ಹಿಲಾಲ್ ಇ ಪಾಕಿಸ್ತಾನ್ ಬೈಡೆನ್ ಆಯ್ಕೆಯಿಂದ ಪಾಕ್‌ಗೆ ಸಂತಸ!| ತನ್ನ ಮಿತ್ರ ಬೈಡೆನ್ ಆಯ್ಕೆಯಿಂದ ಪಾಕ್ ಸಂತುಷ್ಟ| ಪಾಕಿಸ್ತಾನಕ್ಕೆ 11 ಸಾವಿರ ಕೋಟಿ ರು. ಅನುದಾನ ಕೊಡಿಸಿದ್ದ ಬೈಡನ್
ನವದೆಹಲಿ(ನ.07): ಅಮೆರಿಕದ ನೂತನ ಅಧ್ಯಕ್ಷರಾಗಿ ಜೋ ಬೈಡೆನ್ ಆಯ್ಕೆಯಾಗುವುದು ಬಹುತೇಕ ನಿಚ್ಚಳವಾಗುತ್ತಿರುವಂತೆ ಪಾಕಿಸ್ತಾನ ಸಂಭ್ರಮಿಸತೊಡಗಿದೆ. ಕಾರಣ, ಹಾಲಿ ಅಧ್ಯಕ್ಷ ಟ್ರಂಪ್‌ರಿಂದ ಪದೇ ಪದೇ ಆರ್ಥಿಕ ಹೊಡೆತ ತಿಂದಿದ್ದ ಪಾಕಿಸ್ತಾನಕ್ಕೆ ಹಣದ ಹರಿವಿನ ಹೊಸ ಕನಸು ಗೋಚರವಾಗಿದೆ.
ಕಾರಣ, ಜೋ ಬೈಡೆನ್ ಹಿಂದಿನಿಂದಲೂ ಪಾಕ್ ಪರ ಒಲವು ಹೊಂದಿರುವ ವ್ಯಕ್ತಿ. ಈ ಹಿಂದಿನ ತಮ್ಮ ಅಧಿಕಾರಾವಧಿಯಲ್ಲಿ ಬೈಡೆನ್ ಪಾಕ್‌ಗೆ ಹಲವು ಉಪಕಾರ ಮಾಡಿದ್ದಾರೆ. ಅದರಲ್ಲಿ ಪಾಕ್‌ಗೆ ಮಿಲಿಟರಿಯೇತರ ಬಾಬ್ತಾಗಿ 11000 ಕೋಟಿ ರು. ನೆರವು ಒದಗಿಸಿದ್ದೂ ಸೇರಿದೆ. ಇದೇ ಕಾರಣಕ್ಕಾಗಿಯೇ ಬೈಡೆನ್‌ಗೆ ಪಾಕಿಸ್ತಾನ, ತನ್ನ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ಹಿಲಾಲ್ ಇ ಪಾಕಿಸ್ತಾನ ನೀಡಿ ಗೌರವಿಸಿದೆ. ಬೈಡನ್ ಅಮೆರಿಕ ಅಧ್ಯಕ್ಷರಾದರೆ ತನಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಬಲ ಸಿಗಲಿದೆ ಎಂಬುದು ಪಾಕಿಸ್ತಾನ ಆಕಾಂಕ್ಷೆ.
ಇದೇ ವೇಳೆ ಭಯೋತ್ಪಾದನೆ ಸೇರಿದಂತೆ ಇನ್ನಿತರ ವಿಚಾರಗಳಲ್ಲಿ ಪಾಕಿಸ್ತಾನದ ವಿರುದ್ಧ ಕಠಿಣ ನಿಲುವು ತಾಳಿದ್ದ ಟ್ರಂಪ್ ನಿರ್ಗಮನದ ಹಾದಿಯಲ್ಲಿರುವುದು ಕೂಡಾ ಪಾಕ್‌ಗೆ ಶುಭ ಸುದ್ದಿಯಾಗಿ ಬಂದಿದೆ. ಕಾರಣ, ಹಲವು ಸಾರ್ವಜನಿಕ ವೇದಿಕೆಗಳಲ್ಲಿ ಪಾಕಿಸ್ತಾನದ ವಿರುದ್ಧ ಟ್ರಂಪ್ ನೇರಾ-ನೇರ ವಾಗ್ದಾಳಿ ನಡೆಸಿದ್ದರು.