
ಢಾಕಾ(ಡಿ.18): ಈಗಾಗಲೇ ಭಾರತ ಹಾಗೂ ಬಾಂಗ್ಲಾದಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ವಿರುದ್ಧ ಕತ್ತಿ ಮಸೆಯುತ್ತಿರುವ ಬಾಂಗ್ಲಾದೇಶ ಈಗ ಹೊಸ ಕ್ಯಾತೆ ಆರಂಭಿಸಿದೆ. 'ಭಾರತವು ಬಾಂಗ್ಲಾ ವಿಮೋಚನೆ ರೂವಾರಿ ಅಲ್ಲ, ಪಾಲುದಾರನಷ್ಟೇ' ಎಂದು ಹೇಳಿದೆ. 1971ರ ಬಾಂಗ್ಲಾ ವಿಮೋಚನೆ ಭಾರತದ ಅತಿದೊಡ್ಡ ಗೆಲುವು ಎಂಬ ಮೋದಿ ಹೇಳಿಕೆ ಬೆನ್ನಲ್ಲೇ ಬಾಂಗ್ಲಾ ಈ ಪ್ರತಿಕ್ರಿಯೆ ನೀಡಿದೆ.
1971ರಲ್ಲಿ ಪಾಕ್ ವಿರುದ್ಧ ನಡೆದ ಬಾಂಗ್ಲಾ ವಿಮೋಚನಾ ಯುದ್ಧದ ನೆನಪಾರ್ಥ ಡಿ.16ರಂದು ಆಚರಿಸಲಾಗುವ ವಿಜಯ ದಿವಸದ ಅಂಗವಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಟ್ವಿಟ್ ಮಾಡಿ, 'ಭಾರತವು ಪಾಕ್ ವಿರುದ್ಧ ನಡೆದ ಈ ಯುದ್ಧದಲ್ಲಿ ಐತಿಹಾಸಿಕ ಜಯ ಕಂಡಿತ್ತು' ಎಂದು ಸೋಮವಾರ ಹೇಳಿದ್ದರು.
ಆದರೆ ಮೋದಿ ಹೇಳಿಕೆಯನ್ನು ಬಾಂಗ್ಲಾದೇಶದ ಕಾನೂನು ಸಲಹೆಗಾರ ಆಸಿಫ್ ನಸ್ರುಲ್ ಅವರು ಫೇಸ್‌ಬುಕ್‌ನಲ್ಲಿ ಟೀಕಿಸಿದ್ದು, 'ನಾನು ಇದನ್ನು ವಿರೋಧಿಸುತ್ತೇನೆ. 1971ರ ಡಿ.16ರಂದು ಗೆಲುವು ಸಾಧಿಸಿದ್ದು ಬಾಂಗ್ಲಾ ಮಾತ್ರ. ಈ ಜಯದಲ್ಲಿ ಭಾರತ ಪಾಲುದಾರನಷ್ಟೇ. ಹೆಚ್ಚೇನೂ ಇಲ್ಲ' ಎಂದು ಬರೆದಿದ್ದಾರೆ.
ಇನ್ನು ತಾರತಮ್ಯ ವಿರೋಧಿ ವಿದ್ಯಾರ್ಥಿ ಆಂದೋಲನದ ಸಂಯೋಜಕ ಹಸ್ಪತ್ ಅಬ್ದುಲ್ಲಾ ಕೂಡ ಇದೇ ನಿಲುವನ್ನು ವ್ಯಕ್ತಪಡಿಸಿದ್ದು, 'ಅಂದು ಪಾಕ್ ವಿರುದ್ದ ಗೆದ್ದಿದ್ದು ನಾವು ಮಾತ್ರ. ಬಾಂಗ್ಲಾದ ಸ್ವಾತಂತ್ರ್ಯಕ್ಕಾಗಿ ಪಾಕಿಸ್ತಾನದ ವಿರುದ್ದ ನಡೆದ ಯುದ್ಧದಲ್ಲಿ ಕೇವಲ ಭಾರತ ಸೆಣಸಿ ಗೆದ್ದಿತು ಎಂಬಂತೆ ಮೋದಿ ಬಿಂಬಿಸುತ್ತಿದ್ದಾರೆ. ಇದನ್ನು ನೋಡಿದಾಗ ನಮ್ಮ ಸ್ವಾತಂತ್ರ್ಯ, ಸಾರ್ವಭೌಮತ್ವ ಹಾಗೂ ಏಕತೆಗೆ ಭಾರತದಿಂದ ಅಪಾಯವಿದೆ ಎನಿಸುತ್ತಿದೆ' ಎಂದಿದ್ದಾರೆ.
ಬಾಂಗ್ಲಾ ಕ್ಯಾತೆ
* 1971 ರ ಡಿ. 160 ರಂದು ಪಾಕಿಸ್ತಾನದ ವಿರುದ್ಧ ನಡೆದ ಯುದ್ಧದಲ್ಲಿ ಐತಿಹಾಸಿಕ ಜಯ ಕಂಡಿತ್ತು. ವಿಜಯ್ ದಿವಸ್ ದಿನ ಪ್ರಧಾನಿ ಮೋದಿ ಸ್ಮರಣೆ
• ಯುದ್ಧದಲ್ಲಿ ಗೆಲುವು ಸಾಧಿಸಿದ್ದು ಬಾಂಗ್ಲಾ ಮಾತ್ರ. ಇದರಲ್ಲಿ ಭಾರತ ಪಾಲುದಾರನಷ್ಟೇ. ಬೇರೇನೂ ಅಲ್ಲ. ಬಾಂಗ್ಲಾದ ಕಾನೂನು ಸಲಹೆಗಾರ ಆಸಿಫ್ ನಸ್ರುಲ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