
ಇಸ್ಲಾಮಾಬಾದ್/ಟೆಹ್ರಾನ್ : ಅಮೆರಿಕ-ಇರಾನ್ ನಡುವೆ ಬುಧವಾರ ಏರ್ಪಟ್ಟ 2 ವಾರಗಳ ತಾತ್ಕಾಲಿಕ ಕದನ ವಿರಾಮ ಕುರಿತ ಗೊಂದಲ ಗುರುವಾರವೂ ಮುಂದುವರಿದಿದೆ. ಈ ಗೊಂದಲಕ್ಕೆ ಕಾರಣ ಮಧ್ಯವರ್ತಿಯಾಗಿ ಕೆಲಸ ಮಾಡಿದ ಪಾಕಿಸ್ತಾನ ಎಂಬ ಆರೋಪ ಕೇಳಿ ಬರುತ್ತಿದೆ. ಡೀಲ್‌ನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್, 'ಕದನ ವಿರಾಮ ತಕ್ಷಣ ವಿಂದಲೇ ಜಾರಿಯಾಗಲಿದೆ. ಲೆಬನಾನ್ ಸೇರಿ ಇತರೆ ದೇಶಗಳಿಗೂ ಇದು ಅನ್ವಯವಾಗಲಿದೆ ಎಂದು ಘೋಷಿಸಿದ್ದರು. ಇದನ್ನೇ ನಂಬಿದ್ದ ಇರಾನ್, ಲೆಬನಾನ್‌ಗೂ ಕದನವಿರಾಮ ಅನ್ವಯ ಎಂದಿತ್ತು.
ಆದರೆ ಇದರ ಬೆನ್ನಲ್ಲೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು, ಕದನ ವಿರಾಮಕ್ಕೂ ಲೆಬನಾನ್ ಬಂಡುಕೋರರಿಗೂ ಯಾವುದೇ ಸಂಬಂಧ ಇಲ್ಲ ಎಂದಿದ್ದರು ಹಾಗೂ ಲೆಬನಾನ್ ಮೇಲೆ ಬುಧವಾರ ಇಸ್ರೇಲ್ ಕಂಡು ಕೇಳರಿಯದ ಕ್ಷಿಪಣಿ ದಾಳಿ ನಡೆಸಿತ್ತು. ಇದು 300 ಜನರ ಸಾವಿಗೆ ಕಾರಣವಾಗಿದೆ. ಇದರ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್, ಕದನ ವಿರಾಮ ಕೇವಲ ಇರಾನ್‌ಗೆ ಅನ್ವಯ. ಲೆಬನಾನ್‌ಗೆ ಇಲ್ಲ. ಬಹುಶಃ ಇರಾನ್ ಈ ವಿಚಾರದಲ್ಲಿ ಗೊಂದಲಕ್ಕೀಡಾಗಿದೆ' ಎಂದಿದ್ದರು.
ಈ ಗೊಂದಲಕ್ಕೆ ಮಾತುಕತೆ ವಹಿಸಿದ ಪಾಕಿಸ್ತಾನ ಕಾರಣ. ಇರಾನ್-ಅಮೆರಿಕದ ಪ್ರತಿನಿಧಿಗಳ ನಡುವೆ ಮಧ್ಯವರ್ತಿಯಾಗಿ ಪಾಕಿಸ್ತಾನ ಕೆಲಸ ಮಾಡಿತ್ತು. ಅದು ಕದನವಿರಾಮದ అంಶಗಳಿರುವ ಒಂದೇ ರೀತಿಯ ಪ್ರತಿಯನ್ನು ಉಭಯ ದೇಶಗಳಿಗೆ ನೀಡಿಲ್ಲ. ಅಮೆರಿಕಕ್ಕೆ ಒಂದು ರೀತಿಯ ಪ್ರತಿ ಹಾಗೂ ಇರಾನ್‌ಗೆ ಇನ್ನೊಂದು ರೀತಿಯ ಪ್ರತಿಯನ್ನು ನೀಡಿದೆ. ಇದು ಗೊಂದಲಕ್ಕೆ ಕಾರಣ ಎಂದು ಇರಾನಿ ಮಾಧ್ಯಮಗಳು ವರದಿ ಮಾಡಿವೆ.
