Coronavirus: ಕೊರೋನಾ ಎಲ್ಲ ನಿಯಮಗಳಿಗೆ ಗುಡ್ ಬೈ ಹೇಳಿದ ಇಂಗ್ಲೆಂಡ್

By Kannadaprabha News  |  First Published Feb 22, 2022, 2:26 AM IST

* ಬ್ರಿಟನ್ನಲ್ಲಿ ಗುರುವಾರದಿಂದಲೇ ಕೊರೋನಾ ಐಸೋಲೇಷನ್‌ ರದ್ದು
* ಹೊಸ ನಿಯಮಗಳ ಬಗ್ಗೆ ಮಾಹಿತಿ ನೀಡಿದ ಪ್ರಧಾನಿ ಬೋರಿಸ್‌ ಜಾನ್ಸನ್‌
* ಆಸ್ಪತ್ರೆ ದಾಖಲಾಗುವವರ ಪ್ರಮಾಣ ಮತ್ತು ಸಾವು ಗಣನೀಯವಾಗಿ ತಗ್ಗಿದೆ
* ಬ್ರಿಟನ್‌ನಲ್ಲಿ ಈಗಾಗಲೇ 12 ಮತ್ತು ಅದಕ್ಕೆ ಮೇಲ್ಪಟ್ಟವಯಸ್ಸಿನ ಶೇ.85ರಷ್ಟುಜನರಿಗೆ ಲಸಿಕೆ


ಲಂಡನ್‌ (ಫೆ. 22) ಕೋವಿಡ್‌ (Coronavirus)  ಜೊತೆಗೆ ಬದುಕು ಸಾಗಿಸಲು ಹೊಸ ನಿಯಮ ರೂಪಿಸಿರುವ ಬ್ರಿಟನ್‌ (England) ಸರ್ಕಾರ, ಇನ್ಮುಂದೆ ಕೋವಿಡ್‌ ಸೋಂಕಿತರು ಸ್ವಯಂ ಐಸೋಲೇಷನ್‌ಗೆ ಒಳಗಾಗುವುದು ಕಡ್ಡಾಯ ಅಲ್ಲ, ಗುರುವಾರದಿಂದಲೇ ಈ ನಿಮಯ ಜಾರಿಗೆ ಬರಲಿದೆ ಎಂದು ತಿಳಿಸಿದೆ. ಹಾಗೆಯೇ ಏಪ್ರಿಲ್‌ನಿಂದ ಸಾಮೂಹಿಕ ಕೊರೋನಾ ಪರೀಕ್ಷೆಯನ್ನೂ ನಿಲ್ಲಿಸುವುದಾಗಿ ಘೋಷಿಸಿದೆ.

ಹೊಸ ನಿಯಮಗಳ ಬಗ್ಗೆ ಮಾಹಿತಿ ನೀಡಿದ ಪ್ರಧಾನಿ(Boris Johnson) ಬೋರಿಸ್‌ ಜಾನ್ಸನ್‌, 2020ರಲ್ಲಿ ಕೊರೋನಾ ಸಾಂಕ್ರಾಮಿಕ ನಿಯಂತ್ರಣಕ್ಕೆಂದು ಜಾರಿಗೆ ತರಲಾಗಿರುವ ಎಲ್ಲಾ ತಾತ್ಕಾಲಿಕ ಕಾನೂನುಗಳು ಮುಂದಿನ ತಿಂಗಳಿನಿಂದ ಅಸ್ತಿತ್ವದಲ್ಲಿ ಇರುವುದಿಲ್ಲ. ದೇಶದ ಆರೋಗ್ಯ ಕಾರ‍್ಯತಂತ್ರವು ಈಗ ಲಸಿಕೆ ಮತ್ತು ಚಿಕಿತ್ಸೆಗಳ ಕಡೆಗೆ ಗಮನ ನೀಡಿದೆ. ಸಾಂಕ್ರಾಮಿಕ ರೋಗ ಅಂತ್ಯವಾಗದಿದ್ದರೂ ಒಮಿಕ್ರೋನ್‌ (Omicron) ರೂಪಾಂತರಿಯ ಉತ್ತುಂಗವನ್ನು ದಾಟಿದ್ದೇವೆ. ಸದ್ಯ ಬ್ರಿಟನ್‌ನಲ್ಲಿ ಕೊರೋನಾ ಕಾರಣದಿಂದ 10,000ಕ್ಕಿಂತ ಕಡಿಮೆ ಜನರು ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಆಸ್ಪತ್ರೆ ದಾಖಲಾಗುವವರ ಪ್ರಮಾಣ ಮತ್ತು ಸಾವು ಗಣನೀಯವಾಗಿ ತಗ್ಗಿದೆ ಎಂದು ಹೇಳಿದರು.

