
ವಾಷಿಂಗ್ಟನ್: ಕರ್ನಾಟಕದಲ್ಲಿ ಸ್ಟಿಂಗ್ ಆಪರೇಷನ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದರೆ, ಅತ್ತ ಅಮೆರಿಕವು ಹನಿಟ್ರ್ಯಾಪ್ನಿಂದ ಅಲ್ಲೋಲ ಕಲ್ಲೋಲವಾಗಿದೆ. ವಿಶ್ವದ ಪ್ರಮುಖ ಸೆಮಿಕಂಡಕ್ಟರ್ ಮತ್ತು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಕಂಪನಿಯಾದ ಎನ್ವಿಡಿಯಾ (NVIDIA) ದ ಸಹ-ಸ್ಥಾಪಕರು, ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಆಗಿರುವ ಚಿಪ್ ದೈತ್ಯ ಎಂದೇ ಫೇಮಸ್ ಆಗಿರುವ ಎನ್ವಿಡಿಯಾದ ಸಿಇಒ ಅಮೆರಿಕದ ಜೆನ್ಸನ್ ಹುವಾಂಗ್ ಈಗ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಚೀನಾ ಮಾಡಿದ ಕಿತಾಪತಿಗೆ ಅರಿಯದೇ ಸುಂದರಿಯ ಮೋಹದ ಜಾಲದೊಳಗೆ ಸಿಲುಕಿ ಈಗ ಒದ್ದಾಡುತ್ತಿರುವುದಾಗಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಅಷ್ಟಕ್ಕೂ ಈ ಹನಿಟ್ರ್ಯಾಪ್ ಮಾಡಿಸಿದ್ದು ಚೀನಾ. 2025 ರಲ್ಲಿ ಚೀನಾದ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸಿರುವ ಚಿಪ್ ನಿಷೇಧವನ್ನು ತಪ್ಪಿಸಲು ಚೀನಾ ಈ ಬುದ್ಧಿವಂತ ಮಾರ್ಗ ಕಂಡುಕೊಂಡಿದೆ. ಜೆನ್ಸನ್ ಮೇಲೆ ಕಣ್ಣಿಡುವುದಕ್ಕಾಗಿ ಚೀನಾ ತನ್ನ ಗುಪ್ತಚರ ಸಂಸ್ಥೆಯಿಂದ ಸುಂದರಿಯೊಬ್ಬಳನ್ನು ಕಳುಹಿಸಿ, ಜೆನ್ಸನ್ ಅವರಿಗೆ ಅರಿವಿಲ್ಲದೇ ಮೋಹದ ಬಲೆಯಲ್ಲಿ ಬೀಳಿಸಿ ಹನಿಟ್ರ್ಯಾಪ್ ಮಾಡಿರುವುದಾಗಿ ವರದಿಯಾಗಿದೆ.
ವರದಿಯ ಪ್ರಕಾರ, ಅಮೆರಿಕದ ಗುಪ್ತಚರ ಸಂಸ್ಥೆಗಳು ಈ ಹಿಂದೆ ಟ್ರಂಪ್ ಆಡಳಿತದಲ್ಲಿನ ನೀತಿ ನಿರೂಪಕರಿಗೆ ಈ ಪಿತೂರಿಯ ಬಗ್ಗೆ ಜ್ಞಾಪಕ ಪತ್ರದಲ್ಲಿ ತಿಳಿಸಿದ್ದವು ಎನ್ನಲಾಗಿದೆ. ಆದರೆ, ಈ ಬಗ್ಗೆ ಅವರು ಅಷ್ಟಾಗಿ ತಲೆ ಕೆಡಿಸಿಕೊಂಡಿರಲಿಲ್ಲ. ಅಷ್ಟಕ್ಕೂ, ಚೀನಾದ ರಾಜ್ಯ ಭದ್ರತಾ ಸಚಿವಾಲಯ (MSS) ಜೆನ್ಸನ್ ಮೇಲೆ ಕಣ್ಣಿಡಲು ಆಲಿಸ್ ಹುವಾಂಗ್ ಎಂಬ ರಹಸ್ಯ ಸುಂದರಿಯೊಬ್ಬರನ್ನು ಏಜೆಂಟ್ ಆಗಿ ನೇಮಿಸಿಕೊಂಡಿದೆ. ಆಲಿಸ್ ಸಿಂಗಪುರ ಮೂಲದ ಕಂಪೆನಿ ಮೆಗಾಸ್ಪೀಡ್‌ನಲ್ಲಿ ಹಿರಿಯ ಕಾರ್ಯನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದಳು. ಈ ಪ್ರೊಫೈಲ್‌ನ ಸೋಗಿನಲ್ಲಿ, ಈಕೆ ಎನ್‌ವಿಡಿಯಾ ಮುಖ್ಯಸ್ಥರನ್ನು ಸಂಪರ್ಕಿಸಿ ಅವರನ್ನು ಬಲೆಗೆ ಬೀಳಿಸಿದ್ದಾಳೆ!
