕ್ರಿಯೆಯನ್ನು ನಡೆಸುವ ಜವಾಬ್ದಾರಿ ವಹಿಸಲಾಗಿತ್ತು.

undefined

ಭಾರತೀಯ ನೌಕಾ ದಿನ 2024: ಅಸಾಧಾರಣ ಪ್ರಗತಿ, ಕಾರ್ಯತಂತ್ರದ ಶಕ್ತಿಯತ್ತ ಭಾರತೀಯ ನೌಕಾಪಡೆಯ ಹಾದಿ

ಬಾಂಗ್ಲಾದೇಶದಿಂದ ಶೇಖ್ ಹಸೀನಾರ ನಿರ್ಗಮನ ಹಿಂಸಾಚಾರಗಳ ಅಲೆಯನ್ನೇ ಸೃಷ್ಟಿಸಿತು. ಈ ಬಾರಿಯ ಹಿಂಸಾಚಾರಕ್ಕೆ, ಶೇಖ್ ಹಸೀನಾರ ರಾಜಕೀಯ ಪಕ್ಷವಾದ ಆವಾಮಿ ಲೀಗ್ ಜೊತೆ ಸಂಪರ್ಕ ಹೊಂದಿದ್ದವರು ನೇರ ಗುರಿಯಾಗಿದ್ದರು.

ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರ
ಶೇಖ್ ಹಸೀನಾ ನಿರ್ಗಮನದ ಬಳಿಕ, ಬಾಂಗ್ಲಾದೇಶದಲ್ಲಿ ಕನಿಷ್ಠ ಮಟ್ಟದ ಸರ್ಕಾರವೂ ಇಲ್ಲದಂತಾಯಿತು. ಅದರೊಡನೆ, ಕಾನೂನು ಸುವ್ಯವಸ್ಥೆಯೂ ಸಂಪೂರ್ಣವಾಗಿ ಹದಗೆಟ್ಟಿತು. ಇದನ್ನು ಅಕ್ಟೋಬರ್‌ನಲ್ಲಿ ಬಾಂಗ್ಲಾದೇಶಿ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಯೂನುಸ್ ಬಹಿರಂಗವಾಗಿ ಒಪ್ಪಿಕೊಂಡಿದ್ದರು.

ಬಾಂಗ್ಲಾದೇಶದ ಅಲ್ಪಸಂಖ್ಯಾತರು ನಿರಂತರವಾಗಿ ತಮ್ಮ ಸುರಕ್ಷತೆಗೆ ಸಂಬಂಧಿಸಿದಂತೆ ಸವಾಲುಗಳನ್ನು ಎದುರಿಸುತ್ತಲೇ ಬಂದಿದ್ದಾರೆ. ಆದರೆ, ಶೇಖ್ ಹಸೀನಾ ಸರ್ಕಾರ ಯಾವಾಗ ಪತನವಾಯಿತೋ, ಅಂದಿನಿಂದ ಇಸ್ಲಾಂ ಅಧಿಕೃತ ಧರ್ಮವಾಗಿರುವ ಬಾಂಗ್ಲಾದೇಶದ ಅಲ್ಪಸಂಖ್ಯಾತರ ಪರಿಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಯಿತು.

ಅಂತಾರಾಷ್ಟ್ರೀಯ ಮಾಧ್ಯಮಗಳು, ಅದರಲ್ಲೂ ಭಾರತೀಯ ಮಾಧ್ಯಮಗಳು ಬಾಂಗ್ಲಾದೇಶದ ಹಿಂದೂ ಅಲ್ಪಸಂಖ್ಯಾತರ ಬವಣೆಗಳ ಕುರಿತು ಗಮನ ಹರಿಸಿ, ಒಂದಷ್ಟು ವರದಿಗಳನ್ನು ಮಾಡಿವೆ. ಹಿಂದೂಗಳು ಮಾತ್ರವಲ್ಲದೆ, ಬಾಂಗ್ಲಾದೇಶದ ಬೌದ್ಧರು, ಮತ್ತು ಸ್ಥಳೀಯ ಸಮುದಾಯಗಳ ಮೇಲೂ ಅಪಾರ ಪ್ರಮಾಣದ ಹಿಂಸಾಚಾರಗಳು ನಡೆದಿರುವ ಕುರಿತು ವರದಿಗಳು ಬಂದಿವೆ.

