Russia Ukraine War: ರಷ್ಯಾ ಪರ ಇದ್ದ ಚೀನಾದಿಂದ ಈಗ ಉಕ್ರೇನ್‌ ಪರ ಬ್ಯಾಟಿಂಗ್‌

By Kannadaprabha News  |  First Published Mar 3, 2022, 9:29 AM IST

*ಮಾರ್ಚ್‌ 7, 8ಕ್ಕೆ ಅಂತಾರಾಷ್ಟ್ರೀಯ ಕೋರ್ಟಲ್ಲಿ ವಿಚಾರಣೆ
*ಅಲ್ಜೀರಿಯಾ ಪಾಕ್‌ ದೂತಾವಾಸ ಟ್ವೀಟರ್‌ ಖಾತೆ ಹ್ಯಾಕ್‌
*ಉಕ್ರೇನ್‌ ಸೇನೆ ಸೇರಿದ ಒಲಿಂಪಿಕ್‌ ಪದಕ ವಿಜೇತ ಅಥ್ಲೀಟ್ಸ್‌
*ರಷ್ಯಾ ಪರ ಇದ್ದ ಚೀನಾದಿಂದ ಈಗ ಉಕ್ರೇನ್‌ ಪರ ಬ್ಯಾಟಿಂಗ್‌!
 


ರಷ್ಯಾ ಪರ ಇದ್ದ ಚೀನಾದಿಂದ ಈಗ ಉಕ್ರೇನ್‌ ಪರ ಬ್ಯಾಟಿಂಗ್‌!: ಯುದ್ಧಕ್ಕೆ ಸಂಬಂಧಿಸಿದಂತೆ ಈವರೆಗೆ ರಷ್ಯಾ ಪರ ಮಾತನಾಡುತ್ತಿದ್ದ ಚೀನಾ ಈಗ ವರಸೆ ಬದಲಿಸಿದೆ. ಯುದ್ಧ ಸಾರಿರುವ ರಷ್ಯಾ ಕ್ರಮಗಳಿಂದಾಗಿ ಉಕ್ರೇನ್‌ ನಾಗರಿಕರಿಗೆ ಹಾನಿಯಾಗುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಚೀನಾ ವಿದೇಶಾಂಗ ಸಚಿವ ವಾಂಗ್‌ ಯಿ ಉಕ್ರೇನಿನ ವಿದೇಶಾಂಗ ಸಚಿವ ಡಿಮೆಟ್ರೋ ಕುಲೆಬಾ ಅವರಿಗೆ ಕರೆ ಮಾಡಿದ್ದಾರೆ. ಉಕ್ರೇನ್‌-ರಷ್ಯಾ ಯುದ್ಧ ತೀವ್ರಗೊಳ್ಳದಂತೆ ತಡೆಯುವ ಭರವಸೆ ನೀಡಿದ್ದಾರೆ.

ಅಲ್ಲದೆ, ಚೀನಾ ಎಂದಿಗೂ ಎಲ್ಲಾ ದೇಶಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯ ಗೌರವವನ್ನು ಎತ್ತಿಹಿಡಿಯುತ್ತದೆ. ಸಂಧಾನದ ಮೂಲಕ ಬಿಕ್ಕಟ್ಟಿಗೆ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಉಕ್ರೇನ್‌ ಮತ್ತು ರಷ್ಯಾಕ್ಕೆ ಕರೆ ನೀಡಿದ್ದಾರೆ.

Latest Videos

undefined

ಯುದ್ಧವು ವಿಸ್ತರಿಸುತ್ತಲೇ ಇರುವುದರಿಂದ, ಸಂಘರ್ಷವು ಉಲ್ಬಣಗೊಳ್ಳದಂತೆ ಪರಿಸ್ಥಿತಿಯನ್ನು ಸರಾಗಗೊಳಿಸುವುದು ಅದರಲ್ಲೂ ವಿಶೇಷವಾಗಿ ನಾಗರಿಕರಿಗೆ ಹಾನಿಯಾಗದಂತೆ ತಡೆಯುವುದು ಮತ್ತು ಸಮಯಕ್ಕೆ ಸರಿಯಾಗಿ ಮಾನವೀಯ ನೆರವು ಒದಗಿಸುವುದು ನಮ್ಮ ಧ್ಯೇಯ ಎಂದು ಹೇಳಿದ್ದಾರೆ.

