ಮಗನ ಮದುವೆಗಿಂತ ದೇಶವೇ ಮೊದಲು: ಇರಾನ್ ಯುದ್ಧದ ಹಿನ್ನೆಲೆಯಲ್ಲಿ ಸ್ವಂತ ಪುತ್ರನ ವಿವಾಹಕ್ಕೆ ಟ್ರಂಪ್ ಗೈರು!

Published : May 23, 2026, 07:48 AM IST
Donald trump son wedding

ಸಾರಾಂಶ

ಇರಾನ್ ಜೊತೆಗಿನ ಯುದ್ಧದ ಭೀತಿ ಮತ್ತು ಜಾಗತಿಕ ರಾಜಕೀಯ ಬಿಕ್ಕಟ್ಟಿನ ಕಾರಣ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಮಗ ಡೊನಾಲ್ಡ್ ಟ್ರಂಪ್ ಜೂನಿಯರ್ ಅವರ ವಿವಾಹದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. 

ವಾಷಿಂಗ್ಟನ್ (ಮೇ.23): ಇರಾನ್ ಮತ್ತು ಅಮೆರಿಕ ನಡುವಿನ ಯುದ್ಧ ಹಾಗೂ ಜಾಗತಿಕ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಅತ್ಯಂತ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. ಈ ವಾರಾಂತ್ಯದಲ್ಲಿ ಬಹಾಮಾಸ್‌ನಲ್ಲಿ ನಡೆಯಲಿರುವ ತಮ್ಮ ಹಿರಿಯ ಮಗ ಡೊನಾಲ್ಡ್ ಟ್ರಂಪ್ ಜೂನಿಯರ್ (Donald Trump Jr.) ಅವರ ವಿವಾಹ ಕಾರ್ಯಕ್ರಮದಲ್ಲಿ ತಾವೂ ಭಾಗವಹಿಸುತ್ತಿಲ್ಲ ಎಂಬುದನ್ನು ಅಧ್ಯಕ್ಷ ಟ್ರಂಪ್ ಶುಕ್ರವಾರ ಅಧಿಕೃತವಾಗಿ ಖಚಿತಪಡಿಸಿದ್ದಾರೆ. "ದೇಶದ ಮೇಲಿನ ಪ್ರೀತಿ ಮತ್ತು ಪ್ರಸ್ತುತ ಸರ್ಕಾರದ ಜವಾಬ್ದಾರಿಗಳು ಈ ಸಮಯದಲ್ಲಿ ವಾಷಿಂಗ್ಟನ್ ತೊರೆಯಲು ನನಗೆ ಅನುಮತಿ ನೀಡುತ್ತಿಲ್ಲ" ಎಂದು ಅವರು ಭಾವುಕರಾಗಿ ಹೇಳಿದ್ದಾರೆ.

ಇರಾನ್ ಯುದ್ಧದ ಭೀಕರ ಪರಿಸ್ಥಿತಿಯಿಂದಾಗಿ ಮಗನ ಮದುವೆಗೆ ಇದು "ಸರಿಯಾದ ಸಮಯವಲ್ಲ" (Bad Timing) ಎಂದು ಟ್ರಂಪ್ ಒಂದು ದಿನದ ಹಿಂದಷ್ಟೇ ಸುಳಿವು ನೀಡಿದ್ದರು. ಈ ವಾರಾಂತ್ಯದಲ್ಲಿ ಬಹಾಮಾಸ್ ದ್ವೀಪದಲ್ಲಿ ಡೊನಾಲ್ಡ್ ಟ್ರಂಪ್ ಜೂನಿಯರ್ ಹಾಗೂ ಬೆಟಿನಾ ಆಂಡರ್ಸನ್ (Bettina Anderson) ಅವರ ಹೈಪ್ರೊಫೈಲ್ ವಿವಾಹ ನಿಶ್ಚಯವಾಗಿದೆ.

'ಟ್ರುತ್ ಸೋಷಿಯಲ್'ನಲ್ಲಿ ಟ್ರಂಪ್ ಬರೆದಿದ್ದೇನು?

