Booster Dose: ಒಮಿಕ್ರೋನ್‌ ವಿರುದ್ಧ ಬೂಸ್ಟರ್‌ ಡೋಸ್‌ ಪರಿಣಾಮಕಾರಿ: ಅಧ್ಯಯನ

By Kannadaprabha NewsFirst Published Jan 21, 2022, 1:30 AM IST
Highlights

3ನೇ ಡೋಸ್‌ ಕೋವಿಡ್‌-19 ಲಸಿಕೆ ಇಡೀ ವಿಶ್ವವನ್ನು ಬಾಧಿಸುತ್ತಿರುವ ಒಮಿಕ್ರೋನ್‌ ರೂಪಾಂತರಿ ವೈರಸ್‌ ವಿರುದ್ಧ ಪರಿಣಾಮಕಾರಿ ಎಂದು ಸಮೀಕ್ಷೆಯೊಂದು ಹೇಳಿದೆ. ಲ್ಯಾನ್ಸೆಟ್‌ ಜರ್ನಲ್‌ನಲ್ಲಿ ಪ್ರಕಟವಾದ ಈ ಅಧ್ಯಯನವು, ಬೂಸ್ಟರ್‌ ಡೋಸ್‌ ದೇಹದಲ್ಲಿ ಪ್ರತಿಕಾಯ ಉತ್ಪತ್ತಿಯನ್ನು ಹೆಚ್ಚಿಸುತ್ತದೆ. 

ಲಂಡನ್‌ (ಜ.21): 3ನೇ ಡೋಸ್‌ ಕೋವಿಡ್‌-19 ಲಸಿಕೆ (Booster Dose) ಇಡೀ ವಿಶ್ವವನ್ನು ಬಾಧಿಸುತ್ತಿರುವ ಒಮಿಕ್ರೋನ್‌ (Omicron) ರೂಪಾಂತರಿ ವೈರಸ್‌ ವಿರುದ್ಧ ಪರಿಣಾಮಕಾರಿ ಎಂದು ಸಮೀಕ್ಷೆಯೊಂದು ಹೇಳಿದೆ. ಲ್ಯಾನ್ಸೆಟ್‌ ಜರ್ನಲ್‌ನಲ್ಲಿ ಪ್ರಕಟವಾದ ಈ ಅಧ್ಯಯನವು, ಬೂಸ್ಟರ್‌ ಡೋಸ್‌ ದೇಹದಲ್ಲಿ ಪ್ರತಿಕಾಯ ಉತ್ಪತ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ಒಮಿಕ್ರೋನ್‌ ರೂಪಾಂತರಿ ನಿಗ್ರಹ ಸಾಧ್ಯ ಎಂದು ತಿಳಿಸಿದೆ.

ಕೇವಲ ಎರಡು ಡೋಸ್‌ ಆಸ್ಟ್ರಾಜೆನಿಕಾ (AstraZeneca) ಅಥವಾ ಫೈಝರ್‌ ಲಸಿಕೆ (Pfizer Vaccine) ಪಡೆದವರಲ್ಲಿ ಒಮಿಕ್ರೋನ್‌ ಸೋಂಕಿನ ವಿರುದ್ಧ ಹೋರಾಡುವಷ್ಟುಪ್ರತಿಕಾಯಗಳು ಉತ್ಪತ್ತಿಯಾಗಿರಲಿಲ್ಲ. ಅಲ್ಲದೆ 2ನೇ ಡೋಸ್‌ ಪಡೆದ ಮೊದಲ 3 ತಿಂಗಳಲ್ಲೇ ಪ್ರತಿಕಾಯ ಪ್ರಮಾಣ ಗಣನೀಯವಾಗಿ ತಗ್ಗಿತ್ತು. ಆದರೆ ಬೂಸ್ಟರ್‌ ಡೋಸ್‌ ಪಡೆದ ನಂತರದಲ್ಲಿ ಪ್ರತಿಕಾಯ ಶಕ್ತಿ ಗಣನೀಯವಾಗಿ ಹೆಚ್ಚಿದೆ. ಇಂಥವರು ಒಮಿಕ್ರೋನ್‌ ವೈರಸ್ಸನ್ನು ನಿಗ್ರಹಿಸುವ ಶಕ್ತಿ ಹೊಂದಿದ್ದಾರೆ ಎಂಬುದು ಸಂಶೋಧನೆಯಲ್ಲಿ ದೃಢಪಟ್ಟಿದೆ ಎಂದು ತಿಳಿಸಿದೆ.

