ಚೀನಾದಲ್ಲಿ ಕೊರೋನಾ ತಾಂಡವ, ಬಹುತೇಕ ಗ್ರಾಮಗಳಲ್ಲಿ ಶವಪೆಟ್ಟಿಗೆಗಳಿಗೆ ಬರ!

By Santosh NaikFirst Published Jan 27, 2023, 11:54 AM IST
Highlights

ಜಗತ್ತಿಗೆ ದೊಡ್ಟಮಟ್ಟದಲ್ಲಿ ಶವಪೆಟ್ಟಿಗೆಗಳನ್ನು ರಫ್ತು ಮಾಡುವ ರಾಷ್ಟ್ರವಾದ ಚೀನಾದಲ್ಲಿ ಕೊರೋನಾ ಕಾರಣದಿಂದಾಗಿ ಶವಪೆಟ್ಟಿಗೆಗಳಿಗೆ ಬರ ಎದುರಾಗಿದೆ. ಬಹುತೇಕ ಗ್ರಾಮಗಳಲ್ಲಿ ವಿಪರೀತ ಎನ್ನುವಷ್ಟು ಶವಪೆಟ್ಟಿಗೆಗೆ ಬೇಡಿಕೆ ಎದುರಾಗಿದೆ. ಇದರ ನಡುವೆ ಮೇ 8 ರಿಂದ ಜಪಾನ್‌ ರಾಷ್ಟ್ರವು ಕೊರೋನಾವನ್ನು ಸಾಮಾನ್ಯ ಜ್ವರವನ್ನಾಗಿ ಪರಿಗಣನೆ ಮಾಡಲಿದೆ.
 

ಬೀಜಿಂಗ್‌ (ಜ.27): ಚೀನಾದ ಬಹುತೇಕ ನಗರಗಳಲ್ಲಿ ಕೊರೋನಾ ತಾಂಡವವಾಡಿದೆ. ಆದರೆ, ಇದರ ಯಾವುದೇ ವಿವರಗಳು ಹೊರಜಗತ್ತಿಗೆ ಗೊತ್ತಾಗದಂತೆ ಚೀನಾದ ಆಡಳಿತ ಎಲ್ಲಾ ವ್ಯವಸ್ಥೆಗಳನ್ನು ಮಾಡುತ್ತಿದೆ. ಆದರ,ೆ ಇತ್ತೀಚಿಗೆ ಬಿಬಿಸಿಯ ವರದಿಯ ಪ್ರಕಾರ, ಚೀನಾದಲ್ಲಿ ಕೊರೋನಾ ಎಷ್ಟು ರೌದ್ರಾವತಾರ ತೋರಿದೆ ಎಂದರೆ, ಬಹುತೇಕ ಗ್ರಾಮಗಳಲ್ಲಿ ಶವಪೆಟ್ಟಿಗೆಗಳಿಗೆ ಬರ ಎದುರಾಗಿದೆ. ಜಗತ್ತಿಗೆ ಶವಪೆಟ್ಟಿಗೆಗಳನ್ನು ರಫ್ತು ಮಾಡುವ ಅತೀದೊಡ್ಡ ದೇಶ ಚೀನಾ. ಶಾನ್ಸ್ಕಿ ಪ್ರಾಂತ್ಯದ ಗ್ರಾಮಗಳ ಜನರ ಹೆಚ್ಚಿನ ಉದ್ಯೋಗವೇ ಆಕರ್ಷಕ ವಿನ್ಯಾಸದ ಶವಪೆಟ್ಟಿಗೆಗಳನ್ನು ಮಾಡುವುದು. ಆದರೆ, ಇತ್ತೀಚಿನ ದಿನಗಳಲ್ಲಿ ಶವಪೆಟ್ಟಿಗೆಗೆ ಭಾರೀ ಬೇಡಿಕೆ ಚೀನಾ ಗ್ರಾಮಗಳಿಂದ ದಾಖಲಾಗಿದೆ. ಪೂರೈಕೆ ಸಾಧ್ಯವಾಗದೇ ತೆರೆದ ಪ್ರದೇಶಗಳಲ್ಲಿ ಗುಂಡಿ ತೋಡಿ ಶವಗಳನ್ನು ಹೂಳುವ ಕೆಲಸಗಳು ನಡೆಯುತ್ತಿದೆ ಎಂದು ವರದಿಯಾಗಿದೆ. ಶವಪೆಟ್ಟಿಗೆಗಳನ್ನು ತಯಾರಿಸುವ ಕೆಲಸಗಾರರೊಂದಿಗೆ ಕೂಡ ವಾಹಿನಿ ಮಾತನಾಡಿದ್ದು, ಎಲ್ಲರೂ ಕೂಡ ಚೀನಾದಲ್ಲಿ ಸಾಕಷ್ಟು ಶವಸಂಸ್ಕಾರ ನಡೆಯುತ್ತಿದೆ. ಅದಕ್ಕೆ ಕೊರೋನಾವೈರಸ್‌ ಕಾರಣ. ಪ್ರತಿ ದಿನವೂ ಸಾಯುವವರ ಸಂಖ್ಯೆಯಲ್ಲಿ ದೊಡ್ಡ ಮಟ್ಟದಲ್ಲಿ ಏರಿಕೆ ಆಗುತ್ತಿದೆ ಎಂದು ಹೇಳಿದ್ದಾರೆ.

