ಮತ್ತೊಂದು ಯುದ್ಧಕ್ಕೆ ಸಜ್ಜಾದ ವಿಶ್ವ, ಇಸ್ರೇಲ್‌ ಮೇಲೆ ದಾಳಿಗೆ ಮುಂದಾದ ಇರಾನ್‌!

By Santosh Naik  |  First Published Apr 5, 2024, 5:51 PM IST


ರಷ್ಯಾ-ಉಕ್ರೇನ್‌, ಇಸ್ರೇಲ್‌-ಗಾಜಾ ನಡುವಿನ ಯುದ್ಧದಿಂದ ಕಂಗೆಟ್ಟಿರುವ ವಿಶ್ವಕ್ಕೆ ಇನ್ನೊಂದು ಯುದ್ಧದ ಭೀತಿ ಎದುರಾಗಿದೆ. ಹೆಚ್ಚೂ ಕಡಿಮೆ ಇರಾನ್‌ ಹಾಗೂ ಇಸ್ರೇಲ್‌ ನಡುವೆ ಯುದ್ಧ ಆರಂಭವಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
 


ನವದೆಹಲಿ (ಏ.5): ಮಧ್ಯಪ್ರಾಚ್ಯದಲ್ಲಿ ಮತ್ತೊಂದು ಯುದ್ಧದ ಮುನ್ಸೂಚನೆ ಸಿಕ್ಕಿದೆ. ಇಸ್ರೇಲ್‌ ಹಾಗೂ ಹಮಾಸ್‌ ಭಯೋತ್ಪಾದಕರ ನಡುವಿನ ಯುದ್ಧ ಕಳೆದ ಆರು ತಿಂಗಳಿನಿಂದ ನಡೆಯುತ್ತಿದೆ. ರಷ್ಯಾ ಹಾಗೂ ಉಕ್ರೇನ್‌ ಯುದ್ಧ ಆರಂಭವಾಗಿ 770ಕ್ಕೂ ಅಧಿಕ ದಿನಗಳು ಕಳೆದಿವೆ. ಇದರ ನಡುವೆ ಇರಾನ್‌ ಹಾಗೂ ಇಸ್ರೇಲ್‌ ನಡುವೆ ಯುದ್ಧವಾಗುವ ಸಾಧ್ಯತೆ ಹೆಚ್ಚಿದೆ ಎಂದು ವರದಿಯಾಗಿದೆ. ಇರಾನ್‌ ಯಾವುದೇ ಕ್ಷಣದಲ್ಲಿ ಇಸ್ರೇಲ್‌ ಮೇಲೆ ದಾಳಿ ಮಾಡಬಹುದು ಎಂದು ಹೇಳಲಾಗುತ್ತಿದೆ. ಇಸ್ರೇಲ್‌ಗೆ ಕೂಡ ಇರಾನ್‌ ಯಾವುದೇ ಕ್ಷಣದಲ್ಲಿ ತನ್ನ ಮೇಲೆ ದಾಳಿ ಮಾಡುವ ಸೂಚನೆ ಸಿಕ್ಕಿದ್ದು, ಎಲ್ಲಾ ರೀತಿಯ ದಾಳಿಯನ್ನು ಎದುರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ತನ್ನ ಎಲ್ಲಾ ಸೈನಿಕರಿಗೂ ರಜೆಯನ್ನು ಇಸ್ರೇಲ್‌ ರದ್ದುಮಾಡಿದೆ. ಅದಲ್ಲದೆ, ಮೀಸಲು ಸೈನಿಕರಿಗೂ ಸೇವೆಗೆ ನಿಯೋಜನೆ ಆಗುವಂತೆ ಸೂಚನೆ ನೀಡಲಾಗಿದೆ. ಇಷ್ಟೇ ಅಲ್ಲ, ಇರಾನ್‌ನಿಂದ ಸಂಭವನೀಯ ದಾಳಿಯಿಂದ ರಕ್ಷಿಸಿಕೊಳ್ಳಲು ಟೆಲ್ ಅವೀವ್‌ನಲ್ಲಿ ಮತ್ತೆ ಬಂಕರ್‌ಗಳನ್ನು ತೆರೆಯಲಾಗುತ್ತಿದೆ ಎಂದು ಸ್ಥಳೀಯ ಮಾಧ್ಯಮ ವರದಿಗಳು ತಿಳಿಸಿವೆ. ಅದರೊಂದಿಗೆ ಇಡೀ ಮಧ್ಯಪ್ರಾಚ್ಯ ಪ್ರದೇಶದ ಜಿಪಿಎಸ್‌ಅನ್ನು ಬ್ಲಾಕ್‌ ಮಾಡಲಾಗಿದೆ.

