ಅಮೆರಿಕದಲ್ಲಿ ಹುಟ್ಟಿನಿಂದಲೇ ಪೌರತ್ವ ಗೊಂದಲ: ಇಲ್ಲಿದೆ ರೋಚಕ ಇತಿಹಾಸ!

Published : Feb 28, 2025, 10:24 AM ISTUpdated : Feb 28, 2025, 10:25 AM IST
ಅಮೆರಿಕದಲ್ಲಿ ಹುಟ್ಟಿನಿಂದಲೇ ಪೌರತ್ವ ಗೊಂದಲ: ಇಲ್ಲಿದೆ ರೋಚಕ ಇತಿಹಾಸ!

ಸಾರಾಂಶ

ಟ್ರಂಪ್ ಸಹ ಬಲು ಘಾಟಿ ಮನುಷ್ಯ, ಆತ ತಾನು ಈ ವಿಷಯದಲ್ಲಿ ಸುಪ್ರೀಂ ಕೋರ್ಟಿನ ಕದ ತಟ್ಟುವೆ ಎಂದು ಈಗಾಗಲೇ ಹೂಂಕರಿಸಿಯಾಗಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಅಮೆರಿಕದ ಸಂವಿಧಾನದ 14 ತಿದ್ದುಪಡಿಯ ಮೇಲೆ ಚರ್ಚೆಗಳ ಮೇಲೆ ಚರ್ಚೆಗಳಾಗುತ್ತಿದೆ. 

-ನಾರಾಯಣ ಯಾಜಿ, ಅಮೆರಿಕ

ಅಮೆರಿಕದ ಅಧ್ಯಕ್ಷರಾಗಿ ಎರಡನೆಯ ಬಾರಿ ಆರಿಸಿಬಂದ ಡೊನಾಲ್ಡ್ ಟ್ರಂಪ್ ಹೊರಡಿಸಿದ ಸುಮಾರು ಕಾರ್ಯನಿರ್ವಾಹಕ ಆದೇಶಗಳು ವಿವಾದದ ಕಿಡಿ ಹಬ್ಬಿಸಿವೆ. ಅದರಲ್ಲಿ ಮುಖ್ಯವಾದುದು ‘ಅಮೆರಿಕದಲ್ಲಿ ಜನಿಸಿದ ಕಾರಣಕ್ಕೆ ಪೌರತ್ವ ಲಭಿಸುವುದು’ ಎನ್ನುವ ನೂರೈವತ್ತು ವರ್ಷಗಳಷ್ಟು ಹಳೆಯದಾದ ಕಾನೂನನ್ನು ಸ್ಥಗಿತಗೊಳಿಸಿ ಹೊರಡಿಸಿದ ಆದೇಶ. ಭಾರತೀಯರನ್ನು ಸೇರಿಸಿ ಜಗತ್ತಿನಾದ್ಯಂತ ಸಂಚಲನವನ್ನು ಈ ಆದೇಶ ಸೃಷ್ಟಿಸಿದೆ. ಈಗಾಗಲೇ ಅಲ್ಲಿನ ಸಿಯಾಟಲ್ ಫೆಡರಲ್ ನ್ಯಾಯಾಲಯದ ನ್ಯಾಯಾಧೀಶ 84 ವಯಸ್ಸಿನ ಜಾನ್ ಸಿ.ಕೋಫೆನ್ನಾರ್ ಅವರು ಈ ಆದೇಶ ಅಮೆರಿಕದ ಸಂವಿಧಾನದ ನಿರ್ಲಜ್ಜ ಉಲ್ಲಂಘನೆ ಎಂದು ಮುಂದಿನ ವಿಚಾರಣೆಗಾಗಿ 14 ದಿನಗಳ ಮಟ್ಟಿಗೆ ತಡೆ ಹಿಡಿದಿದ್ದಾರೆ. 

