
ಕಾಬೂಲ್: ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ ಸಾವಿನ ಸಂಖ್ಯೆ 100 ತಲುಪಿದೆ ಎಂದು ಸ್ಥಳೀಯ ಮಾಧ್ಯಮವೊಂದರ ಪತ್ರಕರ್ತ ಟ್ವೀಟ್ ಮಾಡಿದ್ದಾರೆ. ಶಾಲೆಯ ಮೇಲೆ ಈ ದಾಳಿ ನಡೆದಿದ್ದು ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳು, ಶಾಲಾ ಶಿಕ್ಷಕರು ಮತ್ತು ಶಿಕ್ಷಕೇತರ ಕೆಲಸಗಾರರು ಮೃತಪಟ್ಟಿದ್ದಾರೆ. ಪತ್ರಕರ್ತ ಮಾಡಿರುವ ಟ್ವೀಟ್ ಪ್ರಕಾರ ಮೃತ ದೇಹಗಳನ್ನು ಎಣಿಕೆ ಮಾಡುತ್ತಿದ್ದು, ನೂರು ಮೃತದೇಹಗಳನ್ನು ಈಗಾಗಲೇ ಲೆಕ್ಕ ಮಾಡಲಾಗಿದೆ. ಹಜಾರಾ ಮತ್ತು ಶಿಯಾ ಸಮುದಾಯಕ್ಕೆ ಸೇರಿದ ಜನರೇ ಹೆಚ್ಚಿನ ಸಂಖ್ಯೆಯಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಹಜಾರಾಗಳು ಅಫ್ಘಾನಿಸ್ತಾನದ ಮೂರನೇ ಅತಿದೊಡ್ಡ ಸಮುದಾಯ.
ದಶ್ತ್-ಎ-ಬರ್ಚಿ ಎಂಬ ಏರಿಯಾದಲ್ಲಿರುವ ಕಾಜ್ ವಿದ್ಯಾ ಕೇಂದ್ರದಲ್ಲಿ ಈ ಆತ್ಮಾಹುತಿ ದಾಳಿ ನಡೆದಿದೆ ಎಂದು ಬಿಬಿಸಿ ವರದಿ ಮಾಡಿದೆ. ಸ್ಥಳೀಯ ಪತ್ರಕರ್ತ ಬಿಲಾಲ್ ಸರ್ವಾರಿ ಎಂಬುವವರು ಟ್ವೀಟ್ ಮಾಡಿದ್ದು, "ನಾವು ಈಗಾಗಲೇ 100 ಮೃತದೇಹಗಳನ್ನು ಲೆಕ್ಕ ಹಾಕಿದ್ದೇವೆ. ಅದರಲ್ಲಿ ಹೆಚ್ಚಿನವು ವಿದ್ಯಾರ್ಥಿಗಳದ್ದೇ ಆಗಿವೆ. ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಲು ಸಿದ್ಧತಾ ಪರೀಕ್ಷೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಬಾಂಬ್ ಸ್ಫೋಟವಾಗಿದೆ," ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Kabul Blast: ರಾಯಭಾರ ಕಚೇರಿಯ ಹೊರಗೆ ಸ್ಫೋಟ; ರಷ್ಯಾದ ಇಬ್ಬರು ರಾಜತಾಂತ್ರಿಕರು ಸೇರಿ 20 ಮಂದಿ ಬಲಿ
ಘಟನೆಯ ಪ್ರತ್ಯಕ್ಷದರ್ಶಿಗಳು ಸ್ಫೋಟದ ರೌದ್ರತೆಯನ್ನು ವಿವರಿಸಿ, ಮಗುವೊಂದರ ಕೈ ಮತ್ತು ಕಾಲು ಅಸ್ತವ್ಯಸ್ತವಾಗಿ ಬಿದ್ದಿತ್ತು. ಅದನ್ನು ಶಿಕ್ಷಕರೊಬ್ಬರು ಎತ್ತಿ ಜೋಡಿಸುತ್ತಿದ್ದರು ಎಂದಿದ್ದಾರೆ. ಬಿಲಾಲ್ ಸರ್ವಾರಿ ಕ್ಲಾಸ್‌ರೂಮಿನ ಚಿತ್ರವನ್ನೂ ಟ್ವಿಟ್ಟರ್‌ನಲ್ಲಿ ಹಾಕಿದ್ದಾರೆ.
"ಬೆಂಚ್ ಮೇಲೆ ಬರೆದಿರುವ ಒಂದೊಂದು ನಂಬರ್ ಒಂದೊಂದು ವಿದ್ಯಾರ್ಥಿಯ ಗುರುತು. ಕುಟುಂಬದವರು ತಮ್ಮ ಮಕ್ಕಳು ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆ ಇಲ್ಲಿ ಕುಳಿತು ಬರೆಯಬೇಕೆಂಬ ಕನಸು ಕಂಡಿದ್ದರು," ಎಂದು ಹೇಳಿದ್ದಾರೆ.
ಇದನ್ನೂ ಓದಿ: ತಾಲಿಬಾನ್ ಆರ್ಡರ್, ಹೆಣ್ಣುಮಕ್ಕಳು ವಿದೇಶಕ್ಕೆ ವಿದ್ಯಾಭ್ಯಾಸಕ್ಕೆ ಹೋಗುವಂತಿಲ್ಲ!
"ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧರಾಗುತ್ತಿದ್ದಾಗ ಆತ್ಮಾಹುತಿ ದಾಳಿಕೋರನೊಬ್ಬ ದಾಳಿ ಮಾಡಿದ್ದಾನೆ," ಎಂದು ಪೊಲೀಸ್ ಇಲಾಖೆಯ ವಕ್ತಾರ ಖಾಲಿದ್ ಜದ್ರಾನ್ ಹೇಳಿದ್ದಾರೆ. ಅಮೆರಿಕಾದ ಮಿಷನ್ ಅಫ್ಘಾನಿಸ್ತಾನದ ಉಸ್ತುವಾರಿ ಕೇರನ್ ಡೆಕ್ಕರ್ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿದ್ದು, "ಅಮೆರಿಕಾ ಈ ದಾಳಿಯನ್ನು ಖಂಡಿಸುತ್ತದೆ. ತರಗತಿ ತುಂಬ ವಿದ್ಯಾರ್ಥಿಗಳೇ ಇದ್ದ ಪ್ರದೇಶವನ್ನು ಟಾರ್ಗೆಟ್ ಮಾಡಿ ಬಾಂಬ್ ದಾಳಿ ಮಾಡಿರುವುದು ಹೇಯ ಕೃತ್ಯ. ಮಕ್ಕಳು ಭಯವಿಲ್ಲದೇ ಶಾಂತಿ ನೆಮ್ಮದಿಯಿಂದ ಉನ್ನತ ವ್ಯಾಸಂಗವನ್ನು ಮಾಡುವಂತ ವಾತಾವರಣ ನಿರ್ಮಾಣವಾಗಬೇಕು," ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