ಕೊರೋನಾದಿಂದ ಮತ್ತೊಂದು ಅವಾಂತರ: ವಿಶ್ವಕ್ಕೇ ಶಾಕ್ ಕೊಟ್ಟ ಆಕ್ಸ್‌ಫರ್ಡ್‌ ವರದಿ!

By Kannadaprabha NewsFirst Published Sep 28, 2021, 8:01 AM IST
Highlights

* ಕೋವಿಡ್‌ನಿಂದಾಗಿ ಜೀವಿತಾವಧಿಯೇ ಕುಸಿತ

* ವಿಶ್ವಯುದ್ಧ-2ರ ನಂತರ ಇಷ್ಟುಕಡಿಮೆ ಆಗಿದ್ದು ಇದೇ ಮೊದಲು

* 27 ದೇಶಗಳ ಜನರ ಜೀವಿತಾವಧಿ ಇಳಿಕೆ

* ಅಮೆರಿಕದಲ್ಲಿ ಅತಿ ಹೆಚ್ಚು 2.2 ವರ್ಷದಷ್ಟುಕುಸಿತ

* ಜೀವಿತಾವಧಿ ಹೆಚ್ಚಿಸಲು ಇಷ್ಟುವರ್ಷ ಮಾಡಿದ್ದ ಶ್ರಮ ಮಣ್ಣುಪಾಲು

ಲಂಡನ್‌(ಸೆ.28): ಕೊರೋನಾ ವ್ಯಾಧಿಯು(Covid 19) ಜನರ ಜೀವಿತಾವಧಿಯನ್ನೇ(Life expectancy) ಕಡಿಮೆ ಮಾಡಿದೆ. ಎರಡನೇ ವಿಶ್ವ ಯುದ್ಧದ ಬಳಿಕ ಜನರ ಜೀವಿತಾವಧಿ ಇಷ್ಟೊಂದು ಪ್ರಮಾಣದಲ್ಲಿ ಕಡಿಮೆ ಆಗಿದ್ದು ಇದೇ ಮೊದಲು ಎಂದು ಆಕ್ಸ್‌ಫರ್ಡ್‌ ವಿವಿ(Oxford University) ನಡೆಸಿದ ಅಧ್ಯಯನ ಹೇಳಿದೆ.

ಯುರೋಪ್‌ ದೇಶಗಳು, ಅಮೆರಿಕ ಹಾಗೂ ಚಿಲಿ ಸೇರಿದಂತೆ 29 ದೇಶಗಳಲ್ಲಿನ ಜನರ ಜೀವಿತಾವಧಿ(Life Expectancy) ಅಳೆಯಲಾಗಿದೆ. ಇದರಲ್ಲಿ 27 ದೇಶಗಳ ಜನರ ಜೀವಿತಾವಧಿ 2020ರಲ್ಲಿ ಕಡಿಮೆ ಆಗಿದ್ದು ಕಂಡುಬಂದಿದೆ. ಅತಿ ಹೆಚ್ಚು ಜೀವಿತಾವಧಿ ಕಡಿಮೆ ಆಗಿದ್ದು ಅಮೆರಿಕದಲ್ಲಿ. ಅಲ್ಲಿನ ಜನರ ಆಯುಷ್ಯ 2.2 ವರ್ಷದಷ್ಟುಕಡಿಮೆ ಆಗಿದೆ. ನಂತರದ ಸ್ಥಾನದಲ್ಲಿ ಲಿಥುವೇನಿಯಾ ಇದ್ದು, 1.7 ವರ್ಷದಷ್ಟುಕಡಿಮೆ ಆಗಿದೆ ಎಂದು ಅಧ್ಯಯನ ವಿವರಿಸಿದೆ.

2015ಕ್ಕೆ ಹೋಲಿಸಿದರೆ 2020ರಲ್ಲಿ 15 ದೇಶಗಳ ಮಹಿಳೆಯರು ಹಾಗೂ 10 ದೇಶಗಳ ಪುರುಷರಲ್ಲಿ(Male) ಜೀವಿತಾವಧಿ ಕುಸಿದಿದೆ. ವಿಶ್ವಯುದ್ಧ-2ರ ನಂತರ ಯುರೋಪ್‌ ದೇಶಗಳಾದ ಬೆಲ್ಜಿಯಂ, ಇಟಲಿ, ಇಂಗ್ಲೆಂಡ್‌, ವೇಲ್ಸ್‌ ಹಾಗೂ ಸ್ಪೇನ್‌ನಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಜೀವಿತಾವಧಿ ಕಡಿಮೆ ಆಗಿದ್ದು ಇದೇ ಮೊದಲು ಎಂದು ಅಧ್ಯಯನ ವರದಿಯಲ್ಲಿದೆ.

8 ದೇಶಗಳ ಮಹಿಳೆಯರಲ್ಲಿ ಹಾಗೂ 11 ದೇಶದ ಪುರುಷರ ಜೀವಿತಾವಧಿ 1 ವರ್ಷಕ್ಕಿಂತ ಹೆಚ್ಚು ಅವಧಿಗೆ ಕಡಿಮೆ ಆಗಿದೆ.

ಈ ದೇಶಗಳಲ್ಲಿನ ಜನರ ಜೀವಿತಾವಧಿ 1 ವರ್ಷದಷ್ಟುಜಾಸ್ತಿ ಆಗಲು 5.6 ವರ್ಷ ತೆಗೆದುಕೊಂಡಿತು. ಆದರೆ 2020ರಲ್ಲಿ ಕಾಣಿಸಿಕೊಂಡ ಕೋವಿಡ್‌, ಈ ಶ್ರಮವನ್ನು ಒಂದೇ ವರ್ಷದಲ್ಲಿ ಮಣ್ಣುಪಾಲು ಮಾಡಿತು ಎಂದು ತಿಳಿದುಬಂದಿದೆ.

ಒಟ್ಟಾರೆ ಗಮನಿಸಿದರೆ ಮಹಿಳೆಯರಿಗಿಂತ ಪುರುಷರ ಜೀವಿತಾವಧಿ ಹೆಚ್ಚು ಕುಸಿದಿದೆ ಎಂದು ಕಂಡುಬಂದಿದೆ.

click me!