ನೇಪಾಳದಲ್ಲೂ ಭೂಮಿ ಅತಿಕ್ರಮಿಸಿದ ಚೀನಾ!

By Kannadaprabha NewsFirst Published Nov 4, 2020, 5:30 AM IST
Highlights

ನೇಪಾಳದಲ್ಲೂ ಭೂಮಿ ಅತಿಕ್ರಮಿಸಿದ ಚೀನಾ!|  ಗಡಿ ಕಂಬ ಕಿತ್ತು 150 ಹೆಕ್ಟೇರ್‌ಗೂ ಹೆಚ್ಚು ಕಬಳಿಕೆ| ನದಿಯ ಹರಿವು ತಿರುಗಿಸಿ ನೈಸರ್ಗಿಕ ಗಡಿ ಬದಲು| 

ಕಾಠ್ಮಂಡು(ನ.04): ನೇಪಾಳದ ಸ್ನೇಹ ಸಂಪಾದಿಸಲು ಸಿಹಿಯಾದ ಮಾತನಾಡುತ್ತಿದ್ದ ಚೀನಾ ಇದೀಗ ನೇಪಾಳದ ಗಡಿ ಜಿಲ್ಲೆಗಳಲ್ಲೇ 150 ಹೆಕ್ಟೇರ್‌ಗೂ ಹೆಚ್ಚು ಭೂಮಿಯನ್ನು ಕಬಳಿಸಿರುವ ಸಂಗತಿ ಬೆಳಕಿಗೆ ಬಂದಿದೆ. ಇದು ಇತ್ತೀಚಿನ ವರ್ಷದಲ್ಲಿ ಸ್ನೇಹಿತ ರಾಷ್ಟ್ರಗಳಾಗಿ ಮಾರ್ಪಟ್ಟಿರುವ ನೇಪಾಳ-ಚೀನಾದ ನಡುವೆ ಗಡಿ ಬಿಕ್ಕಟ್ಟು ಭುಗಿಲೇಳುವುದರ ಮುನ್ಸೂಚನೆ ಎಂದು ಹೇಳಲಾಗುತ್ತಿದೆ.

ಇತ್ತೀಚೆಗಷ್ಟೇ ನೇಪಾಳದ ಐದು ಗಡಿ ಜಿಲ್ಲೆಗಳಲ್ಲಿ ಚೀನಾದ ಸೇನೆ ಸಾಕಷ್ಟುಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಭಾರತದ ಗುಪ್ತಚರ ದಳಗಳು ಭಾರತ ಸರ್ಕಾರಕ್ಕೆ ವರದಿ ನೀಡಿದ್ದವು. ಅದರ ಬೆನ್ನಲ್ಲೇ ಈಗ ಬ್ರಿಟನ್ನಿನ ಟೆಲಿಗ್ರಾಫ್‌ ಪತ್ರಿಕೆ ಚೀನಾದ ಈ ದುಸ್ಸಾಹಸವನ್ನು ವಿಸ್ತೃತವಾಗಿ ವರದಿ ಮಾಡಿದೆ. ಕಾವಲು ಇಲ್ಲದ ಗಡಿ ಭಾಗಗಳಲ್ಲಿ ಗುರುತಿನ ಕಂಬಗಳನ್ನೇ ಚೀನಾದ ಸೈನಿಕರು ಕಿತ್ತು ನೇಪಾಳದೊಳಗೆ ತಂದು ನೆಟ್ಟಿದ್ದಾರೆ. ಅಷ್ಟೇ ಅಲ್ಲದೆ, ಗಡಿಯನ್ನು ಒತ್ತುವರಿ ಮಾಡಿಕೊಂಡು ನೇಪಾಳದ ಭಾಗದೊಳಗೆ ತಮ್ಮ ಸೇನೆಗೆ ಸಂಬಂಧಿಸಿದ ಕಟ್ಟಡಗಳನ್ನು ನಿರ್ಮಿಸುತ್ತಿದ್ದಾರೆ ಎಂದು ವರದಿ ಹೇಳಿದೆ.

