* ವಿಶ್ವದಲ್ಲಿ ಕೋವಿಡ್ ಮತ್ತಷ್ಟುಇಳಿಕೆ: ಡಬ್ಲ್ಯುಎಚ್‌ಒ
* ಪರೀಕ್ಷೆ ಕಡಿಮೆ ಮಾಡಿದ್ದೂ ಕಾರಣವಾಗಿರಬಹುದು ಎಂದು ಶಂಕೆ
ಜಿನೇವಾ(ಏ.14): ಜಗತ್ತಿನಾದ್ಯಂತ ವರದಿಯಾಗುತ್ತಿರುವ ಕೋವಿಡ್ ಪ್ರಕರಣ ಹಾಗೂ ಸಾವಿನ ಸಂಖ್ಯೆಯಲ್ಲಿ ಸತತ 3 ವಾರಗಳಿಂದ ಇಳಿಕೆ ಕಂಡು ಬರುತ್ತಿದೆ. ಕಳೆದ ವಾರ ಸೋಂಕು ಶೇ.24ರಷ್ಟುಹಾಗೂ ಸಾವು ಶೇ.18ರಷ್ಟುತಗ್ಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿಕೆ ನೀಡಿದೆ.
ಈ ನಡುವೆ ಸೋಂಕಿನ ಪರೀಕ್ಷೆ ಕಡಿಮೆ ಮಾಡಿ, ಸೋಂಕಿನ ಮೇಲೆ ನಿಗಾ ಇಡುವ ಕಾರ್ಯಕ್ರಮಗಳನ್ನು ಹಿಂಪಡೆದ ಪರಿಣಾಮವಾಗಿಯೂ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿರಬಹುದು ಎಂದು ಶಂಕಿಸಿದೆ.
ಕಳೆದ ವಾರದ ವರದಿಯ ಪ್ರಕಾರ ಮಂಗಳವಾರದ ವರೆಗೆ ಜಗತ್ತಿನಾದ್ಯಂತ 70 ಲಕ್ಷ ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಮೊದಲಿನ ವಾರಕ್ಕಿಂತ ಶೇ. 24ರಷ್ಟುಕೋವಿಡ್ ಪ್ರಕರಣಗಳ ಇಳಿಕೆಯಾಗಿದ್ದು ಕಂಡುಬಂದಿದೆ. ವಿಶ್ವದ ಬಹುತೇಕ ವಲಯಗಳಲ್ಲಿ ಹೊಸ ಪ್ರಕರಣ ಹಾಗೂ ಸಾವಿನ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ. ಆದರೆ ಲಾಕ್‌ಡೌನ್ ಕಠಿಣ ಕ್ರಮಗಳ ನಡುವೆಯೂ ಚೀನಾದಲ್ಲಿ ಕೋವಿಡ್ ಹೆಚ್ಚುತ್ತಿದೆ. ಹಲವಾರು ದೇಶಗಳು ಕೋವಿಡ್ ಪರೀಕ್ಷೆ ಪ್ರಮಾಣ ಕಡಿಮೆ ಮಾಡಿರುವುದು ಇದಕ್ಕೆ ಕಾರಣವಾಗಿರಬಹುದು ಎಂದಿದೆ.
ಇನ್ನೆರಡು ರೂಪಾಂತರಿ ಪತ್ತೆ:
ಇದಲ್ಲದೇ ದಕ್ಷಿಣ ಆಫ್ರಿಕಾದ ಬೋಟ್ಸ್‌ವಾನಾದಲ್ಲಿ ಒಮಿಕ್ರೋನ್ ಬಿಎ.4 ಹಾಗೂ ಬಿಎ.5 ಎರಡು ಹೊಸ ರೂಪಾಂತರಿಗಳು ಪತ್ತೆಯಾಗಿವೆ. ಇವು ಹೆಚ್ಚು ಅಪಾಯಕಾರಿ ಅಥವಾ ತೀವ್ರವಾಗಿ ಹರಡುವ ಸಾಮರ್ಥ್ಯ ಹೊಂದಿದೆಯೇ ಎಂಬುದು ಇನ್ನೂ ಖಚಿತವಾಗಿಲ್ಲ. ಇದರ ಬಗ್ಗೆ ಅಧ್ಯಯನ ನಡೆಸಲಾಗುವುದು ಎಂದು ಹೇಳಿದೆ.
ಈ ತಿಂಗಳಲ್ಲಿ ಕೋವಿಡ್‌ಗೆ ಕೇವಲ ಮೂರೇ ಸಾವು
ರಾಜ್ಯದಲ್ಲಿ ಬುಧವಾರ 55 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಸತತ ಐದು ದಿನಗಳಿಂದ ಕೋವಿಡ್ ಸಾವು ವರದಿ ಆಗಿಲ್ಲ. ಈ ತಿಂಗಳಲ್ಲಿ ಮೂರು ಸಾವು ದಾಖಲಾಗಿದೆ. ಇದೇ ವೇಳೆ 10,423 ಮಂದಿ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದು ಶೇ. 0.52 ಪಾಸಿಟಿವಿಟಿ ದರ ದಾಖಲಾಗಿದೆ. ಬೆಂಗಳೂರು ನಗರದಲ್ಲಿ 46, ಧಾರವಾಡ 4, ಮೈಸೂರು 2, ಚಿತ್ರದುರ್ಗ, ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರ ತಲಾ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ.
ರಾಜ್ಯದಲ್ಲಿ 62 ಮಂದಿ ಚೇತರಿಸಿಕೊಂಡಿದ್ದಾರೆ. ಸದ್ಯ 1,438 ಸಕ್ರಿಯ ಪ್ರಕರಣಗಳಿವೆ. ರಾಜ್ಯದ 14 ಜಿಲ್ಲೆಗಳಲ್ಲಿ ಸಕ್ರಿಯ ಪ್ರಕರಣಗಳಿಲ್ಲ. ಬೆಂಗಳೂರು ನಗರದಲ್ಲಿ ಅತಿ ಹೆಚ್ಚು 1,355 ಸೋಂಕಿತರಿದ್ದಾರೆ. ಈವರೆಗೆ ಒಟ್ಟು 39.46 ಲಕ್ಷ ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು 39.04 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. ಈವರೆಗೆ ಒಟ್ಟು 40,057 ಮಂದಿ ಸಾವನ್ನಪ್ಪಿದ್ದಾರೆ.