ಟ್ರಂಪ್ ಸಹ ಬಲು ಘಾಟಿ ಮನುಷ್ಯ, ಆತ ತಾನು ಈ ವಿಷಯದಲ್ಲಿ ಸುಪ್ರೀಂ ಕೋರ್ಟಿನ ಕದ ತಟ್ಟುವೆ ಎಂದು ಈಗಾಗಲೇ ಹೂಂಕರಿಸಿಯಾಗಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಅಮೆರಿಕದ ಸಂವಿಧಾನದ 14 ತಿದ್ದುಪಡಿಯ ಮೇಲೆ ಚರ್ಚೆಗಳ ಮೇಲೆ ಚರ್ಚೆಗಳಾಗುತ್ತಿದೆ. ಅಮೆರಿಕದ ಸಂವಿಧಾನಕ್ಕೆ 249 ವರ್ಷಗಳ ಇತಿಹಾಸವಿದೆ. ಇಲ್ಲಿನತನಕ ಅದರ ಒಟ್ಟು ತಿದ್ದುಪಡಿಗಳ ಸಂಖ್ಯೆ 27. ಭಾರತದ ಸಂವಿಧಾನದ ಈ 75 ವರ್ಷಗಳಲ್ಲಿ 106 ಸಲ ತಿದ್ದುಪಡಿಗಳಾಗಿವೆ. ಅಮೆರಿಕದಲ್ಲಿ ಸಂವಿಧಾನದ ತಿದ್ದುಪಡಿ ಅಷ್ಟು ಸುಲಭವಲ್ಲ. ಈ ಎಲ್ಲ ಹಿನ್ನೆಲೆಯಲ್ಲಿ ಅಲ್ಲಿನ ಸಂವಿಧಾನದ 14ನೆಯ ತಿದ್ದುಪಡಿ ಬಂದಿರುವ ಕಾರಣ, ಅನಿವಾರ್ಯತೆ ಮತ್ತು ಆ ಕುರಿತು ನಂತರದ ದಿನಗಳಲ್ಲಿ ಬಂದ ಮಹತ್ವದ ತೀರ್ಪುಗಳನ್ನು ಅವಲೋಕಿಸೋಣ.

44 ಕೋಟಿ ಕೊಡಿ ಪಟಾಫಟ್‌ ವೀಸಾ ಪಡೀರಿ: ಗೋಲ್ಡ್‌ ಕಾರ್ಡ್‌ ವಿತರಣೆ ಮಾಡುವುದಾಗಿ ಟ್ರಂಪ್‌ ಘೋಷಣೆ

ಡ್ರೆಡ್ ಸ್ಕಾಟ್ ವರ್ಸಸ್‌ ಸ್ಯಾಂಡ್‌ಫೋರ್ಡ್ ಕೇಸ್ (1857): ಅಮೆರಿಕದ ಇತಿಹಾಸದಲ್ಲಿ ಅತ್ಯಂತ ಕುಪ್ರಸಿದ್ಧ ನ್ಯಾಯ ತೀರ್ಮಾನಗಳಲ್ಲೊಂದು ಎಂದು ಎಂದು ಕರೆಯಲ್ಪಟ್ಟ 1857ರ ಡ್ರೆಡ್ ಸ್ಕಾಟ್ ವರ್ಸಸ್‌ ಸ್ಯಾಂಡ್‌ಫೋರ್ಡ್ ಕೇಸ್ ಜಗತ್ತಿನ ಕಾನೂನು ಇತಿಹಾಸದಲ್ಲಿ ಅತ್ಯಂತ ವಿವಾದಾತ್ಮಕ ತೀರ್ಪುಗಳಲ್ಲಿ ಒಂದಾಗಿದೆ. ಈ ತೀರ್ಪು ಅನೇಕ ರಾಜಕೀಯ, ಸಾಮಾಜಿಕ ಮತ್ತು ಕಾನೂನಾತ್ಮಕ ತಲ್ಲಣವನ್ನು ಉಂಟುಮಾಡಿತ್ತು ಮತ್ತು ಇದು ಅಮೆರಿಕದ ಉತ್ತರ ಮತ್ತು ದಕ್ಷಿಣ ರಾಜ್ಯಗಳ ನಡುವಿನ ಅಂತರ್ಯುದ್ಧಕ್ಕೂ ಕಾರಣವಾಯಿತು.

