ಬೆಂಗಳೂರಿನ ರವಿಪ್ರಕಾಶ್ ಗೆ ಬ್ರಿಕ್ಸ್ ದೇಶಗಳ ಪ್ರಶಸ್ತಿ

By Kannadaprabha NewsFirst Published Nov 14, 2019, 7:51 AM IST
Highlights

ಹಾಲು ಶೀತಲೀಕರಣ ಯಂತ್ರ ಅಭಿವೃದ್ಧಿಪಡಿಸಿದ ಬೆಂಗಳೂರಿನ ರವಿ ಪ್ರಕಾಶ್ ಅವರಿಗೆ ಬ್ರಿಕ್ಸ್ ದೇಶಗಳು ಯುವ ವಿಜ್ಞಾನಿಗಳಿಗೆ ನೀಡುವ ಯುವ ಸಂಶೋಧಕ ಪ್ರಶಸ್ತಿ ಒಲಿದಿದೆ.

ರಿಯೋ ಡಿ ಜನೈರೋ [ನ.14]: ಕಡಿಮೆ ಬೆಲೆಯಲ್ಲಿ ಹಾಲು ಶೀತಲೀಕರಣ ಯಂತ್ರ ಅಭಿವೃದ್ಧಿಪಡಿಸಿದ ಬೆಂಗಳೂರಿನ ರವಿ ಪ್ರಕಾಶ್ ಅವರಿಗೆ ಬ್ರಿಕ್ಸ್ ದೇಶಗಳು ಯುವ ವಿಜ್ಞಾನಿಗಳಿಗೆ ನೀಡುವ ಯುವ ಸಂಶೋಧಕ ಪ್ರಶಸ್ತಿ ಒಲಿದಿದೆ. ಬ್ರೆಜಿಲ್‌ನ ರಿಯೋ ಡಿ ಜನೈರೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ರವಿ ಪ್ರಕಾಶ್ ಅವರಿಗೆ ಮೊದಲ ಬಹುಮಾನವಾದ 25000 ಡಾಲರ್ (ಸುಮಾರು 17.75 ಲಕ್ಷ ರುಪಾಯಿ) ನಗದು ಮತ್ತು ಸ್ಮರಣಿಕೆಯನ್ನು ಪ್ರದಾನ ಮಾಡಲಾಯಿತು.

ನ. 6ರಿಂದ 8 ರವರೆಗೆ ಬ್ರೆಜಿಲ್‌ನಲ್ಲಿ ನಡೆದ ಯುವ ವಿಜ್ಞಾನಿಗಳ ವೇದಿಕೆ ಕಾರ್ಯಕ್ರಮದಲ್ಲಿ ಗ್ರಾಮೀಣ ಸಣ್ಣ ಹಾಗೂ ಮಧ್ಯಮ ಹೈನೋದ್ಯಮಿಗಳಿಗೆ ನೆರವಾಗುವಂಥ ಹಾಲು ಶೀತಲೀಕರಣ ಘಟಕ ಕಂಡು ಹಿಡಿದಿದ್ದಕ್ಕೆ ಬೆಂಗಳೂರಿನ ರಾಷ್ಟ್ರೀಯ ಡೈರಿ ಸಂಶೋಧನಾ ಸಂಸ್ಥೆಯ ಪಿಎಚ್‌ಡಿ ವಿದ್ಯಾರ್ಥಿ ರವಿ ಪ್ರಕಾಶ್ ಅವರಿಗೆ ಪ್ರಶಸ್ತಿ ಲಭಿಸಿದೆ ಎಂದು ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.  

ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯಿಂದ ಭಾಗವಹಿಸಿದ ಒಟ್ಟು 21 ಸ್ಪರ್ಧಿಗಳ ಪೈಕಿ ರವಿ ಪ್ರಕಾಶ್ ಒಬ್ಬರಾಗಿದ್ದರು. 2018 ರ ಬ್ರಿಕ್ಸ್ ಸಮ್ಮೇಳನದ ವೇಳೆ ಯುವ ಸಂಶೋಧಕರ ಸಾಧನೆಯನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದ್ದರು. ಬಳಿಕ ಈ ಪ್ರಸ್ತಾಪಕ್ಕೆ ಎಲ್ಲಾ ದೇಶಗಳು ಬೆಂಬಲ ವ್ಯಕ್ತಪಡಿಸಿ, ಪ್ರಶಸ್ತಿ ಕೊಡುವ ಸಂಪ್ರದಾಯ ಆರಂಭವಾಗಿತ್ತು.

ರವಿಪ್ರಕಾಶ್ ಸಂಶೋಧನೆ ಏನು: ಹಾಲಿನ ಉಷ್ಣಾಂಶ ನಿಯಂತ್ರಿಸುವ ತಂತ್ರಜ್ಞಾನ ಇದಾಗಿದೆ. ಹಾಲು ಕರೆದ ಬಳಿಕ ಕೇವಲ ೩೦ ನಿಮಿಷಗಳ ಅವಧಿಯಲ್ಲಿ ಹಾಲಿನ ಉಷ್ಣಾಂಶವನ್ನು 37 ಡಿ.ಸೆ.ನಿಂದ ಉತ್ಪಾದನೆಯ ವೇಳೆ ಸೂಕ್ಷ್ಮ ದ್ರವ ಆಧಾರಿತ ವಸ್ತುಗಳನ್ನು ಕೇವಲ ೩೦ ನಿಮಿಷದಲ್ಲಿ ಕಚ್ಚಾ ಹಾಲಿನ ಉಷ್ಣಾಂಶವನ್ನು 37 ಡಿಗ್ರಿ ಸೆಲ್ಸಿಯಸ್‌ನಿಂದ7 ಡಿಗ್ರಿ ಸೆಲ್ಸಿಯಸ್‌ಗೆ ತರುವ ತಂತ್ರಜ್ಞಾನವನ್ನು ರವಿಪ್ರಕಾಶ್ ಅಭಿವೃದ್ಧಿ ಪಡಿಸಿದ್ದರು. 

ಹಾಲು ಉತ್ಪಾದನೆ ಬಳಿಕ ಅದನ್ನು ಸುರಕ್ಷಿತವಾಗಿ ಸಂಗ್ರಹಿಸಿಡಲು ಈ ತಂತ್ರಜ್ಞಾನ ನೆರವಾಗುತ್ತದೆ. ಇತರೆ ಉಪಕರಣಗಳಿಗೆ ಹೋಲಿಸಿದರೆ ಈ ಉಪಕರಣದ ಬೆಲೆ ಅಗ್ಗವಾಗಿದ್ದು, ಸಣ್ಣ ಹಾಗೂ ಮಧ್ಯಮ ಸ್ತರದ ರೈತರಿಗೆ ಬಹು ಉಪಯೋಗ ತಂದಿದೆ.

click me!