ಕೊರೋನಾದಿಂದ ಜನ ಹೇಗೆ ಸಾಯುತ್ತಾರೆಂಬುದು ಪತ್ತೆ| ಚೀನಾ ವಿಜ್ಞಾನಿಗಳಿಂದ ಸಂಪೂರ್ಣ ವಿವರ| ದೇಹಕ್ಕೆ ಕೋವಿಡ್ ವೈರಸ್ ಪ್ರವೇಶಿಸಿದರೆ ಏನೇನಾಗುತ್ತದೆ?
ಬೀಜಿಂಗ್(ಮೇ.14): ಕೊರೋನಾ ವೈರಸ್ ನಮ್ಮ ದೇಹದೊಳಗೆ ಪ್ರವೇಶಿಸಿದರೆ ಏನೇನಾಗುತ್ತದೆ ಮತ್ತು ಏಕೆ ಜನರು ಈ ವೈರಸ್‌ನಿಂದ ಸಾವನ್ನಪ್ಪುತ್ತಾರೆ ಎಂಬುದನ್ನು ಚೀನಾದ ವಿಜ್ಞಾನಿಗಳು ಶೋಧಿಸಿದ್ದಾರೆ. ಅವರ ಪ್ರಕಾರ, ನಮ್ಮ ದೇಹದಲ್ಲಿರುವ ರೋಗನಿರೋಧಕ ವ್ಯವಸ್ಥೆಯು ಕೊರೋನಾ ವೈರಸ್‌ಗೆ ಅತಿಯಾಗಿ ಪ್ರತಿಕ್ರಿಯಿಸುವುದೇ ಅಂತಿಮವಾಗಿ ಸಾವಿಗೆ ಕಾರಣವಾಗುತ್ತದೆ.
ದೇಹಕ್ಕೆ ಉಂಟಾಗುವ ಸೋಂಕುಗಳ ವಿರುದ್ಧ ಹೋರಾಡುವುದು ನಮ್ಮ ದೇಹದಲ್ಲಿನ ರೋಗನಿರೋಧಕ ವ್ಯವಸ್ಥೆಯ ಕೆಲಸ. ಆದರೆ, ಕೊರೋನಾ ವೈರಸ್ ವಿಷಯದಲ್ಲಿ ಈ ವ್ಯವಸ್ಥೆಯು ಅತಿಯಾಗಿ ಪ್ರತಿಕ್ರಿಯಿಸುತ್ತದೆ. ಆಗ ರಕ್ತದಲ್ಲಿ ಬಿಳಿ ಕಣಗಳು ವಿಪರೀತವಾಗಿ ವರ್ತಿಸುತ್ತವೆ. ಅದರಿಂದ ಸೈಟೋಕಿನ್ ಪ್ರೊಟೀನ್‌ಗಳು ಭಾರಿ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತವೆ. ಇದನ್ನು ಸೈಟೋಕಿನ್ ಸುಂಟರಗಾಳಿ ಎಂದು ಕರೆಯಲಾಗುತ್ತದೆ.
undefined
ದೇಶದಲ್ಲಿ ಯಾವ ರೀತಿ ವೈರಾಣು ಹಬ್ಬಿದೆ ಎಂದು ತಿಳಿಯಲು ಕೇಂದ್ರದ ಹೊಸ ಪ್ರಯತ್ನ!
ಇವು ರೋಗನಿರೋಧಕ ಕೋಶಗಳನ್ನು ಅತಿಯಾದ ಪ್ರಮಾಣದಲ್ಲಿ ಆಕರ್ಷಿಸುತ್ತವೆ. ಆ ರೋಗನಿರೋಧಕ ಕೋಶಗಳು ಶ್ವಾಸಕೋಶಕ್ಕೆ ಅತಿಕ್ರಮ ಪ್ರವೇಶ ಮಾಡುತ್ತವೆ. ಅದರಿಂದ ಶ್ವಾಸಕೋಶಕ್ಕೆ ಹಾನಿಯಾಗುತ್ತದೆ. ಹೀಗಾಗಿ ಹೆಚ್ಚಿನ ಕೊರೋನಾ ರೋಗಿಗಳು ಶ್ವಾಸಕೋಶದ ವೈಫಲ್ಯದಿಂದಲೇ ಸಾವನ್ನಪ್ಪುತ್ತಾರೆ ಎಂದು ಈ ಸಂಶೋಧನೆ ನಡೆಸಿದ ಚೀನಾದ ಜ್ಯೂನಿ ಮೆಡಿಕಲ್ ಯುನಿವರ್ಸಿಟಿಯ ವಿಜ್ಞಾನಿಗಳು ಪ್ರಬಂಧ ಪ್ರಕಟಿಸಿದ್ದಾರೆ.
ಸೈಟೋಕಿನ್ ಸುಂಟರಗಾಳಿಯಿಂದಾಗಿ ಅತಿಯಾದ ಜ್ವರ, ರಕ್ತನಾಳಗಳಲ್ಲಿ ಸೋರುವಿಕೆ ಮತ್ತು ದೇಹದೊಳಗೆ ರಕ್ತ ಹೆಪ್ಪುಗಟ್ಟುವಿಕೆ ಉಂಟಾಗುತ್ತದೆ. ಜೊತೆಗೆ, ರಕ್ತದೊತ್ತಡ ತೀವ್ರ ಪ್ರಮಾಣದಲ್ಲಿ ಇಳಿಕೆಯಾಗುವುದು, ದೇಹಕ್ಕೆ ಆಮ್ಲಜನಕದ ಕೊರತೆ ಮತ್ತು ಶ್ವಾಸಕೋಶದಲ್ಲಿ ದ್ರವ ತುಂಬಿಕೊಳ್ಳುವುದು ಮುಂತಾದ ಸಮಸ್ಯೆಯೂ ಉಂಟಾಗುತ್ತದೆ. ಸೈಟೋಕಿನ್ ಸುಂಟರಗಾಳಿಯು ಬಿಳಿ ರಕ್ತಕಣಗಳನ್ನು ದಾರಿತಪ್ಪಿಸಿ ಆರೋಗ್ಯಕರ ಕೋಶಗಳ ಮೇಲೆ ದಾಳಿ ನಡೆಸಲು ಪ್ರಚೋದಿಸುತ್ತದೆ. ಅದರಿಂದ ಶ್ವಾಸಕೋಶ, ಹೃದಯ, ಯಕೃತ್ತು, ಕರುಳು, ಕಿಡ್ನಿ ಮತ್ತು ಖಾಸಗಿ ಅಂಗಗಳ ವೈಫಲ್ಯವುಂಟಾಗುತ್ತದೆ. ಬಹು ಅಂಗಾಂಗಗಳ ವೈಫಲ್ಯದಿಂದ ಕೊನೆಗೆ ಸಾವು ಸಂಭವಿಸುತ್ತದೆ ಎಂದು ಪ್ರಬಂಧದಲ್ಲಿ ಹೇಳಲಾಗಿದೆ.