
ಲಂಡನ್(ನ.27): ಅತ್ಯಂತ ವೇಗವಾಗಿ ಹಬ್ಬುವ, ಲಸಿಕೆಗೂ ಬಗ್ಗದ, ಡೆಲ್ಟಾಗಿಂತಲೂ ಅಪಾಯಕಾರಿ ಎಂದು ಬಣ್ಣಿತವಾದ ಕೋವಿಡ್‌ನ ಹೊಸ ರೂಪಾಂತರಿ ‘ಬೋಟ್ಸ್‌ವಾನಾ ತಳಿ’ (Botswana Variant) ಇದೀಗ ಜಾಗತಿಕ ಮಟ್ಟದಲ್ಲಿ ಭಾರೀ ತಲ್ಲಣ ಸೃಷ್ಟಿಸಿದೆ. ಇನ್ನೂ ಡೆಲ್ಟಾವೈರಸ್‌ನ (Delta Virus) ಆಘಾತದಿಂದಲೇ ಚೇತರಿಸಿಕೊಳ್ಳದ ಆಫ್ರಿಕಾ (Africa) ಮತ್ತು ಯುರೋಪ್ (Europe) ದೇಶಗಳಲ್ಲೇ ಈ ಹೊಸ ತಳಿ ಕಾಣಿಸಿಕೊಂಡಿರುವುದು ಆತಂಕವನ್ನು ಮತ್ತಷ್ಟುಹೆಚ್ಚಿಸಿದೆ. ಹೀಗಾಗಿ ವಿಶ್ವದ ಹಲವಾರು ದೇಶಗಳು ಸೋಂಕು ಪತ್ತೆಯಾದ ದೇಶಗಳಿಗೆ ತೆರಳುವ ಮತ್ತು ಆ ದೇಶಗಳಿಂದ ಆಗಮಿಸುವ ವಿಮಾನಗಳ ಸಂಚಾರ ನಿಷೇಧಿಸುವ ನಿರ್ಧಾರ ಕೈಗೊಂಡಿವೆ. ಜೊತೆಗೆ ಆ ದೇಶಗಳಿಂದ ಜನರ ಆಗಮನಕ್ಕೂ ನಿಷೇಧ ಹೇರಿವೆ.
ಕೆಲ ದೇಶಗಳು ಆಫ್ರಿಕಾ ಪ್ರಯಾಣಿಕರಿಗೆ ಅವಕಾಶ ಕಲ್ಪಿಸಿವೆಯಾದರೂ 10 ದಿನಗಳ ಕ್ವಾರಂಟೈನ್ (Quarantine) ಸೇರಿದಂತೆ ತಾವು ವಿಧಿಸುವ ನಿಯಮಾವಳಿಗಳನ್ನು ಪಾಲಿಸುವಂತೆ ಕಠಿಣ ಸೂಚನೆ ನೀಡಿವೆ. ಮತ್ತೊಂದೆಡೆ ವೈರಸ್‌ನ ತೀವ್ರತೆ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಇಲ್ಲವಾದ ಕಾರಣ ಅನವಶ್ಯಕ ಆತಂಕ ಬೇಡ ಎಂದು ವಿಶ್ವ ಆರೋಗ್ಯ ಸಂಸ್ಥೆ ಸಲಹೆ ನೀಡಿದೆಯಾದರೂ, ಈ ಬಗ್ಗೆ ತುರ್ತು ಸಭೆ ಕರೆದಿದೆ. ಇನ್ನೊಂದೆಡೆ, ಹೊಸ ವೈರಸ್‌ನ ಆತಂಕದಿಂದ ಜಾಗತಿಕ ಷೇರುಪೇಟೆಗೆ ಭಾರೀ ಹೊಡೆತ ಬಿದ್ದಿದೆ. ಕಚ್ಚಾತೈಲದ ಬೆಲೆ ಕೂಡ ಶೇ.7ರಷ್ಟುಭಾರೀ ಪ್ರಮಾಣದಲ್ಲಿ ಕುಸಿದಿದೆ.
ಮತ್ತಷ್ಟುಹೊಸ ಪ್ರಕರಣ:
ಗುರುವಾರದ ವರದಿ ಅನ್ವಯ ದಕ್ಷಿಣ ಆಫ್ರಿಕಾದಲ್ಲಿ 6, ಬೋಟ್ಸ್‌ವಾನಾ ಮತ್ತು ಸಿಂಗಾಪುರದಲ್ಲಿ ತಲಾ 1 ಬೋಟ್ಸ್‌ವಾನಾ ತಳಿಯ ಸೋಂಕು ಪತ್ತೆಯಾಗಿತ್ತು. ಆದರೆ ಇದೀಗ ಆಫ್ರಿಕಾದಲ್ಲಿ ಪತ್ತೆಯಾದ ಪ್ರಕರಣಗಳ ಸಂಖ್ಯೆ 22ಕ್ಕೆ ಏರಿದೆ ಎಂದು ಸರ್ಕಾರ ಖಚಿತಪಡಿಸಿದೆ. ಇದರ ಜೊತೆಗೆ ಶುಕ್ರವಾರ ಬೆಲ್ಜಿಯಂ ಮತ್ತು ಇಸ್ರೇಲ್‌ನಲ್ಲೂ ತಲಾ ಒಂದು ಪ್ರಕರಣ ಪತ್ತೆಯಾಗಿದೆ. ಹೀಗಾಗಿ ಬಿ.1.1.529 ಹೆಸರಿನ ಹೊಸ ರೂಪಾಂತರಿಯಿಂದ ಸೋಂಕಿಗೆ ತುತ್ತಾದವರ ಸಂಖ್ಯೆ 26ಕ್ಕೆ ಏರಿದೆ.
