* ಕೋವ್ಯಾಕ್ಸಿನ್ ಪಡೆದವರಿಗೆ ಅಂತಾರಾಷ್ಟ್ರೀಯ ಪ್ರಯಾಣಕ್ಕೆ ನೆರವು
* ದೇಶೀಯ ಕೋವ್ಯಾಕ್ಸಿನ್‌ಗೆ ಈ ವಾರ ಡಬ್ಲ್ಯುಎಚ್‌ಒ ಅನುಮೋದನೆ ಸಾಧ್ಯತೆ
* ಇತರ ದೇಶಗಳಿಗೆ ಲಸಿಕೆ ರಫ್ತು ಮಾಡಲು ಇದರಿಂದ ಅವಕಾಶ
ನವದೆಹಲಿ(ಸೆ.14): ಭಾರತದ ದೇಶೀಯ ಲಸಿಕೆ ಎಂಬ ಹೆಗ್ಗಳಿಕೆಯ ಕೋವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಇದೇ ವಾರದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಅನುಮೋದನೆ ಲಭ್ಯವಾಗುವ ಸಾಧ್ಯತೆಯಿದೆ.
ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿದ ಕೋವ್ಯಾಕ್ಸಿನ್ ಲಸಿಕೆಗೆ ಅಂತಾರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಮಾನ್ಯತೆ ಸಿಕ್ಕಿಲ್ಲ. ಆದರೆ ಭಾರತದಲ್ಲಿ ಈಗಾಗಲೇ ಅದನ್ನು ನೀಡಲಾಗುತ್ತಿದೆ. ಕೋವ್ಯಾಕ್ಸಿನ್ ಲಸಿಕೆಗೆ ಡಬ್ಲ್ಯುಎಚ್‌ಒ ಮಾನ್ಯತೆ ಸಿಕ್ಕ ಬಳಿಕ ಈ ಲಸಿಕೆ ಪಡೆದವರು ಅಂತಾರಾಷ್ಟ್ರೀಯ ಪ್ರಯಾಣಕ್ಕೆ ನೆರವಾಗಲಿದೆ. ಜೊತೆಗೆ ಭಾರತ್ ಬಯೋಟೆಕ್ ಸಂಸ್ಥೆಯ ಕೋವ್ಯಾಕ್ಸಿನ್ ಲಸಿಕೆಯನ್ನು ಇತರ ರಾಷ್ಟ್ರಗಳಿಗೆ ರಫ್ತು ಮಾಡಲು ಅವಕಾಶ ಲಭ್ಯವಾಗಲಿದೆ.
ಲಸಿಕೆಯ ಸುರಕ್ಷತೆ, ಪರಿಣಾಮಕಾರಿ, ಗುಣಮಟ್ಟಹಾಗೂ ಗಂಡಾಂತರ ನಿರ್ವಹಣೆಯ ಮಾನದಂಡಗಳನ್ನು ಅಳೆದು ಕೋವ್ಯಾಕ್ಸಿನ್ ಲಸಿಕೆಗೆ ಡಬ್ಲ್ಯುಎಚ್‌ಒ ಮಾನ್ಯತೆ ನೀಡಲಿದೆ. ಈಗಾಗಲೇ ಫೈಝರ್, ಕೋವಿಶೀಲ್ಡ್, ಜಾನ್ಸನ್ ಮತ್ತು ಜಾನ್ಸನ್, ಮೊಡೆರ್ನಾ ಹಾಗೂ ಸಿನೋಫಾರಂ ಲಸಿಕೆಗಳಿಗೆ ಡಬ್ಲ್ಯುಎಚ್‌ಒ ಮಾನ್ಯತೆ ಸಿಕ್ಕಿದೆ.