* ಪ್ರವಾದಿ ಮೊಹಮ್ಮದ್‌ರ ವಿರುದ್ಧ ಭಾರತದಲ್ಲಿ ಕೇಳಿಬಂದ ಹೇಳಿಕೆ
* ಪ್ರವಾದಿ ನಿಂದನೆ: ಕತಾರ್, ಇರಾನ್, ಕುವೈತ್ ಅಸಮಾಧಾನ
* ಭಾರತದ ರಾಯಭಾರಿ ಕರೆಸಿ ಅಭಿಪ್ರಾಯ & ವ್ಯಕ್ತ
ದೋಹಾ(ಜೂ.,06); ಪ್ರವಾದಿ ಮೊಹಮ್ಮದ್‌ರ ವಿರುದ್ಧ ಭಾರತದಲ್ಲಿ ಕೇಳಿಬಂದ ಹೇಳಿಕೆ ಸಂಬಂಧ ಇರಾನ್, ಕತಾರ್ ಹಾಗೂ ಕುವೈತ್ ಅಸಮಾಧಾನ ವ್ಯಕ್ತಪಡಿಸಿವೆ. ಇರಾನ್, ಕತಾರ್ ಹಾಗೂ ಕುವೈತ್‌ನಲ್ಲಿರುವ ಭಾರತೀಯ ರಾಯಭಾರಿಗಳನ್ನು ಕರೆಸಿಕೊಂಡ ಅಲ್ಲಿನ ವಿದೇಶಾಂಗ ಸಚಿವಾಲಯಗಳು, ಧರ್ಮ ಗುರುವಿನ ವಿರುದ್ಧ ಇಂಥ ಹೇಳಿಕೆ ಒಪ್ಪತಕ್ಕದಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿವೆ.
ಇದರ ಬೆನ್ನಲ್ಲೇ ರಾಜತಾಂತ್ರಿಕ ವಿವಾದವನನ್ನು ಶಮನಗೊಳಿಸಲು ಈ ದೇಶಗಳಲ್ಲಿರುವ ಭಾರತೀಯ ರಾಯಭಾರ ಕಚೇರಿಯ ವಕ್ತಾರರು, ಇದು ಭಾರತೀಯ ಸರ್ಕಾರದ ಅಭಿಪ್ರಾಯವನ್ನು ವ್ಯಕ್ತಪಡಿಸುವುದಿಲ್ಲ ಎಂದು ಹೇಳಿದ್ದಾರೆ. ಕತಾರ್ ರಾಯಭಾರಿ ದೀಪಕ್ ಮಿತ್ತಲ್ ಸಭೆ ನಡೆಸಿದ್ದು, ಧಾರ್ಮಿಕ ವ್ಯಕ್ತಿತ್ವಗಳನ್ನು ಅವಹೇಳನ ಮಾಡುವುದು ಕಳವಳಕಾರಿಯಾಗಿದೆ ಎಂದು ಹೇಳಿದ್ದಾರೆ.
ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು: ವಿವಾದಾತ್ಮಕ ಹೇಳಿಕೆ ನೀಡಿರುವ ಪಕ್ಷದ ನಾಯಕರನ್ನು ಅಮಾನತುಗೊಳಿಸಿರುವುದನ್ನು ಸ್ವಾಗತಿಸಿರುವ ಕತಾರ್, ಸಾರ್ವಜನಿಕ ಕ್ಷಮೆಯಾಚನೆಯನ್ನು ನಿರೀಕ್ಷಿಸುತ್ತದೆ. ಭಾರತ ಸರ್ಕಾರದಿಂದ ಇಂತಹ ಟೀಕೆಗಳನ್ನು ತಕ್ಷಣವೇ ಖಂಡಿಸುತ್ತದೆ ಎಂದು ಹೇಳಿದೆ.
ಇದೇ ವೇಳೆ, ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಟ್ವೀಟ್ ಮಾಡಿ, ‘ಬಿಜೆಪಿ ವಕ್ತಾರರ ಹೇಳಿಕೆಯನ್ನು ಖಂಡಿಸುವೆ. ಮೋದಿ ಆಡಳಿತದಲ್ಲಿ ಮುಸ್ಲಿಮರ ತುಳಿತ ನಡೆದಿದೆ ಎಂದು ಮೊದಲಿನಿಂದಲೂ ಹೇಳುತ್ತಿದ್ದೆ. ಈಗ ವಿಶ್ವ ಇದರತ್ತ ಗಮನ ಹರಿಸಲಿ’ ಎಂದಿದ್ದಾರೆ.
ಅದರ ಬೆನ್ನಲ್ಲೇ ಈ ಕುರಿತು ಸ್ಪಷ್ಟನೆ ನೀಡಿ ಹೇಳಿಕೆ ಬಿಡುಗಡೆ ಮಾಡಿರುವ ಕತಾರ್‌ನಲ್ಲಿರುವ ಭಾರತೀಯ ರಾಯಭಾರಿ ದೀಪಕ್ ಮಿತ್ತಲ್ ‘ಟ್ವೀಟ್‌ಗಳು ಯಾವುದೇ ರೀತಿಯಲ್ಲೇ ಭಾರತದ ಸರ್ಕಾರದ ಅಭಿಪ್ರಾಯಗಳನ್ನು ಪ್ರತಿನಿಧಿಸುವುದಿಲ್ಲ, ಈ ಹೇಳಿಕೆಗಳು ಮುಖ್ಯವಾಹಿನಿಯಲ್ಲಿರುವವರ ಅಭಿಪ್ರಾಯಗಳಲ್ಲ. ನಮ್ಮ ನಾಗರಿಕತೆಯ ಪರಂಪರೆ ಮತ್ತು ವಿವಿಧತೆಯಲ್ಲಿ ಏಕತೆಯ ಸಾಂಸ್ಕೃತಿಯ ಸಂಪ್ರದಾಯದಡಿ, ಭಾರತ ಸರ್ಕಾರವು, ಎಲ್ಲಾ ಧರ್ಮಗಳಿಗೆ ಅತ್ಯುನ್ನತ ಗೌರವವನ್ನು ಸಲ್ಲಿಸುತ್ತದೆ. ಅವಹೇಳನಕಾರಿ ಹೇಳಿಕೆ ನೀಡಿದವರ ವಿರುದ್ಧ ಈಗಾಗಲೇ ಕಠಿಣ ಕ್ರಮ ಕೈಗೊಳ್ಳಲಾಗಿದೆ’ ಎಂದು ಹೇಳಿದೆ.