ಹಸೀನಾ ಹಸ್ತಾಂತರಕ್ಕೆ ಮನವಿ: ಪಾಕಿಗಳಿಗೆ ವೀಸಾ ನೀಡಲು ಬಾಂಗ್ಲಾ ಸರ್ಕಾರ ಸೂಚನೆ

By Kannadaprabha News  |  First Published Dec 5, 2024, 10:50 AM IST

ಬಾಂಗ್ಲಾದೇಶದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ವಿದೇಶದಲ್ಲಿರುವ ತನ್ನ ಎಲ್ಲಾ ಬಾಂಗ್ಲಾದೇಶದ ಮಿಷನ್‌ಗಳಿಗೆ ಸಂದೇಶ ಕಳಿಸಿದ್ದು, ಪಾಕಿಸ್ತಾನಿ ಪ್ರಜೆಗಳಿಗೆ ಮತ್ತು ಪಾಕಿಸ್ತಾನಿ ಮೂಲದವರಿಗೆ ವೀಸಾಗಳನ್ನು ಒದಗಿಸುವಂತೆ ಸೂಚನೆ ನೀಡಿದೆ.


ಢಾಕಾ: ಬಾಂಗ್ಲಾದೇಶದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ವಿದೇಶದಲ್ಲಿರುವ ಎಲ್ಲಾ ಬಾಂಗ್ಲಾದೇಶದ ಮಿಷನ್‌ಗಳಿಗೆ ಸಂದೇಶ ಕಳಿಸಿದ್ದು, ಪಾಕಿಸ್ತಾನಿ ಪ್ರಜೆಗಳಿಗೆ ಮತ್ತು ಪಾಕಿಸ್ತಾನಿ ಮೂಲದವರಿಗೆ ವೀಸಾಗಳನ್ನು ಒದಗಿಸುವಂತೆ ಸೂಚನೆ ನೀಡಿದೆ.

ಹಸೀನಾ ಹಸ್ತಾಂತರಕ್ಕೆ ಭಾರತಕ್ಕೆ ಮನವಿ ಮಾಡ್ತೇವೆ: ಯೂನಸ್‌
ಢಾಕಾ: ಭಾರತದಲ್ಲಿ ಆಶ್ರಯ ಪಡೆದಿರುವ ಪದಚ್ಯುತ ಪ್ರಧಾನಿ ಶೇಖ್‌ ಹಸೀನಾ ಅವರನ್ನು ಬಾಂಗ್ಲಾದೇಶಕ್ಕೆ ಹಸ್ತಾಂತರಿಸುವಂತೆ ಭಾರತಕ್ಕೆ ಮನವಿ ಮಾಡುತ್ತೇವೆ ಎಂದು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮೊಹಮ್ಮದ್‌ ಯೂನುಸ್‌ ಹೇಳಿದ್ದಾರೆ. ಗುರುವಾರ ಸಂದರ್ಶನವೊಂದನ್ನು ನೀಡಿದ ಅವರು, ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿ ಮುಂದೆ ಹಸೀನಾ ವಿಚಾರಣೆ ನಡೆದು ತೀರ್ಪು ಪ್ರಕಟವಾದ ನಂತರ ಆಕೆಯ ಹಸ್ತಾಂತರ ಕುರಿತು ಭಾರತದ ಮುಂದೆ ಅಧಿಕೃತ ಪ್ರಸ್ತಾಪ ಇಡುತ್ತೇವೆ. ಭಾರತ ಮತ್ತು ಬಾಂಗ್ಲಾ ಎರಡೂ ದೇಶಗಳು ಅಂತಾರಾಷ್ಟ್ರೀಯ ಕಾನೂನುಗಳಿಗೆ ಸಹಿ ಮಾಡಿವೆ. ಹೀಗಾಗಿ ಭಾರತಕ್ಕೆ ಆ ಕಾನೂನು ಪಾಲಿಸುವ ಅನಿವಾರ್ಯವಾಗಲಿದೆ ಎಂದರು.  ಬಾಂಗ್ಲಾದಲ್ಲಿರುವ ಹಿಂದೂಗಳ ಸುರಕ್ಷತೆ ಕುರಿತ ಭಾರತದ ಕಳವಳ ವಾಸ್ತವಾಂಶವನ್ನು ಆಧರಿಸಿಲ್ಲ ಎಂದು ಸ್ಪಷ್ಟಪಡಿಸಿದ ಅವರು ಈ ಹಿಂದಿನ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಶೇಖ್‌ ಹಸೀನಾ ಅ‍ವರು ಎಲ್ಲವನ್ನೂ ನಾಶ ಮಾಡಿದ್ದಾರೆ. ಸಂವಿಧಾನ ಮತ್ತು ನ್ಯಾಯಾಂಗ ಸುಧಾರಣೆ ಬಳಿಕ ದೇಶದಲ್ಲಿ ಮಹಾ ಚುನಾವಣೆ ನಡೆಸಲಾಗುವುದು ಎಂದರು.

