ದಿವಾಳಿ ಪಾಕ್‌ಗೆ ಐಎಂಎಫ್‌ ಸಾಲವಿಲ್ಲ..! ಪಾಕ್‌ ಬಳಿ ಈಗ ಬರೀ 3 ವಾರಕ್ಕಾಗುವಷ್ಟು ಹಣ

By Kannadaprabha NewsFirst Published Jan 26, 2023, 7:54 AM IST
Highlights

ಪಾಕ್‌ ಬಳಿ ಈಗ ಕೇವಲ 4300 ಕೋಟಿ ಡಾಲರ್‌ನಷ್ಟು ವಿದೇಶಿ ವಿನಿಮಯ ಇದ್ದು, ಇದು ಆ ದೇಶಕ್ಕೆ 3 ವಾರದ ಅಂತಾರಾಷ್ಟ್ರೀಯ ಖರೀದಿಗಳಿಗೆ ಮಾತ್ರ ಸಾಕಾಗಿದೆ. ಹೀಗಾಗಿ, ಸರ್ಕಾರಿ ನೌಕರರ ವೇತನ ಶೇ.10ರಷ್ಟು ಕಡಿತ ಮಾಡುವ ಸಾಧ್ಯತೆ ಇದೆ. ದೇಶ ಸಂಕಷ್ಟದಿಂದ ಪಾರಾಗುವುದಾದರೆ ಅಧಿಕಾರ ತ್ಯಾಗಕ್ಕೆ ಸಿದ್ಧ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. 

ಇಸ್ಲಾಮಾಬಾದ್‌ (ಜನವರಿ 26, 2023): ಇತಿಹಾಸದಲ್ಲೇ ಕಂಡುಕೇಳರಿಯದ ಹಣದುಬ್ಬರ, ಆರ್ಥಿಕ ಸಂಕಷ್ಟಕ್ಕೆ ಸಿಕ್ಕಿಬಿದ್ದಿರುವ ಪಾಕಿಸ್ತಾನ ಇದೀಗ ದಿವಾಳಿಯ ಭೀತಿಗೆ ಸಿಲುಕಿದೆ. ಕೇವಲ 3 ವಾರಗಳ ಆಮದಿಗೆ ಆಗುವಷ್ಟು ಮಾತ್ರವೇ ವಿದೇಶಿ ವಿನಿಮಯ ಸಂಗ್ರಹ ಹೊಂದಿರುವ ಪಾಕಿಸ್ತಾನಕ್ಕೆ ಯಾವುದೇ ನೆರವು ನೀಡಲು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ನಿರಾಕರಿಸಿದೆ. ಇದು ನೆರವಿನ ನಿರೀಕ್ಷೆಯಲ್ಲಿದ್ದ ಪಾಕಿಸ್ತಾನಕ್ಕೆ ಭಾರಿ ಆಘಾತ ಮೂಡಿಸಿದೆ. ದೇಶದಲ್ಲಿನ ಪರಿಸ್ಥಿತಿ ಅಧ್ಯಯನಕ್ಕೆ ತಂಡವೊಂದನ್ನು ರವಾನಿಸಿ ಅದು ನೀಡುವ ವರದಿ ಅನ್ವಯ ಅಗತ್ಯ ಪ್ರಮಾಣದ ಸಾಲದ ನೆರವನ್ನು ನೀಡುವಂತೆ ಪಾಕಿಸ್ತಾನ ಸರ್ಕಾರ ಐಎಂಎಫ್‌ ಅನ್ನು ಕೋರಿತ್ತು. ಆದರೆ ಈ ಕೋರಿಕೆಯನ್ನು ಐಎಂಎಫ್‌ ಸ್ಪಷ್ಟವಾಗಿ ತಳ್ಳಿಹಾಕಿದೆ ಎಂದು ಮೂಲಗಳು ತಿಳಿಸಿವೆ.

2019ರಲ್ಲೇ ಪಾಕಿಸ್ತಾನಕ್ಕೆ 82000 ಕೋಟಿ ರೂ. ನೆರವು ನೀಡುವ ಭರವಸೆಯನ್ನು ಐಎಂಎಫ್‌ ಪಾಕಿಸ್ತಾನಕ್ಕೆ ನೀಡಿದೆಯಾದರೂ ಅದಕ್ಕೆ ಹಾಕಿದ ಷರತ್ತುಗಳನ್ನು ಒಪ್ಪಲು ಪಾಕಿಸ್ತಾನ ಒಪ್ಪಿಗೆ ನೀಡಿಲ್ಲ. ಹೀಗಾಗಿ ಇದುವರೆಗೂ ಸಾಲದ ನೆರವು ಹರಿದುಬಂದಿಲ್ಲ. ಇದು ದೇಶದ ಆರ್ಥಿಕ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ. ಈ ನಡುವೆ ದೇಶವನ್ನು ಸಂಕಷ್ಟದಿಂದ ಪಾರುಮಾಡಲು ಅಧಿಕಾರ ತ್ಯಾಗಕ್ಕೂ ಸಿದ್ಧ ಎಂದು ಪ್ರಧಾನಿ ಶೆಹಬಾಜ್‌ ಷರೀಫ್‌ ಘೋಷಿಸಿದ್ದು, ದೇಶದ ದಯನೀಯ ಸ್ಥಿತಿಗೆ ಉದಾಹರಣೆಯಾಗಿ ಹೊರಹೊಮ್ಮಿದೆ.

