
ಏರ್ ಶೋಗೆ ಅಭ್ಯಾಸ ನಡೆಸುತ್ತಿದ್ದ ಎಫ್-16 ಫೈಟರ್ ಜೆಟ್‌ವೊಂದು ಅಭ್ಯಾಸದ ವೇಳೆಯೇ ಪತನಗೊಂಡಿದ್ದು, ಈ ದುರ್ಘಟನೆಯಲ್ಲಿ ಫೈಟರ್ ಜೆಟ್‌ನ ಪೈಲಟ್ ಸಾವನ್ನಪ್ಪಿದ್ದಾರೆ. ಸೆಂಟ್ರಲ್ ಪೋಲ್ಯಾಂಡ್‌ನ ರಾಡಾಮ್‌ನಲ್ಲಿ ಈ ಘಟನೆ ನಡೆದಿದ್ದು, ಕೊನೆಯ ಕ್ಷಣಗಳು ಕ್ಯಾಮರಾದಲ್ಲಿ ಸೆರೆ ಆಗಿವೆ. ಪೋಲೆಂಡ್‌ನ ಉಪ ಪ್ರಧಾನ ಮಂತ್ರಿ ವ್ಲಾಡಿಸ್ಲಾ ಕೊಸಿನಿಯಾಕ್ ಕಮಿಸ್ಜ್ ಈ ಸುದ್ದಿಯನ್ನು ದೃಢಪಡಿಸಿದ್ದು, ಘಟನೆಯಿಂದ ವಾಯುಪಡೆಗೆ ದೊಡ್ಡ ನಷ್ಟ ಆದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಘಟನೆಯ ವೀಡಿಯೋ ವೈರಲ್ ಆಗಿದ್ದು, ಈ ಎಫ್-16 ಯುದ್ಧ ವಿಮಾನ ಪತನಗೊಂಡು ನೆಲಕ್ಕೆ ಬೀಳುವ ಮೊದಲು ಆಗಸದಲ್ಲಿ ಕಸರತ್ತು ಮಾಡುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಬ್ಯಾರೆಲ್ ರೋಲ್ ಏರೋಬ್ಯಾಟಿಕ್ ಸಾಹಸ ಮಾಡುತ್ತಿರುವ ಈ ವಿಮಾನ ಕೆಲ ನಿಮಿಷದಲ್ಲಿ ಪತನಗೊಂಡು ಕೆಳಗೆ ಬಿದ್ದಿದೆ. ರನ್‌ವೇಯಲ್ಲೇ ಸ್ಕಿಡ್ ಆಗಿ ಬಿದ್ದ ವಿಮಾನ ಬೆಂಕಿಯುಂಡೆ ಸಾಗಿ ಹೋದಂತೆ ರನ್‌ವೇಯಲ್ಲಿ ವೇಗವಾಗಿ ಸಾಗಿ ಸ್ಫೋಟಗೊಳ್ಳುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.
ಜಾಗತಿಕ ಕಾಲಮಾನ 17.30 ಅಂದರೆ ಭಾರತೀಯ ಸಮಯ ರಾತ್ರಿ 11 ಗಂಟೆ ಸಮಯದಲ್ಲಿ ಈ ಘಟನೆ ನಡೆದಿದೆ. ದುರಂತಕ್ಕೀಡಾದ ವಿಮಾನವೂ ಪೋಜ್ನಾನ್ ಬಳಿಯ 31 ನೇ ಟ್ಯಾಕ್ಟಿಕಲ್ ಏರ್ ಬೇಸ್‌ಗೆ ಸೇರಿತ್ತು ಎಂದು ಘಟನೆಯಲ್ಲಿ ಯಾವುದೇ ಪ್ರೇಕ್ಷಕನಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಪೋಲೆಂಡ್ ಸಶಸ್ತ್ರ ಪಡೆಗಳ ಜನರಲ್ ಕಮಾಂಡ್ ತಿಳಿಸಿದೆ. ಈ ನಡುವೆ ಈ ವಾರಾಂತ್ಯದಲ್ಲಿ ನಡೆಯಬೇಕಿದ್ದ ಏರ್‌ಶೋ ರಾಡಮ್ 2025 ಅನ್ನು ರದ್ದುಗೊಳಿಸಲಾಗಿದೆ. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಪೋಲೆಂಡ್‌ನ ಉಪ ಪ್ರಧಾನ ಮಂತ್ರಿ ವ್ಲಾಡಿಸ್ಲಾ ಕೊಸಿನಿಯಾಕ್ ಕಮಿಸ್ಜ್ ಘಟನಾ ಸ್ಥಳದಲ್ಲಿ ಇರುವುದಾಗಿ ತಿಳಿಸಿದರು. ಎಫ್ -16 ವಿಮಾನ ಅಪಘಾತದಲ್ಲಿ, ಪೋಲಿಷ್ ಸೇನೆಯ ಪೈಲಟ್ ಸಾವನ್ನಪ್ಪಿದ್ದಾರೆ. ಯಾವಾಗಲೂ ತಮ್ಮ ದೇಶಕ್ಕೆ ಸಮರ್ಪಣೆ ಮತ್ತು ಧೈರ್ಯದಿಂದ ಸೇವೆ ಸಲ್ಲಿಸುತ್ತಿದ್ದ ಆ ಅಧಿಕಾರಿ ಅವರ ಸ್ಮರಣೆಗೆ ನಾನು ಗೌರವ ಸಲ್ಲಿಸುತ್ತೇನೆ. ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ, ನನ್ನ ಆಳವಾದ ಸಂತಾಪವನ್ನು ಅರ್ಪಿಸುತ್ತೇನೆ. ಘಟನೆಯಿಂದ ವಾಯುಪಡೆ ಮತ್ತು ಇಡೀ ಪೋಲಿಷ್ ಸೈನ್ಯಕ್ಕೆ ದೊಡ್ಡ ನಷ್ಟವಾಗಿದೆ ಎಂದು ಹೇಳಿದ್ದಾರೆ.
ಆಕಾಶದಲ್ಲೇ ಎಫ್ 35 ವಿಮಾನದ ದೋಷ ಸರಿಪಡಿಸಲು ಯತ್ನಿಸಿದ ಪೈಲಟ್
ಹಾಗೆಯೇ ಮತ್ತೊಂದು ವಿಮಾನ ಪತನ ಪ್ರಕರಣ ಅಮೆರಿಕಾದಿಂದ ವರದಿಯಾಗಿದ್ದು, ಅದರ ವೀಡಿಯೋ ಕೂಡ ಕ್ಯಾಮರಾದಲ್ಲಿ ಸೆರೆಯಾಗಿ ವೈರಲ್ ಆಗಿದೆ. ಆದರೆ ಈ ಪ್ರಕರಣದಲ್ಲಿ ಯಾವುದೇ ಜೀವಹಾನಿಯಾಗಿಲ್ಲ, ಅವಘಡಕ್ಕೂ ಮೊದಲು ವಿಮಾನದ ಪೈಲಟ್ ಸುರಕ್ಷಿತವಾಗಿ ಪಾರಾಗಿದ್ದಾರೆ. ಅದಕ್ಕಿಂತಲೂ ಮುಖ್ಯವಾಗಿ ಎಫ್35 ವಿಮಾನದಲ್ಲಿ ತಾಂತ್ರಿಕ ದೋಷವಿರುವುದು ಗಮನಕ್ಕೆ ಬಂದ ಕೂಡಲೇ ಪೈಲಟ್ ಎಂಜಿನಿಯರ್‌ಗಳ ಜೊತೆ ಆಕಾಶದಿಂದಲೇ ಸಂವಹನ ನಡೆಸುತ್ತಾ ಸುಮಾರು 50 ನಿಮಿಷಗಳ ಕಾಲ ವಿಮಾನದ ತಾಂತ್ರಿಕ ದೋಷವನ್ನು ಸರಿಪಡಿಸಲು ಯತ್ನಿಸಿದ್ದಾರೆ ಆದರೆ ಅದು ಸಾಧ್ಯವಾಗದ ಹಿನ್ನೆಲೆಯಲ್ಲಿ ವಿಮಾನವನ್ನು ಕೈ ಬಿಟ್ಟು ಅವರು ಪ್ಯಾರಾಚೂಟ್ ಮೂಲಕ ವಿಮಾನದಿಂದ ಹೊರಕ್ಕೆ ಹಾರಿದ್ದಾರೆ ಎಂದು ವರದಿಯಾಗಿದೆ.
