ಪಾತಕಿ ದಾವೂದ್‌ ಕುಟುಂಬ ಪಾಕಿಸ್ತಾನದಿಂದ ಪಲಾಯನ!

By Kannadaprabha NewsFirst Published Jan 20, 2021, 7:23 AM IST
Highlights

ಪಾತಕಿ ದಾವೂದ್‌ ಕುಟುಂಬ ಪಾಕಿಸ್ತಾನದಿಂದ ಪಲಾಯನ!| ಬಂಧನ ಭೀತಿಯಿಂದ ಗಲ್‌್ಫಗೆ ಕಳುಹಿಸಿದ ಗ್ಯಾಂಗ್‌ಸ್ಟರ್‌

ನವದೆಹಲಿ(ಜ.20): ಪಾಕಿಸ್ತಾನದ ಕರಾಚಿಯಲ್ಲಿ ನೆಲೆಸಿರುವ ಭೂಗತ ಪಾತಕಿ, ಭಾರತದ ಮೋಸ್ಟ್‌ ವಾಂಟೆಡ್‌ ಕ್ರಿಮಿನಲ್‌ ದಾವೂದ್‌ ಇಬ್ರಾಹಿಂ ಬಂಧನದ ಭೀತಿಯಿಂದ ತನ್ನ ಕುಟುಂಬದ ಕುಡಿಗಳನ್ನು ದುಬೈಗೆ ರವಾನಿಸಿದ್ದಾನೆ. ಪಾಕಿಸ್ತಾನ ಸರ್ಕಾರ ಭಯೋತ್ಪಾದಕರನ್ನು ಮಟ್ಟಹಾಕಬೇಕು ಎಂದು ಅಂತಾರಾಷ್ಟ್ರೀಯ ಸಮುದಾಯದ ಒತ್ತಡ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ದಾವೂದ್‌ ಈ ಕ್ರಮ ಕೈಗೊಂಡಿದ್ದಾನೆಂದು ಭಾರತದ ಗುಪ್ತಚರ ಮೂಲಗಳಿಗೆ ಮಾಹಿತಿ ದೊರಕಿದೆ.

ಅಂತಾರಾಷ್ಟ್ರೀಯ ಸಮುದಾಯ ಒತ್ತಡದ ಬೆನ್ನಲ್ಲೇ, ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನ ಲಷ್ಕರ್‌ ಉಗ್ರ ಹಫೀಜ್‌ ಸಯೀದ್‌, ಝಕಿ ಉರ್‌ ರೆಹಮಾನ್‌ ಲಖ್ವಿ ಸೇರಿದಂತೆ ಹಲವರನ್ನು ವಿವಿಧ ಪ್ರಕರಣಗಳಲ್ಲಿ ಬಂಧಿಸಿದೆ. ಜೊತೆಗೆ ತ್ವರಿತವಾಗಿ ಪ್ರಕರಣ ಇತ್ಯರ್ಥಪಡಿಸಿ ಹತ್ತಾರು ವರ್ಷ ಜೈಲು ಶಿಕ್ಷೆ ಜಾರಿಯಾಗುವಂತೆ ನೋಡಿಕೊಂಡಿದೆ. ಇದು ದಾವೂದ್‌ ಇಬ್ರಾಹಿಂಗೂ ಆತಂಕ ಮೂಡಿಸಿದೆ ಎನ್ನಲಾಗಿದೆ.

ನಾನಾ ದೇಶಕ್ಕೆ ರವಾನೆ:

ಸದ್ಯ ತನ್ನ ಮಗ ಮೊಯಿನ್‌ ಇಬ್ರಾಹಿಂ ಹಾಗೂ ಇಬ್ಬರು ತಮ್ಮಂದಿರ ಮಕ್ಕಳನ್ನು ದಾವೂದ್‌ ಬೇರೆ ದೇಶಕ್ಕೆ ರವಾನಿಸಿದ್ದಾನೆ. ಅದಕ್ಕೂ ಮೊದಲೇ ತನ್ನ ಹಿರಿಯ ಮಗಳು ಮಹರೂಕ್‌ಳನ್ನು ಪೋರ್ಚುಗಲ್‌ಗೆ ಕಳಿಸಿದ್ದಾನೆ. ಈಕೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಜಾವೇದ್‌ ಮಿಯಾಂದಾದ್‌ ಸೊಸೆ. ಇನ್ನು, ದಾವೂದ್‌ನ ತಮ್ಮ ಮುಸ್ತಾಕೀಮ್‌ ಅಲಿ ಕಸ್ಕರ್‌ ಈಗಾಗಲೇ ದುಬೈನಲ್ಲಿ ನೆಲೆಸಿದ್ದು, ಯುಎಇ, ಬಹರೇನ್‌ ಹಾಗೂ ಕತಾರ್‌ನಲ್ಲಿ ‘ಡಿ-ಕಂಪನಿ’ಯ ಕಾನೂನುಬದ್ಧ ಉದ್ದಿಮೆಗಳನ್ನು ನೋಡಿಕೊಳ್ಳುತ್ತಿದ್ದಾನೆ. ಈತನೇ ಇತ್ತೀಚೆಗೆ ಕರಾಚಿಯಿಂದ ದುಬೈಗೆ ವಿಮಾನದಲ್ಲಿ ಪರಾರಿಯಾಗಿ ಬಂದ ದಾವೂದ್‌ನ ಕುಟುಂಬದ ಪ್ರಮುಖ ಸದಸ್ಯರನ್ನು ನೋಡಿಕೊಳ್ಳುತ್ತಿದ್ದಾನೆ ಎಂದು ಮೂಲಗಳು ಹೇಳಿವೆ.