ತಮ್ಮದೇ ಮಾಲೀಕತ್ವದ 'ಟ್ರುತ್ ಸೋಷಿಯಲ್' (Truth Social) ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಡೊನಾಲ್ಡ್ ಟ್ರಂಪ್, "ನನ್ನ ಮಗ ಡಾನ್ ಜೂನಿಯರ್ ಮತ್ತು ನಮ್ಮ ಟ್ರಂಪ್ ಕುಟುಂಬದ ಹೊಸ ಸದಸ್ಯೆಯಾಗಲಿರುವ ಆತನ ಭಾವಿ ಪತ್ನಿ ಬೆಟಿನಾ ಅವರೊಂದಿಗೆ ಇರಲು ನನಗೆ ತುಂಬಾ ಆಸೆಯಿತ್ತು. ಆದರೆ, ಪ್ರಸ್ತುತ ಸರ್ಕಾರದ ತುರ್ತು ಪರಿಸ್ಥಿತಿಗಳು ಮತ್ತು ಅಮೆರಿಕ ದೇಶದ ಮೇಲಿನ ನನ್ನ ಅಪಾರ ಪ್ರೀತಿ ನನಗೆ ಅದಕ್ಕೆ ಅವಕಾಶ ನೀಡುತ್ತಿಲ್ಲ" ಎಂದು ಬರೆದುಕೊಂಡಿದ್ದಾರೆ.

ಮುಂದುವರಿದು, "ಈ ಅತ್ಯಂತ ನಿರ್ಣಾಯಕ ಹಾಗೂ ಮಹತ್ವದ ಸಮಯದಲ್ಲಿ ನಾನು ವಾಷಿಂಗ್ಟನ್ ಡಿ.ಸಿ.ಯಲ್ಲೇ, ಅಂದರೆ ವೈಟ್ ಹೌಸ್‌ನಲ್ಲಿ (White House) ಇರುವುದು ದೇಶದ ದೃಷ್ಟಿಯಿಂದ ಅತ್ಯಗತ್ಯ ಎಂದು ನಾನು ಭಾವಿಸುತ್ತೇನೆ. ಡಾನ್ ಮತ್ತು ಬೆಟಿನಾಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು!" ಎಂದು ತಿಳಿಸಿದ್ದಾರೆ.

ಪ್ರವಾಸ ರದ್ದುಗೊಳಿಸಿದ ವೈಟ್ ಹೌಸ್‌

ಅಧ್ಯಕ್ಷ ಟ್ರಂಪ್ ಅವರ ಈ ಹೇಳಿಕೆಯ ಬೆನ್ನಲ್ಲೇ ವೈಟ್ ಹೌಸ್ ಅಧಿಕೃತ ಪ್ರಕಟಣೆಯೊಂದನ್ನು ಹೊರಡಿಸಿದ್ದು, ಟ್ರಂಪ್ ಅವರ ವಾರಾಂತ್ಯದ ಪ್ರವಾಸದ ಪ್ಲಾನ್ ಸಂಪೂರ್ಣ ಬದಲಾಗಿದೆ ಎಂದು ತಿಳಿಸಿದೆ. ಪೂರ್ವ ನಿಗದಿತ ಯೋಜನೆಯಂತೆ ಟ್ರಂಪ್ ಅವರು ನ್ಯೂಜೆರ್ಸಿಯಲ್ಲಿರುವ ತಮ್ಮ ಗಾಲ್ಫ್ ರೆಸಾರ್ಟ್‌ಗೆ ಹೋಗಬೇಕಿತ್ತು. ಆದರೆ ಈಗ ಆ ಪ್ರವಾಸವನ್ನು ರದ್ದುಗೊಳಿಸಲಾಗಿದ್ದು, ಅವರು ಅಮೆರಿಕ ರಾಜಧಾನಿ ವಾಷಿಂಗ್ಟನ್‌ನಲ್ಲೇ ಮೊಕ್ಕಾಂ ಹೂಡಲಿದ್ದಾರೆ.

ಯಾಕಿದು ಅತ್ಯಂತ ನಿರ್ಣಾಯಕ ಸಮಯ?