Corona In Karnataka: ಒಂದೇ ಕಾಲೇಜಿನ 66 ವಿದ್ಯಾರ್ಥಿಗಳಿಗೆ ಕೊರೋನಾ, ಜನರಲ್ಲಿ ಮತ್ತೆ ಆತಂಕ!
ಭಾರತದಲ್ಲಿ ಪತ್ತೆ ಇಲ್ಲ:
ಭಾರತದಲ್ಲಿ ಕೋವಿಡ್ ವೈರಸ್‌ಗಳ ಜಿನೋಮ್ ಸ್ವೀಕ್ವೆನ್ಸಿಂಗ್ ನಡೆಸುವ ಸಂಸ್ಥೆಗಳ ಒಕ್ಕೂಟವಾದ ‘ಇನ್ಸಾಕಾಗ್’ ಇದುವರೆಗೂ ಭಾರತದಲ್ಲಿ ಹೊಸ ಮಾದರಿಯ ತಳಿ ಪತ್ತೆಯಾಗಿಲ್ಲ. ನಾವೂ ಈ ಬಗ್ಗೆ ತೀವ್ರ ನಿಗಾ ಇಟ್ಟಿದ್ದೇವೆ ಎಂದು ಹೇಳಿದೆ.
ಡಬ್ಲ್ಯುಎಚ್‌ಒ ತುರ್ತು ಸಭೆ:
ಈ ನಡುವೆ ಹೊಸ ರೂಪಾಂತರಿ ಕುರಿತು ಮುಂದಿನ ನಿರ್ಧಾರ ಕೈಗೊಳ್ಳುವ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ (World Health Organisation) ಶುಕ್ರವಾರ ತುರ್ತು ಸಭೆ ನಡೆಸಿದೆ. ಸಭೆಯಲ್ಲಿ ಹೊಸ ರೂಪಾಂತರಿಯನ್ನು ವೇರಿಯಂಟ್ ಆಫ್ ಇಂಟ್ರೆಸ್ಟ್ ಅಥವಾ ವೇರಿಯೆಂಟ್ ಆಫ್ ಕನ್ಸರ್ನ್ ಎಂದು ವಿಭಾಗಿಸುವ ಕುರಿತು ಚರ್ಚೆ ನಡೆದಿದೆ.
ದೇಶಗಳಿಂದ ನಿಷೇಧ:
ಬ್ರಿಟನ್, ಜರ್ಮನಿ, ಇಟಲಿ, ಚೆಕ್ ರಿಪಬ್ಲಿಕ್, ಸಿಂಗಾಪುರ, ಜಪಾನ್ ಸೇರಿದಂತೆ ಹಲವು ದೇಶಗಳು, ದಕ್ಷಿಣ ಆಫ್ರಿಕಾ ಮತ್ತು ಸುತ್ತಮುತ್ತಲಿನ 8 ದೇಶಗಳ ಜನರ ಆಗಮನ/ ನಿರ್ಗಮನಕ್ಕೆ ನಿಷೇಧ ಹೇರಿವೆ. ಜೊತೆಗೆ ವಿಮಾನ ಸಂಚಾರವನ್ನೂ ನಿಷೇಧಿಸುವ ನಿರ್ಧಾರಕ್ಕೆ ಬಂದಿವೆ.
Covid19: ಮತ್ತೆ ಏರಿಕೆ ಕಂಡ ಸೋಂಕಿತರ ಸಂಖ್ಯೆ: ಮನೆ ಬಾಗಿಲಿಗೇ ಬರಲಿದೆ 2ನೇ ಡೋಸ್
ಆತಂಕ ಏಕೆ?
ಇದು ಅತ್ಯಂತ ವೇಗವಾಗಿ ಹಬ್ಬುತ್ತದೆ. ಲಸಿಕೆಗೂ ಬಗ್ಗದು. ವೈರಸ್‌ನಲ್ಲಿ ಸ್ಪೈಕ್ ಪ್ರೋಟೀನ್‌ಗಳು (Strike protein) ಈಗಾಗಲೇ 10 ಬಾರಿ ರೂಪಾಂತರ ಕಂಡಿವೆ. ಇದು ಡೆಲ್ಟಾ, ಬೀಟಾ ಸೇರಿದಂತೆ ಯಾವುದೇ ರೂಪಾಂತರಿಗಿಂತ ಹೆಚ್ಚಿನ ಬದಲಾವಣೆ. ಹೀಗಾಗಿಯೇ ಜಗತ್ತಿನೆಲ್ಲೆಡೆ ಈ ಹೊಸ ತಳಿಯ ಬಗ್ಗೆ ಭಾರೀ ಆತಂಕ ವ್ಯಕ್ತವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