ಚೀನಿ ಉದ್ಯಮಕ್ಕೆ ಪವರ್‌ಕಟ್‌ ಬಿಸಿ: ಪರಿಸರದ ಹಾನಿ ತಡೆಯಲು ಕ್ರಮ!

By Kannadaprabha NewsFirst Published Sep 28, 2021, 8:21 AM IST
Highlights

* ಪರಿಸರದ ಹಾನಿ ನಿಯಂತ್ರಣಕ್ಕೆ ಸರ್ಕಾರದ ಕ್ರಮ

* ಚೀನಿ ಉದ್ಯಮಕ್ಕೆ ಪವರ್‌ಕಟ್‌ ಬಿಸಿ

ಬೀಜಿಂಗ್‌(ಸೆ.28): ಪರಿಸರಕ್ಕೆ ಸಂಬಂಧಿಸಿದ ವಿಶ್ವಸಂಸ್ಥೆಯ ಸಭೆ, ಮುಂದಿನ ವರ್ಷದ ಬೀಜಿಂಗ್‌ ಚಳಿಗಾಲದ ಒಲಿಂಪಿಕ್ಸ್‌ಗೆ ಸಜ್ಜಾಗುತ್ತಿರುವ ಚೀನಾ, ಪರಿಸರ ಮಾಲಿನ್ಯ ಕಡಿಮೆ ಮಾಡಲು ದೇಶದ ಕೈಗಾರಿಕೆಗಳಿಗೆ ಪೂರೈಸುವ ವಿದ್ಯುತ್‌ ಪೂರೈಕೆ ಕಡಿತಗೊಳಿಸಿದೆ.

ಇದರಿಂದಾಗಿ ಭಾರತ ಸೇರಿದಂತೆ ಇನ್ನಿತರ ದೇಶಗಳಿಗೆ ಚೀನಾದಿಂದ ಪೂರೈಕೆಯಾಗಬೇಕಿರುವ ಮೊಬೈಲ್‌ ಸೇರಿದಂತೆ ಇನ್ನಿತರ ಎಲೆಕ್ಟ್ರಾನಿಕ್ಸ್‌ ವಸ್ತುಗಳ ಪೂರೈಕೆಯಲ್ಲಿ ಭಾರೀ ವ್ಯತ್ಯಯವಾಗುವ ಭೀತಿ ಶುರುವಾಗಿದೆ.

ಭಾರತದಲ್ಲಿ ದಸರಾ, ದೀಪಾವಳಿ ಮತ್ತು ವಿಶ್ವಾದ್ಯಂತ ಆಚರಿಸಲ್ಪಡುವ ಕ್ರಿಸ್‌ಮಸ್‌ ಸಂದರ್ಭದಲ್ಲಿ ಅಮೆಜಾನ್‌, ಫ್ಲಿಪ್‌ಕಾರ್ಟ್‌ ಸೇರಿದಂತೆ ಇನ್ನಿತರ ಆನ್‌ಲೈನ್‌ ಮಳಿಗೆಗಳಲ್ಲಿ ಗ್ರಾಹಕರಿಗೆ ಆಫರ್‌ಗಳನ್ನು ನೀಡುವ ಹಿನ್ನೆಲೆಯಲ್ಲಿ ವಸ್ತುಗಳ ಖರೀದಿಗೆ ಬೇಡಿಕೆ ಹೆಚ್ಚು.

ಆದರೆ ಇಂಥ ಸಂದರ್ಭದಲ್ಲಿ ಚೀನಾದ ಕೈಗಾರಿಕೆಗಳಿಗೆ ವಿದ್ಯುತ್‌ ಪೂರೈಕೆ ಕಡಿತಗೊಳಿಸಿದ್ದು, ಅಗತ್ಯವಿರುವಷ್ಟು ಮೊಬೈಲ್‌ ಸೇರಿದಂತೆ ಇನ್ನಿತರ ಎಲೆಕ್ಟ್ರಾನಿಕ್ಸ್‌ ವಸ್ತುಗಳ ಉತ್ಪಾದನೆ ಕಷ್ಟ ಸಾಧ್ಯ ಎಂದು ಇಲ್ಲಿನ ಸ್ಮಾರ್ಟ್‌ಫೋನ್‌ ಉತ್ಪಾದಕ ಸಂಸ್ಥೆಗಳು ಕೈ ಹಿಸುಕಿಕೊಂಡಿವೆ. ವಿದ್ಯುತ್‌ ಪೂರೈಕೆ ಸ್ಥಗಿತದಿಂದಾಗಿ ಶಾಂಘೈದ ಪಶ್ಚಿಮ ಭಾಗದಲ್ಲಿರುವ ವಿಶ್ವದ ಜನಪ್ರಿಯ ಆ್ಯಪಲ್‌ ಮೊಬೈಲ್‌ ಉತ್ಪಾದಕ ಘಟಕ ತಾತ್ಕಾಲಿಕವಾಗಿ ಬಂದ್‌ ಆಗಿದೆ.

Close

click me!