ಇರಾನ್‌ ಸಿಟ್ಟಿಗೆ ಕಾರಣವೇನು:  ಸಿರಿಯಾದ ರಾಜಧಾನಿ ಡಮಾಸ್ಕಸ್‌ನಲ್ಲಿರುವ ಇರಾನ್ ಕಾನ್ಸುಲೇಟ್‌ನ ಮೇಲೆ ನಡೆದ ವೈಮಾನಿಕ ದಾಳಿಯ ಬೆನ್ನಲ್ಲಿಯೇ ಇಸ್ರೇಲ್‌ ಮೇಲೆ ಇರಾನ್‌ ಕಿಡಿಕಿಡಿಯಾಗಿದೆ. ಈ ದಾಳಿ ಏಪ್ರಿಲ್ 1 ರಂದು ನಡೆಯಿತು. ಈ ದಾಳಿಯಲ್ಲಿ 13 ಮಂದಿ ಸಾವನ್ನಪ್ಪಿದ್ದು, ಅವರಲ್ಲಿ 6 ಮಂದಿ ಸಿರಿಯನ್ ಪ್ರಜೆಗಳಾಗಿದ್ದಾರೆ. ಸಾವು ಕಂಡ ವ್ಯಕ್ತಿಗಳಲ್ಲಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್ ಕಾರ್ಪ್ಸ್ (IRGC) ಬ್ರಿಗೇಡಿಯರ್ ಜನರಲ್ ಮೊಹಮ್ಮದ್ ರೆಜಾ ಜಹೇದಿ ಕೂಡ ಸೇರಿದ್ದಾರೆ. ಅವರು IRGC ಯ 'ಕ್ವಾಡ್ಸ್‌ ಫೋರ್ಸ್'ನ ಪ್ರಮುಖ ವ್ಯಕ್ತಿಯಾಗಿದ್ದರು.

ಅಲ್-ಜಜೀರಾ ಪ್ರಕಾರ, ಫೆಬ್ರವರಿ 2020 ರಲ್ಲಿ ಜನರಲ್ ಸುಲೈಮಾನಿ ಅವರ ಹತ್ಯೆಯ ನಂತರ, ಇರಾನ್‌ನ ಉನ್ನತ ಕಮಾಂಡರ್ ಸಾವನ್ನಪ್ಪಿದ ಎರಡನೇ ಘಟನೆ ಇದಾಗಿದೆ. ಈ ದಾಳಿಗೆ ಇಸ್ರೇಲ್ ಹೊಣೆ ಎಂದು ಇರಾನ್ ಆರೋಪಿಸಿದೆ. ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಈ ದಾಳಿಗೆ ಅವರು ತಮ್ಮ ಕ್ರಮಗಳಿಗೆ ವಿಷಾದಿಸುವ ರೀತಿಯಲ್ಲಿ ಪ್ರತಿಕ್ರಿಯಿಸಲಾಗುವುದು ಎಂದು ಹೇಳಿದರು.

