
ನೈಜೀರಿಯಾ(ಜೂ.06): ನೈಜೀರಿಯಾದಲ್ಲಿ ಉಗ್ರರ ದಾಳಿಯ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ನೈಋತ್ಯ ನೈಜೀರಿಯಾದ ಕ್ಯಾಥೋಲಿಕ್ ಚರ್ಚ್ ಮೇಲೆ ಬಂದೂಕುಧಾರಿಗಳು ಭಾನುವಾರ ದಾಳಿ ನಡೆಸಿದ್ದು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 50 ಜನರನ್ನು ಕೊಂದಿದ್ದಾರೆ. ಬಂದೂಕುಧಾರಿಗಳು ಚರ್ಚ್ ಕಟ್ಟಡದ ಹೊರಗೆ ಮತ್ತು ಒಳಗಿದ್ದ ಜನರ ಮೇಲೆ ಗುಂಡು ಹಾರಿಸಿದರು. ಭಕ್ತರನ್ನು ಕೊಂದು ಗಾಯಗೊಳಿಸಿದರು ಎಂದು ಒಂಡೋ ರಾಜ್ಯ ಪೊಲೀಸ್ ವಕ್ತಾರ ಫುನ್ಮಿಲಾಯೊ ಇಬುಕುನ್ ಒಡುನ್ಲಾಮಿ ಹೇಳಿದ್ದಾರೆ.
ದಾಳಿಗೆ ಕಾರಣ ತಿಳಿದು ಬಂದಿಲ್ಲ
ಓವೊ ನಗರದ ಸೇಂಟ್ ಫ್ರಾನ್ಸಿಸ್ ಕ್ಯಾಥೋಲಿಕ್ ಚರ್ಚ್ ಮೇಲಿನ ದಾಳಿಯಲ್ಲಿ ಎಷ್ಟು ಜನರು ಸಾವನ್ನಪ್ಪಿದ್ದಾರೆ ಅಥವಾ ಗಾಯಗೊಂಡಿದ್ದಾರೆ ಎಂಬ ತನಿಖೆ ನಡೆಯುತ್ತಿದೆ ಎಂದು ಫುನಾಮಿಲಾಯೊ ಇಬುಕುನ್ ಒಡುನಾಲ್ಮಿ ಹೇಳಿದರು. ಪೊಲೀಸರು ದಾಳಿಗೇನು ಕಾರಣ ಎಂದು ತನಿಖೆ ನಡೆಸುತ್ತಿದ್ದಾರೆ. ಆದರೆ, ಇದು ಇನ್ನೂ ಸ್ಪಷ್ಟವಾಗಿಲ್ಲ. ಓಂಡೋ ರಾಜ್ಯ ಗವರ್ನರ್ ಅರಕುನ್ರಿನ್ ಒಲುವರೊಟಿಮಿ ಅಕೆರೆಡೊಲು ಘಟನಾ ಸ್ಥಳಕ್ಕೆ ಭೇಟಿ ನೀಡಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರು ಇದೊಂದು ಹೇಯ ನರಮೇಧ ಎಂದು ಕರೆದರು. ದಾಳಿಕೋರರು ಯಾರು ಹಾಗೂ ಇದರ ಹಿಂದಿನ ಉದ್ದೇಶ ಇನ್ನೂ ತಿಳಿದುಬಂದಿಲ್ಲ.
ನೈಜೀರಿಯಾದ ಕ್ಯಾಥೋಲಿಕ್ ಚರ್ಚ್‌ನ ವಕ್ತಾರ ರೆವರೆಂಡ್ ಆಗಸ್ಟೀನ್ ಇಕ್ವು ಈ ಬಗ್ಗೆ ಮಾತನಾಡುತ್ತಾ “ಪವಿತ್ರ ಪೂಜೆ ನಡೆಯುತ್ತಿದ್ದಾಗ ಅಪರಿಚಿತ ಬಂದೂಕುಧಾರಿಗಳು ಸೇಂಟ್ ಫ್ರಾನ್ಸಿಸ್ ಕ್ಯಾಥೋಲಿಕ್ ಚರ್ಚ್ ಮೇಲೆ ದಾಳಿ ನಡೆಸಿರುವುದು ತುಂಬಾ ದುಃಖಕರವಾಗಿದೆ. ಬಿಷಪ್‌ಗಳು ಮತ್ತು ಪಾದ್ರಿಗಳು ಕೂದಲೆಳೆ ಅಂತರದಲ್ಲಿ ಬದುಕುಳಿದಿದ್ದಾರೆ. ರೋಮನ್ ಕ್ಯಾಥೋಲಿಕ್ ಚರ್ಚ್‌ನಲ್ಲಿ ಬಲಿಪೂಜೆ ಬಹಳ ವಿಶೇಷ ಸಂದರ್ಭವಾಗಿದೆ ಎಂಬುವುದು ಉಲ್ಲೇಖನೀಯ.
ನೈಜೀರಿಯಾ ಇಸ್ಲಾಮಿಕ್ ಬಂಡಾಯದ ವಿರುದ್ಧ ಹೋರಾಡುತ್ತಿದೆ
ದಾಳಿಯಲ್ಲಿ ಕನಿಷ್ಠ 50 ಶವಗಳನ್ನು ನಗರದ ಎರಡು ಆಸ್ಪತ್ರೆಗಳಿಗೆ ತರಲಾಗಿದೆ ಎಂದು ಓವೊದಲ್ಲಿನ ಆಸ್ಪತ್ರೆಯ ವೈದ್ಯರು ರಾಯಿಟರ್ಸ್ ಸುದ್ದಿ ಸಂಸ್ಥೆಗೆ ತಿಳಿಸಿದರು. ಅಧ್ಯಕ್ಷ ಮುಹಮ್ಮದ್ ಬುಹಾರಿ ದಾಳಿಯನ್ನು ಖಂಡಿಸಿದ್ದು, ಇದು ಹೇಯ ಕೃತ್ಯ ಎಂದು ಕರೆದಿದ್ದಾರೆ. ಪೋಪ್ ಫ್ರಾನ್ಸಿಸ್ ಸಂತ್ರಸ್ತರಿಗಾಗಿ ಪ್ರಾರ್ಥಿಸಿದ್ದಾರೆ ಎಂದು ವ್ಯಾಟಿಕನ್ ಹೇಳಿದೆ. ನೈಜೀರಿಯಾ ಈಶಾನ್ಯದಲ್ಲಿ ಇಸ್ಲಾಮಿಕ್ ದಂಗೆ ಮತ್ತು ಸುಲಿಗೆ ದಾಳಿ ಮತ್ತು ಅಪಹರಣಗಳನ್ನು ನಡೆಸುವ ಸಶಸ್ತ್ರ ಗ್ಯಾಂಗ್‌ಗಳ ವಿರುದ್ಧ ಹೋರಾಡುತ್ತಿದೆ. ಈ ದಾಳಿಗಳು ಹೆಚ್ಚಾಗಿ ವಾಯುವ್ಯದಲ್ಲಿ ಸಂಭವಿಸುತ್ತವೆ. ಆದರೆ ನೈಋತ್ಯದಲ್ಲಿ ಇಂತಹ ದಾಳಿಗಳು ಕಡಿಮೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