ಸಾಮಾನ್ಯವಾಗಿ ಬಾಂಗ್ಲಾದೇಶದ ಅಲ್ಪಸಂಖ್ಯಾತ ಹಿಂದೂಗಳನ್ನು ಶೇಖ್ ಹಸೀನಾರ ಜಾತ್ಯತೀತ ಪಕ್ಷವಾದ ಆವಾಮಿ ಲೀಗ್‌ನ ಬೆಂಬಲಿಗರು ಎಂದು ಪರಿಗಣಿಸಲಾಗುತ್ತದೆ. ಈ ಬಾರಿ ಹಿಂದೂಗಳ ಮೇಲೆ ಭಾರೀ ಹಿಂಸಾಚಾರ ಉಂಟಾಗಲು ಇದೂ ಒಂದು ಕಾರಣ ಎನ್ನಲಾಗಿದೆ.

ಒಂದು ಸರ್ಕಾರ ಪತನಗೊಂಡ ನಂತರದ ಬದಲಾವಣೆಯ ಅವಧಿ ಯಾವುದೇ ದೇಶಕ್ಕಾದರೂ ಅತ್ಯಂತ ಮಹತ್ವದ್ದಾಗಿರುತ್ತದೆ. ಸರ್ಕಾರದ ಪತನದ ಬಳಿಕ ಉಂಟಾಗುವ ಅಧಿಕಾರದ ನಿರ್ವಾತ ಮತ್ತು ಜನರ ಸಂಕಷ್ಟಗಳು, ಯಾರಾದರೂ ಸರ್ವಾಧಿಕಾರಿ ಅಧಿಕಾರಕ್ಕೆ ಏರುವುದಕ್ಕೆ, ಅಥವಾ ನಾಗರಿಕ ಹಿಂಸಾಚಾರಕ್ಕೆ ಕಾರಣವಾಗುವ ಪ್ರತಿಭಟನೆಗಳು, ದಂಗೆಗಳಿಗೆ ಹಾದಿ ಮಾಡಿಕೊಡುತ್ತವೆ.

ಆದರೆ ಮೊಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರ ಸರ್ವಾಧಿಕಾರಿ ಆಡಳಿತ ನಡೆಸುತ್ತಿದೆ ಎನ್ನುವ ಲಕ್ಷಣಗಳು ಸದ್ಯದ ಮಟ್ಟಿಗೆ ಗೋಚರಿಸುತ್ತಿಲ್ಲ. ಆದರೆ, ಹಸೀನಾ ನಿರ್ಗಮನದ ಬಳಿಕ, ಬಾಂಗ್ಲಾದೇಶದ ಬೀದಿಗಳಲ್ಲೂ ಹಿಂಸಾಚಾರ ತಾಂಡವವಾಡುತ್ತಿರುವುದು ಸ್ಪಷ್ಟವಾಗಿದೆ. ರಾಜಕೀಯ ಮತ್ತು ಧಾರ್ಮಿಕ ಎದುರಾಳಿಗಳ ಮೇಲೆ ದಾಳಿ, ವಿಧ್ವಂಸಗಳು ಅಲ್ಲೀಗ ಸರ್ವೇಸಾಮಾನ್ಯವಾಗಿವೆ.

ಆರ್ಥಿಕತೆ
ಬಾಂಗ್ಲಾದೇಶದ ಯುವಜನತೆ ಯೂನುಸ್ ಅವರನ್ನು ಭರವಸೆ ಮತ್ತು ಪ್ರಗತಿಯ ಪ್ರತೀಕ ಎಂದು ಭಾವಿಸಿದ್ದರು. ಆದ್ದರಿಂದಲೇ ಅವರನ್ನು ಬಾಂಗ್ಲಾದೇಶದ ಆಡಳಿತ ಚುಕ್ಕಾಣಿ ಹಿಡಿಯಲು ನೇಮಿಸಲಾಗಿತ್ತು. ಬಾಂಗ್ಲಾದೇಶದ ಆರ್ಥಿಕತೆ ಕುಸಿತ ಕಂಡಿದ್ದು, ಕೋವಿಡ್-19 ಸಾಂಕ್ರಾಮಿಕದ ಬಳಿಕ ಅದು ತಳಕಚ್ಚಿದ್ದು ಶೇಖ್ ಹಸೀನಾ ಆಡಳಿತದ ವಿರುದ್ಧ ಜನರ ಆಕ್ರೋಶ ಭುಗಿಲೇಳಲು ಒಂದು ಮುಖ್ಯ ಕಾರಣವಾಗಿತ್ತು.