ಇದನ್ನೂ ಓದಿ: Russia Ukraine War: ಸರ್ವಾಧಿಕಾರಿಗಳು ಬೆಲೆ ತೆರಲಿದ್ದಾರೆ: ಪುಟಿನ್‌ಗೆ ಬೈಡೆನ್‌ ಎಚ್ಚರಿಕೆ!

ನಂತರ ಕುಲೆಬಾ ಅವರು ಮಾತನಾಡಿ, ಚೀನಾದೊಂದಿಗೆ ಸಂವಹನವನ್ನು ಬಲಪಡಿಸಲು ಉಕ್ರೇನ್‌ ಸಿದ್ಧವಾಗಿದೆ ಮತ್ತು ಕದನ ವಿರಾಮ ಘೋಷಿಸುವಂತೆ ಚೀನಾ ಮಧ್ಯಸ್ಥಿಕೆ ವಹಿಸಬೇಕು ಎಂದು ಮನವಿ ಮಾಡಿದರು.ಈ ನಡುವೆ ಚೀನಾ ಮತ್ತು ಜಾಗತೀಕರಣ ನೀತಿ ಕೇಂದ್ರ ಸಂಸ್ಥಾಪಕ ಹೆನ್ರಿ ವಾಂಗ್‌ ಹುಯಾವೋ, ‘ಉಕ್ರೇನ್‌ ಮತ್ತು ರಷ್ಯಾ ಎರಡೂ ಮಧಸ್ಥಿಕೆ ಬಯಸಿದರೆ ಬಹುಶಃ ಚೀನಾ ಸಂಧಾನದಲ್ಲಿ ಮಧ್ಯಪ್ರವೇಶ ಮಾಡಬಹುದು’ ಎಂದು ತಿಳಿಸಿದ್ದಾರೆ.

ಮಾರ್ಚ್‌ 7, 8ಕ್ಕೆ ಅಂತಾರಾಷ್ಟ್ರೀಯ ಕೋರ್ಟಲ್ಲಿ ವಿಚಾರಣೆ: ಉಕ್ರೇನ್‌ ಮೇಲೆ ದಾಳಿ ನಡೆಸಿರುವ ರಷ್ಯಾಗೆ ಯುದ್ಧ ನಿಲ್ಲಿಸುವಂತೆ ಆದೇಶ ನೀಡಬೇಕು ಎಂದು ಉಕ್ರೇನ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆ ಅಂತಾರಾಷ್ಟ್ರೀಯ ನ್ಯಾಯಾಲಯಲ್ಲಿ ಮಾ.7 ಮತ್ತು 8ರಂದು ನಡೆಯಲಿದೆ. ಈ ವಿಚಾರಣೆಯನ್ನು ಭೌತಿಕ ಹಾಗೂ ಆನ್ಲೈನ್‌ 2 ವಿಧಾನದಲ್ಲೂ ನಡೆಸುವುದಾಗಿ ಮುಖ್ಯ ನ್ಯಾಯಾಧೀಶ ಜೆ.ಇ. ಡೊನೊಘ್ಯೂ ಹೇಳಿದ್ದಾರೆ.

ರಷ್ಯಾ ಉಕ್ರೇನ್‌ ಮೇಲೆ ನಡೆಸಿರುವ ನರಮೇಧ ಯುದ್ಧಾಪರಾಧವಾಗಿದೆ. ರಷ್ಯಾಗೆ ಯುದ್ಧ ನಿಲ್ಲಿಸುವಂತೆ ಸೂಚನೆ ನೀಡಬೇಕು. ರಷ್ಯಾ ನಡೆಸಿರುವ ಕೃತ್ಯಕ್ಕೆ ಛೀಮಾರಿ ಹಾಕಬೇಕು ಎಂದು ಕೋರಿ ಉಕ್ರೇನ್‌ ಅರ್ಜಿ ಸಲ್ಲಿಸಿತ್ತು. ‘ಉಕ್ರೇನ್‌ ಸಲ್ಲಿಸಿರುವ ಈ ಅರ್ಜಿಯ ವಿಚಾರಣೆಯನ್ನು ಮಾ.7 ಮತ್ತು 8ರಂದು ನಡೆಸಲಾಗುವುದು. ಕೋರ್ಟ್‌ ನೀಡುವ ಆದೇಶದಂತೆ ರಷ್ಯಾ ನಡೆದುಕೊಳ್ಳಬೇಕು’ ಎಂದು ಕೋರ್ಟ್‌ನ ಪ್ರಕಟಣೆ ತಿಳಿಸಿದೆ.

