
ಬೀಜಿಂಗ್(ಆ.21): ಜನಸಂಖ್ಯಾ ಸ್ಫೋಟ ತಡೆಯಲು 1979ರಲ್ಲಿ ಕುಟುಂಬಕ್ಕೆ ಒಂದೇ ಮಗು ನೀತಿ ಜಾರಿಗೆ ತಂದು ಇಡೀ ವಿಶ್ವದಲ್ಲಿ ಭಾರೀ ಸುದ್ದಿಯಾಗಿದ್ದ ಚೀನಾದಲ್ಲಿ ಇದೀಗ ಮಕ್ಕಳ ಜನನ ಪ್ರಮಾಣ ಕುಸಿತ ತಡೆಯಲು ಕುಟುಂಬಕ್ಕೆ 3 ಮಕ್ಕಳ ನೀತಿ ಜಾರಿಗೆ ತರಲು ನಿರ್ಧರಿಸಲಾಗಿದೆ. ಅಲ್ಲದೆ ಮೂರು ಮಕ್ಕಳನ್ನು ಪೋಷಿಸಲು ಕುಟುಂಬಗಳಿಗೆ ಆಗುವ ಆರ್ಥಿಕ ಹೊರೆ ತಗ್ಗಿಸಲು ಸ್ವತಃ ಸರ್ಕಾರವೇ ಪೋಷಕರಿಗೆ ನೆರವು ನೀಡಲಿದೆ.
ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್‌ನ ಸ್ಥಾಯಿ ಸಮಿತಿಯು ಚೀನಾದ ಪ್ರಜೆಗಳು 3 ಮಕ್ಕಳನ್ನು ಹೆರಲು ಅವಕಾಶ ಕಲ್ಪಿಸುವ ಜನಸಂಖ್ಯಾ ಮತ್ತು ಕುಟುಂಬ ಯೋಜನೆಯ ಕಾನೂನಿಗೆ ಅಂಗೀಕಾರ ನೀಡಿದೆ. ಹಣಕಾಸು, ತೆರಿಗೆಗಳು, ವಿಮೆ, ಶಿಕ್ಷಣ, ವಸತಿ ಮತ್ತು ಉದ್ಯೋಗ ಸೇರಿದಂತೆ ಕುಟುಂಬದ ಹೊರೆಗಳು, ಮಕ್ಕಳನ್ನು ಬೆಳೆಸುವ ಹಾಗೂ ಶಿಕ್ಷಣದ ವೆಚ್ಚವನ್ನು ಸಹ ನೂತನ ಕಾನೂನು ಕಡಿತಗೊಳಿಸಲಿದೆ. ಅಲ್ಲದೆ 3 ಮಕ್ಕಳ ಹೆರುವ ಪೋಷಕರಿಗೆ ಸಾಮಾಜಿಕ ಮತ್ತು ಆರ್ಥಿಕ ನೆರವುಗಳನ್ನು ನೀಡಲು ಈ ಕಾಯ್ದೆ ಅವಕಾಶ ನೀಡಲಿದೆ.
ಚೀನಾದಲ್ಲಿ ಇದೀಗ 140 ಕೋಟಿ ಜನಸಂಖ್ಯೆ ಇದೆ. ಆದರೆ ಮಕ್ಕಳ ಜನನದ ಮೇಲೆ ನಿಯಂತ್ರಣ ಹೇರಿದ ಪರಿಣಾಮ ವಯಸ್ಕರ ಸಂಖ್ಯೆ ಹೆಚ್ಚಾಗಿ ಯುವಜನರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇದು ಭವಿಷ್ಯದಲ್ಲಿ ಭಾರೀ ಸಮಸ್ಯೆ ಆಗಬಹುದು ಎನ್ನುವ ಕಾರಣಕ್ಕಾಗಿ ಸರ್ಕಾರ, ಪೋಷಕರಿಗೆ ಹೆಚ್ಚು ಮಕ್ಕಳನ್ನು ಹೆರುವಂತೆ ಉತ್ತೇಜನ ನೀಡುತ್ತಿದೆ.
ಚೀನಾದಲ್ಲಿ 1979ರಲ್ಲಿ ಕುಟುಂಬಕ್ಕೆ ಒಂದೇ ಮಗು ನೀತಿ, 2015ರಲ್ಲಿ ಕುಟುಂಬಕ್ಕೆ 2 ಮಕ್ಕಳ ನೀತಿ ಜಾರಿಗೆ ತರಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