ಬಾಂಗ್ಲಾದೇಶ ಈಗ ಎದುರಿಸುತ್ತಿರುವ ರಾಜಕೀಯ ಅಸ್ಥಿರತೆ ಮತ್ತು ಅಲ್ಲಿ ನಿರಂತರವಾಗಿ ಮುಂದುವರಿದಿರುವ ಹಿಂಸಾಚಾರಗಳು ಅಲ್ಲಿನ ಆರ್ಥಿಕ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿವೆ. ಬಾಂಗ್ಲಾದೇಶದ 'ಡೈಲಿ ಸ್ಟಾರ್' ಪತ್ರಿಕೆಯ ವರದಿಯ ಪ್ರಕಾರ, ಬಾಂಗ್ಲಾದೇಶದಲ್ಲಿ ಹಣದುಬ್ಬರ ಒಂದು ನಿರಂತರ ಸಮಸ್ಯೆಯಾಗಿತ್ತು. ಹಣದುಬ್ಬರದ ದರ ಕಳೆದ ಹಲವು ವರ್ಷಗಳಿಂದ 10%ಕ್ಕಿಂತ ಹೆಚ್ಚಾಗಿಯೇ ಇರುತ್ತಿತ್ತು.

ಸಂಭಾವ್ಯ ಚುನಾವಣೆಗಳು
ಈಗ ಬಾಂಗ್ಲಾದೇಶದ ಮುಖ್ಯ ಕಾಳಜಿ ಮುಂಬರುವ ಚುನಾವಣೆಗಳಾಗಿದೆ. ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರ ಚುನಾವಣೆಗಳನ್ನು ನಡೆಸುವ ಕುರಿತು ಚಿಂತಿಸದೆ, ತಾನೇ ಭದ್ರವಾಗಿ ಕುಳಿತಿದೆಯೇ ಎಂಬ ಮಾತುಗಳೂ ಕೇಳಿಬರುತ್ತಿವೆ.

ಸೆಪ್ಟೆಂಬರ್‌ ತಿಂಗಳ ಬಾಂಗ್ಲಾದೇಶಿ ಮಾಧ್ಯಮ ವರದಿಗಳ ಪ್ರಕಾರ, ಶೇಖ್ ಹಸೀನಾ ಸರ್ಕಾರದ ಪತನಕ್ಕೂ ಮುನ್ನ ಮುಖ್ಯ ವಿರೋಧ ಪಕ್ಷವಾಗಿದ್ದ ಬಾಂಗ್ಲಾದೇಶ್ ನ್ಯಾಷನಲ್ ಪಾರ್ಟಿ (ಬಿಎನ್‌ಪಿ) ಕಬ್ಬಿಣ ಕಾದಾಗಲೇ ಬಡಿಯಬೇಕು ಎಂಬ ಯೋಚನೆ ಹೊಂದಿದ್ದು, ಚುನಾವಣೆಗಾಗಿ ದೀರ್ಘಕಾಲದ ತನಕ ಕಾಯಲು ಸಿದ್ಧವಿರಲಿಲ್ಲ.

ಮಧ್ಯಂತರ ಸರ್ಕಾರ ಅಗತ್ಯವಿದ್ದ ಸುಧಾರಣೆಗಳನ್ನು ಬೇಗನೆ ಕೈಗೊಂಡು, ಬಳಿಕ ಚುನಾವಣೆಗಳನ್ನು ನಡೆಸುವತ್ತ ಗಮನ ಹರಿಸಬಹುದೆಂದು ಬಿಎನ್‌ಪಿ ಭಾವಿಸಿತ್ತು. ಮುಂದಿನ 18 ತಿಂಗಳ ಅವಧಿಯಲ್ಲಿ ಈ ಪ್ರಕ್ರಿಯೆಗಳು ಪೂರ್ಣಗೊಳ್ಳಬೇಕು ಎಂದು ಬಿಎನ್‌ಪಿ ಸಲಹೆ ನೀಡಿತ್ತು.