ವಿಮಾನದ ಆಸೆ ಕೈ ಬಿಟ್ಟು ಹೊರಕ್ಕೆ ಹಾರಿದ ಪೈಲಟ್
ವೈರಲ್ ಆದ ವೀಡಿಯೋದಲ್ಲಿ ಎಫ್ 35 ವಿಮಾನ ಪೈಲಟ್‌ನ ನಿಯಂತ್ರಣಕ್ಕೆ ಸಿಗದೇ ಹೋದ ನಂತರ ಪೈಲಟ್ ಹೊರಕ್ಕೆ ಹಾರಿದ್ದಾರೆ. ಈ ವೇಳೆ ವಿಮಾನ ತಲೆಕೆಳಗಾಗಿ ತಿರುಗುತ್ತಾ ನೆಲಕ್ಕೆ ಬಿದ್ದು ಸ್ಪೋಟಗೊಂಡಿದೆ. ಹೈಡ್ರಾಲಿಕ್ ಲೈನ್‌ಗಳಲ್ಲಿನ ಐಸ್ ವಿಮಾನದ ಪ್ರಮುಖ ಲ್ಯಾಂಡಿಂಗ್ ಗೇರ್, ವಿಮಾನದ ಮೂಗಿಗೆ ಸರಿಯಾಗಿ ನಿಯೋಜನೆ ತಡೆದಿದ್ದರಿಂದ ಅಪಘಾತ ನಡೆದಿದೆ ಎಂದು ವರದಿಯಾಗಿದೆ. ಟೇಕ್ ಆಫ್ ಆದ ನಂತರ ಇದು ಗಮನಕ್ಕೆ ಬಂದಿದ್ದು,, ಪೈಲಟ್ ಲ್ಯಾಂಡಿಂಗ್ ಗೇರ್ ಅನ್ನು ಹಿಂತೆಗೆದುಕೊಳ್ಳಲು ಪ್ರಯತ್ನಿಸಿದರು ಸಾಧ್ಯವಾಗಲಿಲ್ಲ. ಅದನ್ನು ಮತ್ತೆ ಕೆಳಕ್ಕೆ ಇಳಿಸುವಾಗ, ವಿಮಾನದ ಮೂಗು ಹಾಗೂ ಗೇರ್ ಎಡ ಕೋನದಲ್ಲಿ ಲಾಕ್ ಆಯಿತು.
ಪೈಲಟ್ ಸಮಸ್ಯೆಯನ್ನು ಸರಿಪಡಿಸಲು ಪ್ರಯತ್ನಿಸಿದಾಗ, ಜೆಟ್ ನೆಲದ ಮೇಲೆ ಇದ್ದಂತೆ ಪ್ರತಿಕ್ರಿಯಿಸಿತು. ಹೀಗಾಗಿ ಪೈಲಟ್ ಎಂಜಿನಿಯರ್‌ಗಳೊಂದಿಗೆ ಕರೆ ಮಾಡಿ, ಸಮಸ್ಯೆಯನ್ನು ಸರಿಪಡಿಸಲು ಸುಮಾರು ಒಂದು ಗಂಟೆ ಆಕಾಶದಲ್ಲೇ ಯತ್ನಿಸಿದ್ದಾರೆ ಆದರೆ ಸಾಧ್ಯವಾಗದೇ ಹೋದಾಗ ವಿಮಾನದ ಆಸೆ ಕೈ ಬಿಟ್ಟು ವಿಮಾನದಿಂದ ಹೊರಕ್ಕೆ ಹಾರಿದ್ದಾರೆ. ಈ ವೀಡಿಯೋವೂ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.
ಇದನ್ನೂ ಓದಿ: ಟ್ರಂಪ್ ಎಡವಟ್ಟಿನ ವರ್ತನೆಗೆ ತಿರುಗೇಟು: ಅಮೆರಿಕಾದಲ್ಲಿ 550 ಬಿಲಿಯನ್ ಡಾಲರ್ ಒಪ್ಪಂದ ರದ್ದು ಮಾಡುತ್ತಾ ಜಪಾನ್?
ಇದನ್ನೂ ಓದಿ: ಆನೆಯ ಹೊಡೆದ ಇಲಿಯಂತೆ: ಭಾರತದ ವಿರುದ್ಧ ತೆರಿಗೆ ಸಮರ, ಟ್ರಂಪ್ ನಡೆ ಬಗ್ಗೆ ಅಮೆರಿಕಾ ಆರ್ಥಿಕ ತಜ್ಞರ ಕಳವಳ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