
ಕೇಪ್ ಕೆನವೆರಲ್: ಕಳೆದ 9 ತಿಂಗಳಿನಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ (ಐಎಸ್‌ಎಸ್)ದಲ್ಲಿ ಸಿಲುಕಿದ್ದ ಭಾರತ ಮೂಲದ ಬಾಹ್ಯಾಕಾಶ ಸುನಿತಾ ವಿಲಿಯಮ್ಸ್ ಮತ್ತು ನಾಸಾದ ಬಾಹ್ಯಾಕಾಶ ಯಾನಿ ಬುಚ್ ವಿಲ್ಮೋರ್ ಅವರು ಭಾರತೀಯ ಕಾಲಮಾನ ಬುಧವಾರ ಮುಂಜಾನೆ 3 ಗಂಟೆಗೆ ಭೂಮಿಗೆ ಮರಳಲಿದ್ದಾರೆ.
ಎಲ್ಲವೂ ಪೂರ್ವ ಯೋಜನೆಯಂತೆ ನಡೆದರೆ ಸುನಿತಾ, ಬುಚ್ ಜೊತೆಗೆ ರಷ್ಯಾದ ಅಲೆಕ್ಸಾಂಡರ್ ಗೋರ್ಬುನೋವ್ ಮತ್ತು ಅಮೆರಿಕದ ನಿಕ್ ಹೇಗ್ ಸಹ ಆಕಾಶದಿಂದ ಧರೆಗಿಳಿಯಲಿದ್ದಾರೆ. ಈ ನಾಲ್ವರು ಗಗನಯಾತ್ರಿಗಳನ್ನು ಎಲಾನ್ ಮಸ್ಕ್ ಒಡೆತನದ ಸ್ಪೇಸ್‌ಎಕ್ಸ್ ಕಂಪನಿಯ ಕ್ರ್ಯೂ ಡ್ರ್ಯಾಗನ್ ಕ್ಯಾಪ್ಸೂಲ್ ಭೂಮಿಗೆ ಕರೆತರಲಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಮಾಹಿತಿ ನೀಡಿದೆ.
ಭಾರತೀಯ ಕಾಲಮಾನ ಮಂಗಳವಾರ ಬೆಳಗ್ಗೆ 8.30ಕ್ಕೆ ಐಎಸ್‌ಎಸ್‌ನಿಂದ ನೌಕೆ ಹೊರಡಲಿದೆ. ಬುಧವಾರ ಮುಂಜಾನೆ 3 ಗಂಟೆ ಫ್ಲೋರಿಡಾದ ಸಮುದ್ರದ ಮೇಲೆ ನೌಕೆಯು ಇಳಿಯಲಿದೆ. ಅಲ್ಲಿಂದ ವಿಶೇಷ ದೋಣಿಗಳ ಮೂಲಕ ಕರಾವಳಿಗೆ ಆಗಮಿಸಲಿದ್ದಾರೆ. ಇದರ ಸಂಪೂರ್ಣ ಪ್ರಕ್ರಿಯೆಯನ್ನು ನಾಸಾ ನೇರ ಪ್ರಸಾರ ಮಾಡಲಿದೆ. ಕ್ರ್ಯೂ ಡ್ರ್ಯಾಗನ್ ಕ್ಯಾಪ್ಸೂಲ್ ಇತ್ತೀಚೆಗೆ ಫ್ಲೋರಿಯಾದ ಕೆನಡಿ ಬಾಹ್ಯಾಕಾಶ ನೆಲೆಯಿಂದ ಉಡ್ಡಯನಗೊಂಡ 29 ಗಂಟೆಗಳ ಬಳಿಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಿತ್ತು.
ಇದನ್ನೂ ಓದಿ: ಪ್ರಾಣವನ್ನೇ ಪಣಕ್ಕಿಟ್ಟಿರೋ ಸುನಿತಾ ವಿಲಿಯಮ್ಸ್‌ಗೆ ಸಿಗಲ್ಲ ಓವರ್ ಟೈಮ್ ಭತ್ಯೆ: ದಿನಕ್ಕೆ ಸಿಗೋದು ಕೇವಲ 347 ರೂಪಾಯಿ
ಸುನಿತಾ ಮತ್ತು ಬುಚ್ 8 ದಿನಗಳ ಕೆಲಸಕ್ಕೆಂದು ಐಎಸ್‌ಎಸ್‌ಗೆ ತೆರಳಿದ್ದರು. ಅದರೆ ಅವರು ತೆರಳಿದ್ದ ಬೋಯಿಂಗ್ ಸ್ಟಾರ್‌ಲೈನರ್ ನೌಕೆಯಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಕಾರಣ ಅವರ ಆಗಮನ ಪದೇ ಪದೇ ಮುಂದೂಡಿಕೆಯಾಗಿ 8 ತಿಂಗಳಷ್ಟು ವಿಸ್ತರಣೆಗೊಂಡಿತ್ತು.
ಇದನ್ನೂ ಓದಿ: ಬಾಹ್ಯಾಕಾಶದಲ್ಲಿ ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಅವರ 5 ಅತ್ಯುತ್ತಮ ಕ್ಷಣಗಳು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