ಕೇಸ್ ಹಿನ್ನೆಲೆ: 1846ರಲ್ಲಿ, ಡ್ರೆಡ್ ಸ್ಕಾಟ್ ಮತ್ತು ಆತನ ಪತ್ನಿ ಹ್ಯಾರಿಯಟ್ ಎನ್ನುವವರು ತಮ್ಮ ಗುಲಾಮಿತನದ ವಿಮೋಚನೆಗಾಗಿ ಮತ್ತು ಸ್ವತಂತ್ರ ಬದುಕಿಗಾಗಿ ಅವರ ಮಾಲೀಕ ಡಾ। ಜಾನ್ ಸ್ಯಾನ್ ಫ಼ೋರ್ಡ್ ವಿರುದ್ಧ ‘ಸೇಂಟ್ ಲೂಯಿಸ್ ಸರ್ಕ್ಯೂಟ್ ಕೋರ್ಟಿ’ನಲ್ಲಿ ದಾವೆ ಹೂಡಿದ್ದರು. ಅವರು ಅಮೆರಿಕದಲ್ಲಿ ಗುಲಾಮಗಿರಿ ಕಾನೂನಾತ್ಮಕವಾಗಿದ್ದ ಮಿಸ್ಸೌರಿಯಲ್ಲಿ ತನ್ನ ಒಡೆಯನಾದ ಜಾನ್ ಎಮಿರ್ಸನ್ ಎನ್ನುವವನಲ್ಲಿ ದುಡಿಯುತ್ತಿದ್ದರು. ಕೆಲಕಾಲಾನಂತರ ಕಾರಣಾಂತರಗಳಿಂದ ಅಲ್ಲಿಂದ ಗುಲಾಮಗಿರಿ ಮುಕ್ತ ಪ್ರದೇಶಗಳಲ್ಲೊಂದಾದ (ಅಂತಹ ರಾಜ್ಯಗಳನ್ನು ಫ್ರೀ ಸ್ಟೇಟ್‌ ಎನ್ನುತ್ತಿದ್ದರು) ವಿಸ್ಕಾನ್ಸಿನ್ ಎನ್ನುವಲ್ಲಿಗೆ ಕೊಂಡೊಯ್ದು ಅವರನ್ನು ಡಾ। ಜಾನ್ ಸ್ಯಾನ್ ಫೋರ್ಡ್‌ಗೆ ಮಾರಲಾಯಿತು. ಗುಲಾಮಿ ಪದ್ಧತಿ ನಿಷೇಧದಲ್ಲಿರುವ ಮುಕ್ತ ರಾಜ್ಯದಲ್ಲಿರುವ ತಮ್ಮನ್ನು ಬಂಧಮುಕ್ತಗೊಳಿಸಿ ಸ್ವತಂತ್ರ್ಯ ಜೀವನ ನಡೆಸಲು ಅವಕಾಶ ಮಾಡಿಕೊಡಬೇಕೆನ್ನುವುದು ಅವರ ವಾದ. ಕೆಳ ಕೋರ್ಟಿನಲ್ಲಿ ಆತನ ದಾವೆ ಕಿತ್ತು ಹೋಯಿತು. ಆತ ಸುಪ್ರೀಂ ಕೊರ್ಟಿನ ಕದತಟ್ಟಿದನು. 

ಇದೊಂದು ಎರಡು ವ್ಯಕ್ತಿಗಳ ನಡುವಿನ ಖಾಸಗಿ ದೂರಾಗಿದ್ದು, ಮುಂದಿನ ದಿನಗಳಲ್ಲಿ ಅಮೆರಿಕದ ಇತಿಹಾಸದ ಪಲ್ಲಟಗಳಿಗೂ ಕಾರಣವಾಗುತ್ತದೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಸುಪ್ರೀಂ ಕೋರ್ಟ್ ತೀರ್ಪು ಸುಮಾರು 11 ವರ್ಷಗಳ ಕಾನೂನು ಯುದ್ಧ ಮುಂದುವರಿದು, 1857ರ ಮಾರ್ಚ್ 6ರಂದು 7-2ರ ಬಹುಮತದ ತೀರ್ಪನೊಂದಿಗೆ ಸುಪ್ರೀಂ ಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ರೋಜರ್ ಬಿ.ಟೇನಿ ನೀಡಿದ ತೀರ್ಪು ಮನುಕುಲಕ್ಕೇ ಒಂದು ಕಪ್ಪುಚುಕ್ಕೆಯಾಗಿತ್ತು. ಅವರು ಡ್ರೆಡ್ ಸ್ಕಾಟ್ ಕೇಸನ್ನು ಕೇವಲ ವಜಾ ಮಾಡದೇ ‘ಕಪ್ಪುವರ್ಣೀಯರು ಯಾವಕಾಲಕ್ಕೂ ಅಮೆರಿಕದ ಪೌರರಾಗಲು ಸಾಧ್ಯವಿಲ್ಲ. ಅವರು ಫೆಡರಲ್ ಕೋರ್ಟ್‍ನಲ್ಲಿ ಕೇಸ್ ಹಾಕಲು ಹಕ್ಕು ಹೊಂದಿಲ್ಲ. ಕಪ್ಪು ವರ್ಣೀಯರು ಅಮೆರಿಕದ ಸಂವಿಧಾನ ಪ್ರಕಾರ ಪ್ರಜೆಗಳಾಗಿಲ್ಲ’ ಎಂದು ಕೋರ್ಟ್ ತೀರ್ಮಾನಿಸಿತು. ಮುಂದುವರಿದು ಅಮೆರಿಕದ ಕಾಂಗ್ರೇಸಿಗೆ ಫೆಡರಲ್ ಪ್ರದೇಶಗಳಲ್ಲಿ ದಾಸ್ಯತ್ವವನ್ನು ನಿಷೇಧಿಸುವ ಅಧಿಕಾರವೇ ಇಲ್ಲ ಎನ್ನುವ ನ್ಯಾಯ ತೀರ್ಮಾನವನ್ನು ನೀಡಿಯೇ ಬಿಟ್ಟರು.

