
ನವದೆಹಲಿ(ಏ.06): ಫ್ರಾನ್ಸ್-ಭಾರತದ ನಡುವೆ ನಡೆದಿದ್ದ 36 ರಫೇಲ್ ಖರೀದಿ ವಹಿವಾಟಿನಲ್ಲಿ ಮಧ್ಯವರ್ತಿಯೊಬ್ಬನಿಗೆ ರಫೇಲ್ ಉತ್ಪಾದಕ ಫ್ರೆಂಚ್ ಕಂಪನಿ ಡಸಾಲ್ಟ್ ಏವಿಯೇಷನ್ 10 ದಶಲಕ್ಷ ಯೂರೋ ‘ಲಂಚ’ ಸಂದಾಯ ಮಾಡಿದೆ ಎಂಬ ಸ್ಫೋಟಕ ಆರೋಪ ಕೇಳಿಬಂದಿದೆ.
ಡಸಾಲ್ಟ್ ಕಂಪನಿಯ ಲೆಕ್ಕಪತ್ರಗಳನ್ನು ಫ್ರಾನ್ಸ್‌ನ ಭ್ರಷ್ಟಾಚಾರ ನಿಗ್ರಹ ದಳವಾದ ಏಜೆನ್ಸ್ ಫ್ರಾನ್ಸೈಸ್ ಆ್ಯಂಟಿಕರಪ್ಷನ್ (ಎಎಫ್‌ಎ) ಲೆಕ್ಕಪರಿಶೋಧನೆ ವೇಳೆ ಪರಿಶೀಲಿಸಿದೆ. ಆಗ, ರಫೇಲ್‌ನ ‘50 ಪ್ರತಿಕೃತಿ’ಗಳನ್ನು ಸಿದ್ಧಪಡಿಸಲು ಈ ಹಣ ನೀಡಲಾಗಿತ್ತು. ಈ ಹಣಕ್ಕೆ ‘ಗ್ರಾಹಕರಿಗೆ ಗಿಫ್ಟ್’ ಎಂದು ನಮೂದಿಸಲಾಗಿದೆ. 2017ರ ಮಾಚ್‌ರ್‍ನಲ್ಲಿ ಈ ವ್ಯವಹಾರ ನಡೆದಿದೆ. ಇದಕ್ಕೆ ಪೂರಕವಾಗಿ ಖರೀದಿ ಪ್ರಕರಣದ ಮಧ್ಯವರ್ತಿ ಎನ್ನಲಾದ ಸುಶೇನ್ ಗುಪ್ತಾನ ಡೆಫ್ಸಿಸ್ ಕಂಪನಿಯ ಇನ್‌ವಾಯ್‌್ಸಗಳನ್ನು ನೀಡಲಾಗಿದೆ ಎಂದು ಫ್ರಾನ್ಸ್‌ನ ‘ಮೀಡಿಯಾಪಾರ್ಟ್’ ಎಂಬ ಮಾಧ್ಯಮ ಬಹಿರಂಗಪಡಿಸಿದೆ. ಡೆಫ್ಸಿಸ್ ಕಂಪನಿಯು ಡಸಾಲ್ಟ್ ಕಂಪನಿಯ ಭಾರತದ ಉಪ ಗುತ್ತಿಗೆದಾರ ಕಂಪನಿ ಕೂಡ ಆಗಿದೆ.
ಸುಶೇನ್ ಗುಪ್ತಾನ ಮೇಲೆ ಈಗಾಗಲೇ ಅಗಸ್ಟಾವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣದಲ್ಲಿ ಆರೋಪವಿದ್ದು, ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದಿಂದ (ಇ.ಡಿ.) ಬಂಧಿತನಾಗಿ ಬಿಡುಗಡೆಯಾಗಿದ್ದ.