ಈ ದಾಳಿಯ ಬಗ್ಗೆ ಇಸ್ರೇಲ್ ಇನ್ನೂ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಸಿಎನ್ಎನ್ ವರದಿಯ ಪ್ರಕಾರ, ಇಸ್ರೇಲಿ ಕಮಾಂಡರ್ ಒಬ್ಬರು ಇದು 'ಕ್ವಾರ್ಡ್ಸ್‌ ಫೋರ್ಸ್' ಕಟ್ಟಡದ ಮೇಲಿನ ದಾಳಿ ಎಂದಿದ್ದಾರೆ. ಕ್ವಾರ್ಡ್ಸ್‌ ಫೋರ್ಸ್‌, ಇತರ ದೇಶಗಳಲ್ಲಿ ಕಾರ್ಯಾಚರಣೆಗಳನ್ನು ನಡೆಸುವ ಸಂಸ್ಥೆಯಾಗಿದೆ. ಇಸ್ರೇಲ್ ರಕ್ಷಣಾ ಪಡೆಗಳ ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ ಸಿಎನ್‌ಎನ್‌ಗೆ ಇದು ಕಾನ್ಸುಲೇಟ್ ಅಥವಾ ರಾಯಭಾರ ಕಚೇರಿಯಲ್ಲ ಎಂದು ಹೇಳಿದರು. ಅದು ಕುದ್ಸ್ ಫೋರ್ಸ್ ಕಟ್ಟಡವಾಗಿತ್ತು. ಈ ದಾಳಿಯನ್ನು ಇಸ್ರೇಲ್ ನಡೆಸಿದೆ ಎಂದು ಅಮೆರಿಕ ನಂಬಿದೆ ಎಂದು ಪೆಂಟಗನ್ ಉಪ ಪತ್ರಿಕಾ ಕಾರ್ಯದರ್ಶಿ ಸಬ್ರಿನಾ ಸಿಂಗ್ ಮಂಗಳವಾರ ಹೇಳಿದ್ದಾರೆ.

ಇರಾನ್‌ ಪ್ರತೀಕಾರದ ಬೆದರಿಕೆ: ಕಾನ್ಸುಲೇಟ್ ಮೇಲಿನ ದಾಳಿಗೆ ಇಸ್ರೇಲ್ ಹೊಣೆ ಎಂದು ಇರಾನ್ ಆರೋಪಿಸಿದೆ. ಇರಾನ್ ಕೂಡ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದೆ. ಇದು ಅಂತಾರಾಷ್ಟ್ರೀಯ ಒಪ್ಪಂದಗಳು ಮತ್ತು ರಾಜತಾಂತ್ರಿಕ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಇರಾನ್‌ನ ವಿದೇಶಾಂಗ ಸಚಿವ ಹುಸೇನ್ ಅಮೀರ್-ಅಬ್ದುಲ್ಲಾಹಿಯಾನ್ ಹೇಳಿದ್ದಾರೆ. ಗಾಜಾದಲ್ಲಿನ ವೈಫಲ್ಯದಿಂದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮಾನಸಿಕ ಸಮತೋಲನವನ್ನು ಕಳೆದುಕೊಂಡಿದ್ದಾರೆ ಎಂದ ಟೀಕಿಸಿದ್ದಾರೆ.  ಈ ದಾಳಿಗೆ ಇರಾನ್ ಅದೇ ರೀತಿ ಪ್ರತ್ಯುತ್ತರ ನೀಡಲಿದೆ ಎಂದು ಸಿರಿಯಾದಲ್ಲಿರುವ ಇರಾನ್ ರಾಯಭಾರಿ ಹೊಸೈನ್ ಅಕ್ಬರಿ ಹೇಳಿದ್ದಾರೆ. ಅಧ್ಯಕ್ಷ ಇಬ್ರಾಹಿಂ ರೈಸಿ ಕೂಡ ಇರಾನ್ ಮೌನವಾಗಿರುವುದಿಲ್ಲ ಎಂದು ತಿಳಿಸಿದ್ದಾರೆ.

Tap to resize

Latest Videos

ಹಮಾಸ್‌ ಭಯೋತ್ಪಾದಕರಿಂದ ಯುವತಿಯ ನಗ್ನ ಮೆರವಣಿಗೆ ಚಿತ್ರಕ್ಕೆ ಪ್ರಶಸ್ತಿ, ಇಸ್ರೇಲಿಗರ ಆಕ್ರೋಶ!