ತೀರ್ಪು ರಣಕೋಲಾಹಲವನ್ನೇ ಸೃಷ್ಟಿಸಿತು.ಜಾತ್ಯತೀತ ವಿರೋಧ ಮತ್ತು ಭೇದಭಾವನೆ: ಈ ತೀರ್ಪು ಕಪ್ಪು ಜನರಿಗೆ ರಾಷ್ಟ್ರಪತಿಯಾದ ಪರರಾಷ್ಟ್ರ ಹಕ್ಕುಗಳನ್ನು ನಿರಾಕರಿಸಿತ್ತು. ಅವರು ಎಲ್ಲಿಯೂ ಸ್ವಾತಂತ್ರ್ಯವನ್ನು ಪಡೆಯಲು ಅಧಿಕಾರ ಹೊಂದಿರಲಿಲ್ಲ.

ದಾಸತ್ವ ವಿಸ್ತರಣೆ: ಇದು ದಾಸತ್ವವನ್ನು ಹೊಸ ಪ್ರದೇಶಗಳಲ್ಲಿ ಹರಡುವ ದಾರಿ ತೆರೆದಿತು ಹಾಗೂ ದಕ್ಷಿಣ ಮತ್ತು ಉತ್ತರ ರಾಜ್ಯಗಳ ನಡುವಿನ ರಾಜಕೀಯ ಭಿನ್ನತೆಯನ್ನು ತೀವ್ರಗೊಳಿಸಿತು.

ರಾಜಕೀಯ ಘರ್ಷಣೆ: ಈ ತೀರ್ಪು ಉತ್ತರ ಹಾಗೂ ದಕ್ಷಿಣ ದೇಶಗಳಲ್ಲಿ ಸಂಘರ್ಷವನ್ನು ಹೆಚ್ಚಿಸಿತು, ಮತ್ತು ದಾಸತ್ವವನ್ನು ವಿರೋಧಿಸುವ ಚಳುವಳಿಗೆ ಪ್ರೋತ್ಸಾಹ ನೀಡಿತು.

ಸಂವಿಧಾನಿಕ ಸಂಕಟ: ಡ್ರೆಡ್ ಸ್ಕಾಟ್ ತೀರ್ಮಾನವು ಸಂವಿಧಾನಿಕ ಹಕ್ಕುಗಳ ಕುರಿತು ಚರ್ಚೆಗಳಿಗೆ ನಂದಿಹಾಡಿತು. ಮುಕ್ತತೆ ಮತ್ತು ಸಮಾನತೆಯ ತತ್ವಗಳಿಗೆ ಹೇಗೆ ಸ್ಪಂದಿಸಬೇಕೆಂದು ಜನರೇ ಇದಕ್ಕೊಂದು ಪರಿಹಾರವನ್ನು ಹುಡುಕುವ ಪ್ರಯತ್ನಕ್ಕೆ ತೊಡಗಿದರು.