Tap to resize

Latest Videos

ಡಿ.10ರಂದು ಬಾಂಗ್ಲಾಗೆ ಭಾರತದ ವಿದೇಶಾಂಗ ಕಾರ್ಯದರ್ಶಿ ಮಿಸ್ರಿ ಭೇಟಿ
ನವದೆಹಲಿ: ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಅವರು ಡಿ.10 ರಂದು ಬಾಂಗ್ಲಾದೇಶಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ. ಬಾಂಗ್ಲಾದೇಶದಲ್ಲಿ ಮಧ್ಯಂತರ ಸರ್ಕಾರ ಪ್ರಮಾಣ ವಚನ ಸ್ವೀಕರಿಸಿದ ನಂತರ ಹಾಗೂ ಇತ್ತೀಚಿನ ಹಿಂದೂಗಳ ಮೇಲಿನ ದೌರ್ಜನ್ಯದ ನಂತರ ಭಾರತೀಯ ಹಿರಿಯ ಅಧಿಕಾರಿಯೊಬ್ಬರು ಢಾಕಾಗೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ. ಅವರು ಬಾಂಗ್ಲಾದೇಶ ವಿದೇಶಾಂಗ ಕಾರ್ಯದರ್ಶಿ ಎಂಡಿ ಜಾಶಿಮ್ ಉದ್ದೀನ್ ಅವರೊಂದಿಗೆ ಹಿಂದೂಗಳ ಮೇಲಿನ ದೌರ್ಜನ್ಯ ಸೇರಿ ವಿವಿಧ ವಿಷಯಗಳ ಬಗ್ಗೆ ಮಾತುಕತೆ ನಡೆಸುವ ನಿರೀಕ್ಷೆಯಿದೆ. ಈ ಬಗ್ಗೆ ಇನ್ನೂ ಅಧಿಕೃತ ಘೋಷಣೆ ಆಗಿಲ್ಲ.

