Russia Ukraine Crisis: ರಷ್ಯಾದಲ್ಲಿ ನಿರ್ಬಂಧದ ಪರಿಣಾಮ ನಿಧಾನ ಗೋಚರ

By Kannadaprabha News  |  First Published Mar 1, 2022, 1:45 AM IST

* ಡಾಲರ್‌ ಎದುರು ರೂಬಲ್‌ ಮೌಲ್ಯ ದಾಖಲೆ ಕುಸಿತ
* ಅಗತ್ಯ ವಸ್ತುಗಳ ಬೆಲೆ ದಿನೇ ದಿನೇ ಗಗನಕ್ಕೇರಿಕೆ
* ಎಲ್ಲೆಡೆ ಎಟಿಎಂಗಳ ಮುಂದೆ ಜನರ ಮಾರುದ್ದ ಸಾಲು
* ಜಾಗತಿಕ ನಿರ್ಬಂಧಗಳ ಪರಿಣಾಮ ನಿಧಾನ ಜಾರಿ


ಮಾಸ್ಕೋ (ಮಾ.01): ಉಕ್ರೇನ್‌ (Ukraine) ಮೇಲೆ ಏಕಪಕ್ಷೀಯವಾಗಿ ಯುದ್ಧ ಸಾರಿದ್ದರ ವಿರುದ್ಧವಾಗಿ ರಷ್ಯಾದ (Russia) ಮೇಲೆ ಜಾಗತಿಕ ಸಮುದಾಯ ಹೇರಿರುವ ನಾನಾ ನಿರ್ಬಂಧದ ಕ್ರಮಗಳು, ನಿಧಾನವಾಗಿ ತನ್ನ ಪರಿಣಾಮವನ್ನು ತೋರಿಸಲು ಆರಂಭಿಸಿದೆ. ಮೊದಲ ಹಂತದಲ್ಲಿ ಜನಸಾಮಾನ್ಯರ ಮೇಲೆ ಕಾಣಿಸಿಕೊಳ್ಳುತ್ತಿರುವ ಈ ಪರಿಣಾಮಗಳು ಶೀಘ್ರವೇ ಸಣ್ಣ, ಮಧ್ಯಮ, ದೊಡ್ಡ ಕೈಗಾರಿಕೆಗಳು, ಆರ್ಥಿಕತೆ ಮೇಲೂ ಕಾಣಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

ಒಂದು ವೇಳೆ ಉಕ್ರೇನ್‌ ಜೊತೆಗಿನ ಸಂಧಾನ ಮಾತುಕತೆ ಸಫಲವಾಗದೇ, ರಷ್ಯಾದ ಮೇಲಿನ ನಿರ್ಬಂಧಗಳು ಮುಂದುವರೆದರೆ 23 ವರ್ಷಗಳಿಂದ ರಷ್ಯಾವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿರುವ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ದೊಡ್ಡ ಸಂಕಷ್ಟಎದುರಿಸಬೇಕಾಗಿ ಬರಲಿದೆ ಎನ್ನಲಾಗಿದೆ.

Tap to resize

Latest Videos

ರೂಬಲ್‌ ಕುಸಿತ: ಕಳೆದ 5 ದಿನಗಳ ಅವಧಿಯಲ್ಲಿ ಡಾಲರ್‌ ಎದುರು ರಷ್ಯಾದ ಕರೆನ್ಸಿಯಾದ ರೂಬಲ್‌ ಶೆ.30ರಷ್ಟು ಭಾರೀ ಕುಸಿತ ಕಂಡಿದೆ. ಪರಿಣಾಮ 1 ಡಾಲರ್‌ಗೆ ಮೌಲ್ಯವು 117 ರೂಬಲ್‌ಗೆ ಕುಸಿದಿದೆ. 1997ರಲ್ಲಿ ಸೋವಿಯತ್‌ ಒಕ್ಕೂಟ ಪತನ ಬಳಿಕ ಮೊದಲ ಬಾರಿ ರೂಬಲ್‌ ಮೌಲ್ಯ ಭಾರೀ ಕುಸಿತವಾಗಿತ್ತು. ಬಳಿಕ 1998ರಲ್ಲಿ ಒಮ್ಮೆ ಮತ್ತು 2014ರಲ್ಲಿ ತೈಲ ಬೆಲೆ ಭಾರೀ ಕುಸಿತ ಕಂಡಾಗಲೂ ರೂಬಲ್‌ಗೆ ಭಾರೀ ಹೊಡೆತ ಬಿದ್ದಿತ್ತು. ಇದೀಗ ರಷ್ಯಾದ ಆಯ್ದ ಬ್ಯಾಂಕ್‌ಗಳನ್ನು ಸ್ವಿಫ್ಟ್‌ (SWIFT) ವ್ಯವಸ್ಥೆಯಿಂದ ಹೊರಗಿಡುವ ಮತ್ತು ರಷ್ಯಾದ ಕೇಂದ್ರೀಯ ಬ್ಯಾಂಕ್‌ ಹೊಂದಿರುವ ವಿದೇಶಿ ಕರೆನ್ಸಿ ಮೀಸಲು ಬಳಕೆಗೆ ನಿರ್ಬಂಧ ವಿಧಿಸುವ ಅಮೆರಿಕ, ನ್ಯಾಟೋ ಸೇರಿ ಹಲವು ದೇಶಗಳ ನಿರ್ಧಾರದ ಪರಿಣಾಮ ರೂಬಲ್‌ ಬೆಲೆ ಮತ್ತೆ ಕುಸಿತ ಕಂಡಿದೆ.

Russia Ukraine Crisis: ಉಕ್ರೇನ್‌ಗೆ ಶಸ್ತ್ರಾಸ್ತ್ರ ನೆರವಿನ ಮಳೆ!

