
ವಾಷಿಂಗ್ಟನ್: ಹಿಂದೊಮ್ಮೆ ಜಿಗರಿ ದೋಸ್ತ್‌ಗಳಂತಿದ್ದ ಜಗತ್ತಿನ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಹಾಗೂ ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಈಗ ಹಾವು ಮುಂಗುಸಿಗಳಾಂತಾಗಿದ್ದು, ಪರಸ್ಪರ ಕತ್ತಿ ಮಸೆಯುತ್ತಿದ್ದಾರೆ. ಹೀಗಾಗಿ ಈಗ ಅಮೆರಿಕಾದಲ್ಲಿ ಟ್ರಂಪ್‌ಗೆ ತಿರುಗೇಟು ನೀಡಲು ಎಲಾನ್ ಮಸ್ಕ್ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದು, ಅದಕ್ಕೆ ಅಮೆರಿಕಾ ಪಾರ್ಟಿ ಎಂಬ ಹೆಸರಿಟ್ಟಿದ್ದಾರೆ.
ಅಮೆರಿಕ ಪಾರ್ಟಿ ಎಂಬ ಹೊಸ ರಾಜಕೀಯ ಪಕ್ಷವನ್ನು ಅಮೆರಿಕಾದಲ್ಲಿ ಸ್ಥಾಪಿಸಿರುವುದಾಗಿ ಎಲಾನ್ ಮಸ್ಕ್ ಅಧಿಕೃತವಾಗಿ ನಿನ್ನೆ ಘೋಷಣೆ ಮಾಡಿದ್ದಾರೆ. ಅಮೆರಿಕಾದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒನ್ ಬಿಗ್ ಬ್ಯೂಟಿಫುಲ್ ಮಸೂದೆಗೆ ಸಹಿ ಹಾಕಿದ ಮರು ದಿನವೇ ಟೆಕ್ ದೈತ್ಯ ಎಲಾನ್ ಮಸ್ಕ್ ಈ ಹೊಸ ರಾಜಕೀಯ ಪಕ್ಷವನ್ನು ಘೋಷಣೆ ಮಾಡಿದ್ದಾರೆ.
ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿಯೂ ಎನಿಸಿರು ಎಲಾನ್ ಮಸ್ಕ್ ಈ ಹಿಂದೆ ಕಳೆದ ವರ್ಷ ನಡೆದ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಡೋನಾಲ್ಡ್ ಟ್ರಂಪ್ ಅತ್ಯಾಪ್ತ ಬೆಂಬಲಿಗರಲ್ಲಿ ಒಬ್ಬರಾಗಿದ್ದರು. ಜೊತೆಗೆ ಟ್ರಂಪ್ ಅವರ ಪಕ್ಷಕ್ಕೆ ಅತೀ ಹೆಚ್ಚು ದಾನ ನೀಡಿದವರಲ್ಲಿ ಒಬ್ಬರೆನಿಸಿದ್ದರು. ಆದರೆ ಫೆಡರಲ್ ವೆಚ್ಚದಲ್ಲಿ ಕಡಿತ ಹಾಗೂ ಸರ್ಕಾರಿ ಉದ್ಯೋಗ ಕಡಿತ ಸೇರಿದಂತೆ ಹಲವು ವಿವಾದಾತ್ಮಕ ಅಂಶಗಳನ್ನು ಹೊಂದಿರುವ ಒನ್ ಬಿಗ್ ಬ್ಯೂಟಿಫುಲ್ ಮಸೂದೆ ವಿಚಾರವಾಗಿ ಈ ಇಬ್ಬರು ನಾಯಕರು ಕುಸ್ತಿಗಿಳಿದಿದ್ದು, ಈ ಇಬ್ಬರು ನಾಯಕರ ನಡುವಣ ಕಿತ್ತಾಟ ಜಾಗತಿಕ ಮಟ್ಟದಲ್ಲಿ ದೊಡ್ಡಸುದ್ದಿಯಾಗಿತ್ತು. ಆದರೆ ಈಗ ಎಲಾನ್ ಮಸ್ಕ್ ಹೊಸ ಪಕ್ಷ ಸ್ಥಾಪಿಸುವ ಮೂಲಕ ಟ್ರಂಪ್‌ಗೆ ತಿರುಗೇಟು ನೀಡಿದ್ದಾರೆ.