ಇದನ್ನು ಓದಿ: ಪಾಕ್‌ನಾದ್ಯಂತ ಭಾರಿ ವಿದ್ಯುತ್‌ ವ್ಯತ್ಯಯ: ತನಿಖೆಗೆ ಆದೇಶಿಸಿದ ಪ್ರಧಾನಿ ಶೆಹಬಾಜ್‌ ಷರೀಫ್‌

ವೇತನ ಕಡಿತ: ಈ ನಡುವೆ ಆರ್ಥಿಕ ಮಿತವ್ಯಯಕ್ಕಾಗಿ ನಾನಾ ಮಾರ್ಗಗಳನ್ನು ಹುಡುಕುತ್ತಿರುವ ಉನ್ನತ ಮಟ್ಟದ ಸಮಿತಿಯೊಂದು, ಎಲ್ಲಾ ಸರ್ಕಾರಿ ನೌಕರರ ವೇತನದಲ್ಲಿ ಕನಿಷ್ಠ ಶೇ.10ರಷ್ಟುಕಡಿತ, ಸಚಿವರು, ಸಹಾಯಕ ಸಚಿವರು, ಸಲಹೆಗಾರರು, ಪ್ರಧಾನಿಗಳ ಆಪ್ತ ಸಿಬ್ಬಂದಿಯಲ್ಲಿ ಕಡಿತ ಮಾಡುವಂತೆ ಸಲಹೆ ನೀಡಿದೆ. ಪ್ರಧಾನಿ ಶೆಹಬಾಜ್‌ ಷರೀಫ್‌ ರಚಿಸಿದ್ದ ರಾಷ್ಟ್ರೀಯ ವೆಚ್ಚ ಉಳಿತಾಯ ಸಮಿತಿ ಸರ್ಕಾರಕ್ಕೆ ಈ ಶಿಫಾರಸು ಮಾಡಿದೆ.

ಇಂಧನ ಉಳಿಸುವ ಸಲುವಾಗಿ ಈಗಾಗಲೇ ರಾತ್ರಿ 8 ಗಂಟೆಗೆ ಮಾರುಕಟ್ಟೆ ಬಂದ್‌, 10 ಬಳಿಕ ವಿವಾಹ ಸೇರಿದಂತೆ ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸದಂತೆ ಪಾಕ್‌ ಸರ್ಕಾರ ಸಾರ್ವಜನಿಕರಿಗೆ ಸೂಚಿಸಿದೆ.

ಇದನ್ನೂ ಓದಿ: ಪ್ರತಿ ಬಾರಿ ಬೇರೆ ದೇಶದ ಮುಂದೆ ನಿಂತು ಸಾಲ ಕೇಳೋಕೆ ನಾಚಿಕೆ ಆಗುತ್ತೆ: ಪಾಕ್‌ ಪ್ರಧಾನಿ!

ತೈಲ ಖರೀದಿಗೆ ಸರದಿ:
ಇದೇ ವೇಳೆ ತೈಲ ವಿತರಣಾ ಕಂಪನಿಗಳು, ಬಂಕ್‌ಗಳಿಗೆ ನೀಡುತ್ತಿದ್ದ ತೈಲ ಪ್ರಮಾಣದಲ್ಲಿ ಕಡಿತ ಮಾಡಿವೆ ಮತ್ತು ಬ್ಯಾಂಕ್‌ಗಳು ತೈಲ ಖರೀದಿಗೆ ಸಾಲ ನೀಡಲು ವಿಳಂಬ ಮಾಡುತ್ತಿವೆ ಎಂಬ ವರದಿಗಳ ಬೆನ್ನಲ್ಲೇ, ಜನರು ಅಗತ್ಯ ತೈಲೋತ್ಪನ್ನಗಳ ಕೊರತೆ ಕಾಣಿಸಿಕೊಳ್ಳಬಹುದು ಎಂಬ ಆತಂಕಕ್ಕೆ ಒಳಗಾಗಿ ಸರದಿಯಲ್ಲಿ ನಿಂತು ಖರೀದಿಗೆ ಮುಂದಾಗಿದ್ದಾರೆ. ಹಾಲಿ ದೇಶದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಲೀ.ಗೆ 220 ರೂ. ದಾಟಿದೆ.

  • ಪಾಕ್‌ ಬಳಿ ಈಗ ಕೇವಲ 4300 ಕೋಟಿ ಡಾಲರ್‌ನಷ್ಟು ವಿದೇಶಿ ವಿನಿಮಯ
  • ಇದು ಆ ದೇಶಕ್ಕೆ 3 ವಾರದ ಅಂತಾರಾಷ್ಟ್ರೀಯ ಖರೀದಿಗಳಿಗೆ ಮಾತ್ರ ಸಾಕು
  • ಹೀಗಾಗಿ, ಸರ್ಕಾರಿ ನೌಕರರ ವೇತನ ಶೇ.10ರಷ್ಟು ಕಡಿತ ಮಾಡುವ ಸಾಧ್ಯತೆ
  • ದೇಶ ಸಂಕಷ್ಟದಿಂದ ಪಾರಾಗುವುದಾದರೆ ಅಧಿಕಾರ ತ್ಯಾಗಕ್ಕೆ ಸಿದ್ಧ: ಪ್ರಧಾನಿ

ಇದನ್ನೂ ಓದಿ: ಭಾರತ ಪಿಒಕೆ ಹಿಂಪಡೆಯಬಹುದು; ಈ ವರ್ಷ ಪಾಕ್‌ ಹಲವು ಭಾಗಗಳಾಗಿ ವಿಭಜನೆಯಾಗುತ್ತೆ: ಪ್ರೊ. ಮುಖ್ತೆದಾರ್‌ ಖಾನ್‌ 

click me!