ಭಾರತದಲ್ಲಿ ಕೊರೋನಾ ಪರಿಸ್ಥಿತಿ: ಭಾರತದಲ್ಲಿ ಗುರುವಾರ 88 ಹೊಸ ಕೊರೋನಾವೈರಸ್‌ ಕೇಸ್‌ಗಳು ಪತ್ತೆಯಾಗಿವೆ. ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಪ್ರಸ್ತುತ ದೇಶದಲ್ಲಿ 1906 ಸಕ್ರಿಯ ಪ್ರಕರಣಗಳಿವೆ. ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ, ದೇಶದಲ್ಲಿ 5 ಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಅಲ್ಲದೆ, 40 ದಶಲಕ್ಷಕ್ಕೂ ಹೆಚ್ಚು ಜನರು ವೈರಸ್ ಸೋಂಕಿಗೆ ಒಳಗಾಗಿದ್ದಾರೆ. ಈ ನಡುವೆ ಇಂದು ಭಾರತದಲ್ಲಿ, ಸ್ಥಳೀಯ ಫಾರ್ಮಾ ಕಂಪನಿ ಭಾರತ್ ಬಯೋಟೆಕ್ ವಿಶ್ವದ ಮೊದಲ ಇಂಟ್ರಾನಾಸಲ್ ಕೋವಿಡ್ -19 ಲಸಿಕೆಯನ್ನು ಬಿಡುಗಡೆ ಮಾಡಿದೆ. ಇದಕ್ಕೆ ಇನ್ಕೋವಾಕ್‌ ಎಂದು ಹೆಸರಿಡಲಾಗಿದೆ.

ಜಪಾನ್‌ನಲ್ಲಿ ಒಂದೇ ದಿನ 410 ಜನ ಸಾವು: ಜಪಾನ್‌ನಲ್ಲಿ ಗುರುವಾರ 59885 ಕರೋನಾ ಪ್ರಕರಣಗಳು ದಾಖಲಾಗಿವೆ. ರಾಜಧಾನಿ ಟೋಕಿಯೋದಲ್ಲಿಯೇ ಒಟ್ಟು 5061 ಪ್ರಕರಣಗಳು ದಾಖಲಾಗಿವೆ. ಒಂದೇ ದಿನದಲ್ಲಿ 410 ಮಂದಿ ಸಾವನ್ನಪ್ಪಿದ್ದಾರೆ. ಗುರುವಾರ ಜಪಾನ್‌ನಲ್ಲಿ ಕೊರೋನಾದಿಂದ ಆಸ್ಪತ್ರೆಗೆ ದಾಖಲಾದವರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಗುರುವಾರ 585 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ನಡುವೆ ಮೇ 8 ರಿಂದ ಕೊರೋನಾವನ್ನು ಸಾಮಾನ್ಯ ಜ್ವರ ವರ್ಗಕ್ಕೆ ಸೇರಿಸಲು ಜಪಾನ್ ನಿರ್ಧರಿಸಿದೆ. ಇದರೊಂದಿಗೆ ಸಾರ್ವಜನಿಕರು ಕೊರೋನಾವನ್ನು ಸಾಮಾನ್ಯ ಜ್ವರ ಎಂದು ಪರಿಗಣಿಸುತ್ತಾರೆ ಮತ್ತು ವೈರಸ್‌ನೊಂದಿಗೆ ಬದುಕಲು ಕಲಿಯುತ್ತಾರೆ ಎಂದು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಹೇಳಿದ್ದಾರೆ.