ಮಧ್ಯಂತರ ಸರ್ಕಾರದ ಮೇಲೆ, ಭವಿಷ್ಯದ ಚುನಾವಣೆಗಳಲ್ಲಿ ಆವಾಮಿ ಲೀಗ್ ಸ್ಪರ್ಧಿಸದಂತೆ ತಡೆಯಬೇಕು ಎಂದು ಸಾಕಷ್ಟು ಒತ್ತಡ ಹೇರಲಾಗಿದೆ. ಬಾಂಗ್ಲಾದೇಶದ 'ಕ್ರಾಂತಿಯ' ನಾಯಕರು ಎಂಬಂತೆ ಬಿಂಬಿತವಾಗಿರುವ ವಿದ್ಯಾರ್ಥಿ ಮುಖಂಡರು, ಆವಾಮಿ ಲೀಗ್ ಪಕ್ಷವನ್ನು ಸಂಪೂರ್ಣವಾಗಿ ರಾಜಕೀಯದಿಂದ ನಿಷೇಧಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.

100 ಕೃತಕ ಸೂರ್ಯಗ್ರಹಣ ಸೃಷ್ಟಿಗೆ ಸಾಹಸ, ನಾಳೆ ಇಸ್ರೋದಿಂದ ಉಡಾವಣೆ: ಗಿರೀಶ್‌ ಲಿಂಗಣ್ಣ

ನವೆಂಬರ್ ತಿಂಗಳಲ್ಲಿ, ಭಾರತೀಯ ಪತ್ರಿಕೆಯೊಂದಕ್ಕೆ ಯೂನುಸ್ ಸಂದರ್ಶನ ನೀಡಿದ್ದರು. ತನ್ನ ಮಧ್ಯಂತರ ಸರ್ಕಾರ ಯಾವುದೇ ರಾಜಕೀಯ ಪಕ್ಷದ ಕುರಿತು ಯಾವ ನಿರ್ಧಾರವನ್ನೂ ಕೈಗೊಳ್ಳಲು ಬಯಸುತ್ತಿಲ್ಲ ಎಂದು ಯೂನುಸ್ ಹೇಳಿದ್ದರು. ವಿಪಕ್ಷವಾಗಿದ್ದ ಬಿಎನ್‌ಪಿ ಸಹ ಎಲ್ಲ ಪಕ್ಷಗಳೂ ಮುಕ್ತವಾಗಿ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದಿದೆ ಎಂದು ಯೂನುಸ್ ವಿವರಿಸಿದ್ದಾರೆ.

ಯೂನುಸ್ ಹೇಳಿಕೆಗೆ ವಿದ್ಯಾರ್ಥಿ ಮುಖಂಡರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಒಂದು ವೇಳೆ ತಮ್ಮ ಬೇಡಿಕೆಗಳು ಪೂರೈಸದಿದ್ದರೆ, ನಾವು ಎರಡನೇ ಚಳುವಳಿಗೂ ಸಿದ್ಧರಿದ್ದೇವೆ ಎಂದಿದ್ದಾರೆ.

ಸದ್ಯದ ಮಟ್ಟಿಗೆ, ಯೂನುಸ್ ಮತ್ತು ಇತರ ಬಾಂಗ್ಲಾದೇಶಿ ರಾಜಕೀಯ ಪಕ್ಷಗಳು ಬಾಂಗ್ಲಾದೇಶದಲ್ಲಿ ಆವಾಮಿ ಲೀಗ್ ಭವಿಷ್ಯವನ್ನು ಜಾಗರೂಕವಾಗಿ ನಿಭಾಯಿಸುತ್ತಿರುವಂತೆ ಕಾಣುತ್ತಿದೆ.

