ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಶೇ.27ರಷ್ಟು ಪ್ರತಿತೆರಿಗೆ ವಿಧಿಸಿದ್ದಾರೆ. ಇದು ಭಾರತದ ರಫ್ತಿನ ಮೇಲೆ ಪರಿಣಾಮ ಬೀರಲಿದ್ದು, ವಾಣಿಜ್ಯ ಇಲಾಖೆ ಪರಿಶೀಲನೆ ನಡೆಸುತ್ತಿದೆ.
ನ್ಯೂಯಾರ್ಕ್/ನವದೆಹಲಿ: ಭಾರತ ಅಮೆರಿಕದ ಉತ್ಪನ್ನಗಳಿಗೆ ಭಾರೀ ತೆರಿಗೆ ಹೇರುತ್ತಿದೆ ಎಂದು ಹಲವು ಸಮಯದಿಂದ ಟೀಕೆ ಮಾಡುತ್ತಲೇ ಬಂದಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ಭಾರತದ ಮೇಲೆ ಶೇ.27ರಷ್ಟು ಪ್ರತಿತೆರಿಗೆ ಜಾರಿಯ ಘೋಷಣೆ ಮಾಡಿದ್ದಾರೆ. ದೇಶೀಯ ಉದ್ಯಮಗಳಿಗೆ ಚೇತರಿಕೆ, ಸ್ಥಳೀಯವಾಗಿ ಉದ್ಯೋಗ ಸೃಷ್ಟಿ ಮತ್ತು ವ್ಯಾಪಾರ ಕೊರತೆ ತಗ್ಗಿಸುವ ಉದ್ದೇಶ ಹೊಂದಿರುವ ಈ ತೆರಿಗೆ ಏ.10ರಿಂದ ಜಾರಿಗೆ ಬರಲಿದೆ. ಭಾರತ ಮಾತ್ರವಲ್ಲದೇ ವಿಶ್ವದ ಇತರೆ ಹಲವು ದೇಶಗಳ ಮೇಲೂ ಟ್ರಂಪ್ ಇದೇ ರೀತಿಯ ಪ್ರತಿತೆರಿಗೆ ಘೋಷಿಸಿದ್ದಾರೆ.
ಈ ಕುರಿತು ಭಾರತೀಯ ಕಾಲಮಾನ ಬುಧವಾರ ತಡರಾತ್ರಿ ಘೋಷಣೆ ಮಾಡಿದ ಅಧ್ಯಕ್ಷ ಟ್ರಂಪ್, ‘ಭಾರತದ ಪ್ರಧಾನಿ (ಮೋದಿ) ನನ್ನ ಗೆಳೆಯ. ಆದರೂ ಅವರು ನಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ಅವರು ನಮ್ಮ ವಸ್ತುಗಳ ಮೇಲೆ ಶೇ.52ರಷ್ಟು ತೆರಿಗೆ ಹೇರುತ್ತಿದ್ದರೂ ನಾವು ಯಾವ ತೆರಿಗೆಯನ್ನೂ ವಿಧಿಸಿರಲಿಲ್ಲ. 7 ವರ್ಷಗಳ ಹಿಂದೆ ನಾನು ಅಧಿಕಾರಕ್ಕೇರಿದಾಗ ಮೊದಲ ಬಾರಿ ಚೀನಾದ ಮೇಲೆ ತೆರಿಗೆ ಹಾಕಿದ್ದೆ’ ಎಂದರು.
ಹೆಚ್ಚಿನ ಪರಿಣಾಮ ಇಲ್ಲ?:
ಈಗಾಗಲೇ ಭಾರತ ಸೇರಿದಂತೆ ವಿಶ್ವದ ಎಲ್ಲ ದೇಶಗಳ ವಸ್ತುಗಳ ಮೇಲೆ ಅಮೆರಿಕ ಶೇ.10ರಷ್ಟು ಮೂಲ ತೆರಿಗೆ ಘೋಷಿಸಿದ್ದು ಅದು ಏ.5ರಿಂದ ಜಾರಿಗೆ ಬರಲಿದೆ. ಅದನ್ನು ಹೊರತುಪಡಿಸಿ ಭಾರತದ ಮೇಲೆ ಶೇ.27 ಸೇರಿದಂತೆ ವಿವಿಧ ದೇಶಗಳ ಮೇಲೆ ಹೇರಿದ ಬೇರೆಬೇರೆ ಸ್ತರದ ತೆರಿಗೆಯು ಏ.10ರಿಂದ ಜಾರಿಗೆ ಬರಲಿದೆ. ಅನ್ಯ ಕೆಲ ದೇಶಗಳಿಗೆ ಹೋಲಿಸಿದರೆ ಭಾರತದ ಮೇಲಿನ ತೆರಿಗೆ ಕೊಂಚ ಕಡಿಮೆ ಇದೆಯಾದರೂ, ರಫ್ತಿನ ಮೇಲೆ ಪರಿಣಾಮ ಬೀರಲಿದೆ. ಇದರ ಬಗ್ಗೆ ವಿಶ್ಲೇಷಿಸಲಾಗುತ್ತಿದೆ ಎಂದು ವಾಣಿಜ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
‘ಅಮೆರಿಕದ ಎದುರಿರುವ ಸಮಸ್ಯೆಗಳು ಪರಿಹಾರವಾದರೆ ಟ್ರಂಪ್ ಆಡಳಿತ ನನ್ನ ಮೇಲಿನ ತೆರಿಗೆಯನ್ನು ತಗ್ಗಿಸುವ ಬಗ್ಗೆ ಯೋಚಿಸಬಹುದು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತವು ಈಗಾಗಲೇ ಅಮೆರಿಕ ಜೊತೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಮಾತುಕತೆ ನಡೆಸುತ್ತಿದ್ದು, ಅದರ ಮೊದಲ ಹಂತವನ್ನು ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ಅಂತಿಮಗೊಳಿಸುವ ಉದ್ದೇಶವಿದೆ.
