
ಬಾಂಗ್ಲಾದೇಶದ ಸ್ಟಾರ್ ಕ್ರಿಕೆಟಿಗ ಮತ್ತು ಮಾಜಿ ಸಂಸದ ಶಕೀಬ್ ಅಲ್ ಹಸನ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬುಧವಾರ ರಾತ್ರಿ ಮಗುರಾ ಪಟ್ಟಣದಲ್ಲಿರುವ ಶಕೀಬ್ ಅವರ ಪೂರ್ವಜರ ಮನೆ ಮೇಲೆ ಕಿಡಿಗೇಡಿಗಳು ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಶಕೀಬ್ ಭಾಗವಹಿಸಿದ ಕೆಲವೇ ಗಂಟೆಗಳಲ್ಲಿ ಈ ದಾಳಿ ನಡೆದಿದೆ.
ಮಗುರಾ ಪಟ್ಟಣದ ಕೇಶಬ್‌ಮೋರ್ ಪ್ರದೇಶದಲ್ಲಿರುವ ಶಕೀಬ್ ಮನೆ ಮೇಲೆ ರಾತ್ರಿ ಸುಮಾರು 8:45ಕ್ಕೆ ಈ ದಾಳಿ ನಡೆದಿದೆ. ಕೇವಲ ಬಾಂಬ್ ಎಸೆಯುವುದು ಮಾತ್ರವಲ್ಲದೆ, ಮನೆಯನ್ನು ಧ್ವಂಸಗೊಳಿಸಲಾಗಿದೆ ಎಂದು ವರದಿಯಾಗಿದೆ. ಈ ಘಟನೆಯನ್ನು ಅವಾಮಿ ಲೀಗ್ ತೀವ್ರವಾಗಿ ಖಂಡಿಸಿದ್ದು, ಇದು ನವ ಫ್ಯಾಸಿಸಂ ಮತ್ತು ರಾಜಕೀಯ ಸೇಡಿನ ಕ್ರಮ ಎಂದು ಕರೆದಿದೆ.
ನವದೆಹಲಿಯ ಫಾರಿನ್ ಕರೆಸ್ಪಾಂಡೆಂಟ್ಸ್ ಕ್ಲಬ್ ಆಯೋಜಿಸಿದ್ದ ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಶೇಖ್ ಹಸೀನಾ ಮಾತನಾಡಿದ್ದರು. ಈ ವೇಳೆ ಶಕೀಬ್ ಅಲ್ ಹಸನ್ ಕೂಡ ವರ್ಚುವಲ್ ಆಗಿ ಭಾಗವಹಿಸಿದ್ದರು. ಇದಾದ ನಂತರವೇ ಅವರ ಮನೆ ಗುರಿಯಾಗಿದೆ. ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಜಿನೋಸೈಡ್ ಅಭಿಯಾನ ನಡೆಯುತ್ತಿದೆ ಎಂದು ಅವಾಮಿ ಲೀಗ್ ತನ್ನ ಹೇಳಿಕೆಯಲ್ಲಿ ಕಿಡಿಕಾರಿದೆ.
ಇದೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ 78 ವರ್ಷದ ಶೇಖ್ ಹಸೀನಾ, ನಾನು ಡಿಸೆಂಬರ್‌ನಲ್ಲಿ ಬಾಂಗ್ಲಾದೇಶಕ್ಕೆ ಮರಳಲು ನಿರ್ಧರಿಸಿದ್ದೇನೆ. ನನ್ನನ್ನು ಜೈಲಿಗೆ ಹಾಕಬಹುದು ಅಥವಾ ಕೊಲ್ಲಬಹುದು, ಆದರೆ ನಾನು ನನ್ನ ಜನರ ಬಳಿಗೆ ಹೋಗುತ್ತೇನೆ. ದೇಶವನ್ನು ಮತ್ತೆ ಅಭಿವೃದ್ಧಿ ಮತ್ತು ಜಾತ್ಯತೀತ ಹಾದಿಗೆ ತರುವುದು ನನ್ನ ಗುರಿ ಎಂದು ಘೋಷಿಸಿದ್ದಾರೆ.
ಕಳೆದ ಆಗಸ್ಟ್‌ನಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಭಾರಿ ಪ್ರತಿಭಟನೆಯ ನಂತರ ಹಸೀನಾ ಭಾರತಕ್ಕೆ ಪಲಾಯನ ಮಾಡಿದ್ದರು. ಸದ್ಯ ಅವರ ವಿರುದ್ಧ ಮಾನವ ಹಕ್ಕುಗಳ ಉಲ್ಲಂಘನೆಯ ಆರೋಪದಡಿ ಮರಣದಂಡನೆ ಶಿಕ್ಷೆ ವಿಧಿಸಲಾಗಿದ್ದು, ಅವರನ್ನು ಹಸ್ತಾಂತರಿಸುವಂತೆ ಬಾಂಗ್ಲಾ ಸರ್ಕಾರ ಭಾರತವನ್ನು ಒತ್ತಾಯಿಸುತ್ತಿದೆ. ಈ ನಡುವೆ ಶಕೀಬ್ ಅಲ್ ಹಸನ್ ಅವರ ಮನೆ ಮೇಲಿನ ದಾಳಿ ಉಭಯ ದೇಶಗಳ ನಡುವೆ ರಾಜತಾಂತ್ರಿಕ ಸಂಚಲನ ಮೂಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