ಆಲ್ಬಶೇರ್, ಗಿನಿನಾ ಸೇರಿ ವಿವಿಧ ನಗರ, ಗ್ರಾಮೀಣ ಪ್ರದೇಶಗಳಲ್ಲಿ ಸಿಲುಕಿರುವ ಇನ್ನೂ 400-500 ಮಂದಿ ಸಹವರ್ತಿಗಳನ್ನು ರಕ್ಷಿಸುವಂತೆ ಅಪಾಯದಿಂದ ಪಾರಾಗಿ ಬಂದ ಹಕ್ಕಿಪಿಕ್ಕಿಗಳು ಒತ್ತಾಯಿಸಿದ್ದಾರೆ.
ನಾಗರಾಜ ಎಸ್.ಬಡದಾಳ್, ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆ: ಸೇನಾ ಪಡೆಗಳ ಘರ್ಷಣೆಯಿಂದ ಜರ್ಜರಿತವಾಗಿರುವ ಆಫ್ರಿಕಾದ ಸೂಡಾನ್ ದೇಶದಿಂದ 'ಆಪರೇಷನ್ ಕಾವೇರಿ' ಮೂಲಕ ಹಕ್ಕಿಪಿಕ್ಕಿಗಳು ಸೇರಿ 561 ಜನರನ್ನು ರಕ್ಷಣೆ ಮಾಡಲಾಗಿದ್ದು, ಅಲ್ಲಿನ ಆಲ್ಬಶೇರ್, ಗಿನಿನಾ ಸೇರಿ ವಿವಿಧ ನಗರ, ಗ್ರಾಮೀಣ ಪ್ರದೇಶಗಳಲ್ಲಿ ಸಿಲುಕಿರುವ ಇನ್ನೂ 400-500 ಮಂದಿ ಸಹವರ್ತಿಗಳನ್ನು ರಕ್ಷಿಸುವಂತೆ ಅಪಾಯದಿಂದ ಪಾರಾಗಿ ಬಂದ ಹಕ್ಕಿಪಿಕ್ಕಿಗಳು ಒತ್ತಾಯಿಸಿದ್ದಾರೆ.
ಸೂಡಾನ್‌ನ ರಾಜಧಾನಿ ಖಾರ್ಟೂಮ್‌ನಿಂದ 4 ಬಸ್ಸುಗಳಲ್ಲಿ ಪೋರ್ಟ್ ಸೂಡಾನ್ ತಲುಪಿದ ಹಕ್ಕಿಪಿಕ್ಕಿಗಳು ಸೇರಿ ಸುಮಾರು 550ಕ್ಕೂ ಹೆಚ್ಚು ಭಾರತೀಯರನ್ನು ಗುರುವಾರ ಸಂಜೆ ವಿಮಾನಗಳ ಮೂಲಕ ಸೌದಿ ಅರೇಬಿಯಾದ ಜೆಡ್ಡಾಗೆ ಕಳುಹಿಸುವ ವ್ಯವಸ್ಥೆ ಮಾಡಲಾಯಿತು. ಭಾರತದ ವಿಮಾನವೇರುತ್ತಿದ್ದಂತೆ ಜೀವ ಭಯದಲ್ಲೇ 10 ದಿನಗಳಿಂದ ತತ್ತರಿಸಿದ್ದ, ಅನ್ನಾಹಾರ ನೀರಿಲ್ಲದೆ ಪರದಾಡಿದ್ದ ಹಕ್ಕಿಪಿಕ್ಕಿಗಳು ಸೇರಿ ಭಾರತೀಯರ ಬಾಯಿಂದ ಒಮ್ಮೆಗೆ ವಂದೇ ಮಾತರಂ, ಭಾರತ್ ಮಾತಾ ಕೀ ಜೈ ಎಂಬ ಘೋಷಣೆಗಳು ಮೊಳಗಿದವು. ಕೊನೆಗೂ ಸುರಕ್ಷಿತವಾಗಿ ತಾಯ್ನೆಲ ಸೇರುವ ಖುಷಿಯಿಂದ ಅನೇಕರ ಕಣ್ಣಂಚಿನಿಂದ ಕಣ್ಣೀರು ಜಿನುಗಿದವು.
undefined
Operation Kaveri: ಸೂಡಾನ್‌ನಿಂದ ಕರ್ನಾಟಕದ 210 ಹಕ್ಕಿಪಿಕ್ಕಿಗಳ ರಕ್ಷಣೆ ಶುರು..!