ರಷ್ಯಾ ವಿದೇಶಾಂಗ ಸಚಿವರ ಭಾಷಣದ 100 ರಾಯಭಾರಿಗಳ ಸಭಾತ್ಯಾಗ: ವಿಶ್ವಸಂಸ್ಥೆಯಲ್ಲಿ ರಷ್ಯಾದ ವಿದೇಶಾಂಗ ಸಚಿವ ಸೆರ್ಗೀ ಲಾವ್ರೋವ್‌ ಭಾಷಣ ಆರಂಭಿಸುತ್ತಿದ್ದಂತೆ 40 ದೇಶಗಳ ನೂರಕ್ಕೂ ಹೆಚ್ಚು ರಾಯಭಾರಿಗಳು ಸಭೆಯಿಂದ ಹೊರನಡೆದಿದ್ದಾರೆ. ಉಕ್ರೇನ್‌ ಮೇಲಿನ ರಷ್ಯಾ ದಾಳಿಗೆ ವಿರೋಧ ತೋರಿಸಲು ಈ ರೀತಿ ನಡೆದುಕೊಂಡಿದ್ದಾರೆ. ಐರೋಪ್ಯ ಒಕ್ಕೂಟ, ಅಮೆರಿಕ, ಬ್ರಿಟನ್‌, ಜಪಾನ್‌ ಸೇರಿದಂತೆ ಹಲವು ಪ್ರಮುಖ ದೇಶಗಳ ರಾಯಭಾರಿಗಳು ಸಭೆಯನ್ನು ತೊರೆದರು. ಸಿರಿಯಾ, ಚೀನಾ ಮತ್ತು ವೆನಿಜುವೆಲಾದ ರಾಯಭಾರಿಗಳು ಮಾತ್ರ ಸಭೆಯಲ್ಲಿ ಭಾಗವಹಿಸಿದರು.

ಇದನ್ನೂ ಓದಿ: Russia Ukraine War: ಭಾರತೀಯರ ರಕ್ಷಣೆಗೆ ರಷ್ಯಾದಿಂದಲೇ ಸಾಥ್‌: ನಾಯಿಯೊಂದಿಗೆ ಭಾರತಕ್ಕೆ ಮರಳಿದ ವಿದ್ಯಾರ್ಥಿ!

ಉಕ್ರೇನ್‌ಗೆ ಬೆಂಬಲ ಸೂಚಿಸಿದ ಎಲ್ಲಾ ದೇಶಗಳಿಗೂ ಉಕ್ರೇನ್‌ನ ರಾಯಭಾರಿ ಯೆವ್ಹೆನಿಯಾ ಫಿಲಿಪೆಂಕೋ ಧನ್ಯವಾದ ಅರ್ಪಿಸಿದ್ದಾರೆ. ‘ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಉಕ್ರೇನ್‌ಗೆ ಈ ಮಟ್ಟಿಗಿನ ಬೆಂಬಲ ಸೂಚಿಸಿರುವುದಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ. ಐರೋಪ್ಯ ಒಕ್ಕೂಟ ರಷ್ಯಾದ ವಿಮಾನಗಳಿಗೆ ನಿಷೇಧ ಹೇರಿರುವುದರಿಂದ ಲಾವ್ರೋವ್‌ ರಿಮೋಟ್‌ ಮೂಲಕ ವಿಶ್ವಸಂಸ್ಥೆಯ ಮಾನವ ಹಕ್ಕು ಆಯೋಗದೊಂದಿಗೆ ಮಾತನಾಡಿದರು.

ಅಲ್ಜೀರಿಯಾ ಪಾಕ್‌ ದೂತಾವಾಸ ಟ್ವೀಟರ್‌ ಖಾತೆ ಹ್ಯಾಕ್‌: ಅಲ್ಜೀರಿಯಾದಲ್ಲಿರುವ ಪಾಕಿಸ್ತಾನಿ ರಾಯಭಾರ ಕಚೇರಿಯ ಟ್ವೀಟರ್‌, ಫೆಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂ ಖಾತೆಗಳು ಹ್ಯಾಕ್‌ ಆದ ಘಟನೆ ಬುಧವಾರ ನಡೆದಿದೆ. ಈ ಜಾಲತಾಣಗಳಲ್ಲಿ ‘ಯುದ್ಧ ಪೀಡಿತ ಉಕ್ರೇನ್‌ನಿಂದ ಯಾವುದೇ ಪಾಕಿಸ್ತಾನಿ ಪ್ರಜೆಗಳನ್ನು ಸ್ಥಳಾಂತರಿಸಿಲ್ಲ ಮತ್ತು ರಾಯಭಾರ ಕಚೇರಿಯಲ್ಲಿ ತನ್ನ ಉದ್ಯೋಗಿಗಳಿಗೆ ವೇತನ ಪಾವತಿಸಲೂ ಹಣವಿಲ್ಲದಂತಾಗಿದೆ. 