ಹೀಗಾಗಿ ಕದನ ವಿರಾಮದ ಹೊಣೆಗಾರಿಕೆ ನಿಭಾಯಿಸುವಲ್ಲಿ ಪಾಕಿಸ್ತಾನ ವಿಫಲವಾಗಿದೆಯೇ ಎಂಬ ಪ್ರಶ್ನೆ ಇದೀಗ ಮೂಡಿದೆ. ಇದರ ಪರಿಣಾಮ, ಇಸ್ರೇಲ್ ಕದನ ವಿರಾಮ ಉಲ್ಲಂಘಿಸಿದೆ ಎಂದು ಆರೋಪಿಸಿರುವ ಇರಾನ್, ಹೋರ್ಮುಜ್ ಜಲಸಂಧಿ ಮುಚ್ಚಿದೆ ಹಾಗೂ 'ಕದನ ವಿರಾಮಕ್ಕೆ ಇತಿಶ್ರೀ ಹಾಕುವೆ' ಎಂದು ಬೆದರಿಕೆ ಹಾಕಿದೆ.
ಟೆಲ್ ಅವಿವ್: ಅಮೆರಿಕ-ಇರಾನ್ ಕದನ ವಿರಾಮವು ಲೆಬನಾನ್ ಅನ್ನು ಒಳಗೊಂಡಿಲ್ಲ ಎಂದಿದ್ದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಗುರುವಾರ ರಾತ್ರಿ ಕೊಂಚ ತಣ್ಣಗಾಗಿದ್ದು, ಲೆಬ ನಾನ್ ಸರ್ಕಾರದ ಜೊತೆ ಮಾತುಕತೆಗೆ ಸಿದ್ಧರಾಗಿದ್ದೇವೆ ಎಂದಿದ್ದಾರೆ. ಲೆಬನಾನ್ ಮೇಲೆ ಇಸ್ರೇಲ್ ಭೀಕರ ದಾಳಿ ನಡೆಸಿದ ಬೆನ್ನಲ್ಲೇ, ಅಲ್ಲಿನ ಪ್ರಧಾನಿ ನವಾಫ್ ಸಲಾಂ ಇಸ್ರೇಲ್ ಜತೆ ಮಾತುಕತೆಗೆ ಒಲವು ತೋರಿದ್ದರು. ಇದಕ್ಕೆ ನೆತನ್ಯಾಹು ಪ್ರತಿಕ್ರಿಯಿಸಿ, 'ಲೆಬನಾನ್ ಹಿಜ್ಜುಲ್ಲಾ ಉಗ್ರರನ್ನು ನಿಶ್ಯಸ್ತ್ರ ಮಾಡುವುದೇ ನಮ್ಮ ಗುರಿ. ಈ ನಿಟ್ಟಿನಲ್ಲಿ ಲೆಬನಾನ್ ಪ್ರಧಾನಿ ಮಾತುಕತೆಗೆ ಒಲವು ತೋರಿರುವುದನ್ನು ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ. ಮಾತುಕತೆ ಏಪ್ರಿಲ್ 14ರಿಂದ ವಾಷಿಂಗ್ಟನ್‌ನಲ್ಲಿ ನಡೆಯುವ ಸಾಧ್ಯತೆಯಿದೆ.