ಅಷ್ಟೇ ಅಲ್ಲದೆ, ಕರಾಚಿಯ ಡಿಫೆನ್ಸ್‌ ಹೌಸಿಂಗ್‌ ಪ್ರದೇಶದಲ್ಲಿ ನೆಲೆಸಿದ್ದ ದಾವೂದ್‌ನ ಇನ್ನೊಬ್ಬ ತಮ್ಮ ಅನೀಸ್‌ ಇಬ್ರಾಹಿಂ ಎರಡು ವಾರಗಳಿಂದ ನಾಪತ್ತೆಯಾಗಿದ್ದಾನೆ. ಜೊತೆಗೆ, ದಾವೂದ್‌ನ ಸುಲಿಗೆ ದಂಧೆಯನ್ನು ನೋಡಿಕೊಳ್ಳುವ ಛೋಟಾ ಶಕೀಲ್‌ ಕೂಡ ಇತ್ತೀಚೆಗೆ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ದಾವೂದ್‌ನ ಮಗ ಮೊಯಿನ್‌ ಇಬ್ರಾಹಿಂ ಕಸ್ಕರ್‌ ಬ್ರಿಟನ್‌ನಲ್ಲಿ ನೆಲೆಸಿರುವ ದಕ್ಷಿಣ ಏಷ್ಯಾದ ಪ್ರಸಿದ್ಧ ಮುಸ್ಲಿಂ ಉದ್ಯಮಿಯೊಬ್ಬನ ಮಗಳನ್ನು ಮದುವೆಯಾಗಿದ್ದು, ಆಗಾಗ ಬ್ರಿಟನ್‌ಗೆ ಹೋಗಿ ಬರುತ್ತಿದ್ದ. 2019ರವರೆಗೂ ಈ ದಂಪತಿ ಕರಾಚಿಯಲ್ಲಿರುವ ದಾವೂದ್‌ನ ಕ್ಲಿಫ್ಟನ್‌ ಬಂಗಲೆಯಲ್ಲಿ ನೆಲೆಸಿತ್ತು. ಈಗ ಮಗ ದುಬೈಗೆ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ದಾವೂದ್‌ ಏನು ಮಾಡುತ್ತಿದ್ದಾನೆ?

ದಾವೂದ್‌ ಇಬ್ರಾಹಿಂ ಸದ್ಯ ಪಾಕಿಸ್ತಾನದ ಕರಾಚಿಯಿಂದ 154 ಕಿ.ಮೀ. ದೂರದಲ್ಲಿರುವ ಸಿಂಧ್‌ ಪ್ರಾಂತದ ಕೋಟ್ಲಿ ಇಂಡಸ್ಟ್ರಿಯಲ್‌ ಏರಿಯಾದಲ್ಲಿ ಮೆಹ್ರಾನ್‌ ಪೇಪರ್‌ ಮಿಲ್‌ ಎಂಬ ಪ್ರಿಂಟಿಂಗ್‌ ಪ್ರೆಸ್‌ ನಡೆಸುತ್ತಿದ್ದಾನೆ. ಅಲ್ಲಿ ಭಾರತದ ನಕಲಿ ನೋಟುಗಳನ್ನು ಮುದ್ರಿಸಲಾಗುತ್ತದೆ. ಇದಕ್ಕೆ ಪಾಕಿಸ್ತಾನದ ಗುಪ್ತಚರ ದಳ ಐಎಸ್‌ಐನ ಬೆಂಬಲವಿದೆ. ಇತ್ತೀಚೆಗೆ ಈ ಪ್ರೆಸ್‌ ಮುಚ್ಚಿಸುವಂತೆ ಅಮೆರಿಕ ಸರ್ಕಾರ ಪಾಕಿಸ್ತಾನದ ಮೇಲೆ ಒತ್ತಡ ಹೇರಿತ್ತು.

click me!