ಹುಮ್ಲಾ ಜಿಲ್ಲೆಯಲ್ಲಿ ಲಿಮಿ ಕಣಿವೆ ಮತ್ತು ಹಿಲ್ಸಾ ಎಂಬಲ್ಲಿ ಚೀನಾದ ಯೋಧರು ನೇಪಾಳದ ಭೂಭಾಗ ಕಬಳಿಸಿ ಕಲ್ಲಿನ ಕಂಬಗಳನ್ನು ಕಿತ್ತು ನೇಪಾಳದೊಳಗೆ ನೆಟ್ಟಿದ್ದಾರೆ. ಅಲ್ಲಿ ಸೇನಾ ನೆಲೆಯನ್ನೂ ನಿರ್ಮಿಸುತ್ತಿದ್ದಾರೆ. ಅದೇ ರೀತಿ, ನೇಪಾಳದ ಗೋರ್ಖಾ ಜಿಲ್ಲೆಯಲ್ಲೂ ಚೀನಿ ಸೈನಿಕರು ಗಡಿ ಕಂಬಗಳನ್ನು ಸ್ಥಾನಪಲ್ಲಟ ಮಾಡಿದ್ದಾರೆ. ಹಾಗೆಯೇ ರಸುವಾ, ಸಿಂಧುಪಲ್ಚೌಕ್‌ ಹಾಗೂ ಸಂಕುವಾಸಭಾ ಜಿಲ್ಲೆಗಳಲ್ಲಿ ಟಿಬೆಟ್‌ ಸ್ವಾಯತ್ತ ಪ್ರದೇಶದ ಚೀನಿ ಎಂಜಿನಿಯರ್‌ಗಳು ನೈಸರ್ಗಿಕ ಗಡಿಯಂತಿರುವ ನದಿಯ ಹರಿವನ್ನೇ ಬದಲಿಸಿದ್ದಾರೆ. ಈ ಕುರಿತು ನೇಪಾಳದ ರಾಜಕೀಯ ಪಕ್ಷಗಳಿಗೂ ಅರಿವಿದೆ. ಅಲ್ಲದೆ, ನೇಪಾಳದ ಕೆಲ ಸರ್ಕಾರಿ ಏಜೆನ್ಸಿಗಳು ಸರ್ಕಾರಕ್ಕೂ ವರದಿ ನೀಡಿವೆ. ಆದರೆ, ಚೀನಾದ ಭೀತಿಯಿಂದ ನೇಪಾಳ ಸರ್ಕಾರ ಸುಮ್ಮನಿದೆ ಎಂದು ಹೇಳಲಾಗುತ್ತಿದೆ.

‘ಚೀನಾದವರು ಏಕೆ ಪುಟ್ಟನೇಪಾಳದ ಭೂಭಾಗಗಳನ್ನು ಕಬಳಿಸುತ್ತಿದ್ದಾರೆ? ಈಗಾಗಲೇ ಅವರು ಗಾತ್ರದಲ್ಲಿ ನಮ್ಮ ದೇಶಕ್ಕಿಂತ 60 ಪಟ್ಟು ಹೆಚ್ಚಿದ್ದಾರೆ’ ಎಂದು ನೇಪಾಳಿ ಕಾಂಗ್ರೆಸ್‌ ಪಕ್ಷದ ನಾಯಕರು ಪ್ರಶ್ನಿಸಿದ್ದಾರೆ. ಅಲ್ಲದೆ ನೇಪಾಳದ ವಿರೋಧ ಪಕ್ಷಗಳು ಈ ವಿಷಯದಲ್ಲಿ ಸರ್ಕಾರವನ್ನು ತರಾಟೆಗೂ ತೆಗೆದುಕೊಂಡಿವೆ.

ಚೀನಾ ಸೇನೆ ನೇಪಾಳದಲ್ಲಿರುವ ಹಿಮಾಲಯದಲ್ಲಿ ಕೆಲ ಎತ್ತರದ ಪ್ರದೇಶಗಳನ್ನು ಕಬಳಿಸಿ ಅಕ್ಕಪಕ್ಕದ ಸ್ಥಳಗಳ ಮೇಲೆ ಕಣ್ಣಿಡುವ ವ್ಯೂಹಾತ್ಮಕ ಸೇನಾ ನೆಲೆಯನ್ನಾಗಿ ಮಾಡಿಕೊಳ್ಳಲು ಹುನ್ನಾರ ನಡೆಸಿದೆ. 2009ರಲ್ಲೇ ಚೀನಾದ ಈ ಒತ್ತುವರಿ ಆರಂಭವಾಗಿದ್ದು, ಆ ವರ್ಷ ಚೀನಾದ ಯೋಧರು ನೇಪಾಳದ ಜಾಗ ಕಬಳಿಸಿ ಅಲ್ಲಿ ಜಾನುವಾರುಗಳ ಆಸ್ಪತ್ರೆ ನಿರ್ಮಿಸಿದ್ದರು. ಅಂದಿನಿಂದ ಈವರೆಗೂ ನೇಪಾಳದ ಭೂಭಾಗಗಳನ್ನು ಚೀನಾ ನಿರಂತರವಾಗಿ ಒತ್ತುವರಿ ಮಾಡಿಕೊಳ್ಳುತ್ತಲೇ ಇದೆ. ಆದರೆ, ನೇಪಾಳದಲ್ಲೂ ಕಮ್ಯುನಿಸ್ಟ್‌ ಪಕ್ಷದ ಸರ್ಕಾರವೇ ಇರುವುದರಿಂದ ಅದು ಚೀನಾದ ಕಮ್ಯುನಿಸ್ಟ್‌ ಪಕ್ಷವನ್ನು ಎದುರುಹಾಕೊಳ್ಳಲು ಸಿದ್ಧವಿಲ್ಲದೆ ಸುಮ್ಮನಿದೆ ಎಂಬ ಟೀಕೆ ಕೇಳಿಬಂದಿದೆ.

click me!