ವಿಮೋಚನಾ ದಿನ-ಟ್ರಂಪ್:
60 ದೇಶಗಳ ಆಮದಿನ ಮೇಲೆ ತೆರಿಗೆ ಘೋಷಣೆ ಮಾಡಿದ ದಿನವನ್ನು ಅಮೆರಿಕದ ಪಾಲಿಗೆ ವಿಮೋಚನಾ ದಿನ ಎಂದು ಟ್ರಂಪ್ ಕರೆದಿದ್ದಾರೆ. ‘ಏ.2ನ್ನು ಅಮೆರಿಕ ಕಾರ್ಖಾನೆಗಳು ಮರುಹುಟ್ಟು ಪಡೆದ, ದೇಶದ ಹಣೆಬರಹ ಖುಲಾಯಿಸಿದ ಹಾಗೂ ನಾವು ಮತ್ತೆ ಶ್ರೀಮಂತರಾಗತೊಡಗಿದ ದಿನವೆಂದು ನೆನಪಿಟ್ಟುಕೊಳ್ಳಲಾಗುವುದು’ ಎಂದು ಟ್ರಂಪ್ ಹೇಳಿದರು.
ಔಷಧ, ಇಂಧನ, ಸೆಮಿಕಂಡಕ್ಟರ್‌ಗೆ ತೆರಿಗೆ ಏರಿಕೆ ಇಲ್ಲ
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈ ತೆರಿಗೆ ವ್ಯಾಪ್ತಿಯಿಂದ ಔಷಧ, ಸೆಮಿಕಂಡಕ್ಟರ್, ಇಂಧನ ವಲಯವನ್ನು ಹೊರಗಿಟ್ಟಿದ್ದಾರೆ. ಈ ಮೂರೂ ವಲಯಗಳು ಜನಸಾಮಾನ್ಯರ ನಿತ್ಯದ ಜೀವನದ ಮೇಲೆ ಮಹತ್ವದ ಪರಿಣಾಮಗಳನ್ನು ಹೊಂದಿದ್ದು, ಅದರ ಮೇಲಿನ ತೆರಿಗೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಹಿನ್ನೆಲೆಯಲ್ಲಿ ಇವುಗಳನ್ನು ಹೊರಗಿಡಲಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: ಅಧಿಕಾರಕ್ಕೆ ಬರುತ್ತಿದ್ದಂತೆ ಭರ್ತಿಯಾದ ಟ್ರಂಪ್ ಖಜಾನೆ; ಒಂದೇ ವರ್ಷದಲ್ಲಿ ಡಬಲ್ ಆಯ್ತು ಸಂಪತ್ತು
ಪ್ರತಿತೆರಿಗೆ ದಾಳಿ ಪರಿಣಾಮಗಳ
ಪರಿಶೀಲನೆ: ಕೇಂದ್ರನವದೆಹಲಿ: ಅಮೆರಿಕ ಘೋಷಿಸಿದ ಪ್ರತಿತೆರಿಗೆ ಮತ್ತು ದೇಶದ ಮೇಲಿನ ಅದರ ಪರಿಣಾಮವನ್ನು ಭಾರತ ಪರಿಶೀಲಿಸುತ್ತಿದೆ. ಡೊನಾಲ್ಡ್ ಟ್ರಂಪ್ ಅವರಿಗೆ ಅಮೆರಿಕ ಮೊದಲು. ಆದರೆ ಪ್ರಧಾನಿ ಮೋದಿಯವರಿಗೆ ಭಾರತ ಮೊದಲು. ಅಮೆರಿಕ ವಿಧಿಸಿರುವ ಪ್ರತಿತೆರಿಗೆಯ ಪರಿಣಾಮವನ್ನು ಪರಿಶೀಲಿಸುತ್ತಿದ್ದೇವೆ’ ಎಂದು ಎಂದು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಗುರುವಾರ ಹೇಳಿದ್ದಾರೆ.
ಭಾರತ ನಮ್ಮ ವಸ್ತುಗಳ ಮೇಲೆ ಶೇ.52ರಷ್ಟು ಆಮದುತೆರಿಗೆ ಹೇರುತ್ತಿದೆ. ಈವರೆಗೂ ತಾಳ್ಮೆಯಿಂದ ಕಾದು ನಾವು ಪ್ರತೀಕಾರ ತೆರಿಗೆ ಹೇರಿರಲಿಲ್ಲ. ಆದರೆ ಮೋದಿ ನನ್ನ ಗೆಳೆಯನಾದರೂ ಭಾರತ ಸರಿಯಾಗಿ ನಡೆಸಿಕೊಳ್ತಿಲ್ಲ. ಹೀಗಾಗಿ ಭಾರತದ ವಸ್ತುಗಳ ಮೇಲೆ ಇನ್ನು ಶೇ.27ರಷ್ಟು ಆಮದು ಸುಂಕ. ತೆರಿಗೆ ಘೋಷಣೆ ಮಾಡಿದ ದಿನ ಅಮೆರಿಕದ ಪಾಲಿಗೆ ವಿಮೋಚನಾ ದಿನ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಇದನ್ನೂ ಓದಿ: ದುಬಾರಿಯಾದ ಟ್ರಂಪ್ ಸುಂಕದ ಹೊಡೆತ: ಭಾರತದ ಚಾಲಾಕಿ ನಡೆ