ಅಮೆರಿಕ ಸರ್ಕಾರವು ಎನ್‌ವಿಡಿಯಾ, ತನ್ನ ಅತ್ಯಾಧುನಿಕ AI ಚಿಪ್‌ಗಳನ್ನು ಚೀನಾಕ್ಕೆ ಮಾರಾಟ ಮಾಡುವುದನ್ನು ನಿರ್ಬಂಧಿಸಿದೆ. ಅಮೆರಿಕ -ಚೀನಾ ತಂತ್ರಜ್ಞಾನ ಸ್ಪರ್ಧೆಯ ಮಧ್ಯೆ, ಎನ್ವಿಡಿಯಾದ ಚಿಪ್‌ಗಳು ಪ್ರಪಂಚದಾದ್ಯಂತ AI ವ್ಯವಸ್ಥೆಗಳಿಗೆ ಶಕ್ತಿ ತುಂಬುತ್ತಿವೆ. ಈ ಗುಪ್ತಚರ ಕಾರ್ಯಾಚರಣೆಯ ಮೂಲಕ, ಚೀನಾದ ಬೇಹುಗಾರಿಕೆ ಸಂಸ್ಥೆ ಅಮೆರಿಕದ AI ಚಿಪ್‌ಗಳ ಬಗ್ಗೆ ಆಂತರಿಕ ಮಾಹಿತಿಯನ್ನು ಸಂಗ್ರಹಿಸಲು ಬಯಸಿತ್ತು. ಹೆಚ್ಚುವರಿಯಾಗಿ, ನಿಷೇಧದ ಹೊರತಾಗಿಯೂ ಚೀನಾಕ್ಕೆ ಎನ್ವಿಡಿಯಾದ ಅತ್ಯಾಧುನಿಕ ಪ್ರೊಸೆಸರ್‌ಗಳನ್ನು ಪೂರೈಸಲು ಜೆನ್ಸನ್ ಹುವಾಂಗ್ ಅವರನ್ನು ದಾರಿ ತಪ್ಪಿಸುವುದು ಪ್ರಮುಖ ಗುರಿಯಾಗಿತ್ತು. ಅದಕ್ಕಾಗಿ ರಹಸ್ಯ ಏಜೆಂಟ್ ಅನ್ನು ಕಳುಹಿಸಿ ಬಲೆ ಬೀಳಿಸಲಾಗಿದೆ.
ಇದೀಗ ಇದು ಬಹಿರಂಗಗೊಂಡಿದೆ. ಅಮೆರಿಕದಲ್ಲಿ ಕೋಲಾಹಲ ಸೃಷ್ಟಿಯಾಗಿದೆ. ವಿಷಯದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು, ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿರುವ ಮೂರು ಪ್ರಭಾವಿ ಸಮಿತಿಗಳ ರಿಪಬ್ಲಿಕನ್ ನಾಯಕರು ಈ ತಿಂಗಳ ಕೊನೆಯಲ್ಲಿ ಜೆನ್ಸನ್ ಹುವಾಂಗ್ ಅವರನ್ನು ಕರೆಸಿದ್ದಾರೆ. ಆಲಿಸ್ ಹುವಾಂಗ್ ಅವರೊಂದಿಗಿನ ಸಂವಹನ ಮತ್ತು ಸಂಬಂಧದ ಬಗ್ಗೆ ಅವರನ್ನು ಪ್ರಶ್ನಿಸಲಾಗುವುದು ಎನ್ನಲಾಗಿದೆ.
ಸುಂದರಿ ಆಲಿಸ್ ಹುವಾಂಗ್ಳನ್ನು ಕಳುಹಿಸಿದ ಚೀನಾದ ರಾಜ್ಯ ಭದ್ರತಾ ಸಚಿವಾಲಯ (ಎಂಎಸ್ಎಸ್) ದೇಶದ ಉನ್ನತ ಗುಪ್ತಚರ ಸಂಸ್ಥೆಯಾಗಿದೆ. 1983 ರಲ್ಲಿ ಸ್ಥಾಪನೆಯಾದ ಈ ಸಂಸ್ಥೆ ದೇಶೀಯ ರಾಜಕೀಯ ಭದ್ರತೆ ಮತ್ತು ಅಂತರರಾಷ್ಟ್ರೀಯ ಗುಪ್ತಚರ ಎರಡನ್ನೂ ನಿರ್ವಹಿಸುತ್ತದೆ. ಯುಎಸ್ ಗುಪ್ತಚರ ಸಂಸ್ಥೆ, ಸಿಐಎಗೆ ಪ್ರಮುಖ ಪ್ರತಿಸ್ಪರ್ಧಿ ಎಂದು ಪರಿಗಣಿಸಲಾದ ಎಂಎಸ್ಎಸ್ ಹಲವಾರು ಪ್ರಮುಖ ಬೇಹುಗಾರಿಕೆ ಪ್ರಕರಣಗಳಲ್ಲಿ ಭಾಗಿಯಾಗಿದೆ. ಇತ್ತೀಚೆಗೆ, ಸಂಭಾವ್ಯ ಗುರಿಗಳನ್ನು ಗುರುತಿಸಲು ಮತ್ತು ಅವುಗಳನ್ನು ನಿರೂಪಿಸಲು ಸಂಸ್ಥೆಯು AI ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸುತ್ತಿದೆ. ಇದು ವಿಶ್ವಾದ್ಯಂತ ಲಕ್ಷಾಂತರ ಗುಪ್ತಚರ ಏಜೆಂಟ್‌ಗಳನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