ಬೈಡೆನ್‌ಗೆ ಈಗಲೇ ಶುಭಾಶಯ ಹೇಳಲು ರಷ್ಯಾ, ಚೀನಾ ನಕಾರ| ಫಲಿತಾಂಶ ಅಧಿಕೃತವಾಗಿಲ್ಲ, ಈಗಲೇ ಶುಭ ಕೋರಲ್ಲ| ಉಭಯ ದೇಶಗಳಿಂದಲೂ ಹೇಳಿಕೆ
ಬೀಜಿಂಗ್(ನ.10): ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಡೆಮಾಕ್ರೆಟಿಕ್ ಪಕ್ಷದ ಜೋ ಬೈಡೆನ್ ಹಾಗೂ ನಿಯೋಜಿತ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರಿಗೆ ಈಗಲೇ ಶುಭಾಶಯ ಕೋರಲು ರಷ್ಯಾ ಹಾಗೂ ಚೀನಾ ನಿರಾಕರಿಸಿವೆ.
ಭಾರತವೂ ಸೇರಿದಂತೆ ಬಹುತೇಕ ಎಲ್ಲಾ ದೇಶಗಳು ಭಾವಿ ಅಧ್ಯಕ್ಷರಿಗೆ ಶುಭ ಹಾರೈಸಿದ್ದರೂ ಚೀನಾ, ರಷ್ಯಾ, ಟರ್ಕಿ, ಮೆಕ್ಸಿಕೋ ಸೇರಿದಂತೆ ಕೆಲವೇ ದೇಶಗಳು ಇನ್ನೂ ಶುಭ ಹಾರೈಸಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿರುವ ರಷ್ಯಾ, ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಸಂಬಂಧಿಸಿದ ಕಾನೂನು ಸವಾಲುಗಳು ಇತ್ಯರ್ಥವಾಗುವವರೆಗೂ ಹಾಗೂ ಫಲಿತಾಂಶ ಅಧಿಕೃತವಾಗಿ ಘೋಷಣೆಯಾಗುವವರೆಗೂ ಅಭಿನಂದನೆ ತಿಳಿಸುವುದಿಲ್ಲ ಎಂದು ಹೇಳಿದೆ.
2016ರಲ್ಲಿ ಟ್ರಂಪ್ ಅವರು ಆಯ್ಕೆಯಾದಾಗ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಟ್ರಂಪ್‌ಗೆ ಶುಭಾಶಯ ತಿಳಿಸಿದ್ದರು. ಆದರೆ ಆ ವೇಳೆ ಟ್ರಂಪ್ ಎದುರು ಸ್ಪರ್ಧಿಸಿದ್ದ ಹಿಲರಿ ಅವರು ಸೋಲು ಒಪ್ಪಿಕೊಂಡಿದ್ದರು. ಆದರೆ ಈ ಬಾರಿ ಪರಿಸ್ಥಿತಿ ಭಿನ್ನವಾಗಿದೆ ಎಂದು ಪುಟಿನ್ ಅವರ ವಕ್ತಾರ ಡಮಿಟ್ರಿ ಪೆಸ್ಕೋವ್ ತಿಳಿಸಿದ್ದಾರೆ.
‘ಬೈಡೆನ್ ತಾವು ಗೆದ್ದಿರುವುದಾಗಿ ಘೋಷಿಸಿಕೊಂಡಿದ್ದಾರೆ. ಆದರೆ, ಅದನ್ನು ಕಾನೂನುಬದ್ಧವಾಗಿ ಅಮೆರಿಕ ಇನ್ನೂ ಪ್ರಕಟಿಸಿಲ್ಲ. ಹೀಗಾಗಿ ಈಗಲೇ ಅಭಿನಂದಿಸುವುದಿಲ್ಲ. ನಾವು ಅಂತಾರಾಷ್ಟ್ರೀಯ ಸಂಪ್ರದಾಯಗಳನ್ನು ಪಾಲಿಸುತ್ತೇವೆ’ ಎಂದು ಚೀನಾದ ವಿದೇಶಾಂಗ ಇಲಾಖೆ ತಿಳಿಸಿದೆ.