ಭಾರತದಲ್ಲಿ ನೇಸಲ್ ಡ್ರಾಪ್ ಕೋವಿಡ್ ಲಸಿಕೆ ಬಿಡುಗಡೆ, ಸರ್ಕಾರಿ ಆಸ್ಪತ್ರೆಯಲ್ಲಿ 325 ರೂ!

ಚೀನಾದ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಪ್ರಕಾರ, ಹೊಸ ವರ್ಷದ ಸಂದರ್ಭದಲ್ಲಿ ಕೊರೋನಾದಿಂದ ಸಾವು ಕಾಣುವವರ ಸಂಖ್ಯೆ 80% ರಷ್ಟು ಕಡಿಮೆಯಾಗಿದೆ. ಜನವರಿ 21 ರ ನಂತರ, ಅಂದರೆ, ಲೂನಾರ್‌ ನ್ಯೂ ಇಯರ್‌ ಸಮಯದಲ್ಲಿ ಜನರು ತಮ್ಮ ಮನೆಗಳಿಗೆ ಭೇಟಿ ನೀಡುವುದನ್ನು ಮುಂದುವರಿಸುತ್ತಾರೆ, ಇದರಿಂದಾಗಿ ಸೋಂಕು ಹೆಚ್ಚಾಗುತ್ತದೆ ಮತ್ತು ಅನೇಕ ಸಾವುಗಳು ಸಂಭವಿಸುತ್ತವೆ ಎಂದು ತಜ್ಞರು ಹೇಳಿದ್ದರು. ಹಾಂಗ್ ಕಾಂಗ್ ವಿಶ್ವವಿದ್ಯಾಲಯದ ಸಂಶೋಧನೆಯ ಪ್ರಕಾರ, ಚೀನಾದ ರಾಜಧಾನಿ ಬೀಜಿಂಗ್‌ನ 92% ಜನಸಂಖ್ಯೆಯು ಜನವರಿ ಅಂತ್ಯದ ವೇಳೆಗೆ ಕರೋನಾ ಸೋಂಕಿಗೆ ಒಳಗಾಗುತ್ತದೆ. ಇಲ್ಲಿನ ಜನಸಂಖ್ಯೆ 2 ಕೋಟಿ 20 ಲಕ್ಷ. ಬೀಜಿಂಗ್ ಸೇರಿದಂತೆ ಚೀನಾದ ಅನೇಕ ದೊಡ್ಡ ನಗರಗಳಲ್ಲಿ ಕರೋನದ ಉತ್ತುಂಗವು ಹಲವು ಬಾರಿ ಸಂಭವಿಸಬಹುದು. ಹೊಸ ವರ್ಷದ ಸಮಯದಲ್ಲಿ ಚೀನಾದಲ್ಲಿ ಹೆಚ್ಚಿನ ಚಟುವಟಿಕೆಗಳು ನಡೆಯುವುದೇ ಇದಕ್ಕೆ ಕಾರಣ ಎನ್ನಲಾಗಿದೆ.

2 ವಾರದಲ್ಲಿ 2ನೇ ಬಾರಿಗೆ ಕೊರೋನಾ, ಮಗನಿಗೆ ಕಂಪನಿಯ ಜವಾಬ್ದಾರಿ ವಹಿಸಿದ ಲಲಿತ್‌ ಮೋದಿ!

67 ಕೋಟಿ ಕೊರೋನಾ ಕೇಸ್‌: ಗುರುವಾರದ ವೇಳೆಗೆ ಜಗತ್ತಿನಲ್ಲಿ 67.41 ಕೋಟಿ ಕೇಸ್‌ಗಳು ದಾಖಲಾಗಿವೆ. 11 ಜನವರಿ 2020 ರಂದು, 61 ವರ್ಷದ ವ್ಯಕ್ತಿಯೊಬ್ಬರು ಚೀನಾದ ವುಹಾನ್‌ನಲ್ಲಿ ನಿಧನರಾದರು. ಇದು ವಿಶ್ವದ ಮೊದಲ ಕರೋನಾ ಸಾವು. ಇದಾದ ನಂತರ ಸಾವಿನ ಸಂಖ್ಯೆಯಲ್ಲೂ ಹೆಚ್ಚಾಗತೊಡಗಿತು. ಇಲ್ಲಿಯವರೆಗೆ 67 ಲಕ್ಷ 52 ಸಾವಿರ 854 ಸಾವುಗಳು ಸಂಭವಿಸಿವೆ.

click me!