ಚೀನಾ ಬಾವಲಿಗಳಲ್ಲಿ 24 ಹೊಸ ಮಾದರಿ ಕೊರೋನಾ ವೈರಸ್‌ ಪತ್ತೆ!

By Kannadaprabha NewsFirst Published Jun 14, 2021, 8:27 AM IST
Highlights

* ಚೀನಾ ಬಾವಲಿಗಳಲ್ಲಿ 24 ಹೊಸ ಮಾದರಿ ಕೊರೋನಾ ವೈರಸ್‌ ಪತ್ತೆ

* ಈ ಪೈಕಿ 1 ಮಾದರಿ ಈಗ ಸಾಂಕ್ರಾಮಿಕವಾಗಿರುವ ಮಾದರಿಗೆ ಹೋಲಿಕೆ

* ಕೊರೋನಾ ಮೂಲದ ಪತ್ತೆ ಯತ್ನದ ನಡುವೆಯೇ ಹೊಸ ‘ಸಂಶೋಧನೆ’

ವಾಷಿಂಗ್ಟನ್‌(ಜೂ.14): 2019ರಲ್ಲಿ ಮೊದಲಿಗೆ ಚೀನಾದಲ್ಲಿ ಬೆಳಕಿಗೆ ಬಂದ ಕೊರೋನಾ ವೈರಸ್‌ನ ಮೂಲ ಪತ್ತೆಗೆ ಜಾಗತಿಕ ಮಟ್ಟದಲ್ಲಿ ದೊಡ್ಡ ಪ್ರಯತ್ನ ನಡೆದಿದೆ. ಕೊರೋನಾದ ಉಗಮ ಸ್ಥಾನ ಬಾವಲಿಗಳೋ ಅಥವಾ ಚೀನಾದ ವುಹಾನ್‌ ಪ್ರಯೋಗಾಲಯವೋ ಎಂಬ ಚರ್ಚೆ ನಡೆಯುತ್ತಲೇ ಇದೆ. ಇದರ ನಡುವೆಯೇ ಬಾವಲಿಗಳಲ್ಲಿ ಇನ್ನೂ 24 ಹೊಸ ಮಾದರಿಯ ಕೊರೋನಾ ವೈರಸ್‌ ಪತ್ತೆ ಮಾಡಿರುವುದಾಗಿ ಚೀನಾದ ಸಂಶೋಧಕರು ಹೇಳಿಕೊಂಡಿದ್ದಾರೆ.

‘ಸೆಲ್‌’ ಎಂಬ ಜರ್ನಲ್‌ನಲ್ಲಿ ಪ್ರಕಟವಾಗಿರುವ ವರದಿ ಅನ್ವಯ, ‘ಆಗ್ನೇಯ ಚೀನಾದ ಅರಣ್ಯದಲ್ಲಿನ ಬಾವಲಿಗಳಲ್ಲಿ 24 ಮಾದರಿಯ ಕೊರೋನಾದ ವಂಶವಾಹಿಗಳನ್ನು ಪತ್ತೆ ಮಾಡಲಾಗಿದ್ದು, ಈ ಪೈಕಿ ನಾಲ್ಕು ಸಾ​ರ್‍ಸ್- ಕೋವ್‌-2 ಮಾದರಿಯ ವಂಶವಾಹಿಗಳನ್ನು ಹೊಂದಿವೆ. 2019ರ ಮೇ ನಿಂದ 2020ರ ನವೆಂಬರ್‌ ಅವಧಿಯಲ್ಲಿ ಇವುಗಳನ್ನು ಸಂಗ್ರಹಿಸಲಾಗಿದೆ. ಬಾವಲಿಗಳ ಮಲ, ಮೂತ್ರ ಮತ್ತು ಗಂಟಲು ದ್ರವಗಳನ್ನು ಪರೀಕ್ಷಿಸಿ ಈ ಹೊಸ ಮಾದರಿ ಕೊರೋನಾ ವೈರಸ್‌ ಪತ್ತೆ ಮಾಡಲಾಗಿದೆ’ ಎಂದು ಸಂಶೋಧಕರು ಹೇಳಿದ್ದಾರೆ.

ಈ ಪೈಕಿ ಒಂದು ವೈರಸ್‌ನ ವಂಶವಾಹಿ, ಇದೀಗ ಜಗತ್ತಿನಾದ್ಯಂತ ಅನಾಹುತ ಸೃಷ್ಟಿಸಿರುವ ಸಾರ್ಸ್-ಕೋವ್‌-2-ವೈರಸ್‌ಗೆ ಅತ್ಯಂತ ನಿಕಟವಾಗಿದೆ. ಎರಡರ ನಡುವಿನ ಒಂದೇ ಒಂದು ಬದಲಾವಣೆ ಎಂದರೆ ವೈರಸ್‌ನಲ್ಲಿರುವ ಮುಳ್ಳಿನ ಆಕಾರದ ಪ್ರೋಟೀನ್‌ ರಚನೆಯಲ್ಲಿನ ಬದಲಾವಣೆ.

‘ಈ ಎಲ್ಲಾ ಸಂಶೋಧನೆಗಳು, ಸಾರ್ಸ್‌-ಕೋವ್‌-2ಗೆ ಸಂಬಧಿತ ವೈರಸ್‌ಗಳು ಇನ್ನೂ ಬಾವಲಿಗಳಲ್ಲಿ ಪ್ರಸರಣಗೊಳ್ಳುತ್ತಲೇ ಇದೆ ಮತ್ತು ಕೆಲ ಪ್ರದೇಶಗಳಲ್ಲಿ ಇದು ಇನ್ನಷ್ಟುವೇಗವಾಗಿ ಹಬ್ಬುವ ಸಾಧ್ಯತೆ ಇದೆ ಎಂಬುದನ್ನು ಸ್ಪಷ್ಟಪಡಿಸಿವೆ’ ಸಂಶೋಧಕರು ವರದಿಯಲ್ಲಿ ಹೇಳಿದ್ದಾರೆ.

click me!