ಗಲ್ವಾನ್‌ ಸಂಘರ್ಷ ಬಳಿಕ ಚೀನಾ ರಹಸ್ಯ ಅಣು ಪರೀಕ್ಷೆ: ಅಮೆರಿಕ!

Kannadaprabha News   | Kannada Prabha
Published : Feb 08, 2026, 07:05 AM IST
Galwan

ಸಾರಾಂಶ

2020ರಲ್ಲಿ ಭಾರತ ಮತ್ತು ಚೀನಾ ಸೈನಿಕರು ಲಡಾಖ್‌ನ ಗಲ್ವಾನ್‌ ಕಣಿವೆಯಲ್ಲಿ ಮುಖಾಮುಖಿಯಾಗಿ ಬಡಿದಾಡಿದ ವಾರದ ಬಳಿಕ ಚೀನಾ ರಹಸ್ಯವಾಗಿ ಅಣು ಪರೀಕ್ಷೆ ನಡೆಸಿತ್ತು ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

ವಾಷಿಂಗ್ಟನ್‌ : 2020ರಲ್ಲಿ ಭಾರತ ಮತ್ತು ಚೀನಾ ಸೈನಿಕರು ಲಡಾಖ್‌ನ ಗಲ್ವಾನ್‌ ಕಣಿವೆಯಲ್ಲಿ ಮುಖಾಮುಖಿಯಾಗಿ ಬಡಿದಾಡಿದ ವಾರದ ಬಳಿಕ ಚೀನಾ ರಹಸ್ಯವಾಗಿ ಅಣು ಪರೀಕ್ಷೆ ನಡೆಸಿತ್ತು ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಅಮೆರಿಕದ ವಿದೇಶಾಂಗ ಇಲಾಖೆಯ ಅಧಿಕಾರಿ ಥಾಮಸ್ ಡಿನನ್ನೊ ಶುಕ್ರವಾರ ಜಿನೀವಾದಲ್ಲಿ ವಿಶ್ವಸಂಸ್ಥೆಯ ನಿಶ್ಯಸ್ತ್ರೀಕರಣ ಸಮ್ಮೇಳನದಲ್ಲಿ ಇಂಥದ್ದೊಂದು ಸಂಚಲನದ ಹೇಳಿಕೆ ನೀಡಿದ್ದಾರೆ.

ಜೊತೆಗೆ ಈ ಬಗ್ಗೆ ಟ್ವೀಟ್‌ ಕೂಡಾ ಮಾಡಿರುವ ಅವರು, ‘2020ರ ಜೂ.22ರಂದು (ಗಲ್ವಾನ್‌ ಸಂಘರ್ಷ ನಡೆದ 7 ದಿನದ ಬಳಿಕ) ಭಾರತದ ಗಡಿಗೆ ತೀರಾ ಸಮೀಪವಿರುವ ಶಿಂಜಿಯಾಂಗ್‌ ಪ್ರಾಂತ್ಯದ ಲಾಪ್‌ ನೂರ್‌ ಪ್ರದೇಶದಲ್ಲಿ ಚೀನಾ ಅಣು ಪರೀಕ್ಷೆ ನಡೆಸಿತ್ತು. ಜತೆಗೆ, ನೂರಾರು ಟನ್‌ ಸ್ಫೋಟಕ ಪರೀಕ್ಷೆಗೂ ಸಿದ್ಧತೆ ನಡೆಸಿದ್ದರು. ಈ ಬಗ್ಗೆ ಅಮೆರಿಕಕ್ಕೆ ಮಾಹಿತಿಯಿದೆ’ ಎಂದು ಹೇಳಿದ್ದಾರೆ. ಲೋಕಸಭೆಯಲ್ಲಿ ಗಲ್ವಾನ್‌ ಸಂಘರ್ಷಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಗದ್ದಲ ಉಂಟಾದ ಬೆನ್ನಲ್ಲೇ ಅಮೆರಿಕ ಈ ಮಾಹಿತಿ ಹೊರಬಿದ್ದಿರುವುದು ಗಮನಾರ್ಹ.

ಕಣ್ತಪ್ಪಿಸಿ ಮಾಡಿದ್ದು ಹೇಗೆ?:

ಅಣು ಪರೀಕ್ಷೆಯ ವೇಳೆ ಸಾಮಾನ್ಯವಾಗಿ ಉಂಟಾಗುವ ಸ್ಫೋಟದ ಸದ್ದು ಹಾಗೂ ಕಂಪನದ ಅನುಭವವನ್ನು ತಗ್ಗಿಸಲು ಚೀನಾ ಡಿಕೌಪ್ಲಿಂಗ್‌ ತಂತ್ರವನ್ನು ಬಳಸಿತ್ತು ಎನ್ನಲಾಗಿದೆ. ಇದರರ್ಥ, ಪರೀಕ್ಷೆಗಳನ್ನು ಭೂಮಿಯಾಳದಲ್ಲಿ ನಡೆಸುವ ಮೂಲಕ ಸ್ಫೋಟದ ತರಂಗಗಳನ್ನು ತಗ್ಗಿಸಲಾಗುತ್ತದೆ.

