118 ಚೀನಿ ಆ್ಯಪ್‌ಗಳನ್ನು ನಿಷೇಧಿಸಿದ ಭಾರತದ ಕ್ರಮವು ಚೀನಾ ಹೂಡಿಕೆದಾರರ ಮತ್ತು ಸೇವಾದಾರರ ಕಾನೂನು ಹಿತಾಸಕ್ತಿಗಳನ್ನು ಉಲ್ಲಂಘಿಸುತ್ತದೆ. ರಾಷ್ಟ್ರೀಯ ಭದ್ರತೆಯ ಪರಿಕಲ್ಪನೆಯನ್ನು ಭಾರತ ಸರ್ಕಾರವು ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಬೀಜಿಂಗ್(ಆ.04): ಪಬ್‌ಜಿ ಸೇರಿ ತನ್ನ ದೇಶದ 118 ಆ್ಯಪ್‌ಗಳನ್ನು ನಿಷೇಧಿಸಿದ ಭಾರತದ ಕ್ರಮಕ್ಕೆ ಚೀನಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಅಮೆರಿಕದ ಒತ್ತಡಕ್ಕೆ ಒಳಗಾಗಿ ಈ ತಪ್ಪನ್ನು ಭಾರತ ಮಾಡಿದೆ ಎಂದು ದೂರಿರುವ ನೆರೆ ದೇಶ, ತಪ್ಪು ತಿದ್ದಿಕೊಳ್ಳುವಂತೆ ಭಾರತಕ್ಕೆ ಪುಕ್ಕಟೆ ಸಲಹೆಯನ್ನೂ ನೀಡಿದೆ.
ಈ ಕುರಿತು ಗುರುವಾರ ಪ್ರತಿಕ್ರಿಯಿಸಿರುವ ಚೀನಾದ ವಾಣಿಜ್ಯ ಇಲಾಖೆ ವಕ್ತಾರ ಗೌ ಫೆಂಗ್ ‘118 ಚೀನಿ ಆ್ಯಪ್‌ಗಳನ್ನು ನಿಷೇಧಿಸಿದ ಭಾರತದ ಕ್ರಮವು ಚೀನಾ ಹೂಡಿಕೆದಾರರ ಮತ್ತು ಸೇವಾದಾರರ ಕಾನೂನು ಹಿತಾಸಕ್ತಿಗಳನ್ನು ಉಲ್ಲಂಘಿಸುತ್ತದೆ. ರಾಷ್ಟ್ರೀಯ ಭದ್ರತೆಯ ಪರಿಕಲ್ಪನೆಯನ್ನು ಭಾರತ ಸರ್ಕಾರವು ದುರುಪಯೋಗಪಡಿಸಿಕೊಂಡಿದೆ ಮತ್ತು ಚೀನಾ ಕಂಪನಿಗಳ ಮೇಲೆ ಏಕಪಕ್ಷೀಯವಾಗಿ ನಿಯಂತ್ರಣಗಳನ್ನು ಹೇರಿದೆ. ಭಾರತದ ಇಂಥ ನಿರ್ಧಾರವನ್ನು ಚೀನಾ ವಿರೋಧಿಸುತ್ತದೆ. ಈ ತಪ್ಪನ್ನು ಭಾರತ ತಿದ್ದಿಕೊಳ್ಳಬೇಕು’ ಎಂದು ಹೇಳಿದ್ದಾರೆ.
ಚೀನಾಕ್ಕೆ ಮತ್ತೊಂದು ಮರ್ಮಾಘಾತ; ಪಬ್‌ಜಿ ಸೇರಿ 118 ಅಪ್ಲಿಕೇಶನ್ ಬ್ಯಾನ್
ಇದೇ ವೇಳೆ ಅಮೆರಿಕದ ಒತ್ತಡಕ್ಕೆ ಒಳಗಾಗಿ ಭಾರತ ಸರ್ಕಾರ ಚೀನಾದ ಆ್ಯಪ್‌ಗಳನ್ನು ನಿಷೇಧಿಸಿದೆ ಎಂದು ಚೀನಾ ವಿದೇಶಾಂಗ ಇಲಾಖೆ ವಕ್ತಾರ ಹ್ಯು ಚುನ್‌ಯಿಂಗ್ ಆರೋಪಿಸಿದ್ದಾರೆ.
ದೇಶದ ಸಾರ್ವಭೌಮತೆ, ಏಕತೆ ಮತ್ತು ಹಿತಾಸಕ್ತಿಗೆ ವಿರುದ್ಧವಾಗಿವೆ ಎನ್ನುವ ಕಾರಣಕ್ಕಾಗಿ ಬುಧವಾರವಷ್ಟೇ ಭಾರತ ಸರ್ಕಾರವು ಪಬ್‌ಜಿ ಸೇರಿದಂತೆ 118 ಆ್ಯಪ್‌ಗಳನ್ನು ನಿಷೇಧಿಸಿತ್ತು. ಇದರೊಂದಿಗೆ ಭಾರತದಿಂದ ನಿಷೇಧಕ್ಕೆ ಒಳಪಟ್ಟಚೀನಾ ಆ್ಯಪ್‌ಗಳ ಸಂಖ್ಯೆ 224ಕ್ಕೆ ಏರಿದೆ.