ಇರಾನ್ ಇಸ್ರೇಲ್ ಮೇಲೆ ದಾಳಿ ಮಾಡುತ್ತದೆಯೇ?: ಇಸ್ರೇಲಿ ಗುಪ್ತಚರ ಸಂಸ್ಥೆಯ ಮಾಜಿ ಮುಖ್ಯಸ್ಥ ಅಮೋಸ್ ಯಾಡ್ಲಿನ್ ಈ ಶುಕ್ರವಾರ ಇರಾನ್ ದಾಳಿ ಮಾಡಬಹುದು ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್‌ಗೆ ತಿಳಿಸಿದರು. ಒಂದೋ ನೇರ ಮಿಲಿಟರಿ ದಾಳಿ ಅಥವಾ ಪ್ರಾಕ್ಸಿ ಯುದ್ಧವನ್ನು ಆರಂಭಿಸುವ ಸಾಧ್ಯತೆ ಇದೆ. ಪ್ರಾಕ್ಸಿ ಯುದ್ಧ ಎಂದರೆ ಇರಾನ್ ಬೆಂಬಲಿತ ಹಿಜ್ಬುಲ್ಲಾ ಇಸ್ರೇಲ್ ಮೇಲೆ ದಾಳಿ ನಡೆಸಬಹುದು. ಹಮಾಸ್ ಜೊತೆಗಿನ ಯುದ್ಧದಲ್ಲೂ ಹಿಜ್ಬುಲ್ಲಾ ಇಸ್ರೇಲ್ ವಿರುದ್ಧ ಹೋರಾಡುತ್ತಿದೆ. ಇರಾನ್‌ ದಾಳಿ ಮಾಡಿದರೆ ನಮಗೇನೂ ಅಚ್ಚರಿ ಆಗೋದಿಲ್ಲ. ನಾಗರೀಕರು ಭಯಪಡುವ ಅಗತ್ಯವೂ ಇಲ್ಲ. ಇಸ್ರೇಲ್‌ನ ವಾಯು ರಕ್ಷಣಾ ಪಡೆ ಬಹಳ ಪ್ರಬಲವಾಗಿದೆ ಎಂದು ಅಮೋಸ್ ಯಾಡ್ಲಿನ್ ಹೇಳಿದ್ದಾರೆ.

ಸೋಶಿಯಲ್‌ ಮೀಡಿಯಾದ What's wrong with India ಟ್ರೆಂಡ್‌, ಚಂದ್ರಯಾನದ ಮೂಲಕ ಕೇಂದ್ರದ ತಿರುಗೇಟು!

ಇದೇ ವೇಳೆ ಇರಾನ್ ದಾಳಿಗೆ ಇಸ್ರೇಲ್ ಸೇನೆಯೂ ಸಿದ್ಧವಾಗಿದೆ. ಸೈನಿಕರ ರಜೆಯನ್ನು ರದ್ದುಗೊಳಿಸಲಾಗಿದೆ. ಇದಲ್ಲದೆ ಇಸ್ರೇಲ್ ಹಲವು ಪ್ರಮುಖ ಪ್ರದೇಶಗಳಲ್ಲಿ ಜಿಪಿಎಸ್ ಅನ್ನು ನಿರ್ಬಂಧಿಸಿದೆ. ಜಿಪಿಎಸ್ ನಿರ್ಬಂಧಿಸುವುದರಿಂದ ಕ್ಷಿಪಣಿಗಳು ಮತ್ತು ಡ್ರೋನ್‌ಗಳು ದಾರಿ ತಪ್ಪುತ್ತವೆ. ಆದಾಗ್ಯೂ, ಇರಾನ್ ಇನ್ನೂ ಇಸ್ರೇಲ್‌ನೊಂದಿಗೆ ನೇರ ಯುದ್ಧವನ್ನು ಮಾಡುವುದನ್ನು ತಪ್ಪಿಸಲು ಬಯಸುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ಇಸ್ರೇಲ್‌ಗೆ ಅಮೆರಿಕದ ಬೆಂಬಲ ಸಿಕ್ಕಿರುವುದು ಇದಕ್ಕೆ ಒಂದು ಕಾರಣ. ಒಂದು ವೇಳೆ ಯುದ್ಧ ನಡೆದರೆ ಅಮೆರಿಕ ಬೆಂಬಲಿಸುತ್ತದೆ ಮತ್ತು ಅಂತಹ ಪರಿಸ್ಥಿತಿಯಲ್ಲಿ ಇರಾನ್ ಹಿಂದೆ ಬೀಳಬಹುದು ಎನ್ನಲಾಗಿದೆ.

click me!