ಮಾನವ ಕುಲವನ್ನು ಹೆಮ್ಮಾರಿಯ ರೀತಿಯಂತೆ ಕಾಡುತ್ತಿರುವ ಕೊರೋನಾ ವೈರಸ್ ಇದೀಗ ಪ್ರಾಣಿ ಪ್ರಪಂಚಕ್ಕೂ ಕಾಲಿಟ್ಟಿರುವ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
ನ್ಯೂಯಾರ್ಕ್(ಏ.23): ಮಹಾಮಾರಿ ಕೊರೋನಾ ವೈರಸ್ ಈಗ ಬೆಕ್ಕುಗಳಲ್ಲೂ ಅಂಟಿದೆ. ಅಮೆರಿಕದ ನ್ಯೂಯಾರ್ಕ್‌ನಲ್ಲಿ ಎರಡು ಬೆಕ್ಕುಗಳಿಗೆ ಕೊರೋನಾ ವೈರಸ್ ಸೋಂಕು ಇರುವುದು ಖಚಿತವಾಗಿದೆ.
ವಿಶ್ವದಲ್ಲೇ ಅತೀ ಹೆಚ್ಚು ಸೋಂಕಿತರಿರುವ ಅಮೆರಿಕದಲ್ಲಿ ಸಾಕು ಪ್ರಾಣಿಗಳಲ್ಲಿ ಸೋಂಕು ಕಾಣಿಸಿಕೊಂಡ ಪ್ರಕರಣ ಇದೇ ಮೊದಲು. ಈ ಬೆಕ್ಕುಗಳು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು, ಕೊರೋನಾ ಶಂಕೆಯಿಂದ ಪರೀಕ್ಷೆ ಮಾಡಲಾಗಿತ್ತು. ವರದಿಯಲ್ಲಿ ಸೋಂಕು ಇರುವುದು ಖಚಿತವಾಗಿದೆ.
ಕೊರೋನಾ ಕಾಟ: ಪ್ರಾಣಿಗಳೂ ಹುಷಾರು ತಪ್ಪಿದ್ರೂ ಕ್ವಾರಂಟೈನ್‌ಗೆ..!
ಸೋಂಕು ಬಾಧಿತರೊಂದಿಗಿನ ಸಂಪರ್ಕದಿಂದಾಗಿ ಬೆಕ್ಕಿಗೆ ವ್ಯಾಧಿ ತಾಗಿರಬಹುದು ಎಂದು ತಜ್ಞರು ತರ್ಕಿಸಿದ್ದಾರೆ. ಈ ಹಿಂದೆ ನ್ಯೂಯಾರ್ಕ್ ಮೃಗಾಲಯವೊಂದರ ಹುಲಿಗೆ ಸೋಂಕು ತಟ್ಟಿತ್ತು. ನ್ಯೂಯಾರ್ಕ್‌ನ ಬ್ರೊನಾಕ್ಸ್ ಮೃಗಾಲಯದಲ್ಲಿರುವ ಹುಲಿಗೆ ಕೊರೋನಾ ಸೋಂಕು ತಗುಲಿತ್ತು. ಇದೀಗ ಸಾಕು ಬೆಕ್ಕಿಗೂ ಕೊರೋನಾ ತಗುಲಿರುವುದರಿಂದ ಪ್ರಾಣಿ ಪ್ರಪಂಚಕ್ಕೂ ಸೋಂಕು ತಗುಲಿದೆಯೇ ಎನ್ನುವ ಅನುಮಾನ ಆರಂಭವಾಗಿದೆ.
ನಾವು ಜನರು ಆತಂಕಗೊಳ್ಳುವುದನ್ನು ಬಯಸುವುದಿಲ್ಲ. ಇದರ ಜತೆಗೆ ಸಾಕು ಪ್ರಾಣಿಗಳು ಜತೆಗಿರುವವರು ಭಯಪಡಿಸುವುದು ಇಷ್ಟವಿಲ್ಲ. ಪ್ರಾಣಿಗಳಿಂದ ಸೋಂಕು ಜನರಿಗೆ ಹರಡುತ್ತದೆ ಎನ್ನುವ ವದಂತಿಗೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಅಮೆರಿಕಾದ ಡಾಕ್ಟರ್ ಕ್ಯಾಸಿ ಬಾರ್ಟನ್ ಬೈರವೇಶ್ ಅಭಿಪ್ರಾಯಪಟ್ಟಿದ್ದಾರೆ.