ಪಾಕಿಸ್ತಾನಿ ಪ್ರಜೆಗಳು ಉಕ್ರೇನಿನ ಗಡಿ ದಾಟಲು ಭಾರತದ ಧ್ವಜವನ್ನು ಬಳಸುತ್ತಿದ್ದರೆ ಕಚೇರಿಯು ನಿಧಿಗಾಗಿ ಭಾರತವನ್ನೇ ಆಶಿಸಲಿದೆ’ ಎಂದು ಪೋಸ್ಟ್‌ ಮಾಡಲಾಗಿತ್ತು. ಈ ಬೆನ್ನಲ್ಲೇ ಟ್ವೀಟ್‌ ಮೂಲಕ ಪ್ರತಿಕ್ರಿಯಿಸಿರುವ ವಿದೇಶಿ ಇಲಾಖೆ ವಕ್ತಾರರು ‘ಇತ್ತೀಚೆಗೆ ಈ ಸಾಮಾಜಿಕ ಜಾಲತಾಣಗಳಿಂದ ಅಪ್ಲೋಡ್‌ ಮಾಡಲಾಗಿರುವ ಪೋಸ್ಟ್‌ಗಳು ರಾಯಭಾರ ಕಚೇರಿಯ ಅಧಿಕೃತ ಪೋಸ್ಟ್‌ಗಳಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: Ukraine Crisis: ತನ್ನ ಕೈಗೊಂಬೆ ವಿಕ್ಟರ್‌ಗೆ ಉಕ್ರೇನ್‌ ಅಧ್ಯಕ್ಷ ಗಾದಿ ನೀಡಲು ರಷ್ಯಾ ಪ್ಲ್ಯಾನ್‌

ಉಕ್ರೇನ್‌ ಸೇನೆ ಸೇರಿದ ಒಲಿಂಪಿಕ್‌ ಪದಕ ವಿಜೇತ ಅಥ್ಲೀಟ್ಸ್‌: ಉಕ್ರೇನ್‌-ರಷ್ಯಾ ಯುದ್ಧ ಆರಂಭ ಆಗುತ್ತಿದ್ದಂತೆಯೇ ಕೆಲ ಉಕ್ರೇನಿ ಕ್ರೀಡಾಪಟುಗಳು ದೇಶಕ್ಕಾಗಿ ಹೋರಾಡಲು ಸೇನೆ ಸೇರಿದ್ದಾರೆ. 2 ವಾರಗಳ ಹಿಂದೆ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಉಕ್ರೇನ್‌ನ ಅಥ್ಲೀಟ್‌ ಡಿಮಿಟ್ರೋ ಪಿದ್ರುಚ್ನೈ ಸೇರಿದಂತೆ ಹಲವಾರು ಅಥ್ಲೀಟ್‌ಗಳು ಉಕ್ರೇನ್‌ ಸೇನೆಗೆ ಸೇರ್ಪಡೆಯಾಗಿದ್ದಾರೆ.

3 ಬಾರಿ ಒಲಿಂಪಿಕ್‌ ಪದಕ ಗೆದ್ದಿರುವ ಬೈಯತ್ಲಾನ್‌ ಚಾಂಪಿಯನ್‌ ಪಿದ್ರುಚ್ನೈ ಕಳೆದ ವಾರವಷ್ಟೇ ಬೀಜಿಂಗ್‌ನಿಂದ ಸ್ವದೇಶಕ್ಕೆ ಮರಳಿದ್ದರು. ‘ಪ್ರಸ್ತುತ ನಾನು ಉಕ್ರೇನ್‌ನಲ್ಲಿದ್ದೇನೆ. ದೇಶಸೇವೆ ಮಾಡುವುದಕ್ಕಾಗಿ ರಾಷ್ಟ್ರೀಯ ಸೇನೆಗೆ ಸೇರ್ಪಡೆಯಾಗಿದ್ದೇನೆ ಎಂದು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ.

click me!