ಬೈರೂತ್: ಇರಾನ್ ಕದನ ವಿರಾಮ ಲೆಬನಾನ್‌ಗೆ ಅನ್ವಯಿಸಲ್ಲ ಎಂದು ಹೇಳಿದ್ದ ಇಸ್ರೇಲ್, ಲೆಬನಾನ್ ಮೇಲೆ ಮುಗಿಬಿದ್ದಿದ್ದು, ಹಿಜ್ಬುಲ್ಲಾ ಮುಖ್ಯಸ್ಥ ನಯೀಮ್ ಆಪ್ತನಾದ ಅಲಿ ಯೂಸುಫ್ ಹರ್ಷಿಯನ್ನು ಹತ್ಯೆ ಮಾಡಿದೆ. ಈ ಬಗ್ಗೆ ಸ್ವತಃ ಹೇಳಿಕೆ ನೀಡಿರುವ ಇಸ್ರೇಲ್ ಸೇನೆ, ಇಸ್ರೇಲ್ ರಕ್ಷಣಾ ಪಡೆ ಬೈರೂತ್ ಪ್ರದೇಶದ ಮೇಲೆ ದಾಳಿ ಮಾಡಿದೆ. ಈ ವೇಳೆ ಹಿಜ್ಜುಲ್ಲಾ ಮುಖ್ಯಸ್ಥ ನಯೀಮ್ ಖಾಸೆಮ್‌ನ ಆಪ್ತ ಕಾರ್ಯದರ್ಶಿಯಾಗಿದ್ದ ಆತನ ಸೋದರಳಿಯ ಅಲಿ ಯೂಸುಫ್ ಹರ್ಷಿಯನ್ನು ಹತ್ಯೆಗೈಯಲಾಗಿದೆ. ನಿಕಟ ಸಹವರ್ತಿ ಮತ್ತು ವೈಯಕ್ತಿಕ ಸಲಹೆಗಾರನಾಗಿದ್ದ ಮತ್ತು ಕಚೇರಿಯನ್ನು ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಂದು ಅದು ಹೇಳಿದೆ.
ಇದನ್ನೂ ಓದಿ: ಹೋರ್ಮುಜ್ ಮೂಲಕ ನಿತ್ಯ 15 ಹಡಗು ಸಾಗಲು ಇರಾನ್ ಅಸ್ತು: ಹೋರ್ಮುಜ್‌ನಲ್ಲಿ ಜಲಸ್ಫೋಟಕ ಇಟ್ಟಿದ್ದ ಇರಾನ್
ಲೆಬನಾನ್‌ನಲ್ಲಿ 300 ಬಲಿ
ಬೈರೂತ್: ಬುಧವಾರ ಲೆಬನಾನ್ ಮೇಲೆ ಇಸ್ರೇಲ್ ನಡೆಸಿದ ಭೀಕರ ದಾಳಿಯಲ್ಲಿ ಕನಿಷ್ಠ 300 ಮಂದಿ ಸಾವನ್ನಪ್ಪಿದ್ದು, 1000ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಇದು ಕಳೆದ 5 ವಾರಗಳಿಂದ ಲೆಬನಾನಿನ ಹಿಬ್ಬುಲ್ಲಾ ಮತ್ತು ಇಸ್ರೇಲ್ ನಡುವೆ ನಡೆದ ಯುದ್ಧದ ಸಂದರ್ಭದಲ್ಲಿ ಒಂದೇ ದಿನ ಸಾವನ್ನಪ್ಪಿದವರ ಅತ್ಯಧಿಕ ಸಂಖ್ಯೆಯಾಗಿದೆ.
3 ಪತ್ರಕರ್ತರ ಸಾವು
ಬೈರೂತ್: ಇಸ್ರೇಲ್ ಗಾಜಾದ ಮೇಲೆ ನಡೆಸಿದ ದಾಳಿಯಲ್ಲಿ ಅಲ್ ಜಝೀರಾ ಚಾನೆಲ್ ವರದಿಗಾರ ಹಾಗೂ ಲೆಬನಾನ್‌ನಲ್ಲಿ ನಡೆದ ದಾಳಿಯಲ್ಲಿ ಇಬ್ಬರು ಪತ್ರಕರ್ತರು ಸೇರಿ ಮೂವರು ಸಾವನ್ನಪ್ಪಿದ್ದಾರೆ. ಅಲ್ ಜಝೀರಾದ ಮೊಹಮ್ಮದ್ ವಿಶಾ, ಲೆಬನಾನ್‌ನಲ್ಲಿ ಒಬ್ಬ ಟೀವಿ ಚಾನೆಲ್ ನಿರೂಪಕಿ, ಒಬ್ಬ ವರದಿಗಾರ್ತಿ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಪಂಚರಾಜ್ಯ ಚುನಾವಣೆ: ಕೇರಳ, ಪುದುಚೇರಿ, ಅಸ್ಸಾಂನಲ್ಲಿ ದಾಖಲೆಯ ಮತದಾನ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