ಬಹುಶಃ ಅಬ್ರಹಾಂ ಲಿಂಕನ್ ಅಮೆರಿಕದ ಅಧ್ಯಕ್ಷರಾಗಿರದಿದ್ದರೆ ಈ ತೀರ್ಪು ಶಾಶ್ವತವಾಗಿ ಇದ್ದುಬಿಡುತ್ತಿತ್ತೇನೋ! ನವೆಂಬರ್ 6, 1860ರಲ್ಲಿ ಅಮೆರಿಕದ 16 ಅಧ್ಯಕ್ಷನಾಗಿ ಆಯ್ಕೆಯಾದ ಲಿಂಕನ್ನನಿಗೆ ಯಾವ ದಕ್ಷಿಣದ ರಾಜ್ಯಗಳೂ ಬೆಂಬಲ ಕೊಟ್ಟಿರಲಿಲ್ಲ. ಆಯ್ಕೆಯಾದ ಮೇಲೆ ಆತನ ಸುಧಾರಣೆಗಳನ್ನು ಮುಖ್ಯವಾಗಿ ಗುಲಾಮಿ ಪದ್ಧತಿಯ ನಿಷೇಧವನ್ನು ದಕ್ಷಿಣದ ರಾಜ್ಯಗಳು ಒಪ್ಪಲಿಲ್ಲ. ಬದಲಾಗಿ 12 ಏಪ್ರಿಲ್ 1861ರಂದು ಅಮೆರಿಕದ ಅಂತರ್ಯುದ್ಧ (ಸಿವಿಲ್‌ ವಾರ್‌) ಪ್ರಾರಂಭವಾಗಿ ನಾಲ್ಕು ವರ್ಷ ನಡೆದು 9 ಏಪ್ರಿಲ್ 1865ರಂದು ಲಿಂಕನ್ನನ ಗೆಲುವಿನೊಂದಿಗೆ ಮುಗಿಯಿತು. ಗೃಹಯುದ್ಧವನ್ನು ಗೆದ್ದ ನಂತರ ಆತನಕ ಸಂವಿಧಾನದತ್ತ ಹಕ್ಕಾಗಿದ್ದ ಗುಲಾಮಿ ಪದ್ಧತಿಯನ್ನು ನಿಷೇಧಿಸುವ ಮತ್ತು ಆ ಕಾರಣಕ್ಕಾಗಿ ಅಮೆರಿಕಕ್ಕೆ ತರಲಾದ ಆಫ್ರಿಕನ್ ಅಮೆರಿಕದವರ ಮತ್ತು ಅವರ ಸಂತತಿಗೆ ರಕ್ಷಣೆ ಒದಗಿಸುವ ಉದ್ದೇಶದಿಂದ 13ನೆಯ ತಿದ್ದುಪಡಿಯನ್ನು ತರಲು ಉಪಕ್ರಮಿಸಿದ. ಇದು ಸುಲಭದ ಮಾತಾಗಿರಲಿಲ್ಲ.

ಸತತ ನಾಲ್ಕು ವರ್ಷಗಳ ಕಾಲ ದೀರ್ಘವಾದ ಚರ್ಚೆ ನಡೆದು ಜನವರಿ ತಿಂಗಳ 31, 1865ರಂದು ಕಾಂಗ್ರೆಸ್ ಅನುಮೋದಿಸಿತು. ಮಾರನೆಯ ದಿನವೇ ಲಿಂಕನ್ ಅದಕ್ಕೆ ಸಹಿ ಹಾಕಿದ. ಇನ್ನುಳಿದಿದ್ದು ಆಗಿನ 36 ರಾಜ್ಯಗಳ ಪೈಕಿ 27 ರಾಜ್ಯಗಳ ಒಪ್ಪಿಗೆ ಬೇಕಿತ್ತು. ದುರ್ದೈವದಿಂದ ಇದೇ ಕಾರಣಕ್ಕೆ ಅದೇ ವರ್ಷದ ಏಪ್ರಿಲ್ 14ರಂದು ಕೊಲೆಯಾಗಿ ಹೋದ! ಉಪಾಧ್ಯಕ್ಷರಾಗಿದ್ದ ಆಂಡ್ರ್ಯೂ ಜಾನ್ಸನ್ ನಂತರ ಅಧ್ಯಕ್ಷನಾದ. ಆತನೂ ಧೃತಿಗೆಡದೇ ಪ್ರಯತ್ನವನ್ನು ಮುಂದುವರೆಸಿ ಡಿಸೆಂಬರ್ ತಿಂಗಳ 6, 1865ರಂದು ಕಾಯಿದೆ ಆಗುವಂತೆ ನೋಡಿಕೊಂಡ. ಅಲ್ಲಿಂದ ಅಮೆರಿಕದಲ್ಲಿ ಗುಲಾಮಿ ಪದ್ಧತಿ ನಿಷೇಧ ಶಾಶ್ವತವಾಗಿ ಜಾರಿಗೆ ಬಂದಿತು.

