
2026ರ ಹೊಸ ವರ್ಷಕ್ಕೆ ಇಡೀ ಜಗತ್ತು ಪಟಾಕಿ ಸಿಡಿಸಿ ಸಂಭ್ರಮದಿಂದ ಸ್ವಾಗತ ಕೋರುತ್ತಿದ್ದರೆ, ಕೆಲವು ದೇಶಗಳಲ್ಲಿ ಮಾತ್ರ ಈ ಸಂಭ್ರಮ 'ಸಂಕಷ್ಟ' ತರಬಲ್ಲದು. ಈ ದೇಶಗಳಲ್ಲಿ ಜನವರಿ 1ರ ಆಚರಣೆಯನ್ನು ಕೆಟ್ಟ ಆಚರಣೆ ಮಾತ್ರವಲ್ಲ, ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲಾಗುತ್ತದೆ. ಸಣ್ಣ ಪಾರ್ಟಿ ಅಥವಾ ಪಟಾಕಿ ಸಿಡಿಸಿದರೂ ಇಲ್ಲಿ ಸರ್ಕಾರ ನಿಮ್ಮನ್ನು ಜೈಲಿಗೆ ಅಟ್ಟಬಹುದು!
ಉತ್ತರ ಕೊರಿಯಾದಲ್ಲಿ ನಾವು ಬಳಸುವ ಕ್ಯಾಲೆಂಡರ್ ನಡೆಯುವುದಿಲ್ಲ. ಅಲ್ಲಿ ಕಿಮ್ ಇಲ್-ಸಂಗ್ ಜನ್ಮದಿನದಿಂದ ಆರಂಭವಾಗುವ 'ಜುಚೆ' ಕ್ಯಾಲೆಂಡರ್ ಬಳಕೆಯಲ್ಲಿದೆ. ಇಲ್ಲಿ ಪಾಶ್ಚಿಮಾತ್ಯ ಶೈಲಿಯಲ್ಲಿ ಹೊಸ ವರ್ಷ ಆಚರಿಸುವುದು 'ದೇಶ ವಿರುದ್ಧದ ಅಪರಾಧ'ಕ್ಕೆ ಸಮ. ಒಂದು ವೇಳೆ ಯಾರಾದರೂ ಸಂಭ್ರಮಾಚರಣೆ ಮಾಡುತ್ತಾ ಸಿಕ್ಕಿಬಿದ್ದರೆ, ಅಂತವರಿಗೆ ಬಲವಂತದ ದುಡಿಮೆ ಅಥವಾ ಕಠಿಣ ಜೈಲು ಶಿಬಿರಗಳಿಗೆ ಕಳುಹಿಸುವ ಶಿಕ್ಷೆ ವಿಧಿಸಲಾಗುತ್ತದೆ.
ಇಸ್ಲಾಮಿಕ್ ಕ್ಯಾಲೆಂಡರ್ ಅನುಸರಿಸುವ ಸೌದಿ ಅರೇಬಿಯಾದಲ್ಲಿ ದಶಕಗಳಿಂದ ಜನವರಿ 1ರ ಸಾರ್ವಜನಿಕ ಆಚರಣೆಯನ್ನು ನಿಷೇಧಿಸಲಾಗಿದೆ. ಪಟಾಕಿ ಸಿಡಿಸುವುದು ಅಥವಾ ಪಾರ್ಟಿ ಮಾಡುವುದು ಇಲ್ಲಿ ಕಾನೂನುಬಾಹಿರ. ಇತ್ತೀಚಿನ 'ವಿಷನ್ 2030' ಅಡಿಯಲ್ಲಿ ಕೆಲವು ಸಡಿಲಿಕೆಗಳನ್ನು ನೀಡಲಾಗಿದ್ದರೂ, ಅನುಮತಿಯಿಲ್ಲದೆ ಸಾರ್ವಜನಿಕವಾಗಿ ಹೊಸ ವರ್ಷ ಆಚರಿಸುವವರನ್ನು ದಂಡ, ಬಂಧನ ಅಥವಾ ದೇಶದಿಂದ ಗಡೀಪಾರು ಮಾಡುವ ಸಾಧ್ಯತೆ ಇರುತ್ತದೆ.