ಪಕ್ಷ ಸ್ಥಾಪಿಸುವುದಕ್ಕೂ ಮೊದಲು ಎಲಾನ್ ಮಸ್ಕ್ ಟ್ವಿಟ್ಟರ್‌ನಲ್ಲಿ ಜನರ ಅಭಿಪ್ರಾಯ ಕೇಳುವುದಕ್ಕಾಗಿ ವೋಟಿಂಗ್ ಮಾಡಲು ಅವಕಾಶ ಇರುವ ಪೋಸ್ಟೊಂದನ್ನು ಹಾಕಿದ್ದರು. ಅದರಲ್ಲಿ ಸ್ವಾತಂತ್ರ್ಯ ದಿನವು ಎರಡು ಪಕ್ಷಗಳ (ಕೆಲವರು ಏಕಪಕ್ಷೀಯ ಎಂದು ಹೇಳುತ್ತಾರೆ) ವ್ಯವಸ್ಥೆಯಿಂದ ಸ್ವಾತಂತ್ರ್ಯ ಬೇಕೇ ಎಂದು ಕೇಳಲು ಸೂಕ್ತ ಸಮಯ! ನಾವು ಅಮೇರಿಕಾ ಪಕ್ಷವನ್ನು ರಚಿಸಬೇಕೇ? ಎಂದು ಕೇಳಿದರು. ಸಮೀಕ್ಷೆಯಲ್ಲಿ 65.4% ಜನರು ಹೌದು ಮತ್ತು 34.6% ಜನರು ಇಲ್ಲ ಎಂದು ಮತ ಚಲಾಯಿಸಿದ್ದರು. ಇದಾದ ನಂತರ ಎಲಾನ್ ಮಸ್ಕ್ ಈಗ ಹೊಸ ಅಮೆರಿಕ ಪಕ್ಷವನ್ನು ಸ್ಥಾಪಿಸಿದ್ದು, ಇಂದು, ನಿಮ್ಮ ಸ್ವಾತಂತ್ರ್ಯವನ್ನು ಮರಳಿ ನೀಡಲು ಅಮೆರಿಕಾ ಪಕ್ಷವನ್ನು ರಚಿಸಲಾಗಿದೆ ಎಂದು ಪೋಸ್ಟ್ ಮಾಡಿದ್ದಾರೆ.
ಅದೇ ಪೋಸ್ಟ್‌ನಲ್ಲಿ, ಮಸ್ಕ್, 2 ರಿಂದ 1 ಅಂಶದ ಪ್ರಕಾರ, ನಿಮಗೆ ಹೊಸ ರಾಜಕೀಯ ಪಕ್ಷ ಬೇಕು ಮತ್ತು ಅದು ನಿಮ್ಮದಾಗುವುದು ಖಚಿತ! ನಮ್ಮ ದೇಶವನ್ನು ತ್ಯಾಜ್ಯ ಮತ್ತು ಭ್ರಷ್ಟಾಚಾರದಿಂದ ದಿವಾಳಿ ಮಾಡುವ ವಿಷಯ ಬಂದಾಗ, ನಾವು ಪ್ರಜಾಪ್ರಭುತ್ವದಲ್ಲಿ ಅಲ್ಲ, ಏಕಪಕ್ಷ ವ್ಯವಸ್ಥೆಯಲ್ಲಿ ವಾಸಿಸುತ್ತಿದ್ದೇವೆ ಎಂದು ಅವರು ಟ್ವಿಟ್ ಮಾಡಿದ್ದಾರೆ.
ದೇಶದ ದ್ವಿಪಕ್ಷೀಯ ವ್ಯವಸ್ಥೆಗೆ ಸವಾಲು ಹಾಕಿ, ಈ ಒನ್ ಬಿಗ್ ಬ್ಯೂಟಿಫುಲ್ ಮಸೂದೆಯನ್ನು ಬೆಂಬಲಿಸಿದ ರಾಜಕಾರಣಿಗಳನ್ನು ಸೋಲಿಸುವುದೇ ತಮ್ಮ ಗುರಿ ಎಂದು ಮಸ್ಕ್ ಘೋಷಿಸಿದ್ದಾರೆ. ಎಲಾನ್ ಮಸ್ಕ್ ಅವರ ಹೊಸ ಪಕ್ಷವು 2026ರ ಮಧ್ಯಂತರ ಚುನಾವಣೆಗಳ ಮೇಲೆ ಅಥವಾ ಅದರ ಎರಡು ವರ್ಷಗಳ ನಂತರ ನಡೆಯುವ ಅಧ್ಯಕ್ಷೀಯ ಚುನಾವಣೆಯ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕು. ಆದರೆ, ಎಲಾನ್ ಮಸ್ಕ್ ಮಾತ್ರ ಒನ್ ಬಿಗ್ ಬ್ಯೂಟಿಫುಲ್ ಬೆಂಬಲಿಸಿದ ಎಲ್ಲರನ್ನೂ ಮುಂದಿನ ಚುನಾವಣೆಯಲ್ಲಿ ಸೋಲಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಅದರೆ ಅಮೆರಿಕದಲ್ಲಿ ಹೊಸ ರಾಜಕೀಯ ಪಕ್ಷಕ್ಕೆ ಉತ್ತಮ ಜನಸ್ಪಂದನೆ ದೊರೆಯಲಿದೆಯೇ? ಎಂಬುದು ಅಮೆರಿಕಾದ ಜನರ ಮನಸ್ಥಿತಿಯ ಮೇಲೆ ನಿಂತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