ಈ ನಡುವೆ, ಡಸಾಲ್ಟ್ ಕಂಪನಿಯು ‘ಗ್ರಾಹಕರಿಗೆ ಕಾಣಿಕೆ’ ಎಂದು ಏಕೆ ಬರೆಯಲಾಗಿದೆ ಹಾಗೂ ‘ರಫೇಲ್‌ನ ಪ್ರತಿಕೃತಿ ಮಾಡೆಲ್’ ಏಕೆ ನಿರ್ಮಿಸಲಾಗುತ್ತದೆ ಎಂಬುದಕ್ಕೆ ತೃಪ್ತಿಕರ ಉತ್ತರ ನೀಡಲು ಡಸಾಲ್ಟ್ ವಿಫಲವಾಗಿದೆ. ಆದರೆ ಫ್ರಾನ್ಸ್ ಭ್ರಷ್ಟನಿಗ್ರಹ ದಳವು ಈ ವಿಷಯವನ್ನು ಕೋರ್ಟ್ ವಿಚಾರಣೆಗೆ ಕೊಂಡೊಯ್ಯದೇ ಹಾಗೆಯೇ ಮೊಟಕುಗೊಳಿಸಿದೆ ಎಂದೂ ‘ಮೀಡಿಯಾಪಾರ್ಟ್’ ವರದಿ ಆರೋಪಿಸಿದೆ.
ಮೋದಿ ಉತ್ತರಿಸಿ- ಕಾಂಗ್ರೆಸ್ ಆಗ್ರಹ:
ಈ ವರದಿ ಆಧರಿಸಿ ಕಾಂಗ್ರೆಸ್ ಪಕ್ಷವು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ‘2016ರಲ್ಲಿ ರಫೇಲ್ ಒಪ್ಪಂದ ಏರ್ಪಟ್ಟನಂತರ ಮಧ್ಯವರ್ತಿ ಕಂಪನಿಯಾದ ಡೆಫ್ಸಿಸ್‌ಗೆ 1.1 ದಶಲಕ್ಷ ಯೂರೋ ಹಣ ಸಂದಾಯವಾಗಿದೆ ಎಂದು ಫ್ರಾನ್ಸ್‌ನಲ್ಲಿ ನಡೆದ ತನಿಖೆ ತಿಳಿಸಿದೆ. ಹಾಗಿದ್ದರೆ ಸರ್ಕಾರದಲ್ಲಿನ ಯಾರಿಗೆ ಈ ಹಣ ಸಂದಾಯವಾಗಿತ್ತು ಎಂಬ ಬಗ್ಗೆ ಸ್ವತಂತ್ರ ತನಿಖೆ ನಡೆಯಬೇಕು. ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಈಗಲಾದರೂ ಉತ್ತರಿಸುತ್ತಾರಾ?’ ಎಂದು ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲಾ ಆಗ್ರಹಿಸಿದ್ದಾರೆ.
‘ಈ ವರದಿಯಿಂದ, ರಫೇಲ್ ಡೀಲ್‌ನಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ಆರೋಪ ಸಾಬೀತಾದಂತಾಗಿದೆ’ ಎಂದೂ ಅವರು ಹೇಳಿದ್ದಾರೆ.
ಆರೋಪಕ್ಕೆ ಬಿಜೆಪಿ ನಕಾರ:
‘ರಫೇಲ್ ವಹಿವಾಟಿನಲ್ಲಿ ಭ್ರಷ್ಟಾಚಾರ ನಡೆದಿಲ್ಲ ಎಂದು ಸುಪ್ರೀಂ ಕೋರ್ಟೇ ಹೇಳಿದೆ. ಆದರೆ ಈಗಿನ ಫ್ರೆಂಚ್ ತನಿಖಾ ಸಂಸ್ಥೆಯ ವರದಿಯು ಆ ದೇಶದಲ್ಲಿನ ಕಾರ್ಪೋರೆಟ್ ವೈರತ್ವದ ಪರಿಣಾಮ ಇರಬಹುದು. ಹಾಗಾಗಿ ಭ್ರಷ್ಟಾಚಾರ ಆರೋಪ ಸಂಪೂರ್ಣ ನಿರಾಧಾರ’ ಎಂದು ಕೇಂದ್ರ ಸಚಿವ ರವಿಶಂಕರ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಆರೋಪಿತ ವ್ಯಕ್ತಿ ಕಾಂಗ್ರೆಸ್ ಜೊತೆ ನಂಟುಹೊಂದಿದ್ದಾನೆ ಎಂದಿದ್ದಾಎ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