ಗುಲಾಮಿ ಪದ್ಧತಿ ಶಾಶ್ವತವಾಗಿ ನಿಷೇಧವಾದರೂ ಕಪ್ಪುವರ್ಣೀಯರಿಗೆ ಪೌರತ್ವವನ್ನು ಕೊಡುವ ವಿಷಯದಲ್ಲಿ ಗೊಂದಲ ಉಂಟಾದವು. ಅದನ್ನು ನಿವಾರಿಸಲು ಆಂಡ್ರ್ಯು ಜಾನ್ಸನ್ ಜೂನ್ 13, 1866ರಂದು ಅಮೆರಿಕದಲ್ಲಿ ಜನಿಸಿದ ಎಲ್ಲರಿಗೂ ಸಮಾನ ಪೌರತ್ವವನ್ನು ಕೊಡುವ ಉದ್ದೇಶದಿಂದ ಸಂವಿಧಾನಕ್ಕೆ 14ನೇ ತಿದ್ದುಪಡಿಯನ್ನು ತರಲು ಉಪಕ್ರಮಿಸುತ್ತಾನೆ. ಇದೂ ಸಹ ಚರ್ಚೆಗಳಾಗಿ ನಂತರದಲ್ಲಿ 1868ರ ಜುಲೈ ತಿಂಗಳ 9ರಂದು ಜಾರಿಗೆ ಬಂದಿತು. ಅದರ ಸೆಕ್ಷನ್ 1ರ ಪ್ರಕಾರ ನೇರವಾಗಿ ಅಮೆರಿಕದಲ್ಲಿ ಜನಿಸಿದ ಎಲ್ಲರಿಗೂ ಜನ್ಮಕಾರಣ ಪೌರತ್ವವನ್ನು ನೀಡಿದೆ. ಯಾರೆಲ್ಲಾ ಗುಲಾಮರಾಗಿ ಬದುಕನ್ನು ಸವೆಸಿದ್ದರೋ ಆ ಕ್ರೂರ ಪರಂಪರೆಯನ್ನು ಸ್ಪಷ್ಟವಾಗಿ ನಿಷೇಧಿಸಿ ಅವರ ನಾಗರಿಕ ಹಕ್ಕುಗಳನ್ನು ರಕ್ಷಿಸಿದೆ.

ಈ ಕಾರಣದಿಂದ ಅಮೆರಿಕ ಸಂವಿಧಾನದಲ್ಲಿ 13 ಮತ್ತು 14ನೆಯ ತಿದ್ದುಪಡಿಯನ್ನು ವ್ಯಕ್ತಿ ಸ್ವಾತಂತ್ರ್ಯದ ದೃಷ್ಟಿಯಿಂದ ಮಹತ್ವದ ಮೈಲಿಗಲ್ಲಾಗಿ ಪರಿಗಣಿಸುತ್ತಾರೆ. ಡ್ರೆಡ್ ಸ್ಕಾಟ್, ಆತನ ಪತ್ನಿ ಹ್ಯಾರಿಯಟ್ ಜಾಗತಿಕವಾಗಿ ಸಾಮಾಜಿಕ ನ್ಯಾಯದ ಹೋರಾಟಗಾರರ ಮೊದಲ ಸಾಲಿನಲ್ಲಿ ಬರುತ್ತಾರೆ. ಮೊದಲನೆಯ ಕಾನೂನು ಸವಾಲುಗಳು 14ನೇ ತಿದ್ದುಪಡಿಯ ವ್ಯಾಪ್ತಿ ಸ್ಪಷ್ಟವಾದರೂ, ಇದರ ಅರ್ಥೈಸುವಿಕೆಯು ವಿವಾದದಿಂದ ಹೊರತಾಗಿರಲಿಲ್ಲ. ಕೆಲವೊಂದಿಷ್ಟು ಕಾನೂನು ತಜ್ಞರು 14ನೆಯ ತಿದ್ದುಪಡಿ ವಿದೇಶಿ ನಾಗರಿಕರಾಗಲಿ, ಅಕ್ರಮ ವಲಸೆ ಬಂದವರ ಮಕ್ಕಳಿಗೆ ಅನ್ವಯಿಸುವುದಿಲ್ಲ ಎಂದು ವಾದಮಾಡುತ್ತಲೇ ಬಂದಿದ್ದಾರೆ. ಈ ಕುರಿತು ಮೊದಲನೇ ಕಾನೂನು ಸವಾಲು ಎದುರಾದದ್ದು 1898ರಲ್ಲಿ. ‘ಯುನೈಟೆಡ್ ಸ್ಟೇಟ್ ವರ್ಸಸ್‌ ವಾಂಗ್ ಕಿಮ್ ಆರ್ಕ್’ ಎಂದು ಪ್ರಸಿದ್ಧವಾಗಿದೆ. ‘ವಾಂಗ್ ಕಿಮ್ ಆರ್ಕ್’ ಎನ್ನುವಾತ ಚೈನಾದ ವಲಸೆಗಾರನೋರ್ವನ ಮಗ. 1873ರಲ್ಲಿ ಸಾನ್ ಫ್ರಾನ್ಸಿಸ್ಕೋದಲ್ಲಿ ಹುಟ್ಟಿದ್ದ. 

