
ನವದೆಹಲಿ(ಅ.24): ಭಾರತದ ಜತೆಗೆ ಸಂಘರ್ಷದ ವಾತಾವರಣ ಮುಂದುವರಿದಿರುವಾಗಲೇ, ಚೀನಾ ಸೇನೆ ಅಕ್ಸಾಯ್ ಚಿನ್ ಪ್ರದೇಶದಲ್ಲಿ ನೈಜ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ)ಯಿಂದ ಕೇವಲ 10 ಕಿ.ಮೀ. ದೂರದಲ್ಲಿ 4 ಫುಟ್ಬಾಲ್ ಮೈದಾನದಷ್ಟುದೊಡ್ಡದಾದ ಪ್ರದೇಶದಲ್ಲಿ ಬೃಹತ್ ಕಟ್ಟಡಗಳನ್ನು ನಿರ್ಮಾಣ ಮಾಡುತ್ತಿದೆ. ಅಲ್ಲದೇ ಗಡಿಯಲ್ಲಿ ಹೊಸದಾಗಿ ರಸ್ತೆಗಳನ್ನು ನಿರ್ಮಾಣ ಮಾಡಿಕೊಂಡಿದೆ ಎಂಬ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ. ಇದರಿಂದಾಗಿ ಗಡಿಯಲ್ಲಿನ ಬಿಕ್ಕಟ್ಟು ನಿವಾರಣೆಯಾಗಬಹುದು ಎಂಬ ನಿರೀಕ್ಷೆ ಹುಸಿಯಾಗತೊಡಗಿದ್ದು, ಚಳಿಗಾಲದಲ್ಲೂ ಸಂಘರ್ಷ ಮುಂದುವರಿಯುವ ಸಾಧ್ಯತೆ ಅಧಿಕವಾದಂತಾಗಿದೆ.
ಅತಿಕ್ರಿಮಿತ ಅಕ್ಸಾಯ್ ಚಿನ್ ಪ್ರದೇಶದ ಗೊಗ್ರಾ ಬಿಸಿ ನೀರಿನ ಬುಗ್ಗೆಯ ಪ್ರದೇಶದಿಂದ 10 ಕಿ.ಮೀ. ದೂರದಲ್ಲಿ ಚೀನಾ 3 ಲಕ್ಷ ಚದರ ಅಡಿಯಷ್ಟುದೊಡ್ಡದಾದ ಕಟ್ಟಡಗಳನ್ನು ನಿರ್ಮಾಣ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಕಟ್ಟಡ ನಿರ್ಮಾಣವಾಗುತ್ತಿರುವ ಪ್ರದೇಶ ನಾಲ್ಕು ಫುಟ್ಬಾಲ್ ಮೈದಾನದ ಗಾತ್ರದಷ್ಟುದೊಡ್ಡದಾಗಿದೆ. ಜೊತೆಗೆ ಎಲ್‌ಎಸಿಯಿಂದ 82 ಕಿ.ಮೀ. ದೂರದಲ್ಲಿರುವ ಕ್ಸಿನ್‌ಜಿಯಾಂಗ್ ಪ್ರಾಂತ್ಯದಲ್ಲಿ ಚೀನಾ ಸೇನೆ ರಹಸ್ಯವಾಗಿ ಹೊಸ ವಾಹನಗಳು ಹಾಗೂ ಉಪಕರಣಗಳನ್ನು ಜಮಾವಣೆ ಮಾಡಿಕೊಂಡಿದೆ. ಕ್ಸಿನ್‌ಜಿಯಾಂಗ್‌ನ ಹೊಟನ್ ಮತ್ತು ಕನ್‌ಕ್ಸಿವಾರ್ ಮಧ್ಯೆ ಹೊಸದಾಗಿ ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದೇ ವೇಳೆ ಅಕ್ಸಾಯ್ ಚಿನ್ ಪ್ರದೇಶದ 92 ಕಿ.ಮೀ. ಒಳಗಡೆ ಚೀನಾ ತನ್ನ ಸೇನೆಯನ್ನು ಮರು ಸ್ಥಳಾಂತರ ಮಾಡಿರುವುದು ಹಾಗೂ ಲಡಾಖ್‌ನ ಡೆಮ್ಚೊಕ್ ಸಮೀಪದ ಟಿಬೆಟ್ ಪ್ರಾಂತ್ಯದಲ್ಲಿ ಚೀನಾದ ಸೇನೆಯ ವಾಹನಗಳು ಹೆಚ್ಚಿನ ಪ್ರಮಾಣದಲ್ಲಿ ಸಂಚರಿಸುತ್ತಿರುವುದು ಕೂಡ ಸೇನೆಯ ಗಮನಕ್ಕೆ ಬಂದಿದೆ ಎಂದು ವರದಿಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