ಭಾರತದ ರಾಯಭಾರಿಗೆ ಬಾಂಗ್ಲಾ ಸಮನ್ಸ್‌: ಪ್ರತಿಭಟನೆ ಸಲ್ಲಿಕೆ
ಢಾಕಾ/ಅಗರ್ತಲಾ: ತ್ರಿಪುರದ ರಾಜಧಾನಿ ಅಗರ್ತಲಾದಲ್ಲಿ ಸೋಮವಾರ ಬಾಂಗ್ಲಾದೇಶಿ ಹೈಕಮೀಷರ್‌ ಕಚೇರಿಗೆ ಪ್ರತಿಭಟನಾಕಾರರು ನುಗ್ಗಿ ಗಲಾಟೆ ಮಾಡಿದ ಪ್ರಕರಣವು ಬಾಂಗ್ಲಾ ಹಾಗೂ ಭಾರತದ ನಡುವೆ ಹೊಸ ರಾಜತಾಂತ್ರಿಕ ಬಿಕ್ಕಟ್ಟು ಸೃಷ್ಟಿಸಿದೆ. ಮಂಗಳವಾರ ಢಾಕಾದಲ್ಲಿರುವ ಭಾರತದ ರಾಯಭಾರಿ ಪ್ರಣಯ್‌ ವರ್ಮಾ ಅವರನ್ನು ಬಾಂಗ್ಲಾ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತನ್ನ ಕಚೇರಿಗೆ ಕರೆಸಿಕೊಂಡು, ಘಟನೆ ಬಗ್ಗೆ ಪ್ರತಿಭಟನೆಯನ್ನು ವ್ಯಕ್ತ ಪಡಿಸಿದೆ ಹಾಗೂ ಗಲಾಟೆಕೋರರ ಮೇಲೆ ಕ್ರಮಕ್ಕೆ ಕೋರಿದೆ. ಇದಕ್ಕೆ ಬಳಿಕ ಸುದ್ದಿಗಾರರ ಎದುರು ಪ್ರತಿಕ್ರಿಯೆ ನೀಡಿದ ವರ್ಮಾ, ಭಾರತ-ಬಾಂಗ್ಲಾ ಬಹುಕೋನದ ಸಂಬಂಧ ಹೊಂದಿವೆ. ಕೇವಲ ಒಂದು ವಿಷಯಕ್ಕೆ ಸಂಬಂಧ ಹಳಸಲು ಸಾಧ್ಯವಿಲ್ಲ ಎಂದರು. ಇದರ ಬೆನ್ನಲ್ಲೇ ಅಗರ್ತಲಾದಲ್ಲಿನ ತನ್ನ ದೂತಾವಾಸವನ್ನು ಬಾಂಗ್ಲಾದೇಶ ತಾತ್ಕಾಲಿಕವಾಗಿ ಮುಚ್ಚಿದೆ. ಅಲ್ಲಿ ಸದ್ಯಕ್ಕೆ ಯಾವುದೇ ವೀಸಾ ಹಾಗೂ ಇತರ ಸೌಲಭ್ಯಗಳು ಇರುವುದಿಲ್ಲ ಎಂದು ತಿಳಿಸಿದೆ.

ಭಾರತದ ಕ್ರಮ:
ಈ ನಡುವೆ, ಬಾಂಗ್ಲಾ ಸರ್ಕಾರ ಪ್ರತಿಭಟನೆ ಸಲ್ಲಿಸುವ ಮುನ್ನವೇ ತ್ರಿಪುರ ಸರ್ಕಾರವು ಮಂಗಳವಾರ 3 ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದೆ ಮತ್ತು ಕೆಲವು ಹಿರಿಯ ಅಧಿಕಾರಿಯನ್ನು ಅವರ ಹುದ್ದೆಯಿಂದ ಹಿಂತೆಗೆದುಕೊಂಡಿದೆ. ಬಾಂಗ್ಲಾ ದೂತಾವಾಸಕ್ಕೆ ನುಗ್ಗಿ ದಾಂಧಲೆ ಮಾಡಿದ 7 ಜನರನ್ನು ಬಂಧಿಸಿದೆ. ಸೋಮವಾರವೇ ಭಾರತ ಸರ್ಕಾರ ಇಂಥ ಘಟನೆ ಸಹಿಸಲ್ಲ. ಕ್ರಮ ಕೈಗೊಳ್ಳುತ್ತೇವೆ ಎಂದು ಬಾಂಗ್ಲಾಗೆ ಭರವಸೆ ನೀಡಿತ್ತು ಹಾಗೂ ದಿಲ್ಲಿ ಸೇರಿ ಭಾರತದಲ್ಲಿರುವ ಬಾಂಗ್ಲಾ ದೂತಾವಾಸಗಳಿಗೆ ಭದ್ರತೆ ಹೆಚ್ಚಿಸಿತ್ತು. ಸೋಮವಾರ ಹಿಂದೂ ಸನ್ಯಾಸಿ ಚಿನ್ಮಯ ಕೃಷ್ಣ ದಾಸ್ ಬಂಧನವನ್ನು ವಿರೋಧಿಸಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸುಮಾರು 50 ಜನರು ಬಾಂಗ್ಲಾದೇಶದ ಸಹಾಯಕ ಹೈಕಮಿಷನ್ ಆವರಣವನ್ನು ಪ್ರವೇಶಿಸಿ ದಾಂಧಲೆ ನಡೆಸಿದ್ದರು.

click me!