ಅಲ್ಲದೆ ಕೇವಲ ಎರಡೂ ಡೋಸ್‌ ಲಸಿಕೆ ಪಡೆದ ಮತ್ತು ಈ ಹಿಂದೆ ಕೊರೋನಾ ಲಕ್ಷಣಗಳನ್ನು ಹೊಂದಿದ್ದವರಲ್ಲಿಯೂ ಬೂಸ್ಟರ್‌ ಡೋಸ್‌ ಪಡೆದವರಲ್ಲಿ ಇದ್ದಷ್ಟೇ ಪ್ರತಿಕಾಯ ಇರುವುದು ಕಂಡುಬಂದಿದೆ. ಪ್ರತಿಕಾಯಗಳ ಪ್ರಮಾಣ ಲಸಿಕೆಯ ಪರಿಣಾಮಕಾರಿತ್ವವನ್ನು ಸೂಚಿಸುವುದಿಲ್ಲ. ಆದಾಗ್ಯೂ ಗಂಭೀರ ಪ್ರಮಾಣದ ಸೋಂಕಿನಿಂದ ರಕ್ಷಣೆ ನೀಡುತ್ತದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ ಎಂದು ಸಂಶೋಧಕರು ತಿಳಿಸಿದ್ದಾರೆ. 364 ಜನರಿಂದ 620 ರಕ್ತದ ಮಾದರಿಗಳನ್ನು ಪಡೆದು ಈ ಅಧ್ಯಯನ ನಡೆಸಲಾಗಿದೆ.

Booster Dose: 3ನೇ ಡೋಸ್‌ ಪಡೆಯಲು ನೀವು ಅರ್ಹರೇ?

ಬೂಸ್ಟರ್‌ ಡೋಸ್‌ ಲಸಿಕಾಕರಣ ಶುರು:  ದೇಶದಲ್ಲಿ ಕೊರೋನಾ ವೈರಸ್‌ನ 3ನೇ ಅಲೆ ಎದ್ದಿರುವ ನಡುವೆಯೇ, 60 ವರ್ಷ ದಾಟಿದ ಅನಾರೋಗ್ಯಪೀಡಿತರು, ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಮುಂಜಾಗ್ರತಾ ಡೋಸ್‌ ಲಸಿಕಾ ಅಭಿಯಾನ ಸೋಮವಾರದಿಂದ ದೇಶಾದ್ಯಂತ ಆರಂಭವಾಗಲಿದೆ. ಕಳೆದ ಡಿ.25ರಂದು ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, 2022ರ ಜ.3ರಿಂದ 15-18ರ ವಯೋಮಾನದ ಮಕ್ಕಳಿಗೆ ಮತ್ತು ಜ.10ರಿಂದ 60 ವರ್ಷ ದಾಟಿದವರು, ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಮುಂಜಾಗ್ರತಾ ಡೋಸ್‌ ನೀಡುವುದಾಗಿ ಪ್ರಕಟಿಸಿದ್ದರು. 

ಈಗಾಗಲೇ ನಿಗದಿಯಂತೆ ಜ.3ರಂದು ಮಕ್ಕಳಿಗೆ ಲಸಿಕೆ ಅಭಿಯಾನ ಆರಂಭವಾಗಿದ್ದು, ಈಗ ಮುಂಜಾಗ್ರತಾ ಡೋಸ್‌ ಲಸಿಕಾ ಅಭಿಯಾನಕ್ಕೂ ಚಾಲನೆ ದೊರಕಲಿದೆ. ಅದರಂತೆ ಜ.8ರ ಶನಿವಾರದಿಂದಲೇ ಕೋವಿನ್‌ ಪೋರ್ಟಲ್‌ನಲ್ಲಿ 3ನೇ ಡೋಸ್‌ ಲಸಿಕೆ ಪಡೆಯಲು ಬುಕ್ಕಿಂಗ್‌ ಆರಂಭವಾಗಿದೆ. ಇದರ ಜೊತೆ ಲಸಿಕಾ ಕೇಂದ್ರಗಳಿಗೆ ಅಲ್ಲಿಯೂ ನೇರವಾಗಿ ಬುಕ್‌ ಮಾಡಿಸಿ ಲಸಿಕೆ ಪಡೆಯಲು ಅವಕಾಶವಿದೆ.