ಒಮ್ಮೆ ಚೀನಾಕ್ಕೆ ತೆರಳಿ ಪುನಃ ಅಮೆರಿಕಕ್ಕೆ ವಾಪಾಸ್ ಬಂದಾಗ ಆತನಿಗೆ ಅಮೆರಿಕದ ಪ್ರಜೆ ಅಲ್ಲವೆನ್ನುವ ಕಾರಣವನ್ನು ನೀಡಿ ದೇಶದೊಳಗೆ ಪ್ರವೇಶಿಸಲು ನಿರಾಕರಿಸಲಾಯಿತು. ಈ ವಿಷಯವು ಸುಪ್ರೀಂ ಕೋರ್ಟಿನ ಮೆಟ್ಟಿಲನ್ನು ಹತ್ತಿತು. ಈ ನಡುವೆ ಅಮೆರಿಕದಲ್ಲಿ ಚೀನಿಯರ ಅನಿರ್ಭಂಧಿತ ವಲಸೆಯ ವಿರುದ್ಧವಾಗಿ ಧ್ವನಿ ಎತ್ತಿದ್ದರು. ಅವರಿಂದ ತಮ್ಮ ದೇಶದ ಸಾಂಸ್ಕೃತಿಕ ಬದುಕಿಗೆ ಬೆದರಿಕೆಯಿದೆ ಎನ್ನುವ ಕೂಗು ದೊಡ್ಡದಾಗಿತ್ತು. ಪರಿಣಾಮವಾಗಿ 1882ರಲ್ಲಿ ‘ದ ಚೈನೀಸ್‌ ಎಕ್ಸ್‌ಕ್ಲೂಷನ್‌ ಆ್ಯಕ್ಟ್‌ 1882’ ಮೂಲಕವಾಗಿ ಚೈನಾದೇಶದ ನುರಿತ ಮತ್ತು ನುರಿತವರಲ್ಲದ ಉದ್ಯೋಗಿಗಗಳನ್ನೂ ಸೇರಿಸಿ ಅಮೆರಿಕದೊಳಗೆ ಪ್ರವೇಶವನ್ನು ಹತ್ತು ವರ್ಷಗಳಿಗೆ ಅನ್ವಯಿಸುವಂತೆ ನಿರ್ಭಂಧಿಸಲಾಗಿತ್ತು. ನಂತರ ಅದನ್ನು ವಿಸ್ತರಿಸುತ್ತಾ 1943ರಲ್ಲಿ ದ್ವಿತೀಯ ಮಹಾಯುದ್ಧದ ವೇಳೆಯಲ್ಲಿ ಯಾವಾಗ ಚೈನಾ ತನಗನುಕೂಲವಾಯಿತೋ ಆಗ ರದ್ದುಗೊಳಿಸಲಾಗಿತ್ತು. 

ದ ಚೈನೀಸ್‌ ಎಕ್ಸ್‌ಕ್ಲೂಷನ್‌ ಆ್ಯಕ್ಟ್‌ 1882 ಜಾರಿಯಲ್ಲಿರುವಾಗಲೇ ಅದರ ಮತ್ತು ಇನ್ನಿತರ ಎಲ್ಲ ವಿಷಯವನ್ನು ವಿವೇಚಿಸಿಯೇ ಕಾನೂನು ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲು ಮತ್ತು ದೂರಗಾಮಿ ಪರಿಣಾಮವನ್ನು ಬೀರಬಲ್ಲ ತೀರ್ಪನ್ನು 1898ರಲ್ಲಿ ಅಮೆರಿಕದ ಸುಪ್ರೀಂ ಕೋರ್ಟಿನ ನ್ಯಾಯಾಧೀಶರಾದ ಹೋರಸ್ ಗ್ರೇ ನೇತೃತ್ವದಲ್ಲಿ ವ್ಯಾಪಕವಾದ ಬಹುಮತದೊಂದಿಗೆ ವಾಂಗ್ ಕಿಮ್ ಆರ್ಕ್ ನ ಪರವಾಗಿ ನೀಡಲಾಯಿತು. ಅದರ ಪ್ರಕಾರ ‘ಅಮೆರಿಕದಲ್ಲಿ ಜನಿಸಿದ ಯಾರಿಗಾದರೂ ಜನ್ಮಕಾರಣ ಪೌರತ್ವ, ಅಂಥವರ ಪಾಲಕರ ಪೌರತ್ವ ಯಾವುದೇ ಇರಲಿ, 14ನೆಯ ತಿದ್ದುಪಡಿಯ ಪ್ರಕಾರ ಅನ್ವಯವಾಗುತ್ತದೆ. ವಿದೇಶಿ ರಾಜತಾಂತ್ರಿಕರಿಗೆ ಅಥವಾ ಶತ್ರು ಸೈನಿಕರಿಗೆ ಜನಿಸಿದ ಮಕ್ಕಳನ್ನು ಹೊರತುಪಡಿಸಿ ಉಳಿದವರಿಗೆ ಅನ್ವಯಿಸುವ ವಿಶಾಲವಾದ ಅಂತರ್ಗತ ಆಶಯವನ್ನು 14ನೆಯ ತಿದ್ದುಪಡಿ ಹೊಂದಿದೆ ಹಾಗೂ ಯುನೈಟೆಡ್ ಸ್ಟೇಟ್ಸ್ ನಲ್ಲಿ ಜನಿಸಿದ ಎಲ್ಲಾ ಮಕ್ಕಳಿಗೆ ಅವರ ಜನ್ಮಸಿದ್ಧ ಪೌರತ್ವವನ್ನು ರಕ್ಷಿಸಲಾಗಿದೆ ಎನ್ನುವುದನ್ನು ಆ ತಿದ್ದುಪಡಿ ಖಚಿತಗೊಳಿಸಿದೆ” ಎಂದು ವಿವರಣೆಯನ್ನು ನೀಡಿದರು.

