
ಢಾಕಾ: ನೆರೆಯ ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಮತ್ತಷ್ಟು ವಿಕೃತ ಸ್ವರೂಪ ಪಡೆದುಕೊಂಡಿದ್ದು, ಹಿಂದೂಗಳನ್ನು ಮನೆಯೊಳಗೆ ಕೂಡಿಹಾಕಿ ಮನೆಗೆ ಬೆಂಕಿ ಹಚ್ಚುವ ಘಟನೆಗಳು ಹೆಚ್ಚತೊಡಗಿವೆ.
ಇಲ್ಲಿನ ಮುಸ್ಲಿಂ ಪ್ರಾಬಲ್ಯವಿರುವ ಫಿರೋಜ್‌ಪುರ ಜಿಲ್ಲೆಯಲ್ಲಿ ಭಾನುವಾರ ರಾತ್ರಿ 5 ಹಿಂದೂ ಕುಟುಂಬದ ಮನೆಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಹತ್ಯೆ ಯತ್ನ ನಡೆಸಿದ್ದಾರೆ.
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಮುಂದುವರಿದಿರುವುದಕ್ಕೆ ಭಾರತದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಜತೆಗೆ ಪ್ಯಾಲೇಸ್ತೀನ್, ಗಾಜಾ ಹಾಗೂ ಮಧ್ಯಪ್ರಾಚ್ಯದ ದೇಶಗಳ ಮೇಲೆ ದಾಳಿಗಳಾದ ಬೊಬ್ಬಿರಿಯುವ ಮಾನವ ಹಕ್ಕುಗಳ ಹೋರಾಟಗಾರರು ಹಾಗೂ ಬುದ್ಧಿಜೀವಿಗಳು ಈಗ ಏಕೆ ಮೌನವಾಗಿದ್ದಾರೆ ಎಂಬ ಪ್ರಶ್ನೆಗಳು ವ್ಯಕ್ತವಾಗಿವೆ. ಡಿ.18ರಂದು ಬಾಂಗ್ಲಾ ವಿದ್ಯಾರ್ಥಿ ನಾಯಕ ಉಸ್ಮಾನ್ ಹದಿ ಹತ್ಯೆ ಬಳಿಕ ಹಿಂದೂಗಳ ಮೇಲೆ ದಾಳಿ ಹೆಚ್ಚಾಗಿತ್ತು ಹಾಗೂ ಇಬ್ಬರು ಹಿಂದುಗಳನ್ನು ಹತ್ಯೆ ಮಾಡಿ, ಹಲವು ಹಿಂದೂಗಳ ಮನೆಗೆ ಬೆಂಕಿ ಹಚ್ಚಲಾಗಿತ್ತು. ಇದರ ನಡುವೆ ಭಾನುವಾರ ತಡರಾತ್ರಿ ಕಿಡಿಗೇಡಿಗಳು ಇಲ್ಲಿನ ದುಮ್ರಿತಾಲಾ ಗ್ರಾಮದಲ್ಲಿ ಕನಿಷ್ಠ 5 ಕುಟುಂಬಗಳಿಗೆ ಬೆಂಕಿ ಹಚ್ಚಿದ್ದಾರೆ.
ಮನೆಯೊಳಗೆ ಕುಟುಂಬ ಸದಸ್ಯರು ಮಲಗಿದ್ದಾಗ ಅವರಿಗೆ ಗೊತ್ತಾಗದಂತೆ ಪ್ರವೇಶಿಸಿದ ದುಷ್ಕರ್ಮಿಗಳು, ಒಂದು ಕೋಣೆಯೊಳಗೆ ಬಟ್ಟೆಯನ್ನು ಹಾಕಿ ಬೆಂಕಿ ಹಚ್ಚಿದ್ದಾರೆ. ಇದರ ಪರಿಣಾಮ ಇಡೀ ಮನೆಗೆ ಬೆಂಕಿ ಆವರಿಸಿದೆ. ಅತ್ತ ಮನೆಯ ಸದಸ್ಯರು ಹೊರಬರದಂತೆ ಅವರಿದ್ದ ದುಷ್ಕರ್ಮಿಗಳು ಹೊರಗಿಂದ ಬೀಗ ಜಡಿದಿದ್ದಾರೆ. ಹೀಗಾಗಿ ಬೆಂಕಿ ಹೊತ್ತಿದರೂ ಸುಲಭವಾಗಿ ಹೊರಬರಲು ಆಗಿಲ್ಲ. ಆದರೆ ಮನೆಯ ಗೋಡೆಯ ಟಿನ್ ಶೀಟು ಹಾಗೂ ಬಿದಿರಿನ ಬೇಲಿ ಕತ್ತರಿಸಿಕೊಂಡು ಅದೃಷ್ಟವಶಾತ್ 2 ಕುಟುಂಬಗಳ 8 ಸದಸ್ಯರು ಜೀವ ಉಳಿಸಿಕೊಂಡಿದ್ದಾರೆ.
