ವರ್ಷ ತುಂಬದ, ಮಾತು ಬಾರದ ಹಾಲುಗಲ್ಲದ ಕಂದನಿಗೆ ಇಂಜೆಕ್ಷನ್ ಮೂಲಕ ಲಸಿಕೆ ನೀಡುವುದೆಂದರೆ ಎಲ್ಲರಿಗೂ ಸಂಕಟವೇ. ಮಗುವಿನ ಅಮ್ಮನಿಂದ ಹಿಡಿದು ಮನೆ ಮಂದಿ ಹೀಗೆ ಮನೆಯಲ್ಲಿರುವವರೆಲ್ಲಾ ತಮಗೆ ಚುಚ್ಚಿದಂತೆ ನೋವನುಭವಿಸುತ್ತಾರೆ. ಮಗುವಿಗೆ ಅಷ್ಟು ನೋವಾಗುವುದು ಇಲ್ಲವೋ ಗೊತ್ತಿಲ್ಲ. ಆದರೆ ಅಜ್ಜಿ ತಾತ, ಅಮ್ಮ ಚಿಕ್ಕಮ್ಮ ಮಾವ ಎಲ್ಲರಿಗೂ ಮಗುವಿಗೆ ಇಂಜೆಕ್ಷನ್ ಕೊಡುವುದು ಎಂದರೆ ಹೊಟ್ಟೆನೋವು ಶುರುವಾಗುವುದು. ಜನಿಸಿ ಕೇವಲ ತಿಂಗಳುಗಳಾಗಿರುವ ಕಂದನಿಗೆ ಲಸಿಕೆ ನೀಡುವುದು ಎಂದರೆ ಅದು ಅಷ್ಟು ಕಷ್ಟದ ಕೆಲಸ. ಇದರ ಜೊತೆಗೆ ಮಗು ಜೋರಾಗಿ ಅಳಲು ಶುರು ಮಾಡಿದರಂತು ಮುಗಿದೇ ಹೋಯಿತು. ಕೆಲವರು ನೋವಾಗದಂತೆ ಇಂಜೆಕ್ಷನ್ ನೀಡಿ ಎಂದು ವೈದ್ಯರನ್ನು ಕೇಳುವುದುಂಟು.
ಇದೇ ಕಾರಣಕ್ಕೆ ಕೆಲ ಮಕ್ಕಳ ವೈದ್ಯರು (Pediatrician) ಕೂಡ ಪುಟ್ಟ ಕಂದಮ್ಮಗಳಿಗೆ ಇಂಜೆಕ್ಷನ್ (injection) ನೀಡುವಾಗ ಹಲವು ಟ್ರಿಕ್‌ಗಳನ್ನು ಬಳಸುತ್ತಾರೆ. ಮಕ್ಕಳನ್ನು ಮಾತನಾಡಿಸುತ್ತಾ ಆಟವಾಡಿಸುತ್ತಾ ನಗಿಸುತ್ತಾ ಮೆಲ್ಲನೆ ಮಗುವಿನ ಗಮನ ಬೇರೆಡೆ ತಿರುಗಿಸಿ ಚುಚ್ಚಿ ಬಿಡುತ್ತಾರೆ. ಮಗುವಿಗೆ ಇಂಜೆಕ್ಷನ್ ಚುಚ್ಚುವುದು ಗೊತ್ತಾಗುವ ಮುನ್ನವೇ ವೈದ್ಯರಿಗೆ ಸಿರಿಂಜ್ ತೆಗೆದಾಗಿರುತ್ತದೆ. ಹೀಗೆ ವೈದ್ಯರೊಬ್ಬರು ಮಗುವೊಂದಕ್ಕೆ ಲಸಿಕೆ ಚುಚ್ಚುವ ಮೊದಲು ವಿಭಿನ್ನವಾದ ಟ್ರಿಕ್ ಬಳಸಿದ್ದು, ಅದರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದ್ದು, ವೈದ್ಯರ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
@TansuYegen ಎಂಬ ಟ್ವಿಟ್ಟರ್ ಖಾತೆಯಿಂದ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಇಂಜೆಕ್ಷನ್ ಚುಚ್ಚುವ ಮೊದಲು ಮಗುವನ್ನು (Baby) ಶಾಂತಗೊಳಿಸಿದ ವೈದ್ಯ ಎಂದು ಬರೆದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಎರಡು ಮಿಲಿಯನ್‌ಗೂ ಹೆಚ್ಚು