ಭಾರತದ ಚುನಾವಣೆ ಸುಧಾರಣೆಗಾಗಿ 180 ಕೋಟಿ ಹಣ : ಮತ್ತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕಿಡಿ

ಈಗ ಟ್ರಂಪ್ ತಂದಿರುವ ಕಾರ್ಯನಿರ್ವಾಹಣಾ ಆದೇಶವನ್ನು ವಾಂಗ್ ಕಿಮ್ ಆರ್ಕ್ ಪ್ರಕರಣದಲ್ಲಿ ನೀಡಿದ ತೀರ್ಪಿನೊಂದಿಗೆ ಹೋಲಿಸುತ್ತಿದ್ದಾರೆ. ಆದರೆ ಟ್ರಂಪ್ ಪ್ರಕಾರ 14ನೆಯ ತಿದ್ದುಪಡಿಯು ಯುನೈಟೆಡ್ ಸ್ಟೇಟಿನಲ್ಲಿ ಜನಿಸಿದ ಆದರೆ ಅದರ ಅಧಿಕಾರ ವ್ಯಾಪ್ತಿಗೆ ಒಳಪಟಿಲ್ಲದ (ಅಕ್ರಮ ವಲೆಸೆಗಾರರು) ವ್ಯಕ್ತಿಗಳನ್ನು ಜನ್ಮಕಾರಣ ಪೌರತ್ವದಿಂದ ಹೊರಗಿಟ್ಟಿದೆ. ಟ್ರಂಪ್ ಅವರಂತೂ ಸಿಯಾಟೆಲ್ಲಿನ ಫೆಡರಲ್ ಕೋರ್ಟಿನ ತೀರ್ಪನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಲಿದ್ದಾರೆ ಎನ್ನುವುದು ಸ್ಪಷ್ಟ. ಅಮೆರಿಕದ ಸುಪ್ರೀಂ ಕೋರ್ಟಿನಲ್ಲಿ ಸಂಪ್ರದಾಯವಾದಿ ನ್ಯಾಯಾಧೀಶರು ಆರು ಜನರಿದ್ದಾರೆ. ಅವರಲ್ಲಿ ಮೂವರು ಟ್ರಂಪ್‌ನಿಂದಲೇ ನೇಮಕವಾದವರು. ಒಟ್ಟಾರೆಯಾಗಿ ಹುಟ್ಟಿನಿಂದಲೇ ಪೌರತ್ವ ತಿದ್ದುಪಡಿಯನ್ನು ತನ್ನ ಮೂಗಿನ ನೇರಕ್ಕೆ ವ್ಯಾಖ್ಯಾನಿಸುವ ಟ್ರಂಪ್ ನಿರ್ಧಾರ ಅಮೆರಿಕ ಇದುತನಕ ಅನುಸರಿಸಿಕೊಂಡು ಬಂದ 150 ವರ್ಷದ ಕಾನೂನನ್ನು ಬದಲಾಯಿಸುವುದೋ ಇಲ್ಲವೋ ಎನ್ನುವುದನ್ನು ಕಾಲವೇ ಹೇಳಬೇಕು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!