ಬ್ರೂನಿ: ಷರಿಯಾ ಕಾನೂನಿನ ಕಠಿಣ ಚಾಟಿ
ಇಸ್ಲಾಮಿಕ್ ಕಾನೂನುಗಳು ಅತ್ಯಂತ ಕಟ್ಟುನಿಟ್ಟಾಗಿರುವ ಬ್ರೂನಿಯಲ್ಲಿ, ಮುಸ್ಲಿಂ ನಾಗರಿಕರು ಜನವರಿ 1 ಸೇರಿದಂತೆ ಇಸ್ಲಾಮೇತರ ರಜಾದಿನಗಳನ್ನು ಸಾರ್ವಜನಿಕವಾಗಿ ಆಚರಿಸುವಂತಿಲ್ಲ. ಷರಿಯಾ ಕಾನೂನಿನಡಿಯಲ್ಲಿ ಈ ನಿಯಮ ಉಲ್ಲಂಘಿಸಿದರೆ ಬರೋಬ್ಬರಿ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ಭಾರಿ ದಂಡ ತೆರಬೇಕಾಗುತ್ತದೆ.
ಸೊಮಾಲಿಯಾ: ಭದ್ರತೆಯ ನೆಪದಲ್ಲಿ ನಿಷೇಧ
ಇಸ್ಲಾಮಿಕ್ ಮೌಲ್ಯಗಳ ರಕ್ಷಣೆ ಮತ್ತು ಭದ್ರತಾ ಬೆದರಿಕೆಗಳ ಕಾರಣದಿಂದಾಗಿ ಸೊಮಾಲಿಯಾ ಸರ್ಕಾರವು ಹೊಸ ವರ್ಷ ಮತ್ತು ಕ್ರಿಸ್‌ಮಸ್ ಆಚರಣೆಗಳನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಜನವರಿ 1ರಂದು ಯಾವುದೇ ಸಾರ್ವಜನಿಕ ಸಭೆಗಳು ನಡೆದರೂ ಭದ್ರತಾ ಪಡೆಗಳು ಅವುಗಳನ್ನು ಬಲವಂತವಾಗಿ ನಿಲ್ಲಿಸುತ್ತವೆ. ನಿಯಮ ಮೀರಿದವರನ್ನು ಬಂಧಿಸಿ ಕಠಿಣ ಜೈಲು ಶಿಕ್ಷೆಗೆ ಗುರಿಪಡಿಸಲಾಗುತ್ತದೆ.
ತಜಿಕಿಸ್ತಾನ್: ಆಚರಣೆ ಇದೆ, ಆದರೆ ಸಾಂಪ್ರದಾಯಿಕ ಚಿಹ್ನೆಗಳಿಗೆ ನೋ ಎಂಟ್ರಿ!
ತಜಿಕಿಸ್ತಾನ್ ಸರ್ಕಾರವು ಹೊಸ ವರ್ಷವನ್ನು ಆಚರಿಸಲು ಅನುಮತಿ ನೀಡಿದ್ದರೂ, ಅದರ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ಹೇರಿದೆ. ಶಾಲೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕ್ರಿಸ್‌ಮಸ್ ಮರಗಳು (X-mas trees), ಫಾದರ್ ಫ್ರಾಸ್ಟ್ (ಸಾಂಟಾ ಕ್ಲಾಸ್) ಮತ್ತು ಪಟಾಕಿಗಳನ್ನು ಬಳಸುವಂತಿಲ್ಲ. ಒಂದು ವೇಳೆ ಬಳಸಿ ಸಿಕ್ಕಿಬಿದ್ದರೆ ಭಾರಿ ದಂಡ ಮತ್ತು ಅಲಂಕಾರಿಕ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ.
ನಿಯಂತ್ರಣದ ಹಿಂದಿನ ಅಸಲಿ ಗುಟ್ಟು ಏನು?
ಈ ಎಲ್ಲಾ ದೇಶಗಳ ಕಟ್ಟುನಿಟ್ಟಿನ ಕ್ರಮದ ಹಿಂದೆ ಇರುವುದು ಸೈದ್ಧಾಂತಿಕ ಮತ್ತು ಧಾರ್ಮಿಕ ಕಾರಣಗಳು. ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದಿಂದ ತಮ್ಮ ದೇಶದ ಧಾರ್ಮಿಕ ಮತ್ತು ಸಾಂಸ್ಕೃತಿಕ ಗುರುತು ನಾಶವಾಗಬಹುದು ಎಂಬ ಭಯ ಈ ಸರ್ಕಾರಗಳಲ್ಲಿದೆ. ಈ ಕಾರಣಕ್ಕಾಗಿಯೇ ವಿಶ್ವವೇ ಕುಣಿದು ಕುಪ್ಪಳಿಸುವ ದಿನದಂದು ಈ ದೇಶಗಳ ಜನರು ಮೌನಕ್ಕೆ ಶರಣಾಗಬೇಕಾಗುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