ಪರೀಕ್ಷೆ ಮುಚ್ಚಿಡಲು ಗಲ್ವಾನ್‌ ಘರ್ಷಣೆ?:

ಅಮೆರಿಕ ಈ ಆರೋಪ ಮಾಡಿದ ಬೆನ್ನಲ್ಲೇ, ಜಗತ್ತಿನ ಕಣ್ಣುತಪ್ಪಿಸಿ ಅಣುಪರೀಕ್ಷೆ ನಡೆಸಲು ಚೀನಾ ಗಲ್ವಾನ್‌ ಸಂಘರ್ಷವನ್ನು ಉದ್ದೇಶಪೂರ್ವಕವಾಗಿ ಹುಟ್ಟುಹಾಕಿತೇ ಎಂಬ ವಿಶ್ಲೇಷಣೆಗಳು ಆರಂಭವಾಗಿವೆ. ಕಾರಣ, ಸಮಗ್ರ ಪರಮಾಣು ಪರೀಕ್ಷಾ ನಿಷೇಧ ಒಪ್ಪಂದದ ಅಡಿಯಲ್ಲಿ ಯಾವ ದೇಶವೂ ಅಣುಪರೀಕ್ಷೆ ನಡೆಸುವಂತಿಲ್ಲ. ಹೀಗಿರುವಾಗ ಗಡಿಯಲ್ಲಿ ಸಣ್ಣ ಘರ್ಷಣೆಯಾದರೆ ಪ್ರಪಂಚದ ಗಮನ ಅತ್ತ ತಿರುಗುತ್ತದೆ ಹಾಗೂ ಇತ್ತ ಗೌಪ್ಯವಾಗಿ ಪರೀಕ್ಷೆ ನಡೆಸಿಬಿಡಬಹುದು ಎಂಬುದು ಚೀನಾದ ಯೋಜನೆಯಾಗಿತ್ತು ಎನ್ನಲಾಗಿದೆ.

ಅಮೆರಿಕಕ್ಕೇಕೆ ಉಸಾಬರಿ?:

ಚೀನಾದ ಅಣುಪರೀಕ್ಷೆ ಮಾಹಿತಿಯನ್ನು ಅಮೆರಿಕ ಬಹಿರಂಗಪಡಿಸಿರುವುದು, ಅಣ್ವಸ್ತ್ರಗಳಿಗೆ ಸಂಬಂಧಿಸಿದಂತೆ ರಷ್ಯಾ-ಅಮೆರಿಕ ನಡುವಿನ ಸ್ಟಾರ್‌ ಒಪ್ಪಂದ ಅಂತ್ಯವಾಗಿರುವ ಹೊತ್ತಿನಲ್ಲಿ ಎಂಬುದನ್ನೂ ಗಮನಿಸಬೇಕಿದೆ. ಚೀನಾದ ಬಳಿ ಪ್ರಸ್ತುತ 600ಕ್ಕೂ ಅಧಿಕ ಅಣು ಸಿಡಿತಲೆಗಳು ಇವೆ ಎನ್ನಲಾಗಿದೆ. ಒಂದೊಮ್ಮೆ ಚೀನಾ ಪರೀಕ್ಷೆಯನ್ನು ನಡೆಸುತ್ತಾ ತನ್ನ ಅಣುಶಕ್ತಿಯನ್ನು ವೃದ್ಧಿಸಿಕೊಂಡರೆ, ಒಪ್ಪಂದಕ್ಕೆ ಕಟ್ಟುಬಿದ್ದಿರುವ ತಾವು ಹಿಂದುಳಿಯಬಹುದು ಎಂಬುದು ಅಮೆರಿಕದ ಆತಂಕ. ಇದರ ಪರಿಹಾರಕ್ಕಾಗಿ, ರಷ್ಯಾದೊಂದಿಗಿನ ಒಪ್ಪಂದಕ್ಕೆ ಮತ್ತೆ ಜೀವ ನೀಡುವುದರ ಜತೆಗೆ ಅದಕ್ಕೆ ಚೀನಾವನ್ನೂ ಸೇರಿಸಿಕೊಳ್ಳಲು ಅಮೆರಿಕ ಯೋಚಿಸಿರುವಂತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಆಪರೇಷನ್‌ ಸಿಂದೂರ ‘ಜಿಹಾದ್‌’ ಎಂದಿದ್ದ ಮುನೀರ್‌ : ಜೈಷ್‌ ಉಗ್ರ
ಬಾಂಗ್ಲಾ ಜೈಲಲ್ಲಿ ಹಿಂದೂ ಸಂಸದ ಸೇನ್‌ ನಿಗೂಢ ಸಾವು : ಅನುಮಾನ