ಜನ ಈ ವಿಡಿಯೋ ವೀಕ್ಷಿಸಿದ್ದಾರೆ. ಅಲ್ಲದೇ ವೈದ್ಯರ ಕಾರ್ಯವನ್ನು ಶ್ಲಾಘಿಸಿದ್ದಾರೆ. ಮಗುವೊಂದನ್ನು ಬೆಡ್ ಮೇಲೆ ಮಲಗಿಸಲಾಗಿದ್ದು, ಮಗುವಿನ ಎರಡು ಕೈಗಳನ್ನು ಪೋಷಕರು ಹಿಡಿದುಕೊಂಡಿದ್ದಾರೆ. ವೈದ್ಯರು ಮಗುವಿನ ಹುಟ್ಟೆ ಮುಟ್ಟುತ್ತಾ ಕಚಗುಳಿಯಿಡುತ್ತಿದ್ದರೆ ಮಗು ಜೋರಾಗಿ ನಗಲು ಶುರು ಮಾಡಿದೆ. ಮಗು ನಗುತ್ತಿರುವಾಗಲೇ ವೈದ್ಯರು ನಿಧಾನವಾಗಿ ಮಗುವಿಗೆ ಇಂಜೆಕ್ಷನ್ ನೀಡುತ್ತಾರೆ. ಈ ವೇಳೆ ಮಗುವಿಗೆ ಏನಾಯ್ತು ಎಂದು ಅರಿವಾಗುವ ಮೊದಲೇ ಇಂಜೆಕ್ಷನ್ ಚುಚ್ಚಿದ್ದು, ಮಗು ವೈದ್ಯರನ್ನು ನೋಡುತ್ತಾ ಸುಮ್ಮನಾಗಿದೆ. ಒಟ್ಟಿನಲ್ಲಿ ಈ ವೈದ್ಯರು ಅಂತಹ ಸಂದರ್ಭವನ್ನು ನಿಭಾಯಿಸುವುದು ಹೇಗೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಮಗುವಿಗೆ ಯಾವ ವಯಸ್ಸಿನಲ್ಲಿ ಪೀನಟ್ ಬಟರ್ ನೀಡಬೇಕು?
ಅನೇಕರು ಈ ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿ ಕಾಮೆಂಟ್ ಮಾಡಿದ್ದು, ಈ ವೈದ್ಯರು ವೈದ್ಯರಿಗೆ ಶಿಕ್ಷಕರಾಗಿರಬೇಕು (Teacher) ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ದೃಶ್ಯ ಇಷ್ಟವಾಯಿತು. ಎಂತಹ ಸುಂದರವಾದ ವೈದ್ಯರು. ಸಾಮಾನ್ಯವಾಗಿ ಮಕ್ಕಳು ಬಿಡಿ ದೊಡ್ಡವರು ಕೂಡ ಇಂಜೆಕ್ಷನ್‌ಗೆ ಹೆದರುವುದುಂಟು. ಇಂಜೆಕ್ಷನ್ ಬದಲು ಮಾತ್ರೆ ಕೊಡಿ ಡಾಕ್ಟ್ರೆ ಎಂದು ವೈದ್ಯರ ಬಳಿ ಕೆಲವರು ಕೇಳುವುದನ್ನು ನೋಡಿದ್ದೇವೆ. ಆದರೆ ಕೆಲವು ವೈದ್ಯಕೀಯ ಪ್ರಕರಣಗಳಲ್ಲಿ ಇಂಜೆಕ್ಷನ್ ಅನಿವಾರ್ಯವಾಗಿರುತ್ತದೆ.
3 ವರ್ಷದ ಸಯಾಮಿ ಬಾಲಕರ ಯಶಸ್ವಿಯಾಗಿ ಬೇರ್ಪಡಿಸಿದ ವೈದ್ಯರು: 27 ಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆ
ವೈದ್ಯರೊಬ್ಬರು ಅಳುತ್ತಿರುವ ಮಗುವನ್ನು ಸಮಾಧಾನಪಡಿಸುತ್ತಿರುವ ವೀಡಿಯೋವೋಂದು ಸಾಮಾಜಿಕ ಜಾಲತಾಣದಲ್ಲಿ ಈ ಹಿಂದೆ ಸಾಕಷ್ಟು ವೈರಲ್ ಆಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