ನೆರೆಹೊರೆಯ ರಾಷ್ಟ್ರಗಳೊಡನೆ ಸಂಬಂಧ
ವಿದೇಶಾಂಗ ನೀತಿಯ ವಿಚಾರಕ್ಕೆ ಬಂದಾಗ, ಪಾಶ್ಚಾತ್ಯ ದೇಶಗಳು ಈಗಾಗಲೇ ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರಕ್ಕೆ ತಮ್ಮ ಬೆಂಬಲ ಸೂಚಿಸಿವೆ. ಆದರೆ, ಬಾಂಗ್ಲಾದೇಶದ ನೆರೆಯ ದೇಶಗಳ ಪಾಲಿಗೆ ಪರಿಸ್ಥಿತಿ ಅಷ್ಟು ಸುಗಮವಾಗಿಲ್ಲ.

ಬಹಳಷ್ಟು ಬಾಂಗ್ಲಾದೇಶೀಯರು, ಶೇಖ್ ಹಸೀನಾ ಸರ್ಕಾರದ ಅವಧಿಯಲ್ಲಿ, ಭಾರತ ಬಾಂಗ್ಲಾದೇಶದ ರಾಜಕೀಯ ಮತ್ತು ಆರ್ಥಿಕತೆಯ ಮೇಲೆ ಅತಿಯಾದ ಪ್ರಭಾವ ಬೀರುತ್ತಿತ್ತು ಎಂದು ಭಾವಿಸಿದ್ದರು. ಕಳೆದ ಹಲವಾರು ದಶಕಗಳಿಂದ, ಶೇಖ್ ಹಸೀನಾರ ಕುಟುಂಬ ಭಾರತದೊಡನೆ ಉತ್ತಮ ಬಾಂಧವ್ಯ ಹೊಂದಿದ್ದೂ ಇಂತಹ ಭಾವನೆ ಮೂಡಲು ಕಾರಣವಾಗಿರಬಹುದು.

ಬಾಂಗ್ಲಾದೇಶ ತನ್ನ ನೆರೆಯ ಭಾರತ ಮತ್ತು ಇತರ ನೆರೆ ರಾಷ್ಟ್ರಗಳೊಡನೆ ಸುಭದ್ರ ಬಾಂಧವ್ಯ ಹೊಂದಲು ಬದ್ಧವಾಗಿದೆ ಎಂದು ಸೆಪ್ಟೆಂಬರ್ ತಿಂಗಳಲ್ಲಿ ಯೂನುಸ್ ಹೇಳಿಕೆ ನೀಡಿದ್ದರು. ಆದರೆ, ಇಂತಹ ಸಂಬಂಧಗಳು 'ನ್ಯಾಯ ಮತ್ತು ಸಮಾನತೆಯ' ತಳಹದಿಯ ಮೇಲೆ ನಿರ್ಮಿತವಾಗಬೇಕು ಎಂದು ಅವರು ಅಭಿಪ್ರಾಯ ಪಟ್ಟಿದ್ದರು.

ಭಾರತದ ಅದಾನಿ ಸಮೂಹದ ಮುಖ್ಯಸ್ಥ ಗೌತಮ್ ಎಸ್ ಅದಾನಿ ಮತ್ತು ಏಳು ಇತರ ಉದ್ಯಮಿಗಳು ಭಾರತ ಸರ್ಕಾರದ ಅಧಿಕಾರಿಗಳಿಗೆ ಲಂಚ ನೀಡಿದ್ದಾರೆ ಎಂದು ಅಮೆರಿಕನ್ ಅಧಿಕಾರಿಗಳು ನವೆಂಬರ್‌ನಲ್ಲಿ ಆರೋಪಿಸಿದ್ದರು. ಆ ಬಳಿಕ, ಬಾಂಗ್ಲಾದೇಶ ಒಂದು ಪ್ರಸಿದ್ಧ ಕಾನೂನು ಮತ್ತು ತನಿಖಾ ಸಂಸ್ಥೆಯನ್ನು ನೇಮಿಸಲು ನಿರ್ಧರಿಸಿತು. ಈ ಸಂಸ್ಥೆ, ಅದಾನಿ ಸಮೂಹದೊಡನೆ ಬಾಂಗ್ಲಾದೇಶ ನಡೆಸಿರುವ ವಿದ್ಯುತ್ ಒಪ್ಪಂದ ಸೇರಿದಂತೆ, ಪ್ರಮುಖ ವಿದ್ಯುತ್ ಒಪ್ಪಂದಗಳ ಕುರಿತು ವಿಚಾರಣೆ ನಡೆಸಲು ನೆರವಾಗಲಿದೆ.