ಸದ್ಯ ಖಾರ್ಟೂಮ್ ಸುತ್ತಮುತ್ತಲಿದ್ದವರ ರಕ್ಷಣೆಯಾಗಿದೆ. ಆದರೆ, ಆಲ್ಬಶೇರ್, ಗಿನಿನಾ, ಗದಾರಿ (Gadari), ಕಸಾಲ (Kasala), ಚಾದ್ ಬಾರ್ಡರ್ ಸೇರಿ ಅನೇಕ ಕಡೆ 500 ಮಂದಿ ಹಕ್ಕಿಪಿಕ್ಕಿಗಳು ಸೇರಿ 1800ಕ್ಕೂ ಹೆಚ್ಚು ಮಂದಿ ಭಾರತೀಯರು ಸಿಕ್ಕಿಹಾಕಿಕೊಂಡಿದ್ದಾರೆ. ಅವರೆಲ್ಲ ಪೋರ್ಟ್ ಸೂಡಾನ್‌ಗೆ ಬರಲು ಬಸ್ಸುಗಳ ವ್ಯವಸ್ಥೆ ಇಲ್ಲದೆ ಆತಂಕಕ್ಕೆ ಸಿಲುಕಿದ್ದಾರೆ. ಘರ್ಷಣೆ ಪೀಡಿತ ಸೂಡಾನ್‌ನಲ್ಲಿ 48 ಗಂಟೆಗಳ ಕದನ ವಿರಾಮ ಘೋಷಿಸಿದ್ದರೂ ಬಂದೂಕು, ಬಾಂಬ್, ಶೆಲ್‌ಗಳ ದಾಳಿ ಸದ್ದು ಗುರುವಾರ ದಿನವಿಡೀ ಕೇಳುತ್ತಲೇ ಇತ್ತು. ಯುದ್ಧಪೀಡಿತ ಪ್ರದೇಶದಲ್ಲಿ ಸಿಕ್ಕಿಹಾಕಿಕೊಂಡಿರುವ ಹಕ್ಕಿಪಿಕ್ಕಿಗಳು ರಾಯಭಾರ ಕಚೇರಿ ಸಂಪರ್ಕಿಸಲು ತಾವಿರುವ ಸ್ಥಳದ ಮಾಹಿತಿ ನೀಡಲು ಇನ್ನಿಲ್ಲದ ಹರಸಾಹಸ ಮಾಡುತ್ತಿದ್ದಾರೆ.
ಖಾರ್ಟೂಮ್‌ನಲ್ಲಿದ್ದವರನ್ನು ರಕ್ಷಣೆ ಮಾಡಲಾಗಿದೆ. ಆಲ್ಬಶೇರ್(Albashere), ಗಿನಿನಾ (Guinea), ಚಾದ್ ಬಾರ್ಡರ್ (Chad Border) ಸೇರಿ ಅನೇಕ ಊರು, ಗ್ರಾಮಗಳಲ್ಲಿ 500ಕ್ಕೂ ಹೆಚ್ಚು ಹಕ್ಕಿಪಿಕ್ಕಿಗಳು, 1 ಸಾವಿರಕ್ಕೂ ಅಧಿಕ ಭಾರತೀಯರು ಸಿಲುಕಿದ್ದಾರೆ. ನಮ್ಮನ್ನು ರಕ್ಷಣೆ ಮಾಡಿದಂತೆಯೇ ಆ ಎಲ್ಲರನ್ನೂ ಸುರಕ್ಷಿತವಾಗಿ ಸೂಡಾನ್‌ನಿಂದ ಹೊರ ತರುವ ಕೆಲಸ ಆಗಬೇಕು. ಊಟ, ನೀರಿನ ಸಮಸ್ಯೆ ಮುಂದುವರಿದಿದೆ. 24 ಗಂಟೆ ಕದನ ವಿರಾಮ ಉಲ್ಲಂಘಿಸಿ, ಅಲ್ಲಿ ಘರ್ಷಣೆ ಮುಂದುವರಿದಿದೆ ಎಂದು ಚನ್ನಗಿರಿ ತಾಲೂಕಿನ ಹಕ್ಕಿಪಿಕ್ಕಿ ಮುಖಂಡ ನಂದಕುಮಾರ್ ಹೇಳಿದ್ದಾರೆ.
ಹಿಂಸಾಪೀಡಿತ ಸುಡಾನ್‌ನಲ್ಲಿ 31 ಜನ ಕನ್ನಡಿಗ ಹಕ್ಕಿಪಿಕ್ಕಿಗಳು ಅತಂತ್ರ
ಸೂಡಾನ್‌ನ ಪಟ್ಟಣ, ಗ್ರಾಮೀಣ ಪ್ರದೇಶದಲ್ಲಿ ಇನ್ನಷ್ಟು ಕನ್ನಡಿಗರು ಅಪಾಯದಲ್ಲಿದ್ದು, ಸಂಪರ್ಕಕ್ಕೆ ಸಿಗುತ್ತಿಲ್ಲ. 560ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ಇನ್ನೂ ಸುಮಾರು 2 ಸಾವಿರ ಮಂದಿ ಸೂಡಾನ್‌ನ ನಗರ, ಪಟ್ಟಣ, ಗ್ರಾಮೀಣ ಪ್ರದೇಶದಲ್ಲಿ ಚದುರಿ ಹೋಗಿದ್ದಾರೆ. ಅವರನ್ನೆಲ್ಲ ಸುರಕ್ಷಿತವಾಗಿ ಕರೆ ತರಬೇಕು. ಅಲ್ಲಿಗೆ ಇನ್ನೂ ಬಸ್ಸುಗಳು ಹೋಗಿಲ್ಲ. ಅಲ್ಲಿ ಸಿಲುಕಿರುವವರು ಯಾರೂ ನಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ. ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳಿಗೂ ಈ ಬಗ್ಗೆ ಮನವಿ ಮಾಡುತ್ತಿದ್ದೇವೆ ಎಂದು ಸೂಡಾನ್‌ನಲ್ಲಿ ಸಂತ್ರಸ್ತರಾಗಿದ್ದ ಚನ್ನಗಿರಿ ತಾಲೂಕಿನ ಹಕ್ಕಿಪಿಕ್ಕಿ ಮುಖಂಡ ರಂಜನ್ ಹೇಳಿದ್ದಾರೆ.