Latest Videos

ಇದೇ ವೇಳೆ ಯೋಜನೆಯ ಭಾಗವಾಗಿ ಏ.1ರ ವರೆಗೆ ಕೊರೋನಾ ಸೋಂಕಿತರು ಮನೆಯಲ್ಲಿಯೇ ಇರಲು ಸಲಹೆ ನೀಡಲಾಗುತ್ತದೆ. ಅನಂತರ ಸೋಂಕಿತರು ಮನೆಯಿಂದ ಹೊರಬಂದು ವೈಯಕ್ತಿಕ ಕೆಲಸ ಕಾರ‍್ಯಗಳನ್ನು ಮಾಡಬಹುದು. ಸೋಂಕಿತರ ಸಂಪರ್ಕ ಪತ್ತೆಯನ್ನೂ ಕೊನೆಗೊಳಿಸಲಾಗುತ್ತದೆ. ಕೋವಿಡ್‌ ನಿರ್ಬಂಧಗಳ ಪಾಲನೆ ಕಾನೂನು ಬದ್ಧವಾಗಿರದೆ, ಕೇವಲ ಸಲಹಾ ರೂಪದಲ್ಲಿ ಮುಂದುವರೆಯಲಿದೆ ಎಂದು ತಿಳಿಸಿದರು.

ಬ್ರಿಟನ್‌ನಲ್ಲಿ ಈಗಾಗಲೇ 12 ಮತ್ತು ಅದಕ್ಕೆ ಮೇಲ್ಪಟ್ಟವಯಸ್ಸಿನ ಶೇ.85ರಷ್ಟುಜನರು ಎರಡೂ ಡೋಸ್‌ ಲಸಿಕೆ ಪಡೆದಿದ್ದಾರೆ. ಶೇ.70ರಷ್ಟುಜನರು ಮೂರನೇ ಡೋಸ್‌ ಕೂಡಾ ಪಡೆದುಕೊಂಡಿದ್ದಾರೆ. ದೇಶದಲ್ಲಿ ಇದುವರೆಗೆ 1.8 ಕೋಟಿ ಜನರಿಗೆ ಸೋಂಕು ಬಂದಿದ್ದು, 34000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ನಿತ್ಯ ಸರಾಸರಿ 35000ದ ಆಸುಪಾಸು ಕೇಸು ದಾಖಲಾಗುತ್ತಿದ್ದು, 100-150 ಜನರು ಸಾವನ್ನಪ್ಪುತ್ತಿದ್ದಾರೆ.

Covid Vaccine: ರಾಜ್ಯದಲ್ಲಿಂದು 10 ಕೋಟಿ ಡೋಸ್‌ ಲಸಿಕೆ ಮೈಲಿಗಲ್ಲು: ದಕ್ಷಿಣದಲ್ಲೇ ನಂ.1!

1000ಕ್ಕಿಂತ ಕೆಳಗಿಳಿದ ಕೋವಿಡ್‌,  679 ಕೇಸ್‌:  ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ವೇಗವಾಗಿ ಕಡಿಮೆಯಾಗುತ್ತಿದ್ದು, ಭಾನುವಾರ 679 ಮಂದಿಯಲ್ಲಿ ಸೋಂಕು ದೃಢ ಪಟ್ಟಿದೆ. 21 ಮಂದಿ ಮರಣವನ್ನಪ್ಪಿದ್ದಾರೆ. 1,932 ಮಂದಿ ಚೇತರಿಸಿಕೊಂಡಿದ್ದಾರೆ.