ಮನೆಗಳು ಸಂಪೂರ್ಣ ಭಸ್ಮವಾಗಿದ್ದು, ಎರಡು ಸಾಕು ಪ್ರಾಣಿಗಳು ಸಾವನ್ನಪ್ಪಿವೆ.ಧ್ವನಿ ಎತ್ತಿ:ಈ ನಡುವೆ ‘ಗಾಜಾ, ಸಿರಿಯಾ ಅಥವಾ ಪ್ಯಾಲೆಸ್ತೀನ್‌ನಲ್ಲಿ ಏನಾದರೂ ನಡೆದರೆ ಎಲ್ಲರೂ ಅವರ ಪರವಾಗಿ ಮುಂದೆ ಬರುತ್ತಾರೆ. ಆದರೆ ಬಾಂಗ್ಲಾದಲ್ಲಿ ಹಿಂದೂವೊಬ್ಬನನ್ನು ಕೊಂದಾಗ ಯಾರೂ ಮುಂದೆ ಬರುವುದಿಲ್ಲ’ ಎಂದು ನಟಿ ರೂಪಾಲಿ ಗಂಗೂಲಿ ಹಾಗೂ ನಟ ಮನೋಜ್ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ನಟಿಯರಾದ ಜಾಹ್ನವಿ ಕಪೂರ್, ಕಾಜಲ್ ಅಗರವಾಲ್, ಜಯಪ್ರದಾ, ಸಂಗೀತಗಾರ ಟೋನಿ ಕಕ್ಕರ್ ಸೇರಿ ಹಲವರು ಹಿಂದೂಗಳ ಮೇಲಿನ ದೌರ್ಜನ್ಯವನ್ನು ಖಂಡಿಸಿದ್ದಾರೆ.
ಹಿಂದೂಗಳ ಮೇಲಿನದಾಳಿಗೆ ಖಂಡನೆ ಏಕಿಲ್ಲ?
ಗಾಜಾ, ಪ್ಯಾಲೆಸ್ತೀನ್‌ನಲ್ಲಿ ಜನರ ಮೇಲೆ ದಾಳಿ ಮಾಡಿದರೆ ಸ್ಥಳೀಯ ಬುದ್ಧಿಜೀವಿಗಳು, ಪ್ರಗತಿಪರರು ತಕ್ಷಣ ಧ್ವನಿ ಎತ್ತುತ್ತಾರೆ. ಆದರೆ ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಜೀವಂತ ಸುಡುವಂತಹ ಘಟನೆ ನಡೆದರೂ ಅದರ ಬಗ್ಗೆ ಯಾರೂ ಧ್ವನಿ ಎತ್ತುತ್ತಿಲ್ಲ. ಯಾಕೆ, ಅವರು ಹಿಂದೂಗಳು, ದಲಿತರು ಎಂದೇ? ಹಿಂದೂಗಳ ಮೇಲೆ ದಾಳಿಯಾದರೂ ಏಕೆ ಖಂಡಿಸುತ್ತಿಲ್ಲ. ಇದು ಅತ್ಯಂತ ಬೇಜಬಾಬ್ದಾರಿಯ ವರ್ತನೆ.- ಎನ್.ರವಿಕುಮಾರ್, ಪರಿಷತ್ ಪ್ರತಿಪಕ್ಷದ ಮುಖ್ಯ ಸಚೇತಕ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