ಯಾರು ಅರ್ಹ?: ವೈದ್ಯಕೀಯ ಸಿಬ್ಬಂದಿ, 60 ವರ್ಷ ಮೇಲ್ಪಟ್ಟಪೂರ್ವರೋಗಪೀಡಿತರು ಹಾಗೂ ಮುಂಚೂಣಿ ಕಾರ್ಯಕರ್ತರು 2ನೇ ಡೋಸ್‌ ಲಸಿಕೆ ಪಡೆದು 9 ತಿಂಗಳು ಅಥವಾ 39 ವಾರ ಆಗಿರಬೇಕು. ಅಂಥವರು ಮುಂಜಾಗ್ರತಾ ಡೋಸ್‌ ಲಸಿಕೆ ಪಡೆಯಲು ಅರ್ಹ.

ಯಾವ ಲಸಿಕೆ?: ಮೊದಲಿನ 2 ಡೋಸ್‌ ಲಸಿಕೆ ಯಾವ ಕಂಪನಿಯದ್ದಾಗಿರುತ್ತೋ, ಅದೇ ಕಂಪನಿಯ ಲಸಿಕೆಯನ್ನು 3ನೇ ಡೋಸ್‌ ಆಗಿ ಪಡೆಯಬೇಕು. ಉದಾಹರಣೆಗೆ: ಕೋವ್ಯಾಕ್ಸಿನ್‌ 2 ಡೋಸ್‌ ಪಡೆದವರು 3ನೇ ಡೋಸ್‌ ಆಗಿ ಕೋವ್ಯಾಕ್ಸಿನ್‌ ಅನ್ನೇ ಪಡೆಯಬೇಕು. ‘ಲಸಿಕೆ ಮಿಶ್ರಣ’ (ಬೇರೆ ಕಂಪನಿಯ ಲಸಿಕೆ) ಮಾಡುವಂತಿಲ್ಲ.

Covid Booster Dose: ಬೆಂಗಳೂರಿನಲ್ಲಿ 1.39 ಲಕ್ಷ ಮಂದಿಗೆ ಬೂಸ್ಟರ್‌ ಡೋಸ್‌ ನೀಡುವ ಗುರಿ!

ಪೂರ್ವರೋಗಪೀಡಿತರು ಅಂದರೆ ಯಾರು?: ಸಕ್ಕರೆ ಕಾಯಿಲೆ, ರಕ್ತದೊತ್ತಡ, ಕಿಡ್ನಿ ಕಾಯಿಲೆ, ಅಂಗಾಂಶ ಕಸಿಗೆ ಒಳಗಾದವರು, ಕ್ಯಾನ್ಸರ್‌, ಹೃದಯರೋಗಿಗಳು ಸೇರಿದಂತೆ 20 ಮಾದರಿಯ ವ್ಯಾಧಿ ಉಳ್ಳವರು ಪೂರ್ವರೋಗಪೀಡಿತರು ಎನ್ನಿಸಿಕೊಳ್ಳುತ್ತಾರೆ. ಇವರು 3ನೇ ಡೋಸ್‌ಗೆ ಅರ್ಹ.

ಮುಂಜಾಗ್ರತಾ ಡೋಸ್‌ ಏಕೆ?: ಕಾಯಿಲೆಪೀಡಿತರಿಗೆ ಮೊದಲ 2 ಡೋಸ್‌ ಪಡೆದರೂ ಅವರ ಪೂರ್ವಕಾಯಿಲೆಗಳ ಕಾರಣ ರೋಗನಿರೋಧಕ ಶಕ್ತಿ ಅಷ್ಟಾಗಿ ವೃದ್ಧಿಸದೇ ಇರಬಹುದು. ಹೀಗಾಗಿ ಅವರಿಗೆ 3ನೇ ಡೋಸ್‌ ನೀಡಲಾಗುತ್ತದೆ. ಇನ್ನು ವೈದ್ಯ ಸಿಬ್ಬಂದಿ ಹಾಗೂ ಮುಂಚೂಣಿ ಕಾರ್ಯಕರ್ತರು ಯಾವಾಗಲೂ ಕರ್ತವ್ಯ ಸ್ಥಳದಲ್ಲಿ ನಿತ್ಯ ಸಾವಿರಾರು ಜನರು, ರೋಗಿಗಳ ಸಂಪರ್ಕಕ್ಕೆ ಬರುತ್ತಿರುತ್ತಾರೆ. ಹೀಗಾಗಿ ಅವರಿಗೆ ಮುಂಜಾಗ್ರತಾ ಡೋಸ್‌ ನೀಡಲಾಗುತ್ತದೆ.

click me!