ಇದೇ ನವೆಂಬರ್ ತಿಂಗಳಲ್ಲಿ, ಪಾಕಿಸ್ತಾನದ ಕರಾಚಿ ಬಂದರಿನಿಂದ ಹೊರಟ ಒಂದು ಹಡಗು, ಬಾಂಗ್ಲಾದೇಶದ ಚಿತ್ತಗಾಂಗ್ ಬಂದರು ಪ್ರವೇಶಿಸಿತು. ಇದು ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳ ನಡುವೆ ಮೊದಲ ನೇರ ಸಮುದ್ರ ಸಂಪರ್ಕವಾಗಿದೆ. ಢಾಕಾದಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿ ಈ ಬೆಳವಣಿಗೆಯನ್ನು ಉಭಯ ದೇಶಗಳ ನಡುವಿನ ವ್ಯಾಪಾರವನ್ನು ಅಭಿವೃದ್ಧಿ ಪಡಿಸಲು ಅತ್ಯಂತ ಮಹತ್ವದ ಹೆಜ್ಜೆ ಎಂದು ಬಣ್ಣಿಸಿದೆ.

ಇದುವರೆಗೂ ಜಗತ್ತಿನ ಹೆಚ್ಚಿನ ಗಮನ ಸೆಳೆಯದೆ, ಹಿನ್ನೆಲೆಯಲ್ಲೇ ನಡೆಯುತ್ತಿದ್ದ ಇನ್ನೊಂದು ಘಟನೆ ಎಂದರೆ, ಬಾಂಗ್ಲಾದೇಶದೊಡನೆ ಗಡಿ ಹಂಚಿಕೊಳ್ಳುವ ಮಯನ್ಮಾರ್‌ನ ರಖಿನ್ ರಾಜ್ಯದಲ್ಲಿ ನಡೆಯುತ್ತಿರುವ ಕದನ.

ಒಂದು ವೇಳೆ, ಮಯನ್ಮಾರ್‌ನಲ್ಲಿ ಹಿಂಸಾಚಾರ ವಿಕೋಪಕ್ಕೆ ತೆರಳಿದರೆ, ಆಗ ಹೆಚ್ಚು ಹೆಚ್ಚು ನಿರಾಶ್ರಿತರು ಮತ್ತು ಹಿಂಸಾಚಾರ ಬಾಂಗ್ಲಾದೇಶದೊಳಗೆ ಕಾಲಿಡಬಹುದು. ಅಂತಹ ಪರಿಸ್ಥಿತಿ ಉಂಟಾದರೆ, ಅಧಿಕಾರದಲ್ಲಿರುವ ಯೂನುಸ್‌ರಂತಹ ಗೌರವಾನ್ವಿತ ವ್ಯಕ್ತಿಗೂ ಅದನ್ನು ನಿಭಾಯಿಸುವುದು ಬಹಳ ಕಷ್ಟಕರವಾಗಲಿದೆ.

ಶೇಖ್ ಹಸೀನಾ ಭವಿಷ್ಯ
ನವೆಂಬರ್ ತಿಂಗಳಲ್ಲಿ, ಬಾಂಗ್ಲಾದೇಶದ ನ್ಯಾಯಾಲಯ ಶೇಖ್ ಹಸೀನಾ ವಿರುದ್ಧ ಬಂಧನದ ವಾರಂಟ್ ಹೊರಡಿಸಿತು. ಮಾಜಿ ಪ್ರಧಾನಿ ಶೇಖ್ ಹಸೀನಾ, ಅವರ ಸರ್ಕಾರದ ಮಾಜಿ ಸಚಿವರು ಮತ್ತು ಅವರ ಬೆಂಬಲಿಗರ ವಿರುದ್ಧ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಲು ಪ್ರಯತ್ನಿಸುವುದಾಗಿಯೂ ನ್ಯಾಯಾಂಗ ಇಲಾಖೆ ಹೇಳಿತು.

ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಳ್ಳುವ ಸೂಚನೆಗಳು ಕಾಣಿಸಿಕೊಂಡಾಗ, ಹಸೀನಾ ಸರ್ಕಾರದ ಹಲವು ಮಾಜಿ ಸಚಿವರು ವಿದೇಶಗಳಿಗೆ ಪಲಾಯನಗೈದರು. ಆದರೆ, ಹಲವಾರು ಸಚಿವರನ್ನು ಬಾಂಗ್ಲಾದೇಶದಿಂದ ಹೊರ ಹೋಗದಂತೆ ತಡೆದು, ಅವರನ್ನು ಬಂಧಿಸಲಾಯಿತು.

ಹಸೀನಾ ವಿರುದ್ಧ ಬಂಧನ ವಾರಂಟ್ ನೀಡಿದ ಬಳಿಕ, ಯೂನುಸ್ ಅವರು ಮಧ್ಯಂತರ ಸರ್ಕಾರದ ನೂರನೇ ದಿನದ ಸಂದರ್ಭದಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ, "ದೇಶಭ್ರಷ್ಟರಾಗಿರುವ ಸರ್ವಾಧಿಕಾರಿಯನ್ನು ಬಾಂಗ್ಲಾದೇಶಕ್ಕೆ ಹಸ್ತಾಂತರಿಸುವಂತೆ ನಾವು ಭಾರತಕ್ಕೆ ಮನವಿ ಮಾಡಲಿದ್ದೇವೆ" ಎಂದು ಯೂನುಸ್ ಖಚಿತವಾಗಿ ಹೇಳಿದ್ದರು.

"ಜುಲೈ ತಿಂಗಳಿಂದ ಆಗಸ್ಟ್ ನಡುವೆ ಚಳುವಳಿಯ ಸಂದರ್ಭದಲ್ಲಿ ನಡೆದ ಬಲವಂತದ ಕಣ್ಮರೆ, ಕೊಲೆಗಳು, ಹಾಗೂ ಸಾಮೂಹಿಕ ಹತ್ಯಾಕಾಂಡದಲ್ಲಿ ಪಾಲ್ಗೊಂಡವರನ್ನು ವಿಚಾರಣೆಗೆ ಒಳಪಡಿಸುವ ಪ್ರಕ್ರಿಯೆ ಹಾಗೂ ಪ್ರಯತ್ನಗಳನ್ನು ನಾವು ಈಗಾಗಲೇ ಆರಂಭಿಸಿದ್ದೇವೆ" ಎಂದು ಯೂನುಸ್ ಹೇಳಿದ್ದಾರೆ.

ಬಾಂಗ್ಲಾದೇಶದ ಜನತೆ ಮತ್ತು ವಿದೇಶಗಳಲ್ಲಿ ನೆಲೆಸಿರುವ ಬಹಳಷ್ಟು ಬಾಂಗ್ಲಾದೇಶೀಯರು ಹಸೀನಾರ ಸರ್ವಾಧಿಕಾರಿ ಆಡಳಿತದಿಂದ ಬಾಂಗ್ಲಾದೇಶವನ್ನು ಸುಧಾರಿಸಲು ಯೂನುಸ್‌ರ ನಾಯಕತ್ವ ಅತ್ಯಗತ್ಯವಾಗಿತ್ತು ಎಂದು ಭಾವಿಸಿದ್ದಾರೆ. ಯೂನುಸ್ ಆಡಳಿತ ರಾಜಕೀಯ ಮತ್ತು ಆರ್ಥಿಕ ಸ್ಥಿರತೆ ತರಲು ನೆರವಾಗಲಿದೆ ಎಂದು ಅವರು ಅಭಿಪ್ರಾಯ ಪಡುತ್ತಾರೆ.

ಇತರರು ಈ ಅಭಿಪ್ರಾಯವನ್ನು ಒಪ್ಪಿಕೊಳ್ಳದೆ, ಇದು ಯೂನುಸ್ ಕುರಿತು ಅತಿಯಾದ ಧನಾತ್ಮಕ ಧೋರಣೆ ಎಂದಿದ್ದಾರೆ. ಕಳೆದ ನೂರು ದಿನಗಳ ಅವಧಿಯಲ್ಲಿ ಅತಿಯಾಗಿ ಶ್ಲಾಘಿಸುವಂತಹ ಸಾಧನೆಗಳನ್ನು ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ಮಾಡಿಲ್ಲ ಎಂದು ಅವರು ಹೇಳಿದ್ದಾರೆ
 

click me!