ಪಾತಕಿ ದಾವೂದ್‌ನ ಪೂರ್ವಜರ ಮನೆ ಸೇರಿ 6 ಆಸ್ತಿಗಳು ಹರಾಜು| ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿದ್ದ ಆಸ್ತಿ ಮಾರಾಟ
ಮುಂಬೈ(ನ.೧೧): 1993ರ ಮುಂಬೈ ಸರಣಿ ಸ್ಫೋಟ ಪ್ರಕರಣದ ರೂವಾರಿ ದಾವೂದ್ ಇಬ್ರಾಹಿಂ ಪೂರ್ವಜರಿಗೆ ಸೇರಿದ ಮನೆ ಸೇರಿದಂತೆ 6 ಆಸ್ತಿಗಳನ್ನು ಬುಧವಾರ ಆನ್‌ಲೈನ್ ಮೂಲಕ ಹರಾಜು ಹಾಕಲಾಯಿತು.
ಹರಾಜಿನಲ್ಲಿ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಮುಂಬ್ಕೆ ಗ್ರಾಮದಲ್ಲಿನ ದಾವೂದ್ ಪೂರ್ವಜರ ಮನೆ 11.20 ಲಕ್ಷ ರು.ಗಳಿಗೆ ಮಾರಾಟವಾಯಿತು. ಇಬ್ರಾಹಿಂ ಮ್ಯಾನ್ಷನ್ ಹೆಸರಿನ ಮನೆಯಲ್ಲಿ, ದಾವೂದ್ ಪೂರ್ವಜರು ಮುಂಬೈಗೆ ತೆರಳುವುದಕ್ಕೆ ಮುನ್ನ ವಾಸ ಮಾಡುತ್ತಿದ್ದರು. ಜೊತೆಗೆ ದಾವೂದ್ ತಾಯಿ ಅಮೀನ್ ಬಿ, ಸೋದರಿ ಹಸೀನಾ ಪಾರ್ಕರ್ ಹೆಸರಿನಲ್ಲಿದ್ದ 25 ಗುಂಟೆ ಜಾಗ 4.30 ಲಕ್ಷ ರು.ಗಳಿಗೆ ಹರಾಜಾಯಿತು.
ಈ ಎರಡೂ ಆಸ್ತಿಯನ್ನು ದೆಹಲಿ ಮೂಲದ ವಕೀಲ ಅಜಯ್ ಶ್ರೀವಾಸ್ತವ ಖರೀದಿಸಿದರು. ದಾವೂದ್‌ಗೆ ಸೇರಿದ ಇತರೆ ನಾಲ್ಕು ಆಸ್ತಿಗಳನ್ನು ಇನ್ನೋರ್ವ ವಕೀಲ ಭೂಪೇಂದ್ರ ಭಾರದ್ವಾಜ್ ಎನ್ನುವವರು ಖರೀದಿಸಿದರು. ದಾವೂದ್‌ಗೆ ಸೇರಿದ ಒಂದು ಖಾಲಿ ಜಾಗ ಮತ್ತು ಆತನ ಆಪ್ತ ಇಕ್ಬಾಲ್ ಮಿರ್ಚಿಗೆ ಸೇರಿದ ಅಪಾರ್ಟ್‌ಮೆಂಟ್ ಅನ್ನು ತಾಂತ್ರಿಕ ಕಾರಣಗಳಿಂದಾಗಿ ಹರಾಜು ಹಾಕಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ನಡುವೆ ಆಸ್ತಿ ಖರೀದಿ ಕುರಿತು ಪ್ರತಿಕ್ರಿಯಿಸಿರುವ ವಕೀಲ ಅಜಯ್ ಶ್ರೀವಾಸ್ತವ, ‘ಈ ಹೋರಾಟ ಕೇವಲ ಹಣಕ್ಕಲ್ಲ. ದಾವೂದ್ ಮತ್ತು ಆತನ ಆಸ್ತಿ ಖರೀದಿಗೆ ಹೆದರುವುದಿಲ್ಲ ಎಂದು ಸಂದೇಶ ರವಾನಿಸಲಿಕ್ಕಾಗಿ ಖರೀದಿ ಮಾಡಿದ್ದೇನೆ. ಆತ ವಿದೇಶದಲ್ಲಿ ಕುಳಿತುಕೊಂಡು ನಮ್ಮ ದೇಶದ ಅಮಾಯಕ ಜನರನ್ನು ಹತ್ಯೆ ಮಾಡುತ್ತಿದ್ದರೆ, ನಾವು ಕೂಡ ಇಂಥ ಆಸ್ತಿ ಖರೀದಿ ಮಾಡಿ ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಸಂಸ್ಥೆಗಳಿಗೆ ನೆರವು ನೀಡಬೇಕು’ ಎಂದು ಹೇಳಿದ್ದಾರೆ.
ಈ ಹಿಂದೆ ಕೂಡ ದಾವೂದ್‌ಗೆ ಸೇರಿದ ಆಸ್ತಿಯೊಂದನ್ನು ಅಜಯ್ ಖರೀದಿಸಿದ್ದರು. ಬಳಿಕ ಅವರಿಗೆ ಹಲವು ಬೆದರಿಕೆ ಕರೆಗಳು ಬಂದಿದ್ದವಂತೆ.