ವಿದೇಶಿ ಪ್ರಯಾಣ ದುಬಾರಿ: ರೂಬಲ್‌ ಮೌಲ್ಯ ಕುಸಿದಿರುವ ಕಾರಣ, ರಷ್ಯನ್ನರು ವಿದೇಶಗಳಿಗೆ ತೆರಳಿದರೆ ಎಲ್ಲಾ ಖರೀದಿಗೆ ಭಾರೀ ಹಣ ವ್ಯಯ ಮಾಡಬೇಕಾಗಿ ಬರಲಿದೆ.

ಎಟಿಎಂ ಮುಂದೆ ಸಾಲು: ಮುಂದಿನ ದಿನಗಳಲ್ಲಿ ಬೆಲೆ ಏರಿಕೆ ಕೈಮೀರಿದರೆ ಕರೆನ್ಸಿ ಕೊರತೆಯಾಗಬಹುದು ಎಂಬ ಕಾರಣಕ್ಕೆ ರಷ್ಯಾದ ಜನಸಾಮಾನ್ಯರು, ರುಬೆಲ್‌ ಸಂಗ್ರಹಕ್ಕೆ ಮುಂದಾಗಿದ್ದಾರೆ. ಹೀಗಾಗಿ ದೇಶದ ಎಲ್ಲಾ ಕಡೆ ಎಟಿಎಂಗಳ ಮುಂದೆ ಜನರ ದೊಡ್ಡ ಸರದಿ ಕಂಡುಬರುತ್ತಿದೆ.

ನೋಟು ಮುದ್ರಣ: ಬೆಲೆ ಏರಿಕೆ ಬಿಸಿಯನ್ನು ತಡೆಯಲು ರಷ್ಯಾ ಅನಿವಾರ್ಯವಾಗಿ ಹೊಸದಾಗಿ ನೋಟು ಮುದ್ರಿಸಿ ಜನರಿಗೆ ಹಂಚಬೇಕಾಗಿ ಬರಬಹುದು. ಹೀಗಾದಲ್ಲಿ ಅದು ಹೈಪರ್‌ ಇನ್‌ಫ್ಲೇಷನ್‌ಗೆ ಕಾರಣವಾಗಿ ಜನಸಾಮಾನ್ಯರ ಜೀವನವನ್ನು ಮತ್ತಷ್ಟುಹೈರಾಣಾಗಿಸುವ ಸಾಧ್ಯತೆ ಇದೆ.

ಬೆಲೆ ಏರಿಕೆ ಬಿಸಿ: ರಷ್ಯಾ ಹಲವು ದಿನ ಬಳಕೆಯ ಅಗತ್ಯ ವಸ್ತುಗಳಿಗೆ ವಿದೇಶಗಳನ್ನೇ ಪ್ರಮುಖವಾಗಿ ಅವಲಂಬಿಸಿದೆ. ಇದೀಗ ಹಲವು ದೇಶಗಳು ರಷ್ಯಾ ವಿಮಾನಗಳಿಗೆ ತಮ್ಮ ವಾಯುಸೀಮೆ ಬಂದ್‌ ಮಾಡಿರುವ ಕಾರಣ, ಹಲವು ನೆರೆಯ ದೇಶಗಳು ನಿರ್ಬಂಧ ಹೇರಿರುವ ಕಾರಣ ಮತ್ತು ಯುದ್ಧದ ಕಾರಣ ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ಮುಂದಿನ ದಿನಗಳಲ್ಲಿ ರಷ್ಯಾಕ್ಕೆ ಅಗತ್ಯ ವಸ್ತುಗಳ ಪೂರೈಕೆ ಕೊರತೆಯಾಗಿ ಬೆಲೆ ಏರುವ ಎಲ್ಲಾ ಸಾಧ್ಯತೆಗಳಿವೆ.

Karnataka Ukraine Students: ಉಕ್ರೇನ್ ನಿಂದ ತವರಿಗೆ ಬಂದ ಕರ್ನಾಟಕದ 37 ವಿದ್ಯಾರ್ಥಿಗಳು

ಕೈಗಾರಿಕೆಗೆ ಹೊಡೆತ: ರಷ್ಯಾದ ಹಲವು ಕೈಗಾರಿಕಾ ವಲಯಗಳು ಕಚ್ಚಾ ವಸ್ತುಗಳಿಗೆ ವಿದೇಶಗಳನ್ನೇ ಅವಲಂಬಿಸಿವೆ. ಒಂದು ವೇಳೆ ಕಚ್ಚಾವಸ್ತು ಪೂರೈಕೆ ಕೊರತೆಯಾದರೆ ಕೈಗಾರಿಕೆಗಳು ಮುಚ್ಚಿ, ಪರಿಸ್ಥಿತಿ ಇನ್ನಷ್ಟುಹದಗೆಡುವ ಅಪಾಯವೂ ಇದೆ.

ಡಿಜಿಟಲ್‌ ಶಾಕ್‌: ರಷ್ಯಾದ ಬ್ಯಾಂಕ್‌ಗಳ ಮೇಲೆ ಹಲವು ನಿರ್ಬಂಧ ಹೇರಿರುವ ಕಾರಣ, ಆ್ಯಪಲ್‌ ಪೇ, ಗೂಗಲ್‌ ಪೇ, ಸ್ಯಾಮ್‌ಸಂಗ್‌ ಪೇ ಬಳಸುತ್ತಿರುವ ಗ್ರಾಹಕರು ಸಮಸ್ಯೆ ಎದುರಿಸಬೇಕಾಗಿರ ಬರಬಹುದು ಎಂದು ಸರ್ಕಾರ ಎಚ್ಚರಿಸಿದೆ.

click me!