ಪ್ರಸ್ತುತ ಪರಿಸ್ಥಿತಿಯನ್ನು ಟ್ರಂಪ್ ಅವರು "ಅತ್ಯಂತ ಪ್ರಮುಖ ಅವಧಿ" ಎಂದು ಏಕೆ ಕರೆದಿದ್ದಾರೆ ಎಂಬುದಕ್ಕೆ ನಿಖರ ಕಾರಣವನ್ನು ಬಹಿರಂಗಪಡಿಸದಿದ್ದರೂ, ಮಧ್ಯಪ್ರಾಚ್ಯ ಯುದ್ಧವನ್ನು (Middle East War) ಕೊನೆಗಾಣಿಸುವ ಶಾಂತಿ ಮಾತುಕತೆಗಳು ಸದ್ಯ ಅಂತಿಮ ಹಂತಕ್ಕೆ ತಲುಪಿರುವುದು ಇದಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಇರಾನ್ ದೇಶವು ಸದ್ಯ ಅಮೆರಿಕ ನೀಡಿರುವ ಹೊಸ ಶಾಂತಿ ಪ್ರಸ್ತಾಪವನ್ನು ಪರಿಶೀಲಿಸುತ್ತಿದೆ. ಇದೇ ವೇಳೆ ಸಂಧಾನಕಾರನ ಪಾತ್ರ ವಹಿಸಿರುವ ಪಾಕಿಸ್ತಾನದ ಪ್ರಭಾವಿ ಸೇನಾ ಮುಖ್ಯಸ್ಥರು ತುರ್ತಾಗಿ ಟೆಹ್ರಾನ್‌ನತ್ತ (ಇರಾನ್ ರಾಜಧಾನಿ) ಮುಖ ಮಾಡಿದ್ದಾರೆ.

ಕ್ಯೂಬಾ ಜೊತೆಯೂ ಹೆಚ್ಚಿದ ಉದ್ವಿಗ್ನತೆ; ಸಜ್ಜಾದ ಯುದ್ಧನೌಕೆಗಳು

ಇನ್ನೊಂದೆಡೆ, ಕಮ್ಯುನಿಸ್ಟ್ ಆಡಳಿತವಿರುವ ಕ್ಯೂಬಾ ದೇಶದ ಮೇಲೂ ಅಮೆರಿಕ ತನ್ನ ಒತ್ತಡವನ್ನು ತೀವ್ರಗೊಳಿಸಿದೆ. ಕ್ಯೂಬಾದ ಮಾಜಿ ಅಧ್ಯಕ್ಷ ರೌಲ್ ಕ್ಯಾಸ್ಟ್ರೋ (Raul Castro) ವಿರುದ್ಧ ಅಮೆರಿಕ ನ್ಯಾಯಾಲಯ ದೋಷಾರೋಪಣೆ ಪಟ್ಟಿ (Indictment) ದಾಖಲಿಸಿದೆ. ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ಎಂದರೆ, ಯುಎಸ್ ಮಿಲಿಟರಿಯು ಈಗಾಗಲೇ ತನ್ನ ದೈತ್ಯ ವಿಮಾನವಾಹಕ ಯುದ್ಧನೌಕೆ (Aircraft Carrier) ಮತ್ತು ಅದರ ಬೆಂಗಾವಲು ಸಶಸ್ತ್ರ ನೌಕೆಗಳನ್ನು ಕೆರಿಬಿಯನ್ ಸಮುದ್ರದತ್ತ ರವಾನಿಸಿದೆ. ಇಂತಹ ಯುದ್ಧಸದೃಶ ವಾತಾವರಣ ಇರುವಾಗ ದೇಶ ಬಿಟ್ಟು ಕದಲುವುದಿಲ್ಲ ಎಂದು ಟ್ರಂಪ್ ನಿರ್ಧರಿಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪಾಕಿಸ್ತಾನಕ್ಕೂ ವಿಸ್ತರಿಸಿದ ಕಾಕ್ರೋಚ್‌ ಜನತಾ ಪಾರ್ಟಿ! 3 ಹೆಸರುಗಳಲ್ಲಿ ಆನ್‌ಲೈನ್ ಅಭಿಯಾನ ಶುರು
ನಿಲ್ಲದ 'ಧುರಂಧರ್‌ 2' ಆರ್ಭಟ, ಚಿತ್ರರಂಗದಲ್ಲಿ ಹೊಸ ದಾಖಲೆ; OTTಗೆ ಬರೋದು ಯಾವಾಗ ಗೊತ್ತಾ?