ರಾಜ್ಯದಲ್ಲಿ ಕೊನೆಯ ಬಾರಿ 2021ರ ಡಿ.31ರಂದು 832 ಪ್ರಕರಣ ದಾಖಲಾಗಿತ್ತು. ಇದೀಗ 51 ದಿನದ ನಂತರ ಮತ್ತೆ ದೈನಂದಿನ ಪ್ರಕರಣ ಮೂರಂಕಿಗೆ ಕುಸಿದಿದೆ. ಈ ಮಧ್ಯೆ ದೈನಂದಿನ ಕೋವಿಡ್‌ ಪರೀಕ್ಷೆಯಲ್ಲೂ ಇಳಿಕೆಯಾಗಿದ್ದು 52,505 ಪರೀಕ್ಷೆ ನಡೆದಿದೆ. ಬೆಂಗಳೂರು ನಗರದಲ್ಲಿ 346 ಪ್ರಕರಣ ವರದಿಯಾಗಿದೆ. ಶೇ.3.09 ಮರಣ ದರ ದಾಖಲಾಗಿದೆ. ರಾಜ್ಯದಲ್ಲಿ ಸೋಮವಾರ 1 ಲಕ್ಷ ಮಂದಿ ಕೋವಿಡ್‌ ಲಸಿಕೆ ಪಡೆದಿದ್ದಾರೆ.

ಜಾಗೃತಿ ಮೆರವಣಿಗೆ: ಕೊರೋನಾ ಸಂಪೂರ್ಣ ತೊಲಗಿಸಲು ಪ್ರತಿಯೊಬ್ಬರು ಲಸಿಕೆಯನ್ನು ಕಡ್ಡಾಯವಾಗಿ ಪಡೆಯಬೇಕು ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂಬ ಸಂದೇಶ ಸಾರುತ್ತ ಜನರನ್ನು ಜಾಗೃತಿಗೊಳಿಸಲು ಕೊಟ್ಟೂರಿನ ಕೊಟ್ಟೂರೇಶ್ವರ ಕಾಲೇಜ್‌ ಎನ್‌ಸಿಸಿ ವಿದ್ಯಾರ್ಥಿಗಳು ಮೆರವಣಿಗೆ ನಡೆಸಿದರು. ಮಾಸ್ಕ್‌ ಧರಿಸುವುದರೊಂದಿಗೆ ರೋಗ ಹೊಡೆದೊಡಿಸುವ ಎಲ್ಲ ಪ್ರಯತ್ನಗಳಿಗೆ ಪ್ರತಿಯೊಬ್ಬರು ಸಹಕಾರಿಯಾಗಬೇಕು ಎಂದು ಘೋಷಣೆ ಕೂಗಿದರು. ಎನ್‌ಸಿಸಿ ಅಧಿಕಾರಿ ಬಸವರಾಜ್‌ ನೇತೃತ್ವದ ಮೆರವಣಿಗೆಗೆ ಪ್ರಾಚಾರ್ಯ ಡಾ. ಶಾಂತಮೂರ್ತಿ ಕುಲಕರ್ಣಿ ಚಾಲನೆ ನೀಡಿದರು. ಸಹ ಪ್ರಾಧ್ಯಾಪಕರಾದ ರವೀಂದ್ರಗೌಡ, ವಾಮದೇವಪ್ಪ, ಶಿವಪ್ರಸಾದ ಇದ್ದರು. ಮೆರವಣಿಗೆಯಲ್ಲಿ ಪಲ್ಲವಿ, ಪ್ರಿಯಾಂಕಾ, ಪುನೀತ್‌, ಶಶಿಧರ ಕನ್ನಾಕಟ್ಟಿ, ಎನ್‌ಸಿಸಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

 

 

click me!